ಬುಧವಾರ, ಮಾರ್ಚ್ 3, 2021
24 °C

2014ರ ನಂತರ ಸೃಷ್ಟಿಸಲಾದ ಉದ್ಯೋಗಗಳ ಲೆಕ್ಕ ಹಾಕಲು ಮೋದಿ ಆದೇಶ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

2014ರ ನಂತರ ಸೃಷ್ಟಿಸಲಾದ ಉದ್ಯೋಗಗಳ ಲೆಕ್ಕ ಹಾಕಲು ಮೋದಿ ಆದೇಶ

ನವದೆಹಲಿ: 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕದ ದೇಶದಲ್ಲಿ ಎಷ್ಟು ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ ಎಂಬುದರ ಅಂಕಿ–ಅಂಶ ಕಲೆಹಾಕಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆದೇಶ ನೀಡಿದ್ದಾರೆ.

ಉದ್ಯೋಗ ಸೃಷ್ಟಿಗೆ ರೂಪಿಸಲಾದ ಯೋಜನೆ ಹಾಗೂ ಕಾರ್ಯಕ್ರಮಗಳು ಎಷ್ಟರ ಮಟ್ಟಿಗೆ ಅನುಷ್ಠಾನವಾಗಿವೆ. ಅವುಗಳಿಂದ ಜಿಡಿಪಿ ಬೆಳವಣಿಗೆ ಮೇಲೆ ಎಷ್ಟರ ಮಟ್ಟಿಗೆ ಅನುಕೂಲವಾಗಿದೆ ಎಂಬುದರ ಕುರಿತು ಮಾಹಿತಿ ಕಲೆಹಾಕುವಂತೆ ಆಯಾ ಇಲಾಖೆಯ ಮಂತ್ರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರ ರೂಪಿಸಿರುವ ‘ಮೇಕ್‌ ಇನ್‌ ಇಂಡಿಯಾ’ ಯೋಜನೆಗೆ ವಿದೇಶಿ ನೇರ ಬಂಡವಾಳ ಹರಿದು ಬರುತ್ತಿದೆ. ಆದರೆ ಈ ಯೋಜನೆಯಿಂದ ಎಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ ಎಂಬುದರ ಕುರಿತು ನಿಖರವಾದ ಅಂಕಿ–ಅಂಶಗಳಿಲ್ಲ. ನೋಟು ರದ್ಧತಿಯ ಬಳಿಕವೂ ಉದ್ಯೋಗಸೃಷ್ಟಿಯಲ್ಲಿ ಇಳಿಕೆಯಾಗಿದೆ ಎನ್ನುತ್ತವೆ ಸರ್ಕಾರಿ ದಾಖಲೆಗಳು. ಈ ಅಂಶಗಳನ್ನೇ ಪ್ರಸ್ತಾಪಿಸುತ್ತ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಪ್ರಹಾರ ನಡೆಸುತ್ತಿವೆ.

‘ದೇಶವನ್ನು 60 ವರ್ಷಗಳ ಕಾಲ ಕಾಂಗ್ರೆಸ್‌ ಆಳಿದ್ದರಿಂದಲೇ ಇನ್ನೂ ನಿರುದ್ಯೋಗವಿದೆ. ನಮ್ಮ ಸರ್ಕಾರ ಬಂದ ಬಳಿಕ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಅವಕಾಶಗಳನ್ನು ಸೃಷ್ಟಿಸಲು ಗಮನ ಹರಿಸಿದ್ದೇವೆ’ ಎಂದು ಪಕ್ಷದ ಕಾರ್ಯಕರ್ತರೊಂದಿಗೆ ಸೋಮವಾರ ನಡೆಸಿದ ಸಂವಾದದಲ್ಲಿ ಮೋದಿ ಪುನರುಚ್ಚರಿಸಿದ್ದರು.

2014ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಮೋದಿ ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಪ್ರತಿವರ್ಷ 2 ಕೋಟಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದಾಗಿಯೂ ಭರವಸೆ ನೀಡಿದ್ದರು. ಆ ಮೂಲಕ ಹೆಚ್ಚು ಮತಗಳನ್ನು ಸೆಳೆದು ಬಹುಮತದ ಸ್ಥಾನಗಳನ್ನು ಗೆಲ್ಲುವಲ್ಲಿ ಮೋದಿ ಯಶಸ್ವಿಯಾಗಿದ್ದರು.

ಇದೇ ಮೇ 26ಕ್ಕೆ ಮೋದಿ ಅಧಿಕಾರದ ಗದ್ದುಗೆ ಏರಿ ನಾಲ್ಕು ವರ್ಷಗಳು ತುಂಬಲಿವೆ. ಈ ಹಾದಿಯಲ್ಲಿ ಹಲವು ರಾಜ್ಯ ಚುನಾವಣೆಗಳಲ್ಲಿ ಮಿಶ್ರ ಫಲಿತಾಂಶಗಳನ್ನು ಅವರು ಕಂಡಿದ್ದಾರೆ. ಮೇ 12ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ.

2018ರ ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಶೇ 6.6ರಷ್ಟು ಆರ್ಥಿಕವೃದ್ಧಿ ದರ ದಾಖಲಾಗಿತ್ತು. ಕಳೆದ ನಾಲ್ಕು ವರ್ಷದಲ್ಲಿ ದಾಖಲಾದ ಅತಿ ಕಳಪೆ ಆರ್ಥಿಕ ಬೆಳವಣಿಗೆ ದರವಿದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.