ಶನಿವಾರ, ಮಾರ್ಚ್ 6, 2021
30 °C
ಒಂದು ಸ್ಥಾನ ಕುಸಿದ ದಾವಣಗೆರೆ: ಫಲಿತಾಂಶ ಪ್ರಮಾಣ ಶೇ 6 ಏರಿಕೆ

ಎಸ್ಸೆಸ್ಸೆಲ್ಸಿ: ಮಿತ ರೆಡ್ಡಿ ಜಿಲ್ಲೆಗೆ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್ಸೆಸ್ಸೆಲ್ಸಿ: ಮಿತ ರೆಡ್ಡಿ ಜಿಲ್ಲೆಗೆ ಪ್ರಥಮ

ದಾವಣಗೆರೆ: ರಾಜ್ಯದಾದ್ಯಂತ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ದಾವಣಗೆರೆ ಜಿಲ್ಲೆ 15ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿ ಜಿಲ್ಲೆಗೆ 14ನೇ ಸ್ಥಾನ ಸಿಕ್ಕಿತ್ತು. ಒಂದು ಸ್ಥಾನ ಕುಸಿತ ಕಂಡರೂ ಫಲಿತಾಂಶ ಪ್ರಮಾಣ ಶೇ 6 ಏರಿಕೆಯಾಗಿದೆ. 2016–17ನೇ ಸಾಲಿನಲ್ಲಿ ಶೇ75.33 ಇದ್ದ ಫಲಿತಾಂಶ 2017–18 ನೇ ಸಾಲಿನಲ್ಲಿ ಶೇ 81.56ಕ್ಕೆ ಏರಿಕೆಯಾಗಿದೆ.

ಈ ಬಾರಿ ಫಲಿತಾಂಶದಲ್ಲಿ ಹೊನ್ನಾಳಿ ತಾಲ್ಲೂಕು ರಾಜ್ಯಕ್ಕೆ 5ನೇ ಸ್ಥಾನ (ತಾಲ್ಲೂಕುವಾರು ಪಟ್ಟಿ) ಪಡೆಯುವ ಮೂಲಕ ಗಮನ ಸೆಳೆದಿದೆ. ಪರೀಕ್ಷೆ ಬರೆದ 2,608 ವಿದ್ಯಾರ್ಥಿಗಳ ಪೈಕಿ 2,411 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪಾಸಾದವರ ಪ್ರಮಾಣ ಶೇ 92.45ರಷ್ಟಿದೆ. ಹರಿಹರ 65, ಹರಪನಹಳ್ಳಿ 88, ಚನ್ನಗಿರಿ 95, ದಾವಣಗೆರೆ ದಕ್ಷಿಣ 115, ಜಗಳೂರು 138, ದಾವಣಗೆರೆ ಉತ್ತರ 145ನೇ ಸ್ಥಾನ ಪಡೆದುಕೊಂಡಿವೆ.

ಮಿತ ಎಸ್‌.ರೆಡ್ಡಿ ಜಿಲ್ಲೆಗೆ ಪ್ರಥಮ: ಪ್ರಾಥಮಿಕ ಮಾಹಿತಿಯ ಪ್ರಕಾರ ತರಳಬಾಳು ಇಂಗ್ಲಿಷ್‌ ಮಾಧ್ಯಮ ಶಾಲೆಯ ಮಿತ ಎಸ್‌. ರೆಡ್ಡಿ (619) ಅತಿಹೆಚ್ಚು ಅಂಕಗಳಿಸುವ ಮೂಲಕ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾಳೆ. ಸೇಂಟ್‌ ಜಾನ್ಸ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯ ಬಿ.ಎಂ. ಕವನಾ (618) ದ್ವಿತೀಯ ಸ್ಥಾನ ಪಡೆದರೆ, ತರಳಬಾಳು ಶಾಲೆಯ ದಿಶಾ ಬಿ. ರಾಜ್‌ (617) ಹಾಗೂ ಟಿ.ಎಲ್‌. ಸುಜನ್‌ (617) ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ. ಸೋಮೇಶ್ವರ ಶಾಲೆಯ ಶ್ರವಣ್‌ ಎಸ್. ಅಲಿಗಾರ್ (616) ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾನೆ.

ಸೇಂಟ್‌ ಜಾನ್ಸ್ ಶಾಲೆಯ ಎಂ.ಎಸ್‌. ಅನುಶ್ರೀ (612), ಕೃಷ್ಣಪ್ರಿಯ ನಾಡಿಗೇರ್‌ (611) ಹಾಗೂ ಸಿದ್ಧಗಂಗಾ ಶಾಲೆಯ ಆರ್‌. ಗೌತಮಿ (611), ತರಳಬಾಳು ಶಾಲೆಯ ಡಿ.ಜಿ. ನಯನಾ (611), ಲಕ್ಷ್ಮಿ ಜಿ. ಕೃಷ್ಣ (611) ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು.

ತರಳಬಾಳು ಶಾಲೆಗೆ ಈ ಬಾರಿ ಶೇ 100 ಫಲಿತಾಂಶ ಸಿಕ್ಕಿದೆ. ಪರೀಕ್ಷೆ ಬರೆದ 173 ವಿದ್ಯಾರ್ಥಿಗಳ ಪೈಕಿ 62 ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಇದೇ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಸಿ. ರೋಹಿಣಿ (611) ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದು, ಆಟೊ ಚಾಲಕರಾದ ಚಂದ್ರಶೇಖರ್ ಹಾಗೂ ಮಂಜುಳಾ ದಂಪತಿ ಪುತ್ರಿ ಇವರು.

ಸೋಮೇಶ್ವರ ಶಾಲೆಗೆ ಶೇ 98.4 ಫಲಿತಾಂಶ ಬಂದಿದ್ದು, 61 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 63 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 4 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಿದ್ಧಗಂಗಾ ಶಾಲೆಗೆ ಉತ್ತಮ ಫಲಿತಾಂಶ ಬಂದಿದ್ದು, ಆರ್‌. ಗೌತಮಿ 611 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. 71 ಅತ್ಯುನ್ನತ ಶ್ರೇಣಿ, ಬಂದಿದೆ. ಗೌತಮಿ, ವೈ.ಎಂ. ನಯನಾ, ಟಿ. ಧನ್ಯತಾ, ಡಿ. ಸ್ಫೂರ್ತಿ, ಎಸ್‌.ಪಿ. ಪರಶುರಾಮ, ಎನ್‌.ಕೆ. ಚಿರಂತನ, ಪಿ. ತರುಣ್, ಎಸ್‌. ಸ್ವಾತಿ ಅವರು ‘ಎಸ್.ಎಸ್.’ ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆದಿದ್ದಾರೆ. ಒಟ್ಟಾರೆ ಶಾಲೆಗೆ ಶೇ 99 ಫಲಿತಾಂಶ ಸಿಕ್ಕಿದೆ ಎಂದು ಶಾಲೆಯ ಸಂಸ್ಥಾಪಕ ಎಂ.ಎಸ್. ಶಿವಣ್ಣ, ಆಡಳಿತ ಮಂಡಳಿಯ ಹೇಮಂತ್, ಡಾ. ಜಯಂತ್‌, ಮುಖ್ಯ ಶಿಕ್ಷಕಿ ಜಸ್ಟಿನ್ ಡಿಸೋಜಾ ಪ್ರಕಟಣೆಯಲ್ಲಿ

ತಿಳಿಸಿದ್ದಾರೆ.

ಮಾಗನೂರು ಬಸಪ್ಪ ಪ್ರೌಡಶಾಲೆಗೆ ಶೇ 98.71ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 78 ವಿದ್ಯಾರ್ಥಿಗಳ ಪೈಕಿ 77 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಚ್‌.ಎಸ್‌. ಪ್ರಿಯದರ್ಶಿನಿ (608) ಜಿ.ಎನ್‌. ಲಿಖಿತಾ (604) ಅಂಕಪಡೆದಿದ್ದಾರೆ.

ನೂತನ ಆಂಗ್ಲ ಮಾಧ್ಯಮ ಪ್ರೌಢಲಾಲೆಗೆ ಉತ್ತಮ ಫಲಿತಾಂಶ ಬಂದಿದ್ದು, ಶರತ್ ಕುಮಾರ್ 591 ಅಂಕ ಗಳಿಸಿದ್ದಾನೆ. ಸ್ವಾಮಿ ವಿವೇಕಾನಂದ ಇಂಗ್ಲಿಷ್ ಶಾಲೆಗೆ ಶೇ 97 ಫಲಿತಾಂಶ ಬಂದಿದ್ದು, ಕಿರಣ್‌ 612 ಅಂಕಪಡೆದಿದ್ದಾನೆ.

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 619 ಅಂಕ ಪಡೆದಿರುವ ಮಿತ ಎಸ್‌. ರೆಡ್ಡಿ ಐಎಎಸ್‌ ಅಧಿಕಾರಿಯಾಗುವ ಕನಸು ಕಟ್ಟಿಕೊಂಡಿದ್ದಾಳೆ. ಚರ್ಮರೋಗ ತಜ್ಞ ಡಾ. ಸೂಗರೆಡ್ಡಿ ಹಾಗೂ ವಕೀಲರಾದ ಶಂಕುತಲಾ ದಂಪತಿ ಪುತ್ರಿಯಾಗಿರುವ

ಮಿತ ‘ಪ್ರಜಾವಾಣಿ’ ಜತೆ ಮಾತನಾಡಿದರು.

ಒತ್ತಡಮುಕ್ತ ಓದು ಉತ್ತಮ ಅಂಕಪಡೆಯಲು ನೆರವಾಯಿತು. ಪೋಷಕರ ಪ್ರೋತ್ಸಾಹ ಹಾಗೂ ಶಾಲೆಯ ಸಿಬ್ಬಂದಿಯ ಶ್ರಮ ಸಾಧನೆಯ ಹಿಂದಿರುವ ಶಕ್ತಿ. ಶಾಲೆಯಲ್ಲಿ ಪ್ರತಿದಿನ ಸಿಗುತ್ತಿದ್ದ ವಿಶೇಷ ತರಬೇತಿಗಳನ್ನು ಹೊರತುಪಡಿಸಿ ಎಲ್ಲಿಯೂ ಟ್ಯೂಷನ್‌ಗೆ ಹೋಗಿಲ್ಲ. ಪ್ರತಿದಿನ ಶ್ರದ್ಧೆಯಿಂದ ಅಭ್ಯಾಸ ಮಾಡಿದ್ದಕ್ಕೆ ಫಲ ದೊರೆತಿದೆ ಎಂದು ಮಿತ ಹೇಳಿದರು.

‘ಮುಂದೆ ವಿಜ್ಞಾನ ವಿಷಯದಲ್ಲಿ ಪದವಿ ಪಡೆದು, ಐಎಎಸ್‌ ಮಾಡುವ ಗುರಿ ಹೊಂದಿದ್ದೇನೆ. ರ‍್ಯಾಂಕ್ ಪಡೆಯುವಂತೆ ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕಬಾರದು. ಮಕ್ಕಳಿಗೆ ಸ್ವಾತಂತ್ರ್ಯ ನೀಡಿದರೆ ಖಂಡಿತ ಸಾಧನೆ ಮಾಡುತ್ತಾರೆ ಎನ್ನುತ್ತಾರೆ ಮಿತ.‘

‘ವೈದ್ಯೆಯಾಗುವಾಸೆ’

‌ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿರುವ ಸೇಂಟ್‌ ಜಾನ್ಸ್‌ ಶಾಲೆ ವಿದ್ಯಾರ್ಥಿನಿ ಕವನಾ ವೈದ್ಯೆಯಾಗುವ ಗುರಿ ಹೊಂದಿದ್ದಾಳೆ. ಬಿ.ಎಸ್‌. ಮುರುಗೇಶ್ ಹಾಗೂ ಗಾಯತ್ರಿ ದಂಪತಿ ಪುತ್ರಿಯಾಗಿರುವ ಕವನಾ ಕ್ರೀಡೆಯಲ್ಲೂ ಆಸಕ್ತಿ ಹೊಂದಿದ್ದಾರೆ. ‘ಟ್ಯೂಷನ್‌ಗೆ ಹೋಗಬೇಕು ಎಂದೇನಿಲ್ಲ. ಶಾಲೆಯ ಪಾಠ ಪ್ರವಚನ ಹಾಗೂ ಮನೆಯಲ್ಲಿ ಪ್ರತಿನಿತ್ಯ ಓದಿಗೆ ಸಮಯ ಮೀಸಲಿಟ್ಟರೆ ಉತ್ತಮ ಫಲಿತಾಂಶ ಪಡೆಯಬಹುದು’ ಎನ್ನುತ್ತಾಳೆ ಕವನಾ .

‘ಹೆಚ್ಚಿನ ಅಂಕ ನಿರೀಕ್ಷಿಸಿದ್ದೆ’

‘620 ಅಂಕಗಳು ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, 617 ಅಂಕಗಳು ಸಿಕ್ಕಿವೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತೇನೆ’ ಎನ್ನುತ್ತಾನೆ ತರಳಬಾಳು ಶಾಲೆಯ ಸುಜನ್‌. ಟಿ.ಕೆ.ಲೋಕೇಶ್‌ ಹಾಗೂ ರೂಪಕಲಾ ದಂಪತಿಯ ಪುತ್ರ ಸುಜನ್‌ಗೆ ವೈದ್ಯನಾಗುವ ಆಸೆ. ‘ಪ್ರತಿದಿನ 5 ಗಂಟೆ ಓದುತ್ತಿದ್ದೆ. ಬಿಡುವಿದ್ದಾಗ ಬ್ಯಾಸ್ಕೆಟ್‌ ಬಾಲ್‌ ಆಡುತ್ತೇನೆ ’ ಎನ್ನುತ್ತಾನೆ ಈ ಹುಡುಗ.

‘ಡಾನ್ಸ್‌, ಡಾಯಿಂಗ್‌ನಲ್ಲಿ ಆಸಕ್ತಿ’

ಜೆಜೆಎಂ ಮೆಡಿಕಲ್ ಕಾಲೇಜಿನ ಸರ್ಜನ್‌ ಡಾ.ಜೆ.ಟಿ. ಬಸವರಾಜ್ ಹಾಗೂ ರೇಖಾ ದಂಪತಿಯ ಪುತ್ರಿ ದಿಶಾ ಬಿ. ರಾಜ್‌ (617) ಜಿಲ್ಲೆಗೆ ಮೂರನೇ ಸ್ಥಾನ ಪಡೆದಿದ್ದಾಳೆ. ಪೇಂಟಿಂಗ್, ಡಾನ್ಸ್‌, ಬ್ಯಾಸ್ಕೆಟ್‌ ಬಾಲ್‌ ಸೇರಿದಂತೆ ಪಠ್ಯೇತರ ಚಟುವಟಿಕೆಯಲ್ಲಿ ಪ್ರಶಸ್ತಿ ಪಡೆದಿರುವ ದಿಶಾ ವೈದ್ಯೆಯಾಗುವ ಕನಸು ಕಾಣುತ್ತಿದ್ದಾಳೆ .

‘ಶಾಲೆಯಲ್ಲಿ ಪ್ರತಿದಿನ ಪರೀಕ್ಷೆಗೆ ವಿಶೇಷ ತರಬೇತಿ ನೀಡಲಾಗುತ್ತಿತ್ತು. ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಬಿಡಿಸಲಾಗುತ್ತಿತ್ತು. ಇದರಿಂದ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಯಿತು’ ಎನ್ನುತ್ತಾಳೆ ದಿಶಾ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.