ಮತದಾರರಿಗೆ ವಿತರಿಸಲು ಸಾಗಿಸುತ್ತಿದ್ದ ಬಟ್ಟೆಗಳು ಜಪ್ತಿ

7

ಮತದಾರರಿಗೆ ವಿತರಿಸಲು ಸಾಗಿಸುತ್ತಿದ್ದ ಬಟ್ಟೆಗಳು ಜಪ್ತಿ

Published:
Updated:

ಬೆಂಗಳೂರು: ಕಂಟೇನರ್‌ನಲ್ಲಿ ಸಾಗಿಸುತ್ತಿದ್ದ 5,000 ಟೀ ಶರ್ಟ್‌ ಹಾಗೂ 25 ಸಾವಿರ ಚಡ್ಡಿಗಳನ್ನು (ಶಾಟ್ಸ್‌)ಗಳನ್ನು ಜಪ್ತಿ ಮಾಡಿರುವ ಚುನಾವಣಾಧಿಕಾರಿಗಳು, ಸದಾಶಿವನಗರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಡಾಲರ್ಸ್‌ ಕಾಲೊನಿ ಮಾರ್ಗವಾಗಿ ಭಾನುವಾರ ರಾತ್ರಿ ಕಂಟೇನರ್‌ ಹೊರಟಿತ್ತು. ಅದನ್ನು ಹಿಂಬಾಲಿಸಿದ್ದ ಬಿಜೆಪಿ ಕಾರ್ಯಕರ್ತರು, ಚಾಲಕನನ್ನು ಪ್ರಶ್ನಿಸಿದ್ದರು. ಗಾಬರಿಗೊಂಡ ಚಾಲಕ, ಕಂಟೇನರ್‌ ಬಿಟ್ಟು ಸ್ಥಳದಿಂದ ಓಡಿಹೋಗಿದ್ದ. ನಂತರ, ಸ್ಥಳಕ್ಕೆ ಹೋದ ಚುನಾವಣಾಧಿಕಾರಿಗಳು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಅವುಗಳ ಮೌಲ್ಯವೆಷ್ಟು ಎಂಬುದನ್ನು ಲೆಕ್ಕ ಹಾಕುತ್ತಿದ್ದೇವೆ ಎಂದು ಪೊಲೀಸರು ಹೇಳಿದರು.

‘ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಭಾವಚಿತ್ರವನ್ನು ಟೀ ಶರ್ಟ್‌ ಮೇಲೆ ಮುದ್ರಿಸಲಾಗಿದೆ. ಇವುಗಳನ್ನು ತಮಿಳುನಾಡಿನಿಂದ ನಗರಕ್ಕೆ ತರಲಾಗುತ್ತಿತ್ತು. ವಸ್ತುಗಳೆಲ್ಲವೂ ಅವರಿಗೇ ಸೇರಿದ್ದು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿರುವುದಾಗಿ ಚುನಾವಣಾಧಿಕಾರಿಗಳು ದೂರಿನಲ್ಲಿ ತಿಳಿಸಿದ್ದಾರೆ’ ಎಂದರು.

ಕಂಟೇನರ್‌ ಇದ್ದ ಸ್ಥಳದಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು, ‘ತಮಿಳುನಾಡಿನಿಂದ ಹೊರಟಿದ್ದ ಕಂಟೇನರ್‌ನ್ನು ಹಲವು ಚೆಕ್‌ಪೋಸ್ಟ್‌ಗಳಲ್ಲಿ ಬಿಟ್ಟು ಕಳುಹಿಸಲಾಗಿದೆ. ಅಧಿಕಾರಿಗಳು ಕಾಂಗ್ರೆಸ್‌ ಮುಖಂಡರು ಹೇಳಿದಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಪೊಲೀಸರು ಅವರನ್ನು ಸಮಾಧಾನಪಡಿಸಿದರು.

ಜಿ.ಪದ್ಮಾವತಿ ಕರಪತ್ರವಿದ್ದ ಕಾರು ಜಪ್ತಿ; ರಾಜಾಜಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಪದ್ಮಾವತಿ ಅವರ ಪ್ರಚಾರದ ಕರಪತ್ರಗಳ ಜತೆಗೆ ಬಟ್ಟೆಗಳು, ಕೈ ಚೀಲಗಳನ್ನು ಸಾಗಣೆ ಮಾಡುತ್ತಿದ್ದ ಪಾರ್ಚ್ಯೂನರ್‌ ಕಾರನ್ನು (ಕೆಎ 09 ಎಂಸಿ 9572) ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

‘ಮತದಾರರಿಗೆ ಆಮಿಷವೊಡ್ಡುವ ಉದ್ದೇಶದಿಂದ ವಸ್ತುಗಳನ್ನು ಸಾಗಣೆ ಮಾಡಲಾಗುತ್ತಿತ್ತು. ಶಂಕರ್‌ನಾಗ್ ರೈಲ್ವೆ ಗೇಟ್‌ ಬಳಿ ಚೆಕ್‌ಪೋಸ್ಟ್‌ನಲ್ಲಿ ಕಾರನ್ನು ತಡೆದು  ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ತಪಾಸಣೆ ನಡೆಸಿದ್ದರು. 35 ಶರ್ಟ್‌ ಪೀಸ್, 5 ಸೀರೆ, 22 ಪ್ಯಾಂಟ್ ಪೀಸ್, 3 ಬೆಡ್‌ಶಿಟ್‌, 191 ಕೈ ಚೀಲಗಳು, 33 ಕರಪತ್ರಗಳು ಹಾಗೂ 35 ಕಿರುಹೊತ್ತಿಗೆಗಳು ಪತ್ತೆಯಾದವು’ ಎಂದು ಪೊಲೀಸರು ತಿಳಿಸಿದರು.

‘ಕಾರಿನ ಚಾಲಕ ಜೈ ಶಂಕರ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೆವು. ಸಾಗಣೆ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ. ಅವರ ವಿರುದ್ಧವೇ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ಈ ಸಂಬಂಧ ಜಿ.ಪದ್ಮಾವತಿ ಅವರಿಗೂ ನೋಟಿಸ್‌ ನೀಡಲಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry