ಶಿವಪುರ: ಮತದಾನ ಬಹಿಷ್ಕಾರದ ಎಚ್ಚರಿಕೆ

7
ಕಾರ್ಮಿಕರ ಗೋಳು ಕೇಳುವವರಿಲ್ಲ– ಸ್ಥಳೀಯರ ಅಳಲು

ಶಿವಪುರ: ಮತದಾನ ಬಹಿಷ್ಕಾರದ ಎಚ್ಚರಿಕೆ

Published:
Updated:

ಕೊಪ್ಪ: ತಾಲ್ಲೂಕಿನ ಹಿರೇಕೊಡಿಗೆ ಪಂಚಾಯಿತಿ ವ್ಯಾಪ್ತಿಯ ಶಿವಪುರದಲ್ಲಿ 65ಕ್ಕೂ ಹೆಚ್ಚು ಕೂಲಿ ಕಾರ್ಮಿಕರು 8 ತಿಂಗಳಿಂದ ತಮ್ಮ ಮನೆಗಳಿಗೆ ಓಡಾಡಲು ದಾರಿಯಿಲ್ಲದೆ ಪರಿತಪಿಸುತ್ತಿದ್ದಾರೆ. ಇಲ್ಲಿನ ದಾರಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಮುಂದಾಗದ ಕಾರಣ ಇದೇ 12ರಂದು ನಡೆಯುವ ಶೃಂಗೇರಿ ಕ್ಷೇತ್ರದ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.

ಕೊಪ್ಪ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಶಿವಪುರ ತಿರುವಿನ ಸಮೀಪ, ಕುಂಬಾರಕೊಪ್ಪ ಗ್ರಾಮದ ಸರ್ವೇ ನಂಬರ್ 104ರಲ್ಲಿ ವಾಸವಿರುವ ಈ ಕಾರ್ಮಿಕ ಕುಟುಂಬಗಳ ಸಂಕಷ್ಟವನ್ನು ತೆರೆದಿಟ್ಟ ಹಿರಿಯರಾದ ಸಂಕಪ್ಪ ಶೆಟ್ಟಿ ಮಾಧ್ಯಮದವರೊಂದಿಗೆ ಮಾತನಾಡಿ, ’50-60 ವರ್ಷಗಳಿಂದ ಇಲ್ಲಿ ವಾಸವಿರುವ ನಾವು ಮನೆಯೆದುರಿನ ಸರ್ಕಾರಿ ಜಾಗದ ದಾರಿಯಲ್ಲಿ ಓಡಾಡುತ್ತಿದ್ದೆವು. ಕೆಲ ವರ್ಷಗಳ ಹಿಂದೆ ಪಕ್ಕದ ಎಸ್ಟೇಟ್ ಮಾಲೀಕರು ತಮ್ಮ ಎಸ್ಟೇಟಿನ ಅಂಚಿನಲ್ಲಿ ರಸ್ತೆ ನಿರ್ಮಿಸಿದ ಬಳಿಕ ಆ ರಸ್ತೆಯನ್ನು ಬಳಸಿಕೊಳ್ಲುತ್ತಿದ್ದೆವು. ಆದರೆ ಕಳೆದ ವರ್ಷ ನಮ್ಮ ಮನೆಯೆದುರಿನ ಸರ್ಕಾರಿ ಜಾಗವನ್ನು ಪಕ್ಕದ ಭೂಮಾಲೀಕರು ಒತ್ತುವರಿ ಮಾಡಿ ಬೇಲಿ ಹಾಕಿದ್ದು, ಎಸ್ಟೇಟ್ ಮಾಲೀಕರೂ ತಾವು ನಿರ್ಮಿಸಿದ್ದ ರಸ್ತೆಯ ಗೇಟಿಗೆ ಬೀಗ ಹಾಕಿದ್ದರಿಂದಾಗಿ ನಮ್ಮ ಮನೆಗಳಿಗೆ ಓಡಾಡಲು ಇದ್ದ ಎರಡೂ ದಾರಿಗಳು ಬಂದ್ ಆಗಿವೆ' ಎಂದರು.

‘8 ತಿಂಗಳಿಂದ ಈ ಗೇಟಿನ ಒಂದು ಪಾರ್ಶ್ವದ ರಸ್ತೆ ಬದಿಯ ಚರಂಡಿ ಇರುಕಿನಲ್ಲಿ ಮೈ ತೂರಿಕೊಂಡು ಗೇಟಿನ ಅತ್ತಿಂದಿದ್ದ ದಾಟಬೇಕಾದ ಸ್ಥಿತಿ ಎದುರಾಗಿದೆ. ಸಣ್ಣ ಸಣ್ಣ ಮಕ್ಕಳು, ಮಹಿಳೆಯರು, ವೃದ್ಧರು ಈ ರೀತಿ ಸಾಗುವಾಗ ಸ್ವಲ್ಪ ಆಯ ತಪ್ಪಿದರೂ ರಸ್ತೆ ಬದಿಯ ಇಳಿಜಾರಿಗೆ ಕುಸಿದು ಬೀಳುವ ಅಪಾಯವಿದೆ. ಈಗ ಆ ಇರುಕಿನ ದಾರಿಗೂ ದನಗಳು ಒಳಬರುತ್ತವೆ ಎಂದು ಮುಳ್ಳುಗಿಡಗಳನ್ನು ಪೇರಿಸಿ ಇಡಲಾಗುತ್ತಿದೆ. ನಮ್ಮ 8 ಮನೆಗಳಲ್ಲಿ 65 ಜನ ವಾಸಿಸುತ್ತಿದ್ದು, 23 ಮಂದಿ ಮಕ್ಕಳಿದ್ದಾರೆ. ಅವರಿಗೆ ನಿತ್ಯ ಶಾಲೆ, ಕಾಲೇಜುಗಳಿಗೆ ಈ ದಾರಿಯಲ್ಲಿ ಹೋಗಲು ತೀವ್ರ ತೊಂದರೆಯಾಗುತ್ತಿದೆ’ ಎಂದು ಹೇಳಿದರು.

‘ನಾವು ಎದುರಿಸುತ್ತಿರುವ ದಾರಿ ಸಮಸ್ಯೆಯ ಬಗ್ಗೆ ಈಗಾಗಲೇ ಹಿರೇಕೊಡಿಗೆ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ತಹಶೀಲ್ದಾರ್, ಜಿಲ್ಲಾಧಿಕಾರಿ, ಸ್ಥಳೀಯ ಜನಪ್ರತಿನಿಧಿಗಳು, ಕ್ಷೇತ್ರದ ಶಾಸಕರು, ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ದೂರು ನೀಡಿ ನಮಗೊಂದು ದಾರಿ ನಿರ್ಮಿಸಿಕೊಡುವಂತೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಲಿ ಕೆಲಸ ಮಾಡಿಕೊಂಡು ಕಷ್ಟದ ಬದುಕು ಸಾಗಿಸುತ್ತಿರುವ ನಮ್ಮ ಗೋಳನ್ನು ಕೇಳುವವರಿಲ್ಲವಾಗಿದೆ. ಆದ್ದರಿಂದ ನಮ್ಮ ಬೇಡಿಕೆ ಈಡೇರಿಸದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ನಾವು ಈ ಬಾರಿಯ ಚುನಾವಣೆ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಈಗಲಾದರೂ ಸಂಬಂಧಪಟ್ಟವರು ಸ್ಥಳಕ್ಕೆ ಭೇಟಿ ನೀಡಿ ನಮಗಾಗುತ್ತಿರುವ ತೊಂದರೆಯನ್ನು ಗಮನಿಸಿ ಸಮಸ್ಯೆ ಬಗೆಹರಿಸಲಿ’ ಎಂದು ಅವರು ಒತ್ತಾಯಿಸಿದರು.

ಸ್ಥಳೀಯ ನಿವಾಸಿಗಳಾದ ಸುಧಾಕರ ಶೆಟ್ಟಿ. ಅನಿತ, ಎಸ್.ಟಿ. ನಾಗಪ್ಪ, ಸುಮಿತ್ರ, ವಾರಿಜ, ಲಕ್ಷ್ಮಮ್ಮ, ಲಾರೆನ್ಸ್ ಪಾಯ್ಸ್, ಮೇರಿ, ಯಶೋಧ ಲಾವಣ್ಯ, ಅಣ್ಣಪ್ಪ, ರವಿಶೆಟ್ಟಿ, ಲಕ್ಷ್ಮಿ ಜೋಗಿ, ರಮಣಿ, ದಿವಿಜ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry