ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ವಿಭಜಕ ಶಕ್ತಿ ಮೇಲೆ ಕಣ್ಣು

ಜಾತಿ ಅಸ್ತ್ರ ಪ್ರಯೋಗ; ಕಾಂಗ್ರೆಸ್‌, ಬಿಜೆಪಿಯಲ್ಲಿ ಅಪ್ಪ– ಮಕ್ಕಳ ರಾಜಕಾರಣ
Last Updated 7 ಮೇ 2018, 19:30 IST
ಅಕ್ಷರ ಗಾತ್ರ

ಜೆಡಿಎಸ್‌ ಎಂಬ ಮತ ವಿಭಜಕ ಶಕ್ತಿಯನ್ನೇ ನೋಡುತ್ತಾ ಜಿಲ್ಲೆಯಲ್ಲಿ ಕಾಂಗ್ರೆಸ್‌-ಬಿಜೆಪಿ ಹಣಾಹಣಿಗೆ ಇಳಿದಿವೆ. ಅಹಿಂದ ಮಂತ್ರವನ್ನು ಮುಂದಿಟ್ಟುಕೊಂಡು ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜಾತಿ ಪ್ರಧಾನ ಅಸ್ತ್ರವನ್ನು ಪ್ರಯೋಗಿಸಿರುವ ಪಕ್ಷಗಳು, ಅಲ್ಲಲ್ಲಿ ಪ್ರತ್ಯೇಕವಾಗಿ ಜಾತಿ, ಸಮುದಾಯಗಳ ಸಭೆಗಳನ್ನೂ ನಡೆಸುತ್ತಿವೆ.

ಮತ ವಿಭಜನೆಯ ಲಾಭ ಪಡೆದುಕೊಳ್ಳಲು ಬಿಜೆಪಿ ಮುಂದಾಗಿದೆ. ಈ ಪ್ರಯೋಗ ಜಿಲ್ಲೆಯ ಗಂಗಾವತಿ, ಯಲಬುರ್ಗಾ ಹಾಗೂ ಕನಕಗಿರಿ ಕ್ಷೇತ್ರಗಳಲ್ಲಿ ನಡೆದಿದೆ. ಕಾಂಗ್ರೆಸ್‌ನಿಂದ ಮುನಿಸಿಕೊಂಡಿರುವ ವೀರನಗೌಡ ಪೊಲೀಸ್‌ ಪಾಟೀಲ ಅವರು ಸಚಿವ ಬಸವರಾಜ ರಾಯರಡ್ಡಿ ಅವರ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ.

ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಲಪ್ಪಾಚಾರ್‌ ಕೂಡ ಬಿಜೆಪಿಯಿಂದ ಪ್ರಬಲ ಸ್ಪರ್ಧೆ ಒಡ್ಡುತ್ತಿದ್ದಾರೆ. ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆ,ಹೆದ್ದಾರಿ ನಿರ್ಮಾಣ, ರೈಲ್ವೆ ಯೋಜನೆ ಅನುಷ್ಠಾನದಂತಹ ಸಾಧನೆಯನ್ನು ಮುಂದಿಟ್ಟುಕೊಂಡು ರಾಯರಡ್ಡಿ ಮತ ಯಾಚಿಸುತ್ತಿದ್ದಾರೆ.

ಕೃಷ್ಣಾ ‘ಬಿ’ ಸ್ಕೀಂ ಅನುಷ್ಠಾನದಲ್ಲಿ ಕಾಲಹರಣ, ಬರೀ ಸಮೀಕ್ಷೆಗಳಷ್ಟೇ ನಡೆದಿರುವುದು, ಸಿಂಗಟಾಲೂರು ಏತ ನೀರಾವರಿ ಯೋಜನೆ ಜಾರಿಯಾಗದಿರುವುದು... ಇತ್ಯಾದಿ ವೈಫಲ್ಯಗಳನ್ನು ಬಿಜೆಪಿ ಯಲಬುರ್ಗಾ ಕ್ಷೇತ್ರದ ಜನರ ಮುಂದಿಡುತ್ತಿದೆ. 

ಇದೇ ಮತ ವಿಭಜಕ ಶಕ್ತಿಯ ಲಾಭವನ್ನು ಕೊಪ್ಪಳ ಹಾಗೂ ಕುಷ್ಟಗಿಯಲ್ಲಿ ಪಡೆದುಕೊಳ್ಳಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಕೊಪ್ಪಳ ಮತ್ತು ಕನಕಗಿರಿ ಕ್ಷೇತ್ರಗಳಲ್ಲಿ ಬಿಜೆಪಿ ಹೊಸಮುಖಗಳನ್ನು ಕಣಕ್ಕಿಳಿಸಿದೆ. ಜೆಡಿಎಸ್‌ನಲ್ಲಿ ಕೊಪ್ಪಳ, ಗಂಗಾವತಿ ಕ್ಷೇತ್ರಗಳನ್ನು ಹೊರತುಪಡಿಸಿದರೆ, ಉಳಿದವರು ಹೊಸಬರು. ಜೆಡಿಎಸ್‌ ಮಾತ್ರ ಕನಕಗಿರಿ ಕ್ಷೇತ್ರದಿಂದ ಡಿ.ಎಂ.ಮಂಜುಳಾ ಅವರನ್ನು ಕಣಕ್ಕಿಳಿಸಿದೆ. ಜಿಲ್ಲೆಯ ಏಕೈಕ ಮಹಿಳಾ ಅಭ್ಯರ್ಥಿ ಇವರು.

ತುಂಗಭದ್ರೆಯ ದಂಡೆಯಲ್ಲಿದ್ದರೂ ಜಿಲ್ಲೆಯ ಗಂಗಾವತಿ ಹೊರತುಪಡಿಸಿ ಉಳಿದವು ಮಳೆ ಆಧಾರಿತ ಕೃಷಿ ಅವಲಂಬಿಸಿದ ಪ್ರದೇಶ. ಒಣಪ್ರದೇಶಗಳನ್ನು ನೀರಾವರಿಗೆ ಒಳಪಡಿಸುತ್ತೇವೆ ಎಂದು ಪ್ರತಿ ಚುನಾವಣೆಯಲ್ಲಿಯೂ ಎಲ್ಲ ಪಕ್ಷಗಳು ಭರವಸೆ ನೀಡುತ್ತಲೇ ಬಂದಿವೆ. ಆದರೆ, ಅದು ಈಡೇರಿಲ್ಲ. ಜನರೂ ನೀರಾವರಿ ಯೋಜನೆ ಅನುಷ್ಠಾನದ ಭರವಸೆಗಳನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಚುನಾವಣೆ ಹತ್ತಿರಬರುತ್ತಿದ್ದಂತೆಯೇ, ಕೊಪ್ಪಳ ಮತ್ತು ಕನಕಗಿರಿ ಭಾಗದ ಬೆರಳೆಣಿಕೆಯ ಕೆರೆಗಳನ್ನು ತುಂಬಿಸುವ ಪ್ರಯತ್ನ ನಡೆದಿದೆ. ಅದರ ಲಾಭವನ್ನು ಪಡೆಯಲು ಕಾಂಗ್ರೆಸ್‌ ಮುಂದಾಗಿದೆ. ಪ್ರವಾಹ ಹರಿವು ಕಾಲುವೆ, ಸಮಾನಾಂತರ ಜಲಾಶಯ ನಿರ್ಮಾಣ ಯೋಜನೆಗಳು ಕಡತಗಳಲ್ಲೇ ಉಳಿದಿವೆ. ಆದರೆ ಈ ವಿಷಯಗಳು ಚುನಾವಣಾ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿಲ್ಲ.

ಬೇಸಿಗೆ ಬೆಳೆಗೆ ನೀರು ಹರಿಸದೇ ಸಾವಿರಾರು ಎಕರೆ ಭತ್ತ ಜೊಳ್ಳಾಗಿ ಹೋದ ಕುರಿತು ರೈತರಲ್ಲಿ ಆಕ್ರೋಶವಿದೆ. ನವೆಂಬರ್‌, ಡಿಸೆಂಬರ್‌ ತಿಂಗಳಲ್ಲಿ ಅಣೆಕಟ್ಟೆಯ ನೀರನ್ನು ಸಮರ್ಪಕವಾಗಿ ನಿರ್ವಹಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂಬ ಅಳಲು ರೈತರದ್ದು. ಇದನ್ನೇ ಬಿಜೆಪಿ ಚುನಾವಣಾ ವಿಷಯವನ್ನಾಗಿ ಮುಂದಿಟ್ಟುಕೊಂಡು ಕಾಂಗ್ರೆಸ್‌ ವಿರುದ್ಧ ಹರಿಹಾಯುತ್ತಿದೆ. 

ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿಯದು ಕತ್ತಿ ಅಲಗಿನ ಮೇಲಿನ ನಡಿಗೆಯಾಗಿದೆ. ಪಕ್ಷದೊಳಗಿನ ಆಂತರಿಕ ಅಸಮಾಧಾನವನ್ನೂ ತಣ್ಣಗಾಗಿಸಬೇಕಾದ ಅನಿವಾರ್ಯ ಈ ಪಕ್ಷದ್ದು. ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್‌ನ ಮತಬುಟ್ಟಿಗೆ ಬಿಜೆಪಿ ಕೈ ಹಾಕಿ ತಿರುಗುಬಾಣ ಬಿಡಲು ಸಿದ್ಧವಾಗಿದೆ. ಮಾತ್ರವಲ್ಲ, ‘ಚುನಾವಣೆ ಸಂದರ್ಭ ಮಾತ್ರ ನಮ್ಮನ್ನು ಬಳಸಿಕೊಳ್ಳುತ್ತೀರಿ. ಅಧಿಕಾರದ ಸ್ಥಾನಮಾನ, ನೇಮಕಾತಿ ಸಂದರ್ಭಗಳಲ್ಲಿ ದೂರವಿಡುತ್ತೀರಿ’ ಎಂಬ ಅಸಮಾಧಾನವನ್ನು ಮುಸ್ಲಿಂ ಮುಖಂಡರು ಕಾಂಗ್ರೆಸ್‌ ಹಿರಿಯರ ಮುಂದೆ ಹೊರಗೆಡವಿದ್ದಾರೆ.

ಅಪ್ಪ–ಮಕ್ಕಳ ರಾಜಕಾರಣ ಎಂಬ ಹಣೆಪಟ್ಟಿ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ಅಂಟಿಕೊಂಡಿದೆ. ಇದೇ ಕಾರಣಕ್ಕೆ ಕೊಪ್ಪಳ ಕ್ಷೇತ್ರದ ಬಿಜೆಪಿ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಗೊಂದಲ ಉಂಟಾಯಿತು. ಘೋಷಿತ ಅಭ್ಯರ್ಥಿ ಬದಲಿಗೆ ಸಂಸದ ಸಂಗಣ್ಣ ಕರಡಿ ಅವರ ಪುತ್ರ ಅಮರೇಶ್‌ ಕರಡಿ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದೇ ಕಾರಣಕ್ಕೆ ಮುನಿಸಿಕೊಂಡ ಬಿಜೆಪಿಯ ಹಲವು ಮುಖಂಡರು ಕಾಂಗ್ರೆಸ್‌ ಪಾಳಯ ಸೇರಿಕೊಂಡರು. ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ ಪುತ್ರ ಕೆ.ರಾಘವೇಂದ್ರ ಹಿಟ್ನಾಳ ಕಣಕ್ಕಿಳಿದಿದ್ದಾರೆ.

ಗಂಗಾವತಿಯಲ್ಲಿ ಜೆಡಿಎಸ್‌ ತೊರೆದ ಶಾಸಕ ಇಕ್ಬಾಲ್‌ ಅನ್ಸಾರಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಈ ಸಂದರ್ಭದಲ್ಲೇ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗರು ಎಂಬ ವಿಭಜನೆ ಶುರುವಾಯಿತು. ಅನ್ಸಾರಿ ವಿರೋಧಿ ಅಲೆ ಸೃಷ್ಟಿಸುವ ಯತ್ನಗಳು ನಡೆದವು. ಅನ್ಸಾರಿಯವರನ್ನು ವಿರೋಧಿಸಿದವರೇ ಇಂದು ಅವರ ಪರ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರಾದ ಶಿವರಾಮಗೌಡ, ಮುಕುಂದರಾವ್‌ ಭವಾನಿಮಠ ಅವರನ್ನೇ ಕಾಂಗ್ರೆಸ್‌ ತನ್ನ ಬುಟ್ಟಿಗೆ ಹಾಕಿಕೊಂಡಿದೆ.

ಇಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಜೆಡಿಎಸ್‌ ಪರ ಅನುಕಂಪದ ಒಲವು ಇದೆ. ಕುರುಬ ಸಮುದಾಯದವರಾದ ಅಭ್ಯರ್ಥಿ ಕರಿಯಣ್ಣ ಸಂಗಟಿ ಅವರು ಸಮುದಾಯದ ಒಲವು ಗಳಿಸಿಕೊಳ್ಳಲು ಶತಪ್ರಯತ್ನ ನಡೆಸುತ್ತಿದ್ದಾರೆ. ಕೋಮು ಸೂಕ್ಷ್ಮ ಪ್ರದೇಶವಾದ ಗಂಗಾವತಿ ಕಳೆದ ವರ್ಷ ಗಲಭೆಗಳ ಮೂಲಕವೇ ಸುದ್ದಿಯಲ್ಲಿತ್ತು. ಇಲ್ಲಿ ಮುಂದುವರಿದ ಸಮುದಾಯ ಮತ್ತು ಅಹಿಂದ ಮತಗಳನ್ನು ಸೆಳೆದುಕೊಳ್ಳುವ ಸವಾಲು ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಅವರಿಗಿದೆ.

ನಾಲ್ಕು ತಾಲ್ಲೂಕುಗಳಿದ್ದ ಜಿಲ್ಲೆಯಲ್ಲಿ ಮೂರು ಹೊಸ ತಾಲ್ಲೂಕುಗಳು ರಚನೆಯಾದವು. ಹೊಸ ತಾಲ್ಲೂಕು ರಚನೆಯನ್ನು ತಮ್ಮ ಸಾಧನೆಯ ಪಟ್ಟಿಯಲ್ಲಿ ಯಲಬುರ್ಗಾ ಮತ್ತು ಕನಕಗಿರಿಯ ಕಾಂಗ್ರೆಸ್‌ ಅಭ್ಯರ್ಥಿಗಳು ನಮೂದಿಸಿಕೊಂಡಿದ್ದಾರೆ.

ಇಂದು (ಮೇ 8) ಪ್ರಧಾನಿ ನರೇಂದ್ರ ಮೋದಿ ಕೊಪ್ಪಳದಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ಆ ಬಳಿಕ ಮತಗಳ ಅಲೆ ತಮ್ಮತ್ತ ಬೀಸಬಹುದು ಎಂಬ ನಿರೀಕ್ಷೆ ಬಿಜೆಪಿಯಲ್ಲಿ ಮನೆಮಾಡಿದೆ.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಇಲ್ಲಿ ಬಿಜೆಪಿ ಅನುಸರಿಸಿದ ಕೊನೇ ಕ್ಷಣದ ಇದೇ ಕಸರತ್ತು ಫಲಿಸಿತ್ತು. ಈ ಬಾರಿಯೂ ಅದೇ ತಂತ್ರದ ಮರುಪ್ರಯೋಗಕ್ಕೆ ಪಕ್ಷದ ಜಿಲ್ಲಾ ಘಟಕ ಮುಂದಾಗಿದೆ.

* ಅಭ್ಯರ್ಥಿಗಳಲ್ಲಿ ಕ್ರೀಡಾ ಮನೋಭಾವ ಇಲ್ಲ. ಪಕ್ಷ ಗಳಿಗಿಂತ ದೊಡ್ಡವರಾಗಲು ಹೋಗುತ್ತಿದ್ದಾರೆ. ಮತದಾರರು, ನಾಯಕರಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ

–ವಿಜಯ ಅಮೃತರಾಜ್‌, ಹಿರಿಯ ವಕೀಲ, ಕೊಪ್ಪಳ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT