ಶುಕ್ರವಾರ, ಫೆಬ್ರವರಿ 26, 2021
28 °C

ವಂಶಪಾರಂಪರ್ಯದ ಆಡಳಿತ ಮುಂದುವರಿಸಲು ಕಾಂಗ್ರೆಸ್ ಈ ದೇಶವನ್ನು ಹಾಳು ಮಾಡಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಂಶಪಾರಂಪರ್ಯದ ಆಡಳಿತ ಮುಂದುವರಿಸಲು ಕಾಂಗ್ರೆಸ್ ಈ ದೇಶವನ್ನು ಹಾಳು ಮಾಡಿದೆ

ವಿಜಯಪುರ: ವಿಜಯಪುರದಲ್ಲಿ ಚುನಾವಣಾ ಪ್ರಚಾರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮಹಿಳೆಯರ ಸುರಕ್ಷೆಗಾಗಿ ಏನೂ ಮಾಡುತ್ತಿಲ್ಲ. ಈ ವಿಚಾರದಲ್ಲಿ ಸಾಕಷ್ಟು ಸುಳ್ಳು ಹೇಳುತ್ತಿದೆ. ಇದೇ ನಗರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಯಿತು. ಈ ಸರ್ಕಾರ ಏನು ಮಾಡಿತು? ಎಂದು ಪ್ರಶ್ನಿಸಿದ್ದಾರೆ.

ಅತ್ಯಾಚಾರದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕಾನೂನುಗಳನ್ನು ಜಾರಿ ಮಾಡಿದೆ. ಅತ್ಯಾಚಾರಿಗಳಿಗೆ ಮರಣದಂಡನೆ ಕಾನೂನು ಜಾರಿ ಮಾಡಿದ್ದೇವೆ. ಹೆಣ್ಣುಮಕ್ಕಳು ಹಿಂದೂ–ಮುಸ್ಲಿಂ–ಕ್ರಿಶ್ಚಿಯನ್ ಯಾರೇ ಆಗಿರಲಿ. ಅವರು ನಮ್ಮ ಮಕ್ಕಳು ತಾನೆ?

ಕಾಂಗ್ರೆಸ್ ಅದಕ್ಕೂ ಅಡ್ಡಗಾಲು ಹಾಕಿತು. ಹೆಣ್ಣುಮಕ್ಕಳು ಅಂದರೆ ಹೆಣ್ಣುಮಕ್ಕಳು ಅಷ್ಟೇ. ಅವರ ಬದುಕನ್ನು ರಾಜಕೀಯ ವಿಷಯ ಮಾಡಬಾರದು. ಹಾಗೆ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು. ಅವರು ಯಾವುದೇ ಧರ್ಮ, ಸಂಪ್ರದಾಯದವರು ಅದರೂ ಅವರಿಗೆ ಸಿಗುವಷ್ಟು ಮನ್ನಣೆ ಸಿಗಲೇಬೇಕು ಅಲ್ಲವೇ? ಮುಸ್ಲಿಂ ಮಹಿಳೆಯರಿಗೆ ಮೂರು ಬಾರಿ ತಲಾಖ್ ಹೇಳಿ ಹೊರಗೆ ಹಾಕುತ್ತಿದ್ದರು. ಅವರಿಗೆ ಅನುಕೂಲವಾಗಲಿ ಅಂತ ನಾವು ತಲಾಖ್ ಕಾನೂನು ಮಂಡಿಸಿದೆವು ಎಂದಿದ್ದಾರೆ.

ಬಿಜೆಪಿಯ ಸಾಧನೆಗಳನ್ನು ಬಿಂಬಿಸಿದ ಮೋದಿ ಇಲ್ಲಿ ಬೆಳೆಯುವ ದ್ರಾಕ್ಷಿಗೆ ಸರಿಯಾದ ಮಾರುಕಟ್ಟೆ ಕಲ್ಪಿಸಲು ನಾವು ಶ್ರಮಿಸಿದ್ದೇವೆ. ಈ ಹಿಂದೆ ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆ ತೆಗೆದುಕೊಂಡು ಹೋಗಲು ರೈತರಿಗೆ ಕಷ್ಟವಾಗುತ್ತಿತ್ತು. ಇದಕ್ಕಾಗಿ ರೈಲು ಮಾರ್ಗ ಸುಧಾರಿಸಿದೆವು. ರಸ್ತೆ ವಿಸ್ತರಣೆ ಮಾಡಿದ್ದೇವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ರಾಜ್ಯದ 10 ಲಕ್ಷ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ಕೊಟ್ಟಿದ್ದೇವೆ ಎಂದಿದ್ದಾರೆ.
ತಮ್ಮ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ವಂಶಪಾರಂಪರ್ಯದ ಆಡಳಿತ ಮುಂದುವರಿಸಲು ಕಾಂಗ್ರೆಸ್ ಈ ದೇಶವನ್ನು ಹಾಳು ಮಾಡಿದೆ. ಈಗ ಕಾಂಗ್ರೆಸ್‌ ಅದಕ್ಕಾಗಿ ಮತ ಕೇಳಲು ನಿಮ್ಮ ಮುಂದೆ ಬಂದಿದೆ.

ಕರ್ನಾಟಕದಲ್ಲಿ ಮಗನಿಂದ ಏನೂ ಆಗುತ್ತಿಲ್ಲ, ಅಮ್ಮನನ್ನು ಕರೆದುಕೊಂಡು ಹೋಗಿ ಅಂತ ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ. ನಾವು ಅಭಿವೃದ್ಧಿಗಾಗಿ ಮತ ಕೇಳುತ್ತಿದ್ದೀವಿ, ಕಾಂಗ್ರೆಸ್‌ನವರು ಕುಟುಂಬದ ಆಡಳಿತ ಉಳಿಸಿಕೊಳ್ಳಲು ಮತ ಕೇಳುತ್ತಿದ್ದಾರೆ.

ಬಡವರಿಗೆ ಸಹಾಯಹಸ್ತ ಮತ್ತು ಆರೋಗ್ಯಕರವಾದ ಭಾರತದ ನಿರ್ಮಾಣವೇ ಆಯುಷ್ಯಮಾನ್ ಭಾರತ್‍ನ ಗುರಿಯಾಗಿದೆ. ಈ ಯೋಜನೆ 50 ಕೋಟಿ ಭಾರತೀಯರ ಬದುಕಿನಲ್ಲಿ ಧನಾತ್ಮಕವಾದ ಬದಲಾವಣೆಯನ್ನು ತರಲಿದೆ.

ಮೇ 15ರಂದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾಗಲಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಕಚೇರಿಯಲ್ಲಿಯೇ ರೈತಬಂಧು ವಿಭಾಗ ಶುರುಮಾಡುವ ಭರವಸೆ ಕೊಟ್ಟಿದ್ದಾರೆ ಎಂದಿದ್ದಾರೆ ಮೋದಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.