ತ್ರಿಕೋನ ಸ್ಪರ್ಧೆಗೆ ವೇದಿಕೆಯಾದ ಬೈಲಹೊಂಗಲ

7
‘ಕಾಂಗ್ರೆಸ್ ವಿರೋಧಿ’ ಹಣೆಪಟ್ಟೆ ಕಿತ್ತುಹಾಕಲು ಮಹಾಂತೇಶ ಕೌಜಲಗಿ ಯತ್ನ l ವಿಶ್ವನಾಥ ಪಾಟೀಲ ನಿಷ್ಠೆಗೆ ಸಿಕ್ಕ ಟಿಕೆಟ್

ತ್ರಿಕೋನ ಸ್ಪರ್ಧೆಗೆ ವೇದಿಕೆಯಾದ ಬೈಲಹೊಂಗಲ

Published:
Updated:

ಬೆಳಗಾವಿ: ಪಕ್ಷ ನಿಷ್ಠೆಯೋ, ವ್ಯಕ್ತಿ ನಿಷ್ಠೆಯೋ ಎನ್ನುವುದರ ಅಗ್ನಿ ಪರೀಕ್ಷೆಯಂತೆ ಬೈಲಹೊಂಗಲ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಕಳೆದ ಬಾರಿ ಚುನಾವಣೆಯಲ್ಲಿ ಕೆಜೆಪಿಯಿಂದ ಜಯಗಳಿಸಿದ್ದ ವಿಶ್ವನಾಥ ಪಾಟೀಲ ಈ ಸಲ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಜಗದೀಶ ಮೆಟಗುಡ್ಡ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿಯ ಅಧಿಕೃತ ಅಭ್ಯರ್ಥಿ ಹಾಗೂ ಬಂಡಾಯ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ.

ಕ್ಷೇತ್ರದಲ್ಲಿ ಬಿಜೆಪಿ ಬೇರುಮಟ್ಟದಲ್ಲಿ ಬಲಿಷ್ಠವಾಗಿದೆ. ಹಳ್ಳಿ ಹಳ್ಳಿಗಳಲ್ಲಿ ಕಾರ್ಯ

ಕರ್ತರು ಇದ್ದಾರೆ. ಇದು ವಿಶ್ವನಾಥ ಪಾಟೀಲ ಅವರಿಗೆ ಸಹಾಯವಾಗಲಿದೆ. ವಿಶ್ವನಾಥ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದಾರೆ. ಕಳೆದ ಚುನಾವಣೆ ವೇಳೆ ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದ್ದಾಗ ಅವರೊಂದಿಗೆ ಹೆಜ್ಜೆಹಾಕಿದರು. ಪುನಾ ವಾಪಸ್‌ ಬಂದಾಗ ಅವರೊಂದಿಗೆ ಬಂದರು. ಅವರ ನಿಷ್ಠೆಯನ್ನು ಮೆಚ್ಚಿ, ಈ ಸಲ ಟಿಕೆಟ್‌ ನೀಡಿದ್ದಾರೆ.

ಈ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಯಡಿಯೂರಪ್ಪ ಅವರನ್ನು ನೋಡಿ ಮತ ಹಾಕುತ್ತಾರೆ. ಈಗಾಗಲೇ ಹಲವು ಬಾರಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿ ಹೋಗಿದ್ದಾರೆ. ಈ ಸಭೆಗಳಿಗೆ ಜನರು ಕಿಕ್ಕಿರಿದು ತುಂಬಿದ್ದರು. ಇದು ಎಷ್ಟರಮಟ್ಟಿಗೆ ಮತಗಳನ್ನು ತಂದುಕೊಡಲಿದೆ ಎನ್ನುವುದನ್ನು ನೋಡಬೇಕಾಗಿದೆ.

ಪಕ್ಷದ ಟಿಕೆಟ್‌ ಸಿಗದಿದ್ದರಿಂದ ಜಗದೀಶ ಮೆಟಗುಡ್ಡ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಇದಕ್ಕೂ ಮೊದಲು 2004 ಹಾಗೂ 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಕಳೆದ ಬಾರಿ ಕೆಜೆಪಿಯಿಂದ ತೀವ್ರ ಪೈಪೋಟಿ ಎದುರಿಸಿ ಸೋಲುಂಡರು. ಈ ಸಲ ‘ಮಾಡು ಇಲ್ಲವೇ ಮಡಿ’ ಎನ್ನುವಂತಹ ಪರಿಸ್ಥಿತಿಯನ್ನು ಜಗದೀಶ ಅವರು ಎದುರಿಸುತ್ತಿದ್ದಾರೆ.

ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಪ್ರಚಾರ ಕೈಗೊಂಡಿದ್ದಾರೆ. ಎರಡು ಅವಧಿಯಲ್ಲಿ ಶಾಸಕರಾಗಿದ್ದಾಗ ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಜನರ ಅನುಕಂಪ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಕಾಂಗ್ರೆಸ್‌ ಹರಸಾಹಸ: 1983ರ ನಂತರ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಯಾವತ್ತೂ ಗೆದ್ದಿಲ್ಲ. ಜನತಾ ಪಕ್ಷ, ಜನತಾ

ದಳ, ಜನತಾ ದಳ (ಸಂಯುಕ್ತ), ಬಿಜೆಪಿ, ಕೆಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇದೊಂದು ರೀತಿ ‘ಕಾಂಗ್ರೆಸ್‌ ವಿರೋಧಿ’ ಕ್ಷೇತ್ರ ಎನ್ನುವಂತೆ ಬಿಂಬಿತವಾಗಿದೆ. ಈ ಹಣೆಪಟ್ಟಿಯನ್ನು ಕಿತ್ತುಹಾಕಲು ಮಹಾಂತೇಶ ಕೌಜಲಗಿ ಪ್ರಯತ್ನಿಸುತ್ತಿದ್ದಾರೆ. ಇವರ ತಂದೆ ಶಿವಾನಂದ ಕೌಜಲಗಿ ಅವರು ಒಂದು ಕಾಲದಲ್ಲಿ ಜನತಾ ಪರಿವಾರದ ಪ್ರಮುಖ ನಾಯಕರಾಗಿದ್ದರು. 1985ರಲ್ಲಿ ಜನತಾ ಪಕ್ಷ, 1989ರಲ್ಲಿ ಜನತಾ ದಳ, 1994ರಲ್ಲಿ ಜನತಾ ದಳದಿಂದ ಜಯಗಳಿಸಿದ್ದರು.

1999ರಲ್ಲಿ ತಮ್ಮ ಪ್ರಭಾವ ಬೀರಿ ಜೆಡಿಯುದಿಂದ ಸ್ಪರ್ಧಿಸಿದ್ದ ತಮ್ಮ ಮಗ ಮಹಾಂತೇಶ ಕೌಜಲಗಿ ಅವರನ್ನು ಗೆಲ್ಲಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಮಗನ ಜೊತೆ ಕಾಂಗ್ರೆಸ್‌ ಸೇರ್ಪಡೆಯಾದರು. ಅಂದಿನಿಂದ ಇಂದಿನವರೆಗೆ ಯಾವ ಚುನಾವಣೆಯಲ್ಲೂ ಜಯಗಳಿಸಿಲ್ಲ. ಆದರೆ, ಅವರಿಗೆ ಇಂದಿಗೂ ಹಳ್ಳಿಗಳಲ್ಲಿ ಬೆಂಬಲವಿದೆ. ಜನರು ಗೌರವ ನೀಡುತ್ತಾರೆ. ಈ ಗೌರವ, ಪ್ರೀತಿ ಎಷ್ಟರ ಮಟ್ಟಿಗೆ ಮತಗಳಾಗಿ ಪರಿವರ್ತನೆಯಾಗುತ್ತದೆ ಎನ್ನುವುದರ ಮೇಲೆ ಮಗನ ಜಯ ಅವಲಂಬನೆಯಾಗಿದೆ.

ಶಂಕರ ಮಾಡಲಗಿ ಪೈಪೋಟಿ: ಜೆಡಿಎಸ್‌ನಿಂದ ಕಣಕ್ಕಿಳಿದಿರುವ ಜಿಲ್ಲಾ ಪಂಚಾಯ್ತಿ ಸದಸ್ಯ ಶಂಕರ ಮಾಡಲಗಿ ರೈತರ ಮತಗಳನ್ನು ನೆಚ್ಚಿಕೊಂಡಿದ್ದಾರೆ. ಎಚ್‌.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ವರ್ಚಸ್ಸನ್ನು ಪ್ರಚಾರದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ವರಿಷ್ಠರು ನೀಡಿರುವ ಭರವಸೆಯನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ತಮ್ಮ ಜಿಲ್ಲಾ ಪಂಚಾಯ್ತಿ ಕ್ಷೇತ್ರವಾದ ಬುಡರಕಟ್ಟಿ ಹಾಗೂ ಬೆಳವಡಿ ಸುತ್ತಮುತ್ತ ಪ್ರಭಾವ ಹೊಂದಿದ್ದಾರೆ. ಈ ಭಾಗದಲ್ಲಿ ಒಂದಿಷ್ಟು ಮತಗಳನ್ನು ವೈಯಕ್ತಿಕ ನೆಲೆಗಟ್ಟಿಯಲ್ಲಿ ಪಡೆಯಬಹುದು. ಇನ್ನುಳಿದ ಭಾಗದಲ್ಲಿ ಪಕ್ಷದ ಸಂಘಟನೆ ಇಲ್ಲದಿರುವುದು ಅವರಿಗೆ ಹಿನ್ನಡೆಯಾಗಿದೆ.

ಹಿಂದಿನ ಎರಡು ಚುನಾವಣೆಗಳ ಫಲಿತಾಂಶ

ವರ್ಷ-ಗೆದ್ದವರು-ಪಕ್ಷ-ಸಮೀಪಸ್ಪರ್ಧಿ-ಪಕ್ಷ

2008-ಜಗದೀಶ ಮೆಟಗುಡ್-ಬಿಜೆಪಿ-ಮಹಾಂತೇಶ ಕೌಜಲಗಿ-ಕಾಂಗ್ರೆಸ್‌

2013-ವಿಶ್ವನಾಥ ಪಾಟೀಲ-ಕೆಜೆಪಿ-ಜಗದೀಶ ಮೆಟಗುಡ್ಡ-ಬಿಜೆಪಿ

ಕಣದಲ್ಲಿ

ಮಹಾಂತೇಶ ಕೌಜಲಗಿ (ಕಾಂಗ್ರೆಸ್‌)

ವಿಶ್ವನಾಥ ಪಾಟೀಲ (ಬಿಜೆಪಿ)

ಶಂಕರ ಮಾಡಲಗಿ (ಜೆಡಿಎಸ್‌)

ಜಗದೀಶ ಮೆಟಗುಡ್ಡ (ಪಕ್ಷೇತರ)

ಸುನೀಲ ಗಡ್ಡರಾಯ (ಪಕ್ಷೇತರ)

ಮಹಾದೇವ ಕರಬಸಣ್ಣವರ (ಪಕ್ಷೇತರ)

ಮತದಾರರ ಸಂಖ್ಯೆ

ಪುರುಷರು: 91,786

ಮಹಿಳೆಯರು: 90,006

ಒಟ್ಟು: 1,81,792

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry