ಗುರುವಾರ , ಫೆಬ್ರವರಿ 25, 2021
24 °C
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಜೋರಾದ ‘ಬಣ’ ರಾಜಕೀಯ, ಪಕ್ಷಗಳಿಗೆ ಬಿಸಿತುಪ್ಪವಾದ ‘ಬಂಡಾಯ’ಗಾರರು

ಕಾಂಗ್ರೆಸ್‌ ‘ಚಂದ್ರಿಕೆ’ಯಲ್ಲಿ ಜೆಡಿಎಸ್‌ ‘ಗೂಡು’

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ‘ಚಂದ್ರಿಕೆ’ಯಲ್ಲಿ ಜೆಡಿಎಸ್‌ ‘ಗೂಡು’

ಶಿಡ್ಲಘಟ್ಟ: ಏಷ್ಯಾದ ಎರಡನೇ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಹೊಂದಿರುವ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು ಬಿಸಿನೀರಿನಲ್ಲಿ ಬೇಯುವ ರೇಷ್ಮೆ ಹುಳುಗಳಿಗಿಂತಲೂ ಹೆಚ್ಚಾಗಿ ಚಡಪಡಿಕೆಯಲ್ಲಿದ್ದಾರೆ. ಹುಳಗಳ ‘ಜ್ವರ’ ಬಲ್ಲ ಜಾಣ ಮತದಾರರಿಗೆ ಈ ಬಾರಿ ಚುನಾವಣೆ ಜ್ವರದ ಸರಿಯಾಗಿ ಗ್ರಹಿಸಲು ಆಗುತ್ತಿಲ್ಲ.

ಕ್ಷೇತ್ರದ ‘ಚಂದ್ರಿಕೆ’ಯನ್ನು ಶೋಧಿಸಿ ನೋಡಿದರೆ ಇಲ್ಲಿ ‘ಕಾಂಗ್ರೆಸ್‌’ ಪಕ್ಷವೇ ಹೆಚ್ಚು ಹಣ್ಣಾಗಿ, ಗೂಡು ಕಟ್ಟಿದ್ದು ಗೋಚರಿಸುತ್ತದೆ. ಆದರೆ ಕಳೆದ ಅನೇಕ ಚುನಾವಣೆಗಳಿಂದ ಇತ್ತೀಚೆಗೆ ಇಲ್ಲಿ ಕಾಂಗ್ರೆಸ್, ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳಾಗುತ್ತ ಬಂದಿವೆ. ಈ ಬಾರಿ ಇವರಲ್ಲಿ ಯಾರಿಗೆ ಗೆಲುವು ಎಂದು ‘ಭವಿಷ್ಯ’ ನುಡಿಯುವುದು ರೇಷ್ಮೆ ನೂಲು ಬಿಡಿಸಿದಷ್ಟೇ ಕಷ್ಟವಿದೆ.

ಈ ಕ್ಷೇತ್ರದ ರಾಜಕೀಯ ಮುತ್ಸದ್ಧಿ, ಮಾಜಿ ಸಚಿವ ವಿ.ಮುನಿಯಪ್ಪ ಅವರು ಸದ್ಯ 9ನೇ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಈ ಬಾರಿ ಸ್ವಪಕ್ಷದ ಮುಖಂಡ, ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಅವರು ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಇನ್ನು ಜೆಡಿಎಸ್‌ನಿಂದ ಸ್ಪರ್ಧಿಸುವ ವಿಚಾರದಲ್ಲಿ ‘ಗಳಸ್ಯ- ಗಂಠಸ್ಯ’ ಸ್ನೇಹಿತರಾಗಿದ್ದ ಶಾಸಕ ಎಂ.ರಾಜಣ್ಣ, ಮುಖಂಡ ಮೇಲೂರು ಬಿ.ಎನ್‌.ರವಿಕುಮಾರ್‌ ಅವರ ನಡುವೆ ತೀವ್ರ ಪೈಪೋಟಿಯೇ ನಡೆದು ನಾಟಕೀಯ ಬೆಳವಣಿಗೆಗಳಲ್ಲಿ ರವಿಕುಮಾರ್ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾದರೆ, ರಾಜಣ್ಣ ಪಕ್ಷೇತರರಾಗಿ ‘ಅಖಾಡ’ ಕ್ಕಿಳಿದು ಗೆಳೆಯನಿಗೆ ಚಿತ್ ಮಾಡಲು ಜೋರಾಗಿ ‘ತಾಲೀಮು’ ನಡೆಸಿದ್ದಾರೆ.

ಕ್ಷೇತ್ರದ ಸಾಂಪ್ರದಾಯಿಕ ಎದುರಾಳಿ ಪಾಳೆಯಗಳಲ್ಲಿ ಈ ಬಾರಿ ‘ಬಣ’ ರಾಜಕೀಯ ಬಿರುಸುಗೊಂಡಿದ್ದು, ಉಭಯ ಅಧಿಕೃತ ಅಭ್ಯರ್ಥಿಗಳು ಪರಸ್ಪರರ ಪಾಳೆಯದೊಳಗಿನ ಒಡಕಿನ ‘ಲಾಭ’ ಪಡೆಯಲು ಹವಣಿಸಿ ಶತ್ರುವಿನ ಶತ್ರುವಿನ ಶಕ್ತಿ ವೃದ್ಧಿಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿ ಟಿಕೆಟ್ ಆಕಾಂಕ್ಷಿ ಡಿ.ಆರ್.ಶಿವಕುಮಾರಗೌಡ ಅವರಿಗೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವೊಂದರಲ್ಲಿ ಶಿಕ್ಷೆಯಾಗಿದ್ದೇ, ಹೈಕಮಾಂಡ್ ಅವರನ್ನು ಆಕ್ಷಾಂಕ್ಷಿಗಳ ಪಟ್ಟಿಯಿಂದಲೇ ಕೈಬಿಟ್ಟಿತು. ಕೊನೆಯ ಕ್ಷಣದಲ್ಲಿ ಎಚ್.ಸುರೇಶ್ ಅವರಿಗೆ ಟಿಕೆಟ್ ನೀಡಿತು. ಹೀಗಾಗಿ ಬಿಜೆಪಿ ಕಾರ್ಯಕರ್ತರಲ್ಲಿ ಹಿಂದಿದ್ದ ಹುರುಪು ಕಾಣೆಯಾಗಿದೆ.

ಅಬ್ಲೂಡು, ದಿಬ್ಬೂರಹಳ್ಳಿ, ಕಸಬಾ, ಜಂಗಮಕೋಟೆ ಹೋಬಳಿಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಬಿರುಸಿನ ಪ್ರದರ್ಶನ ತೋರಿಸಲಿದ್ದಾರೆ ಎಂದು ಮತದಾರ ಭಾವಿಸಿಕೊಂಡಿರುವವರೆಲ್ಲ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಹೀಗಾಗಿ ಇಲ್ಲಿ ಸ್ವಜಾತಿ ‘ಮಿತಿ’ ಮೀರಿ ಅನ್ಯ ಜಾತಿಯ ಮತದಾರರ ಮನಗೆ ಲ್ಲುವವನೇ ಗೆಲುವಿನ ನಗೆ ಬೀರುತ್ತಾರೆ.

ಸದ್ಯ ಮುನಿಯಪ್ಪ ಅವರು ತಮ್ಮ ಸಾಧನೆಗಳಿಗಿಂತ ಹೆಚ್ಚಾಗಿ ಸಿದ್ದರಾಮಯ್ಯ ಅವರ ಸಾಧನೆಗಳನ್ನು ಮುಂದಿಟ್ಟುಕೊಂಡು ‘ನಾವು ನುಡಿದಂತೆ ನಡೆದಿದ್ದೇವೆ’ ನಮಗೆ ಮತ್ತೊಂದು ಅವಕಾಶ ಕೊಡಿ ಎಂದು ಮನೆ ಮನೆ ಸುತ್ತುತ್ತಿದ್ದಾರೆ. ಇನ್ನೊಂದೆಡೆ ಆಂಜನಪ್ಪ ತಮ್ಮ ಟ್ರಸ್ಟ್‌ನಿಂದ ಈವರೆಗೆ ಮಾಡಿರುವ ಸಮಾಜ ಮುಖಿ ಕೆಲಸಗಳನ್ನು ಜಪಿಸುತ್ತ ಇನ್ನೂ ಹೆಚ್ಚಿನ ಸೇವೆಗೆ ಅವಕಾಶ ನೀಡಿ ಎಂದು ಮತ ಯಾಚಿಸುತ್ತಿದ್ದಾರೆ.

ಇತ್ತ ಜೆಡಿಎಸ್ ಅಭ್ಯರ್ಥಿ ರವಿಕುಮಾರ್ ಅವರು ಕುಮಾರಸ್ವಾಮಿ ಅವರ ಆಡಳಿತದಲ್ಲಿ ಜಾರಿಗೆ ತಂದ ಜನಪರ ಕಾರ್ಯಕ್ರಮಗಳು, ಆಕರ್ಷಕ ಪ್ರಣಾಳಿಕೆ ಜತೆಗೆ ತಾವು ವೈಯಕ್ತಿಕವಾಗಿ ‘ಎಚ್‌.ಡಿ.ದೇವೇಗೌಡ ಮತ್ತು ಜಯಪ್ರಕಾಶ್‌ ನಾರಾಯಣ್‌ ಸೇವಾಭಿವೃದ್ಧಿ ಚಾರಿಟಬಲ್‌ ಟ್ರಸ್ಟ್‌’ ಮೂಲಕ ಮಾಡಿರುವ ಸೇವೆಗಳನ್ನು ಪಠಿಸಿ ಆಶೀರ್ವಾದ ಬೇಡುತ್ತಿದ್ದಾರೆ.

ಶಾಸಕ ರಾಜಣ್ಣ ಈ ಬಾರಿ ನನಗೆ ಜೆಡಿಎಸ್ ವರಿಷ್ಠರು ಮಹಾ ಮೋಸ ಮಾಡಿದ್ದಾರೆ. ನಾನು ಮೊದಲೇ ಬಡವ, ದೇವೇಗೌಡರಂತೆ ನೀವು ನನ್ನನ್ನು ಕೈಬಿಟ್ಟರೆ ನಾ ಕೆಟ್ಟೆ ಎಂದು ಮತದಾರರ ಮನೆ ಮುಂದೆ ಗೋಗರೆಯುತ್ತಿದ್ದಾರೆ. ಜತೆಗೆ ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಲೆಕ್ಕ ನೀಡುತ್ತಿದ್ದಾರೆ.

ಕಳೆದ ಚುನಾವಣೆ ಹೊತ್ತಿಗೆ ರಾಜಣ್ಣ ಅವರು ತಮ್ಮ ರಾಜಕೀಯ ಗುರು, ಮಾವ, ಮಾಜಿ ಶಾಸಕ ಮುನಿಶಾಮಪ್ಪ ಅವರನ್ನು ಕಳೆದುಕೊಂಡರೆ, ಈ ಬಾರಿ ಕಾಕತಾಳೀಯ ಎನ್ನುವಂತೆ ಅವರ ತಂದೆ ಎಂ.ಪಿ.ಮುನಿಯಪ್ಪ ಕೆಲವೇ ದಿನಗಳ ಹಿಂದಷ್ಟೇ ನಿಧನ ಹೊಂದಿದರು.

ಕಳೆದ ಬಾರಿ ರಾಜಣ್ಣ ಅವರಿಗೆ ಮೊದಲ ಚುನಾವಣೆ ಸೋಲು, ಮಾವನ ಸಾವು ಮತದಾರರ ‘ಅನುಕಂಪ’ ಸೃಷ್ಟಿಸಿದ್ದವು ಎಂಬ ವಿಶ್ಲೇಷಣೆಗಳಿವೆ. ಅದರಂತೆ ಈ ಬಾರಿ ಪಕ್ಷದ ವರಿಷ್ಠರು ಮಾಡಿದ್ದಾರೆ ಎನ್ನಲಾಗುತ್ತಿರುವ ಮೋಸ, ಇನ್ನೊಂದೆಡೆ ತಂದೆಯ ಸಾವು ‘ಇತಿಹಾಸ’ವನ್ನು ಮರುಕಳುಹಿ ಸುತ್ತವೆಯೇ ಎಂದು ಕೇಳಿದರೆ ಉತ್ತರ ಸ್ಪಷ್ಟವಾಗಿ ದೊರೆಯುತ್ತಿಲ್ಲ. ಈ ನಾಲ್ಕು ಅಭ್ಯರ್ಥಿಗಳ ಪೈಕಿ ‘ಅದೃಷ್ಟ’ ಯಾರಿಗೆ ಒಲಿಯಲಿದೆ ಕಾಯ್ದು ನೋಡಬೇಕಿದೆ.

ಕಣದಲ್ಲಿರುವ ಇತರ ಅಭ್ಯರ್ಥಿಗಳು

ಎಚ್.ಸುರೇಶ್ (ಬಿಜೆಪಿ), ಎಂ.ನಾರಾಯಣಸ್ವಾಮಿ (ಜೈ ಭಾರತ್ ಜನಸೇನಾ ಪಾರ್ಟಿ), ಮಹಮದ್ ಇಸ್ಮಾಯಿಲ್ (ಸಮಾಜವಾದಿ ಪಕ್ಷ) ಬಿ.ಎಸ್. ಮೌಲಾಜಾನ್ (ಅಂಬೇಡ್ಕರ್ ನ್ಯಾಷನಲ್ ಕಾಂಗ್ರೆಸ್) ಕೆ.ವಿ. ಯಾಮೇಗೌಡ (ಅಖಿಲ ಭಾರತ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ) ವೆಂಕಟೇಶಪ್ಪ (ರಿಪಬ್ಲಿಕನ್ ಸೇನಾ) ಪಕ್ಷೇತರರಾಗಿ ಆರ್.ಮೋಹನ್, ಬೈರೇಗೌಡ ವೆಂಕಟಸ್ವಾಮಿ, ವಿ.ನಾಗರಾಜು, ಎನ್‌.ವೆಂಕಟೇಶಪ್ಪ, ಎಸ್.ಎನ್.ರವಿಕುಮಾರ್, ಬಿ.ಅಮ್ಜದ್ ಪಾಷಾ, ಹರಿಕೃಷ್ಣ, ವೈ.ಎನ್.ಗಂಗಾಧರ್, ಡಿ.ಮುನಿರಾಜು, ಸೇರಿದಂತೆ ಈ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.