ಸೋಮವಾರ, ಮಾರ್ಚ್ 1, 2021
23 °C
ಸಹನಾ ಹಳಿಂಗಳಿ ರಾಜ್ಯಕ್ಕೆ 7ನೇ ಸ್ಥಾನ

ನೇಕಾರನ ಮಗಳಿಗೆ ಎಸ್ಎಸ್ಎಲ್‌ಸಿಯಲ್ಲಿ 619 ಅಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೇಕಾರನ ಮಗಳಿಗೆ ಎಸ್ಎಸ್ಎಲ್‌ಸಿಯಲ್ಲಿ 619 ಅಂಕ

ರಬಕವಿ- ಬನಹಟ್ಟಿ: ಬನಹಟ್ಟಿ ನಿವಾಸಿ ಮತ್ತು ಜಮಖಂಡಿ ತಾಲ್ಲೂಕಿನ ಆಲಗೂರ ಪನರ್ವಸತಿ ಕೇಂದ್ರದ ಆದರ್ಶ ವಿದ್ಯಾಲಯದ ಇಂಗ್ಲಿಷ್‌ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಹನಾ ಮಲ್ಲಪ್ಪ ಹಳಿಂಗಳಿ 625ಕ್ಕೆ 619 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ ಏಳನೇ ಸ್ಥಾನ ಪಡೆದುಕೊಂಡಿದ್ದಾರೆ.

‌ಮೂಲತಃ ನೇಕಾರಿಕೆಯ ಮನೆತನದ ವಿದ್ಯಾರ್ಥಿನಿ ಸಹನಾ ಇಂಗ್ಲಿಷ್‌ನಲ್ಲಿ 120, ಕನ್ನಡದಲ್ಲಿ 100, ಹಿಂದಿಯಲ್ಲಿ 100, ಗಣಿತದಲ್ಲಿ 99, ವಿಜ್ಞಾನದಲ್ಲಿ 100 ಮತ್ತು ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಪಡೆದುಕೊಂಡಿದ್ದಾರೆ. ಸಹನಾ 1ರಿಂದ 5ನೇ ತರಗತಿಯನ್ನು ಬನಹಟ್ಟಿಯ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತರೆ, ನಂತರ 6ನೇ ವರ್ಗದಿಂದ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯತೊಡಗಿದರು.

ಸಹನಾಳ ತಂದೆ ಮಲ್ಲಪ್ಪ ನೇಕಾರಿಕೆ ಉದ್ಯೋಗವನ್ನು ಮಾಡಿಕೊಂಡು ಪಿಯುಸಿವರೆಗೆ ಶಿಕ್ಷಣ ಪಡೆದುಕೊಂಡರು. ಸದ್ಯ ಮಲ್ಲಪ್ಪ ಮಾಲೀಕರಿಂದ ಸೀರೆಗಳನ್ನು ಖರೀದಿಸಿ ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ. ತಾಯಿ ಸುವರ್ಣಾ ಎಸ್ಎಸ್‌ಎಲ್‌ಸಿವರೆಗೆ ಮಾತ್ರ ಓದಿದ್ದಾರೆ. ‘ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದೇ ನಮ್ಮ ಉದ್ದೇಶ. ಸಹನಾ ಸಾಧನೆ ನಮಗೆ ಸಾಕಷ್ಟು ತೃಪ್ತಿಯನ್ನು ನೀಡಿದೆ’ ಎಂದು ಮಲ್ಲಪ್ಪ ಪತ್ರಿಕೆಗೆ ತಿಳಿಸಿದರು.

‘ನಿತ್ಯ 30 ಕಿ.ಮೀ ದೂರದ ಆಲಗೂರ ಗ್ರಾಮಕ್ಕೆ ಹೋಗಲು ಜಮಖಂಡಿಗೆ ಹೋಗಿ, ಅಲ್ಲಿಂದ ಆಲಗೂರ ಗ್ರಾಮಕ್ಕೆ ತೆರಳಬೇಕಾಗಿತ್ತು. ಪ್ರತಿನಿತ್ಯ ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ಬಸ್‌ನಲ್ಲಿಯೇ ಕಾಲ ಕಳೆಯಬೇಕಾಗಿತ್ತು. ಆದರೂ ಬಸ್‌ ನಿಲ್ದಾಣಗಳಲ್ಲಿ ಮತ್ತು ಬಸ್‌ನಲ್ಲಿ ಹೋಗುವಾಗ ಕುಳಿತು ಓದುತ್ತಿದ್ದೆ. ಸಂಜೆ ಮನೆಗೆ ಬರಲು ತಡವಾಗುತ್ತಿತ್ತು. ಶಾಲೆಯಲ್ಲಿ ಶಿಕ್ಷಕರು ಹೇಳುವ ಪ್ರತಿಯೊಂದು ವಿಷಯವನ್ನು ತಲ್ಲೀನಳಾಗಿ ಕೇಳುತ್ತಿದ್ದೆ. ಶಾಲೆಯ ಶಿಕ್ಷಕರು ನಮಗೆ ಪ್ರತಿಯೊಂದು ವಿಷಯವನ್ನು ಸರಿಯಾಗಿ ಕಲಿಸುತ್ತಿದ್ದರು. ಪ್ರತಿಯೊಂದು ಸಮಸ್ಯೆಗಳನ್ನು ಅತ್ಯಂತ ಸರಳವಾಗಿ ಹೇಳುತ್ತಿದ್ದರು. ಇಂಗ್ಲಿಷ್‌ಗೆ ಇನ್ನೂ ಅಂಕಗಳನ್ನು ಬರಬೇಕಾಗಿತ್ತು. ಮುಂದೆ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು, ನಂತರ ಬಿಎಸ್‌ಸಿ ಪದವಿಯನ್ನು ಪಡೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತೇನೆ’ ಎಂದು ಸಹನಾ ಮಾಹಿತಿ ನೀಡಿದರು.

ಅಣ್ಣನೇ ಸ್ಫೂರ್ತಿ: ಸಹನಾಳ ಸಹೋದರ ಸೋಮನಾಥ ಕೂಡ ಎಸ್‌ಎಸ್‌ಎಲ್‌ಸಿಯಲ್ಲಿ 96 ಪ್ರತಿಶತ ಅಂಕಗಳನ್ನು ಪಡೆದುಕೊಂಡಿದ್ದರು. ಪಿಯುಸಿ ಪ್ರಥಮ ವರ್ಷದಲ್ಲಿಯೂ 96ಕ್ಕಿಂತ ಹೆಚ್ಚು ಪ್ರತಿಶತ ಅಂಕಗಳನ್ನು ಪಡೆದುಕೊಂಡಿದ್ದಾರೆ. ಅಣ್ಣನ ಮಾರ್ಗದರ್ಶನದಲ್ಲಿಯೇ ಓದಿದ ಸಹನಾ ಈಗ ತನ್ನ ಸಹೋದರನಿಗಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.

ಸಹನಾಳ ತಂದೆ ಮಲ್ಲಪ್ಪ ಪಿಯುಸಿವರೆಗೆ ಮತ್ತು ತಾಯಿ ಸುವರ್ಣಾ ಎಸ್ಎಸ್‌ಎಲ್‌ಸಿವರೆಗೆ ಮಾತ್ರ ಓದಿದ್ದಾರೆ. ಆದರೂ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದೆ ನಮ್ಮ ಉದ್ದೇಶವಾಗಿದೆ ಎಂದು ಸಹನಾರ ತಂದೆ ಮಲ್ಲಪ್ಪ ಪತ್ರಿಕೆಗೆ ತಿಳಿಸಿದರು. ಸಹನಾ ಸಾಧನೆ ನಮಗೆ ಸಾಕಷ್ಟು ತೃಪ್ತಿಯನ್ನು ನೀಡಿದೆ ಎಂದು ಮಲ್ಲಪ್ಪ ಪತ್ರಿಕೆಗೆ ತಿಳಿಸಿದರು.

ವಿಶ್ವಜ ಕಾಡದೇವರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.