ಜನರ ನಾಡಿ ಮಿಡಿತ ಅರ್ಥ ಮಾಡಿಕೊಂಡಿದ್ದೇನೆ

7

ಜನರ ನಾಡಿ ಮಿಡಿತ ಅರ್ಥ ಮಾಡಿಕೊಂಡಿದ್ದೇನೆ

Published:
Updated:

ಗುಂಡ್ಲುಪೇಟೆ: ‘ಅಧಿಕಾರ ಹೋಗುತ್ತದೆ ಎಂಬ ಭಯದಿಂದ ಪ್ರಧಾನಿ ನರೇಂದ್ರ ಮೋದಿಗೆ ಚಾಮರಾಜನಗರಕ್ಕೆ ಭೇಟಿ ನೀಡಿಲ್ಲ, ಆದರೆ ನಾನು 8ಬಾರಿ ಭೇಟಿ ನೀಡಿದ್ದೇನೆ. ಆದ್ದರಿಂದಲೇ 5 ವರ್ಷ ಪೂರ್ಣ ಮಾಡಿದ್ದೇನೆ, ಮುಂದಿನ ಬಾರಿಯು ನಾನೇ ಮುಖ್ಯ ಮಂತ್ರಿಯಾಗಿ ಮುಂದುವರೆಯುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಗುಂಡ್ಲುಪೇಟೆ ಪಟ್ಟಣದಲ್ಲಿ ಸೋಮವಾರ ನಡೆದ  ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘40 ವರ್ಷದಿಂದ ರಾಜಕೀಯ ಮಾಡುತ್ತಿದ್ದು, ರಾಜ್ಯದ ಜನರ ನಾಡಿ ಮಿಡಿತ ಆರ್ಥ ಮಾಡಿಕೊಂಡಿದ್ದೇನೆ. ಯಡಿಯೂರಪ್ಪ ಅವರು ಏನೇ ಕಸರತ್ತು ಮಾಡಿದರೂ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಉಪಚುನಾವಣೆಗೂ ಮುಂಚೆ ಯಡಿಯೂರಪ್ಪ ಮಿಷನ್ 150 ಎಂದು ಕೇಳಿಕೊಂಡು ತಿರುಗುತ್ತಿದ್ದರು. ಉಪಚುನಾವಣೆಯಲ್ಲಿ ಸೋತ ಬಳಿಕ ಅದು ಠುಸ್ ಆಗಿದೆ. ಈ ಚುನಾವಣೆಯಲ್ಲಿ ಬಿಜೆಪಿ 50 ಮತ್ತು ಜೆಡಿಎಸ್‌ 25 ಸ್ಥಾನ ಗೆಲ್ಲುತ್ತವಷ್ಟೆ’ ಎಂದು ಭವಿಷ್ಯ ನುಡಿದರು.

ಪ್ರಧಾನಿ ನರೇಂದ್ರ ಮೋದಿ ನುಡಿದಂತೆ ನಡೆಯುತ್ತಿಲ್ಲ. ಬಿಜೆಪಿ ಸರ್ಕಾರ ಬಡವರ ಪರವಾಗಿರದೆ ಉದ್ಯಮಿಗಳ ಪರವಾಗಿದ್ದಾರೆ. ಬಡವರ, ದಿನದಲಿತರ ಪರವಾಗಿರದ ಸರ್ಕಾರವನ್ನು ಯಾರು ತಾನೇ ಬೆಂಬಲಿಸುತ್ತಾರೆ. ಬಿಜೆಪಿಯವರೆಲ್ಲ ಮಹಾನ್ ಡೋಂಗಿಗಳು ಎಂದು ಲೇವಡಿ ಮಾಡಿದರು.

‘ಯಡಿಯೂರಪ್ಪ ಅವರನ್ನು ಎಲ್ಲರೂ ಜೈಲಿಗೆಹೋಗಿ ಬಂದವ ಎಂದು ಜರಿಯುತ್ತಿರುವುದರಿಂದ ನರೇಂದ್ರ ಮೋದಿ ಅವರು ಎಲ್ಲಿಗೂ ಕರೆದುಕೊಂಡು ಹೋಗುತ್ತಿಲ್ಲ. ಯಾರು ಏನೇ ಬಾಯಿ ಬಡಿದುಕೊಂಡರು  ಬದಾಮಿಯಲ್ಲಿ 30 ಸಾವಿರ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ. ಅಂತೇಯೇ ವರುಣಾದಲ್ಲಿ ನನ್ನ ಮಗ ಯತೀಂದ್ರ, ಮತ್ತು ಗುಡ್ಲುಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ.ಸಿ.ಮೋಹನಕುಮಾರಿ ಗೆಲ್ಲುತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ಹಿಂದುಳಿದವರು ಮತ್ತು ಮುಸ್ಲಿಂರಿಗೆ ಈ ಬಾರಿ ಯಾವ ಕ್ಷೇತ್ರದಲ್ಲೂ ಟಿಕೆಟ್ ನೀಡಿಲ್ಲ, ಆದರೂ ಸಬ್ ಸಾಥ್ ಸಬ್ ವಿಕಾಸ್ ಎಂದು ಹೇಳಿಕೊಳ್ಳುತ್ತಾರೆ. ಗುಂಡ್ಲುಪೇಟೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಎಚ್.ಎಸ್.ಮಹದೇವಪ್ರಸಾದ್ ಅವರದು ಸಿಂಹ ಪಾಲು ಇದೆ. ಅವರ ಪತ್ನಿ ಎಂ.ಸಿ.ಮೋಹನಕುಮಾರಿ ಅವರ ಹಾದಿಯಲ್ಲೇ ನಡೆಯುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ಎಂ.ಸಿ.ಮೋಹನಕುಮಾರಿ, ಸಂಸದ ಆರ್ ಧ್ರುವನಾರಾಯಣ್, ಮಾಜಿ ಸಂಸದ ಎ.ಸಿದ್ದರಾಜು, ಚಾಮುಲ್ ನಿರ್ದೇಶಕ ಎಚ್.ಎಸ್ ನಂಜುಂಡಪ್ರಸಾದ್, ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಕಾಂಗ್ರೆಸ್ ಮುಖಂಡ ಗಣೇಶ್ ಪ್ರಸಾದ್, ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ  ಕಾರ್ಯಕರ್ತರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry