ಮತದಾರರೇ ಕಾಂಗ್ರೆಸ್ ಉಳಿಸಿಕೊಳ್ಳಲು ಯತ್ನ

7
ಬಸವಕಲ್ಯಾಣ ಕಾಂಗ್ರೆಸ್‌ ಅಭ್ಯರ್ಥಿ ಬಿ.ನಾರಾಯಣರಾವ್ ಅಭಿಮತ

ಮತದಾರರೇ ಕಾಂಗ್ರೆಸ್ ಉಳಿಸಿಕೊಳ್ಳಲು ಯತ್ನ

Published:
Updated:
ಮತದಾರರೇ ಕಾಂಗ್ರೆಸ್ ಉಳಿಸಿಕೊಳ್ಳಲು ಯತ್ನ

ಬಸವಕಲ್ಯಾಣ:  ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಜನಸೇವೆ ಮಾಡಿ ರಾಜಕೀಯದಲ್ಲಿ ಬೆಳೆದವರು ಬಿ.ನಾರಾಯಣರಾವ್. ಇಲ್ಲಿ ಒಂದು ಸಲ ಜನತಾ ಪಕ್ಷದಿಂದ ನಂತರ ಎರಡನೇ ಸಲ ಕಾಂಗ್ರೆಸ್ ದಿಂದ ಸ್ಪರ್ಧಿಸಿದ್ದಾರೆ. ಇಲ್ಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ ತಮ್ಮ ಅನುಭವವನ್ನು `ಪ್ರಜಾವಾಣಿ'ಯೊಂದಿಗೆ ಹಂಚಿಕೊಂಡಿದ್ದಾರೆ.

ಕ್ಷೇತ್ರದಲ್ಲಿ 35 ವರ್ಷಗಳಿಂದ ಕಾಂಗ್ರೆಸ್ ಆಯ್ಕೆಯಾಗಿಲ್ಲ. ಈಗಲೂ ಅದೇ ಪರಿಸ್ಥಿತಿ ಇದೆಯೇ?

ಮತದಾರರು ನಿಶ್ಚಯಿಸಿರುವುದನ್ನು ಯಾರೂ ತಡೆಯಲಾರರು. ಈ ಸಲ ಅವರೇ ಈ ಪಕ್ಷವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಕೈಗೊಂಡ ಜನಪರ ಕಾರ್ಯದ ಬಗ್ಗೆ ತೃಪ್ತಿಯಿದೆ. ಬಿಜೆಪಿಯ ದಲಿತರ, ಅಲ್ಪಸಂಖ್ಯಾತರ, ಬಡವರ ವಿರೋಧಿ ಧೋರಣೆಯ ಬಗ್ಗೆ ಎಲ್ಲೆಡೆ ಅತೃಪ್ತಿಯಿದ್ದು ಈ ಕ್ಷೇತ್ರದಲ್ಲೂ ಇದೇ ಪರಿಸ್ಥಿತಿಯಿದೆ. ಹೀಗಾಗಿ ಕಾಂಗ್ರೆಸ್ ಗೆಲುವು ನಿಶ್ಚಿತವಾಗಿದೆ.

ಮೊದಲಿನಿಂದಲೂ ಬಿ.ನಾರಾಯಣ ರಾವ್ ಅವರಿಗೆ ಟಿಕೆಟ್ ನಿಶ್ಚಿತ ಎನ್ನಲಾಗುತ್ತಿತ್ತು. ಹಾಗೆಯೇ ಆಯಿತು. ಕಾರಣವೇನು?

ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪಕ್ಷವಾಗಿದೆ. ನಿಷ್ಠಾವಂತರಿಗೆ ಆದ್ಯತೆ ನೀಡಲಾಗುತ್ತದೆ. ಅನ್ಯ ಪಕ್ಷಗಳಂತೆ ದಿನಕ್ಕೊಂದು ನಿರ್ಣಯ ತೆಗೆದುಕೊಳ್ಳುವುದಿಲ್ಲ ಎಂಬ ಭರವಸೆ ಇದ್ದುದರಿಂದಲೇ ಕಳೆದ ಸಲ ಸೋತರೂ ಸತತವಾಗಿ ಪಕ್ಷ ಸಂಘಟನೆಗೆ ಪ್ರಯತ್ನಿಸಿದ್ದೇನೆ. ಅದರ ಪ್ರತಿಫಲ ದೊರೆತಿದೆ.

ಈ ಕ್ಷೇತ್ರಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆಯೇನು?

ಮತದಾರರು 7 ಅವಧಿಗಳಲ್ಲಿ ಕಾಂಗ್ರೆಸ್ ಅನ್ನು ದೂರ ಇಟ್ಟಿದ್ದರೂ ಪಕ್ಷ ಮಾತ್ರ ಅನ್ಯಾಯ ಮಾಡಿಲ್ಲ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ರಚನೆಯಾಯಿತು. ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿಯವರು ₹ 100 ಕೋಟಿ ಮಂಜೂರು ಮಾಡಿದ್ದಾರೆ. ಚುಳಕಿನಾಲಾ ಜಲಾಶಯ ಮತ್ತು 12 ಕೆರೆಗಳಲ್ಲಿ ನೀರು ಭರ್ತಿಗೆ ₹ 180 ಕೋಟಿಯ ಯೋಜನೆ ಜಾರಿಗೊಳಿಸಿದ್ದಾರೆ. ಹಳ್ಳಿಗಳಿಗೂ ಸೌಲಭ್ಯ ಕಲ್ಪಿಸಲಾಯಿತು.

ಟಿಕೆಟ್ ವಂಚಿತರಿಂದಲೇ ಪ್ರತಿಸಲ ಕಾಂಗ್ರೆಸ್ ಗೆ ಹಾನಿ ಆಗುತ್ತಿದೆ ಎನ್ನಲಾಗುತ್ತದೆ. ಇದಕ್ಕಾಗಿ ಯಾವ ತಂತ್ರ ಅನುಸರಿಸಿದ್ದೀರಿ?

ಟಿಕೆಟ್ ವಂಚಿತರನ್ನು ಭೇಟಿಯಾಗಿ ಮನ ಒಲಿಸಿರುವುದರಿಂದ ಈ ಸಲ ಆ ವಾತಾವರಣ ಇಲ್ಲ. ಇದಲ್ಲದೆ ಕ್ಷೇತ್ರದಲ್ಲಿನ ಎಲ್ಲ ಜಾತಿ, ಧರ್ಮದವರ ಮತ ಪಡೆಯಲು ಎಲ್ಲರ ಬಳಿಯೂ ಹೋಗುತ್ತಿದ್ದೇನೆ. ಪಕ್ಷದ ಮುಖಂಡರು, ಕಾರ್ಯಕರ್ತರು ಕೂಡ ಹಗಲಿರುಳು ಪ್ರಚಾರ ನಡೆಸಿದ್ದಾರೆ.

ಬಿಜೆಪಿಯವರ ಕಾಂಗ್ರೆಸ್ ಮುಕ್ತ ಭಾರತ ಅಭಿಯಾನದ ಪ್ರಭಾವ ಇಲ್ಲಿಯೂ ಆಗುವುದೇ?

ಬಿಜೆಪಿ ಅಲೆಗೆ ರಾಜ್ಯದಲ್ಲಿ ಕಾಂಗ್ರೆಸ್ ತಡೆಯೊಡ್ಡುವುದು ನಿಶ್ಚಿತ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಇಲ್ಲಿನ ಅನುಭವ ಮಂಟಪಕ್ಕೆ ಭೇಟಿ ನೀಡಿ ಪ್ರಚಾರ ಆರಂಭಿಸಿದ್ದರಿಂದ ಈ ಕ್ಷೇತ್ರದಲ್ಲಿ ಪಕ್ಷಕ್ಕೆ ಇನ್ನಷ್ಟು ಅನುಕೂಲಕರ ವಾತಾವರಣ ಉಂಟಾಗಿದೆ.

ಕ್ಷೇತ್ರದಲ್ಲಿ ನಿಮ್ಮ ಸ್ಪರ್ಧೆ ಯಾರ ಜತೆ ಇದೆ?

ಇಲ್ಲಿ ತ್ರಿಕೋನ ಸ್ಪರ್ಧೆ ಇದೆಯಾದರೂ, ಕೊನೆ ಗಳಿಗೆಯಲ್ಲಿ ಅನ್ಯ ಪಕ್ಷದಿಂದ ಬಂದವರಿಗೆ ಟಿಕೆಟ್ ನೀಡಲಾಗಿದೆ ಎಂಬ ಕಾರಣದಿಂದ ಬಿಜೆಪಿ ಕಾರ್ಯಕರ್ತರಲ್ಲಿ ಅತೃಪ್ತಿಯಿದೆ. ಜೆಡಿಎಸ್ ಗೆ ಅಭ್ಯರ್ಥಿಯ ಕೊರತೆಯ ಕಾರಣ ದೂರದ ಸಿಂಧ್ಯ ಅವರಿಗೆ ಟಿಕೆಟ್ ನೀಡಲಾಗಿದ್ದು ಅವರು ಪರಿಚಯ ಮಾಡಿಕೊಳ್ಳುವಷ್ಟರಲ್ಲಿ ಚುನಾವಣೆ ಮುಗಿದಿರುತ್ತದೆ. ಇದರ ಲಾಭ ನಮ್ಮ ಪಕ್ಷಕ್ಕೆ ಆಗಲಿದೆ.

ಮತದಾರರು ನಿಮ್ಮನ್ನೇ ಏಕೆ ಆಯ್ಕೆ ಮಾಡಬೇಕು?

ಇದು ಸಮಾನತೆಯ ಹರಿಕಾರ ಬಸವಣ್ಣನವರ ನಾಡು. ನಾನು ಬಸವತತ್ವದ ನಿಜ ಅನುಯಾಯಿ. ಈ ಸ್ಥಳವನ್ನು ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿಸಲು ಮತ್ತು ಎಲ್ಲ ಗ್ರಾಮಗಳಿಗೂ ಮೂಲಸೌಲಭ್ಯ ಕಲ್ಪಿಸಲು ಪ್ರಯತ್ನಿಸುತ್ತೇನೆ. ಅಟೋ ನಗರ ಅಭಿವೃದ್ಧಿ ಕೈಗೊಳ್ಳಲಿದ್ದೇನೆ ಎಂದು ಭರವಸೆ ನೀಡುತ್ತಿದ್ದೇನೆ. ಇದಲ್ಲದೆ ಕಾಂಗ್ರೆಸ್ ಪ್ರಣಾಳಿಕೆಯ ಪಟ್ಟಿ ಎದುರಿಗಿಟ್ಟು ಮತ ಕೇಳುತ್ತಿದ್ದೇನೆ.

ಮಾಣಿಕ ಆರ್.ಭುರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry