ಶನಿವಾರ, ಫೆಬ್ರವರಿ 27, 2021
19 °C
ಇಳಕಲ್: ಮಾನವ ಬಂಧುತ್ವ ವೇದಿಕೆಯಿಂದ ಸಂವಿಧಾನ ಉಳಿವಿಗಾಗಿ ದಲಿತ ಹಾಗೂ ಅಲ್ಪಸಂಖ್ಯಾತರ ಜಾಗೃತಿ ಸಮಾವೇಶ

ಮೋದಿ ಚೌಕಿದಾರನಲ್ಲ, ಮೋಸಗಾರ: ಜಿಗ್ನೇಶ್‍

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿ ಚೌಕಿದಾರನಲ್ಲ, ಮೋಸಗಾರ: ಜಿಗ್ನೇಶ್‍

ಇಳಕಲ್: ‘ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿಜಯ ಮಲ್ಯ, ನೀರವ್‍ ಮೋದಿ ಪರಾರಿ ಆದಾಗ ದೇಶದ ಚೌಕಿದಾರ ಎಂದು ಹೇಳಿಕೊಳ್ಳುವ ಪ್ರಧಾನಿ ಮೋದಿ ಏನು ಮಾಡುತ್ತಿದ್ದರು’ ಎಂದು ಗುಜರಾತ್‌ನ ಶಾಸಕ ಜಿಗ್ನೇಶ್ ಮೇವಾನಿ ಪ್ರಶ್ನಿಸಿದರು.

ಇಲ್ಲಿನ ಚಿತ್ತರಗಿ ವಿಜಯ ಮಹಾಂತ ಪ್ರೌಢಶಾಲೆಯ ಸಭಾಂಗಣದಲ್ಲಿ ಸೋಮವಾರ ಮಾನವ ಬಂಧುತ್ವ ವೇದಿಕೆ ಹಮ್ಮಿಕೊಂಡಿದ್ದ ಸಂವಿಧಾನ ಉಳಿವಿಗಾಗಿ ದಲಿತ ಹಾಗೂ ಅಲ್ಪಸಂಖ್ಯಾತರ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಬ್ಯಾಂಕ್‌ಗಳ ಹಣ ನುಂಗಿದವರಿಗೆ ಹಿಂಬಾಗಿಲ ಮೂಲಕ ದೇಶ ತೊರೆಯಲು ಅವಕಾಶ ನೀಡಿದ ಮೋದಿ ಉಳಿದವರ ದೇಶಪ್ರೇಮ ಪ್ರಶ್ನಿಸುತ್ತಾರೆ. ಅವರೊಬ್ಬ ಮಹಾನ್ ಮೋಸಗಾರ’ ಎಂದು ಹರಿಹಾಯ್ದರು.

'ಕರ್ನಾಟಕದ ವಿಧಾನಸಭೆ ಚುನಾವಣೆ ದೇಶದ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದು. 2019ರ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇದು ದಿಕ್ಸೂಚಿ. ಹಾಗಾಗಿ ಸಂವಿಧಾನ ವಿರೋಧಿ, ಕೋಮುವಾದಿ ಶಕ್ತಿಗಳನ್ನು ಬಗ್ಗು ಬಡಿಯುವ ಸಂದರ್ಭ ಈಗ ಬಂದಿದೆ. ಸಮಾಜವನ್ನು ಮತ ಧರ್ಮಗಳ ಆಧಾರದಲ್ಲಿ ಒಡೆದು ಅಧಿಕಾರ ಹಿಡಿಯುವುದು ಬಿಜೆಪಿಯ ಅಜೆಂಡಾ ಆಗಿದೆ. ಕೋಮುಶಕ್ತಿಗಳನ್ನು ಸೋಲಿಸಲು ಮತವಿಭಜನೆಯಾಗದಂತೆ ನೋಡಿಕೊಳ್ಳಬೇಕಿದೆ. ಬಸವಣ್ಣ, ನಾರಾಯಣಗುರು, ಸೂಫಿ ಸಂತರ ಚಳುವಳಿ ಈ ನೆಲ ತನ್ನದೇ ಆದ ಅಸ್ಮಿತೆ, ಸಂಸ್ಕೃತಿ ಹೊಂದಿದೆ. ಸೌಹಾರ್ದ ಪರಂಪರೆಗೆ ಹೆಸರಾಗಿದೆ. ಕರ್ನಾಟಕದ ಪ್ರಜ್ಞಾವಂತ ಜನರು ಮೋದಿ ಕುತಂತ್ರಗಳಿಗೆ ಬಲಿಯಾಗಲಾರರು ಎನ್ನುವ ವಿಶ್ವಾಸವಿದೆ' ಎಂದರು.

‘ದೇಶದ ಸಂವಿಧಾನಕ್ಕೆ ಮನುವಾದಿಗಳಿಂದ ಆತಂಕ ಬಂದೊದಗಿದೆ. ಸಮಾಜದಲ್ಲಿ ತುಳಿತಕ್ಕೊಳಗಾದ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳನ್ನು ಸಮಾಜದ ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಠಿಯಿಂದ ಹೊರತಂದು ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ಸಶಕ್ತರನ್ನಾಗಿ ಮಾಡುವುದಕ್ಕಾಗಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಿದರು. ಆದರೆ ಕೋಮುಶಕ್ತಿಗಳಿಂದ ಇಂದು ಸಂವಿಧಾನ ಬದಲಾಯಿಸುವ ಚಿಂತನೆಗಳು ಪ್ರಾರಂಭಗೊಂಡಿವೆ. ಸಂವಿಧಾನ ಉಳಿವಿಗಾಗಿ ಬಿಜೆಪಿ, ಆರ್.ಎಸ್.ಎಸ್. ಹಾಗೂ ಹಿಂದೂ ಸಂಘಟನೆಗಳ ವಿರುದ್ದ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು’ ಎಂದರು.

ಅರ್ಷದ ಅಮ್ಮದ್, ಗೌರಿ ಮಾತನಾಡಿ, ‘ಸಂವಿಧಾನ ವಿರೋಧಿ ಶಕ್ತಿಗಳನ್ನು ಸೋಲಿಸುವ, ಪ್ರಶ್ನಿಸುವ ಸಂದರ್ಭ ಬಂದಿದೆ. ದಲಿತರು, ಹಿಂದುಳಿದ ವರ್ಷದವರು ಬಿಜೆಪಿ ಜತೆ ಯಾವ ಕಾರಣಕ್ಕೂ ಕೈ ಜೋಡಿಸಬಾರದು’ ಎಂದು ಮನವಿ ಮಾಡಿದರು.

ವಿಜಯಪುರದ ಕಿರಣ ಕಟ್ಟಿಮನಿ ಉಪಸ್ಥಿತರಿದ್ದರು. ಜನಶಕ್ತಿ ತಂಡದವರು ಕ್ರಾಂತಿ ಗೀತೆಗಳನ್ನು ಹಾಡಿದರು. ರವಿ ಹೊಸಮನಿ ಸ್ವಾಗತಿಸಿದರು. ಸಿತಿಮಾ ವಜ್ಜಲ ನಿರೂಪಿಸಿದರು.

ಚರ್ಚೆಗೆ ಬರಲು ಸವಾಲು

‘ಮನ್‍ ಕೀ ಬಾತ್ ಎಂದು ಆಕಾಶವಾಣಿಯಲ್ಲಿ ಮಾತನಾಡುವ ಪ್ರಧಾನಿ, ಮಾಧ್ಯಮಗಳ ಎದುರು ಮಾತನಾಡಲು ಏಕೆ ಹೆದರುತ್ತಾರೆ. ಮೋದಿ ಹಾಗೂ ಅವರ ಪಕ್ಷ ದಲಿತರ, ಅಲ್ಪಸಂಖ್ಯಾತರ ವಿರೋಧಿಯಾಗಿದೆ. ಸಂವಿಧಾನ ವಿರೋಧಿ ನಿಲುವು ಹೊಂದಿದೆ. ಬಡವರ ಏಳ್ಗೆಗಾಗಿ ಏನೊಂದು ಕೊಡುಗೆ ನೀಡದ ನರೇಂದ್ರ ಮೋದಿ ಉದ್ಯಮಿಗಳಾದ ಆದಾನಿ, ಅಂಬಾನಿ ಅವರಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಚರ್ಚೆಗೆ ಬಂದರೇ ಈ ಆರೋಪ ಸಾಬೀತು ಪಡಿಸಲು ಸಿದ್ಧ’ ಎಂದು ಜಿಗ್ನೇಶ್ ಮೇವಾನಿ ಸವಾಲು ಹಾಕಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.