ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ್ವಾಸ್‌ಗೆ ಆರು ಪದಕ

ದಕ್ಷಿಣ ಏಷ್ಯಾ ಜೂನಿಯರ್‌ ಅಥ್ಲೆಟಿಕ್ಸ್‌: ಆಶಿಶ್‌ ಕೂಟ ದಾಖಲೆ
Last Updated 7 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ದಕ್ಷಿಣ ಏಷ್ಯಾ ಜೂನಿಯರ್‌ ಅಥ್ಲೆಟಿಕ್ಸ್‌ನಲ್ಲಿ ಒಟ್ಟು ಆರು ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ ಮೂರು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಸೇರಿದೆ.

ಆಶಿಶ್‌ ಕೂಟ ದಾಖಲೆ: ಬಾಲಕರ ಶಾಟ್‌ಪಟ್‌ ವಿಭಾಗದಲ್ಲಿ ಭಾಗವಹಿಸಿದ್ದ ಆಶಿಶ್‌ ಅವರು ಕೂಟ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಭಾನುವಾರ ನಡೆದ ಸ್ಪರ್ಧೆಯಲ್ಲಿ ಆಶಿಶ್‌ 18.53 ಮೀಟರ್ಸ್‌ ದೂರ ಕಬ್ಬಿಣದ ಗುಂಡು ಎಸೆದು ಈ ಸಾಧನೆ ಮಾಡಿದರು.

ಬಾಲಕರ 100 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಪ್ರಜ್ವಲ್‌ ಮಂದಣ್ಣ ಚಿನ್ನದ ಸಾಧನೆ ಮಾಡಿದರು. ಪ್ರಜ್ವಲ್‌, 10.83 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದರು. ಇದರೊಂದಿಗೆ ಕೂಟದ ವೇಗದ ಓಟಗಾರ ಗೌರವಕ್ಕೆ ಪಾತ್ರರಾದರು.

4X100 ಮೀಟರ್ಸ್‌ ರಿಲೇಯಲ್ಲೂ ಭಾಗವಹಿಸಿದ್ದ ಪ್ರಜ್ವಲ್‌ ಚಿನ್ನ ಜಯಿಸಿ ಗಮನ ಸೆಳೆದರು.

ಬಾಲಕಿಯರ ಶಾಟ್‌ಪಟ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಅನಾಮಿಕ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡರು.

ಫೈನಲ್‌ನಲ್ಲಿ ಅನಾಮಿಕ 14.86 ಮೀಟರ್ಸ್‌ ದೂರ ಕಬ್ಬಿಣದ ಗುಂಡು ಎಸೆದರು.

ಬಾಲಕಿಯರ 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ವಿ.ಶುಭಾ ಬೆಳ್ಳಿಯ ಪದಕ ಜಯಿಸಿದರು.

ಆರಂಭದಿಂದಲೇ ಶರವೇಗದಲ್ಲಿ ಓಡಿದ ಶುಭಾ, 55.1 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು.

ಬಾಲಕಿಯರ ವಿಭಾಗದ ಹೈಜಂಪ್‌ ಸ್ಪರ್ಧೆಯಲ್ಲಿ ಅಭಿನಯ ಶೆಟ್ಟಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಅಭಿನಯ ಅವರು 1.60 ಮೀಟರ್ಸ್‌ ಎತ್ತರ ಜಿಗಿದರು.

‘ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಆರು ಪದಕಗಳನ್ನು ಗೆದ್ದಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ಕೂಟದಲ್ಲಿ ಇನ್ನೂ ಹೆಚ್ಚಿನ ಪದಕ ಗೆಲ್ಲಬೇಕು. ಇದಕ್ಕಾಗಿ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ’ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಮೋಹನ್‌ ಆಳ್ವಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT