ಶುಕ್ರವಾರ, ಮಾರ್ಚ್ 5, 2021
29 °C
ರಾಜ್ಯಕ್ಕೆ 3ನೇ ಸ್ಥಾನ ಪಡೆದ ವಿಜಯ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು

ಎಸ್ಸೆಸ್ಸೆಲ್ಸಿ: 7ನೇ ಸ್ಥಾನಕ್ಕೆ ಜಿಗಿದ ಹಾಸನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್ಸೆಸ್ಸೆಲ್ಸಿ: 7ನೇ ಸ್ಥಾನಕ್ಕೆ ಜಿಗಿದ ಹಾಸನ

ಹಾಸನ: ಪ್ರಸ್ತಕ ಸಾಲಿನ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಶೇಕಡಾ 84.68 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಬಾರಿ ಜಿಲ್ಲೆ 7ನೇ ಸ್ಥಾನಕ್ಕೆ ಜಿಗಿದಿದೆ. ಕಳೆದ ಬಾರಿ ಶೇ 69.58 ರಷ್ಟು ಫಲಿತಾಂಶದೊಂದಿಗೆ 31ನೇ ಸ್ಥಾನದಲ್ಲಿತ್ತು.

ಹಾಸನ ನಗರದ ವಿಜಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಬಿ.ಹಿಮಾ ಮತ್ತು ಕಾವೇರಿಯಪ್ಪ ಅವರು 625ಕ್ಕೆ 623 ಅಂಕ ಪಡೆದು ರಾಜ್ಯದಲ್ಲಿ 3ನೇ ಸ್ಥಾನ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 18,461 ವಿದ್ಯಾರ್ಥಿಗಳ ಪೈಕಿ 15,632 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 9,007 ಬಾಲಕರ ಪೈಕಿ 7,400 ಪಾಸಾಗಿದ್ದಾರೆ. 9,454 ಬಾಲಕಿಯರ ಪೈಕಿ 8,232 ತೇರ್ಗಡೆ ಹೊಂದಿದ್ದಾರೆ.

ಜಿಲ್ಲೆಯು 31ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಏರಲು ಶ್ರಮಿಸಿದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಡಯಟ್, ಎಲ್ಲಾ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌ ಅಭಿನಂದಿಸಿದ್ದಾರೆ.

ಹಾಸನದ ಆದರ್ಶನಗರ ನಿವಾಸಿ ಹಾಗೂ ಕಾಫಿ ಕ್ಯೂರಿಂಗ್‌ನಲ್ಲಿ ವ್ಯವಸ್ಥಾಪಕ ಆಗಿರುವ ಬಸವರಾಜು ಹಾಗೂ ನಳಿನಿ ಪುತ್ರಿ ಬಿ.ಹಿಮಾ 625ಕ್ಕೆ 623 ಅಂಕ ಪಡೆದಿದ್ದಾರೆ. ಕನ್ನಡದಲ್ಲಿ 125ಕ್ಕೆ 125, ಇಂಗ್ಲಿಷ್‌ 100ಕ್ಕೆ 99, ಹಿಂದಿ, ಗಣಿತ, ವಿಜ್ಞಾನದಲ್ಲಿ 100ಕ್ಕೆ 100 ಮತ್ತು ಸಮಾಜ ವಿಜ್ಞಾನದಲ್ಲಿ 100ಕ್ಕೆ 99 ಅಂಕಗಳನ್ನು ಪಡೆದಿದ್ದಾರೆ.

ಹಿಮಾ ಮಾತನಾಡಿ, ‘625 ಅಂಕಗಳನ್ನು ನಿರೀಕ್ಷೆ ಮಾಡಿದ್ದೆ. ಆದರೆ 2 ಅಂಕ ಕಡಿಮೆಯಾಗಿದ್ದು, ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಲಾಗುವುದು. ಆಸಕ್ತಿ ಬಂದಾಗ ಓದುತ್ತಿದ್ದೆ. ಸಮಯದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಐಎಎಸ್ ಅಧಿಕಾರಿಯಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅಭಿಲಾಶೆ ಇದೆ’ ಎಂದು ಹೇಳಿದರು.

ಹಾಸನ ನಗರದ ಶಂಕರೀಪುರಂ ನಿವಾಸಿ ಬಿ.ಎಂ.ಕಾಳಪ್ಪ ಮತ್ತು ಎಂ.ಕೆ.ಪವಿತ್ರ ಎಂಬವರ ಪುತ್ರ ಕಾವೇರಿಯಪ್ಪ ಕನ್ನಡದಲ್ಲಿ 125ಕ್ಕೆ 125, ಇಂಗ್ಲಿಷ್‌ನಲ್ಲಿ 100ಕ್ಕೆ 98, ಹಿಂದಿ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.

ಕಾವೇರಿಯಪ್ಪ ಮಾತನಾಡಿ, ‘ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುವ ಆಸೆ ಇತ್ತು. ಆದರೆ, ಒಂದೆರಡು ಅಂಕಗಳಿಂದ ತಪ್ಪಿದೆ. ಪ್ರತಿನಿತ್ಯ 5 ತಾಸು ವ್ಯಾಸಂಗ ಮಾಡುತ್ತಿದ್ದೆ. ಭವಿಷ್ಯದಲ್ಲಿ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ವ್ಯಾಸಂಗ ಮಾಡುವ ಗುರಿ ಇದೆ’ ಎಂದು ಹೇಳಿದರು.

ಹಾಸನ ತಾಲ್ಲೂಕಿನ ಬಸವಾಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ 36 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡಾ 100 ಫಲಿತಾಂಶ ಪಡೆದಿದೆ.

ಬಿ.ಎಸ್.ಪ್ರಶಾಂತ 625ಕ್ಕೆ 590 (ಪ್ರಥಮ ಸ್ಥಾನ), ಅಸ್ಫಿಯ ತರನ್ನುಂ 588 (ದ್ವಿತೀಯ ಸ್ಥಾನ), ಬಿ.ಎಂ. ಗೌತಮಿ 551ಅಂಕ (ತೃತೀಯ ಸ್ಥಾನ) ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಉತ್ತಮ ಫಲಿತಾಂಶ ಪಡೆದು ಉತ್ತೀರ್ಣರಾದ ಶಾಲೆಯ ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕ ಸಿ.ಕೆ.ಹರೀಶ್ ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ.

ಅಂಕಿ ಅಂಶ

18461

ಒಟ್ಟು ಪರೀಕ್ಷೆ ಬರೆದವರು

15632

ತೇರ್ಗಡೆಯಾದವರು

9007

ಪರೀಕ್ಷೆ ಬರೆದ ಬಾಲಕರು7400

ಪಾಸಾದ ಬಾಲಕರು

9454

ಪರೀಕ್ಷೆ ಬರೆದ ಬಾಲಕಿಯರು

8232

ಉತ್ತೀರ್ಣರಾದ ಬಾಲಕಿಯರು

ತಾಲ್ಲೂಕು– ಫಲಿತಾಂಶ ವಿವರ

ಆಲೂರು– ಶೇ 92

ಚನ್ನರಾಯಪಟ್ಟಣ– ಶೇ 90.63

ಅರಕಲಗೂಡು– ಶೇ 84.62

ಹಾಸನ– ಶೇ 84.12

ಅರಸೀಕೆರೆ– ಶೇ 83.80

ಸಕಲೇಶಪುರ– ಶೇ 83.61

ಬೇಲೂರು– ಶೇ 82.91

ಹೊಳೆನರಸೀಪುರ– ಶೇ 77.79

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.