ಭಾನುವಾರ, ಮಾರ್ಚ್ 7, 2021
32 °C
ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಸಭೆ

ಮತ್ತೆ ನಾನೇ ಸಿ.ಎಂ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೆ ನಾನೇ ಸಿ.ಎಂ: ಸಿದ್ದರಾಮಯ್ಯ

ಚಾಮರಾಜನಗರ/ ಕೊಳ್ಳೇಗಾಲ/ಹನೂರು: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಸರಣಿ ಬಹಿರಂಗ ಸಭೆಗಳನ್ನು ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಮತ್ತೆ ನಾನೇ ಮುಖ್ಯಮಂತ್ರಿಯಾಗುತ್ತೇನೆ. ಮುಂದಿನ 5 ವರ್ಷದವರೆಗೂ ಆಳ್ವಿಕೆ ನಡೆಸುತ್ತೇನೆ’ ಎಂದು ಎಲ್ಲೆಡೆ ಪುನರುಚ್ಚರಿಸಿದರು.

‘ನಾನು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದರೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಆಗ ಮಾತ್ರ 2ನೇ ಅವಧಿಗೂ ನಾನೇ ಸಿ.ಎಂ ಆಗುತ್ತೇನೆ. ಪುಟ್ಟರಂಗಶೆಟ್ಟಿ ಅವರನ್ನು ಸಚಿವರನ್ನಾಗಿ ಸಂಪುಟಕ್ಕೆ ತೆಗೆದುಕೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ, ಅನಂತಕುಮಾರ್ ಹೆಗ್ಡೆ, ಬಿ.ಎಸ್.ಯಡಿಯೂರಪ್ಪ ವಿರುದ್ಧ ಹೋದ ಕಡೆಯಲೆಲ್ಲಾ ಟೀಕೆಗಳ ಸುರಿಮಳೆಗರೆದರು.

‘ದೇಶ ಆಳಲು 56 ಇಂಚಿನ ಎದೆ ಅಲ್ಲ, ವಿಶಾಲವಾದ ಹೃದಯ ಬೇಕು. ಬಾಡಿ ಬಿಲ್ಡರ್‌ಗೂ ಮೋದಿಯಂತೆ 56 ಇಂಚಿನ ಎದೆ ಇರುತ್ತದೆ’ ಎಂದು ಸಿದ್ದರಾಮಯ್ಯ ಛೇಡಿಸಿದರು.

‘ನಾನೂ ತಿನ್ನಲ್ಲ‌ ತಿನ್ನುವುದಕ್ಕೂ ಬಿಡುವುದಿಲ್ಲ. ಚೌಕಿದಾರನಾಗಿ ಕೆಲಸ ಮಾಡುತ್ತೇನೆ ಎಂದು ಮೋದಿ ಹೇಳಿದ್ದರು. ವಿಜಯ್ ಮಲ್ಯ, ನೀರವ್ ಮೋದಿ ದೇಶ ಕೊಳ್ಳೆ ಹೊಡೆದು ಹೋಗುವಾಗ ಪ್ರಧಾನಿ ಮೋದಿ ಎಲ್ಲಿ ಹೋಗಿದ್ದರು’ ಎಂದು ಪ್ರಶ್ನಿಸಿದರು.

ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತೈಲ, ಅಡುಗೆ ಅನಿಲ ಬೆಲೆ ಎಷ್ಟಿತ್ತು, ಬಿಜೆಪಿ ಸರ್ಕಾರ ಬಂದ ಮೇಲೆ ಎಷ್ಟಾಗಿದೆ. ಇದೆ ಏನು ಅಚ್ಚೆ ದಿನ್. ಮನ್‌ ಕಿ ಬಾತ್ ಬದಲು ಕಾಮ್‌ ಕಿ ಬಾತ್ ಹೇಳಿ ಎಂದು ವಾಗ್ದಾಳಿ ನಡೆಸಿದ ಅವರು ಮೋದಿ ಬಾಯಿ ಬಡಾಯಿ, ಅವರ ಸಾಧನೆ ಶೂನ್ಯ ಎಂದು ವ್ಯಂಗ್ಯವಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸೋಲುತ್ತೇವೆ ಎಂಬ ಭಯ ಹುಟ್ಟಿದೆ. ಅವರು ನೂರು ಬಾರಿ ಬಂದರೂ, ಎಷ್ಟೇ ತಿಪ್ಪರಲಾಗ ಹಾಕಿದರೂ ಸೂರ್ಯ ಪೂರ್ವದ ಕಡೆ ಹುಟ್ಟುವುದು ಎಷ್ಟು ಸತ್ಯವೊ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ತಿಳಿಸಿದರು.

‘ಜೆಡಿಎಸ್‌ಗೆ 224 ಕ್ಷೇತ್ರದಲ್ಲಿ ನಿಲ್ಲಿಸುವುದಕ್ಕೆ ಅಭ್ಯರ್ಥಿಗಳೆ ಇಲ್ಲ. ಅವರು ಗೆದ್ದರೆ 20ರಿಂದ 25 ಸ್ಥಾನಗಳವರೆಗೆ ಹೆಚ್ಚು. ಕರ್ನಾಟಕದಲ್ಲಿ ಬಿಎಸ್‍ಪಿ ಬರುವುದಿಲ್ಲ. ಆದರೆ, ನನಗೆ ಮಾಯವತಿ ಅವರ ಮೇಲೆ ಅಭಿಮಾನ ಹಾಗೂ ಗೌರವವಿದೆ’ ಎಂದರು.

ಟಿಪ್ಪುಸುಲ್ತಾನ ಒಬ್ಬ ದೇಶಪ್ರೇಮಿ. ಅವರ ಜಯಂತಿ ಮಾಡುವುದು ಹೇಗೆ ತಪ್ಪಾಗುತ್ತದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಕ್ಷೇತ್ರದ ಜನತೆಗೆ ಗೊತ್ತಿಲ್ಲ, ಜನರ ಸುಖದುಃಖಗಳಿಗೆ ಸ್ಪಂದಿಸಿಲ್ಲ, ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಇನ್ನು ಜೆಡಿಎಸ್ ಅಭ್ಯರ್ಥಿ ಹನೂರಿಗೆ ವಿದೇಶದವರಂತೆ ಆತ ನನ್ನ ಹೆಸರು ಹೇಳಿಕೊಂಡು ಇಲ್ಲಿ ತಿರುಗಾಡುತ್ತಿದ್ದಾನೆ. ನನ್ನ ಹೆಸರು ಹೇಳಲು ಅವನಿಗೆ ಏನು ಯೋಗ್ಯತೆ ಇದೆ. ಅವನು ಮತ ಕೇಳಲು ಬಂದರೆ ಅವನನ್ನು ಊರಿಂದ ಓಡಿಸಿ’ ಎಂದು ಛೇಡಿಸಿದರು.

ಕೊಳ್ಳೇಗಾಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರ ಸೋದರ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಆರ್.ಬಾಲರಾಜ್ ಹಾಗೂ ಮುಖಂಡ ಜಾನ್ ಇದೇ ವೇಳೆ ಕಾಂಗ್ರೆಸ್‌ ಪಕ್ಷ ಸೇರಿದರು. ಚಾಮರಾಜನಗರದಲ್ಲಿ ನಡೆದ ಸಮಾವೇಶದಲ್ಲಿ ಹಿಂದಿಯಲ್ಲಿ ಜಯಕಾರ ಹಾಕಲಾಯಿತು.

ಹೆಗಡೆ ಗ್ರಾ.ಪಂ ಸದಸ್ಯನಾಗಲೂ ಅನರ್ಹ

ಅನಂತಕುಮಾರ್ ಹೆಗಡೆ ಗ್ರಾಮ ಪಂಚಾಯಿತಿ ಸದಸ್ಯನಾಗಲೂ ಅರ್ಹತೆ ಪಡೆದಿಲ್ಲ. ಬಿಜೆಪಿ ಅವರಿಗೆ ಜಾತ್ಯಾತೀತ ತತ್ವದ ಬಗ್ಗೆ ನಂಬಿಕೆ ಇಲ್ಲ. ಅನಂತಕುಮಾರ ಹೆಗ್ಡೆ ಸಂವಿಧಾನವನ್ನೇ ಬದಲು ಮಾಡುತ್ತೇನೆ ಅಂತಾರೆ. ಒಂದು ವೇಳೆ ಈ ಕಾರ್ಯಕ್ಕೆ ಮುಂದಾದರೆ ದೇಶದಲ್ಲಿ ರಕ್ತಪಾತವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅನಂತಕುಮಾರ್ ಹೆಗ್ಡೆಯ ಹೇಳಿಕೆಗೂ ಬಿಜೆಪಿಗೂ ಸಂಬಂಧ ಇಲ್ಲ ಎಂದು ಅಮಿತ್ ಶಾ ಹೇಳುತ್ತಾರೆ. ಇವರು ಡೋಂಗಿಗಳು ಹೌದೋ ಅಲ್ಲವೊ ಎಂದು ಪ್ರಶ್ನಿಸಿದರು.

‘2019ಕ್ಕೆ ಮೋದಿ ಕುರ್ಚಿ ಹೋಗುತ್ತದೆ’

ಚಾಮರಾಜನಗರ ಜಿಲ್ಲಾಕೇಂದ್ರಕ್ಕೆ ಬಂದರೆ ಕುರ್ಚಿ ಹೋಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತೇಮರಹಳ್ಳಿಯಲ್ಲಿ ಸಮಾವೇಶ ಮಾಡಿದರು. ಆದರೂ 2019ಕ್ಕೆ ಅವರು ಕುರ್ಚಿ ಹೋಗುವುದು ತಪ್ಪುವುದಿಲ್ಲ ಎಂದರು.

ವಾಟಾಳ್ ಸಿ.ಎಂ ಕನಸು ಕಂಡಂತೆ: ವ್ಯಂಗ್ಯ

ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಕನಸು ಕಾಣುವುದು ವಾಟಾಳ್ ನಾಗರಾಜ್ ಮುಖ್ಯಮಂತ್ರಿ ಆಗುವ ಕನಸು ಕಾಣುವುದು ಎರಡೂ ಒಂದೇ. ಏಕೆಂದರೆ, ಈ ಕನಸುಗಳು ಈಡೇರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

**

ಉಪ್ಪಾರ ಸಮುದಾಯದವರಿಗೆ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಒಬ್ಬ ಅಭ್ಯರ್ಥಿಯೂ ಇಲ್ಲ. ರಾಜ್ಯಕ್ಕೆ ಪುಟ್ಟರಂಗಶೆಟ್ಟಿ ಒಬ್ಬರೇ ಅಭ್ಯರ್ಥಿ. ಕಾಂಗ್ರೆಸ್ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದೆ

– ಧ್ರುವನಾರಾಯಣ, ಸಂಸದ 

**

ಪ್ರಧಾನಮಂತ್ರಿ ನರೇಂದ್ರ ಮೋದಿ ಮೂಢನಂಬಿಕೆಗೆ ಕಟ್ಟುಬಿದ್ದು ಜಿಲ್ಲಾ ಕೇಂದ್ರಕ್ಕೆ ಬರಲಿಲ್ಲ. ಇಂತಹ ಪ್ರಧಾನಿ ನಮಗೆ ಬೇಕೆ?

– ಸಿ.ಪುಟ್ಟರಂಗಶೆಟ್ಟಿ, ಶಾಸಕ 

**

ನಾನು ತೆಗೆದುಕೊಂಡ ರಾಜ ಕೀಯ ತೀರ್ಮಾನದಿಂದ 14 ವರ್ಷ ವನವಾಸ ಅನುಭವಿಸಿದ್ದೇನೆ. ಅದರಿಂದ ಮುಕ್ತಿಗೊಳ್ಳಲು ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ 

– ಎ.ಆರ್.ಕೃಷ್ಣಮೂರ್ತಿ, ಕೊಳ್ಳೇಗಾಲ ಕ್ಷೇತ್ರದ ಅಭ್ಯರ್ಥಿ 

**

5 ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿ ಗಾಗಿ ₹ 3,200 ಕೋಟಿ ಅನುದಾನ ತಂದಿದ್ದೇನೆ. ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಗಾಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ₹ 427 ಕೋಟಿ ಅನುದಾನ ಮಂಜೂರಾಗಿದೆ

– ಆರ್.ನರೇಂದ್ರ, ಶಾಸಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.