6

ರಂಗಭೂಮಿಯ ಹೊಸ ದಿಶಾ...

Published:
Updated:
ರಂಗಭೂಮಿಯ ಹೊಸ ದಿಶಾ...

ನಕ್ಷತ್ರ ಹೊಳಪಿನ ಕಂಗಳು, ನೀಳ ನಾಸಿಕ, ತುಟಿಯಂಚಿನಲ್ಲೇ ಮುಗುಳು ನಗೆ ತುಳುಕಿಸುವ ಚೆಲುವೆ ದಿಶಾ ರಮೇಶ್‌, ಕನ್ನಡ ರಂಗಭೂಮಿಯ ಯುವನಟಿಯರಲ್ಲಿ ಮುಂಚೂಣಿಯಲ್ಲಿರುವವರು. ದೈಹಿಕ ಚೆಲುವಿನ ಜತೆಗೆ ಕಂಠಸಿರಿಯನ್ನೂ ಮೇಳೈಸಿಕೊಂಡಿರುವ ದಿಶಾಗೆ ರಂಗಭೂಮಿಯಲ್ಲೇ ಏನನ್ನಾದರೂ ಸಾಧಿಸುವಾಸೆ. ದಿಶಾ ‘ಗುಲ್‌ಮೊಹರ್‌’ನೊಂದಿಗೆ ಮಾತನಾಡಿದ ಅಕ್ಷರ ರೂಪ ಇಲ್ಲಿದೆ.

ರಂಗಭೂಮಿ ಪ್ರವೇಶದ ಮೊದಲ ಅನುಭವ ಹೇಗಿತ್ತು?

ಅಪ್ಪ ಮಂಡ್ಯ ರಮೇಶ್, ಅಮ್ಮ ಸರೋಜಾ ಹೆಗಡೆ ಇ‌ಬ್ಬರೂ ರಂಗಭೂಮಿ ಕಲಾವಿದರು. ಹುಟ್ಟಿನಿಂದಲೇ ರಂಗಭೂಮಿಯ ಪರಿಸರದಲ್ಲಿ ಬೆಳೆದಿದ್ದರೂ ನನಗೆ ಕೀಳರಿಮೆ ಇತ್ತು. ನಮ್ಮ ‘ನಟನ’ ರಂಗಶಾಲೆಗೆ ವಿವಿಧ ರೀತಿಯ ಜನರು ಬರುತ್ತಿದ್ದರು. ಏನೇ ನೋವು, ದುಃಖವಿದ್ದರೂ ಅವರೆಲ್ಲಾ ರಂಗದಲ್ಲಿ ಮೈಮರೆಯುತ್ತಿದ್ದರು. ಖುಷಿಯಾಗಿರುತ್ತಿದ್ದರು. ಇದನ್ನೆಲ್ಲಾ ನೋಡಿದ ಮೇಲೆ ನನಗೂ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಹಂಬಲ ಮೂಡಿತು.

‘ಚೋರ ಚರಣದಾಸ’ ನಾಟಕ ಮಾಡುವಾಗ ಅದರಲ್ಲಿನ ಪ್ರಮುಖ ಪಾತ್ರಧಾರಿಯೊಬ್ಬರು ಕೈಕೊಟ್ಟರು. ಆಗ ಆ ಪಾತ್ರ ಮಾಡುವ ಅವಕಾಶ ನನ್ನದಾಯಿತು. ಅದೂ ಒಂದೇ ದಿನದಲ್ಲಿ ಆ ಪಾತ್ರಕ್ಕೆ ನಾನು ಸಿದ್ಧವಾಗಬೇಕಿತ್ತು. ರಿಹರ್ಸಲ್ ನೋಡಿ ಅನುಭವವಿದ್ದ ನಾನು ಧೈರ್ಯದಿಂದ ತಯಾರಾದೆ. ನಾಟಕವೂ ಚೆನ್ನಾಗಿ ಮೂಡಿಬಂತು. ಅಂದಿನಿಂದ ರಂಗದ ಮೇಲೆ ತೆರೆದುಕೊಳ್ಳಲು ಆತ್ಮವಿಶ್ವಾಸ ಬಂತು. ಅಂದಿನಿಂದ ರಂಗಭೂಮಿಯೇ ನನ್ನ ನೆಚ್ಚಿನ ಕ್ಷೇತ್ರವಾಯಿತು.

ಮಂಡ್ಯ ರಮೇಶ್ ಮಗಳು ಅನ್ನುವ ಕಾರಣಕ್ಕೆ ಏನಾದರೂ ರಿಯಾಯ್ತಿ ಇರುತ್ತಿತ್ತೇ?

ಅಯ್ಯೋ ಖಂಡಿತಾ ಇಲ್ಲ ಕಣ್ರೀ. ಕೆಲವೊಮ್ಮೆ ನಾನು ನಾಟಕದ ತರಗತಿಗಳಿಗೆ ಹೇಳಿದ ಸಮಯಕ್ಕೆ ಹೋಗುತ್ತಿರಲಿಲ್ಲ. ಆಗ ಅಪ್ಪ ಬೇರೆಯವರಿಗಿಂತ ನನಗೆ ಹೆಚ್ಚೇ ಶಿಕ್ಷೆ ಕೊಟ್ಟಿದ್ದಾರೆ. ಗಂಟೆಗಟ್ಟಲೇ ರಂಗಶಾಲೆಯ ಹೊರಗೆ ನಿಲ್ಲಿಸಿದ್ದಾರೆ. ಮಗಳು ಅನ್ನುವ ಯಾವ ರಿಯಾಯ್ತಿ ನನಗೆ ಸಿಕ್ಕಿಲ್ಲ. ದಶಕದಿಂದ ರಂಗಭೂಮಿಯಲ್ಲಿದ್ದರೂ ನನಗೆ ಮುಖ್ಯಪಾತ್ರಗಳನ್ನು ಕೊಡುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಪ್ರಧಾನ ಪಾತ್ರಗಳು ಸಿಗುತ್ತಿವೆ. ಅದೂ ಕೆಲವೊಮ್ಮೆ ನಟರು ಕೈಕೊಟ್ಟಾಗ!. ಅಂಥ ಸಂದರ್ಭದಲ್ಲಿ ನಮ್ಮ ಸಾಮರ್ಥ್ಯ ತೋರಿಸಬೇಕು ಅನ್ನೋದು ನನ್ನ ನಂಬಿಕೆ.

ಇಂದಿನ ಯುವಜನರು ಸಿನಿಮಾದಲ್ಲಿ ನಟಿಸಲು ಹಾತೊರೆಯುವಾಗ ನೀವು ರಂಗಭೂಮಿಯನ್ನೇ ಏಕೆ ಆಯ್ಕೆ ಮಾಡಿಕೊಂಡ್ರಿ?

ಸಿನಿಮಾದ ಬಗ್ಗೆ ನನಗೆ ಒಲವಿಲ್ಲ ಅಂತಲ್ಲ. ಆದರೆ ರಂಗಭೂಮಿಗೆ ಏಕತಾನತೆಯನ್ನು ಮುರಿಯುವ ಗುಣವಿದೆ. ನನ್ನ ಸ್ನೇಹಿತರೆಲ್ಲಾ ತಮ್ಮ ವೃತ್ತಿಯಲ್ಲಿನ ಕಷ್ಟ–ಸುಖಗಳನ್ನು ಹೇಳಿಕೊಳ್ಳುವಾಗ, ರಂಗಭೂಮಿ ಅದಕ್ಕಿಂತ ಭಿನ್ನ ಅನಿಸಿತು. ಇಲ್ಲಿ ಪ್ರತಿ ಕೆಲಸವನ್ನೂ ಸೃಜನಶೀಲವಾಗಿ ಮಾಡಬಹುದು, ಅದೂ ಮನಸಿಗೆ ಹಿತವಾಗುವಂತೆ. ಯಾವುದೇ ಕಟ್ಟುಪಾಡುಗಳಿಲ್ಲ. ಮುಖ್ಯವಾಗಿ ಯಾವುದೇ ಕ್ರಿಯೆಗೆ ಪ್ರತಿಕ್ರಿಯೆ ಕೊಡುವುದನ್ನು ರಂಗಭೂಮಿ ಕಲಿಸುತ್ತೆ. ಇದಕ್ಕಿಂತ ಖುಷಿಯ ಸಂಗತಿ ಏನಿದೆ? ಹಾಗಾಗಿ, ರಂಗಭೂಮಿಯನ್ನೇ ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಂಡೆ.

ಸ್ಟೇಜ್ ಹತ್ತುವಾಗ ಈಗಲೂ ಭಯವಾಗುತ್ತಾ?

(ನಗು)... ಹೌದು. ಎಷ್ಟೇ ಸಿದ್ಧತೆ, ರಿಹರ್ಸಲ್ ಮಾಡಿದ್ದರೂ ಈ ಕ್ಷಣಕ್ಕೂ ವೇದಿಕೆ ಹತ್ತುವ ಮುನ್ನ ನನ್ನ ಹೃದಯ ಜೋರಾಗಿ ಬಡಿದುಕೊಳ್ಳುತ್ತೆ. ಅತಿ ಆತ್ಮವಿಶ್ವಾಸ ನನಗಿನ್ನೂ ಬಂದಿಲ್ಲ. ಆದರೆ, ಒಮ್ಮೆ ವೇದಿಕೆ ಹತ್ತಿದ ಮೇಲೆ ಆ ಭಯವೆಲ್ಲಾ ಹೋಗುತ್ತೆ. ರಂಗದಲ್ಲಿ ತಲ್ಲೀನಳಾಗುತ್ತೇನೆ.

ನಟನೆಯ ಜತೆಗೆ ರಂಗಗೀತೆಗಳನ್ನೂ ಹಾಡುತ್ತೀರಿ...

ಹೌದು. ನನಗೆ ಮೊದಲಿನಿಂದಲೂ ಸಂಗೀತದ ಬಗ್ಗೆ ಒಲವಿತ್ತು. ಆದರೆ, ಶಾಸ್ತ್ರೀಯವಾಗಿ ಕಲಿಯಲು ಆಗಲಿಲ್ಲ. ಬಾಲ್ಯದಲ್ಲಿ ನಾನು ನಡೆಯಲು ಕಲಿಯುವ ಮುನ್ನವೇ ರೈಲಿನ ಶಬ್ದ ಅನುಕರಣೆ ಮಾಡುತ್ತಿದ್ದನಂತೆ! ದೊಡ್ಡವಳಾದ ಮೇಲೆ ನಟನೆಯ ಜತೆಗೆ ರಂಗ ಸಂಗೀತದತ್ತಲೂ ಮೋಹವುಂಟಾಯಿತು. ‘ನಟನ’ದಲ್ಲಿ ಪಾತ್ರದ ಜತೆಗೆ ನಟರು ಹಾಡುವುದನ್ನೂ ಕಲಿಯಬೇಕು. ‘ರಜಾ–ಮಜಾ’ದ ಶಿಬಿರಗಳಂತೂ ಈ ನಿಟ್ಟಿನಲ್ಲಿ ನನಗೆ ತುಂಬಾ ಸಹಾಯ ಮಾಡಿತು.

ನನಗೆ ರಂಗಗಾಯನವಷ್ಟೇ ಅಲ್ಲ. ಸುಗಮ ಸಂಗೀತವೂ ಗೊತ್ತು. ರಾಜು ಅನಂತಸ್ವಾಮಿ ನನಗೆ ಮಾದರಿ. ಅವರು ನಮ್ಮನೆ ಎದುರಿನ ಮನೆಯಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದ ದಿನಗಳಲ್ಲಿ ನಾನಿನ್ನೂ ಕುಂಟಾಬಿಲ್ಲೆ ಆಡುವ ಹುಡುಗಿ. ಎಷ್ಟೋ ಸಾರಿ ಅವರು ನನಗೆ ಸಂಗೀತ ಕಲಿಸಲು ಪ್ರಯತ್ನಪಟ್ಟರು. ಆದರೆ, ಅದು ಸಾಧ್ಯವೇ ಆಗಲಿಲ್ಲ.

ಹಿಂದೆ ಕಂಪನಿ ನಾಟಕಗಳಲ್ಲಿ ಸಂಗೀತವೇ ಪ್ರಧಾನವಾಗಿರುತ್ತಿತ್ತು. ಕಂಪನಿ ಶೈಲಿಯ ರಂಗಗೀತೆಗಳನ್ನೂ ಹಾಡ್ತೀರಾ?

ಹೌದು. ವೃತ್ತಿ ನಾಟಕ ಕಂಪನಿಗಳಲ್ಲಿ ಅಂದು ಶಾಸ್ತ್ರೀಯ ಸಂಗೀತವೇ ಪ್ರಧಾನವಾಗಿತ್ತು. ಅಪ್ಪ ಈ ಬಗ್ಗೆ ನನಗೆ ಪರಿಚಯ ಮಾಡಿಕೊಟ್ಟಿದ್ದಾರೆ. ‘ಸುಭದ್ರಾ ಕಲ್ಯಾಣ’ ನಾಟಕದಲ್ಲಿ ನನ್ನದು ಸುಭದ್ರಾ ಪಾತ್ರ. ಆ ಪಾತ್ರಕ್ಕೆ ಕಂಪನಿ ಶೈಲಿಯ ರಂಗಗೀತೆ  ಹಾಡುವುದು ಅಗತ್ಯವಾಗಿತ್ತು. ಆಗ ಹಿರಿಯ ರಂಗಗಾಯಕ ಆರ್. ಪರಮಶಿವನ್ ಅವರಿಂದ ಸಾಕಷ್ಟು ರಂಗಗೀತೆಗಳನ್ನು ಕಲಿತೆ. ಅವರು 15 ವರ್ಷಗಳಿಂದ ‘ನಟನ’ದಲ್ಲಿ ವೃತ್ತಿ ರಂಗ ಸಂಗೀತವನ್ನು ಹೇಳಿಕೊಡುತ್ತಿದ್ದಾರೆ.

ನಿಮ್ಮ ಹಾಡಿನ ಶೈಲಿಯಲ್ಲಿ ಬಿ.ಜಯಶ್ರೀ ಅವರ ಅನುಕರಣೆಯಿದೆ ಅನಿಸುವುದಿಲ್ಲವೇ?

ಈ ಮಾತುಗಳನ್ನು ನಾನು ತುಂಬಾ ಸಲ ಕೇಳಿದ್ದೇನೆ. ಬಿ.ಜಯಶ್ರೀ ಅವರಂಥ ದೊಡ್ಡವರೊಂದಿಗೆ ಹೋಲಿಸುವುದೇ ದೊಡ್ಡ ವಿಚಾರ. ‘ತಾಯೇ’ ಹಾಡಿಗಾಗಿ ಅವರು ತುಂಬಾ ಜನಪ್ರಿಯರು. ಈ ಹಾಡನ್ನು ಯಾರೇ ಹಾಡಿದರೂ ಹೋಲಿಕೆ ಇದ್ದದ್ದೇ. ಅರಂಭದಲ್ಲಿ ಆ ಹಾಡನ್ನು ಹಾಡುವುದೇ ಬೇಡ ಅಂದುಕೊಳ್ಳುತ್ತಿದ್ದೆ. ಆದರೆ, ಅದು ನನ್ನ ನೆಚ್ಚಿನ ರಂಗಗೀತೆ. ಅದನ್ನು ಎನರ್ಜಿಟಿಕ್ ಆಗಿ ಹಾಡುವುದು ಗಾಯಕರಿಗೆ ಸವಾಲು. ನಮಗಿಷ್ಟವಾದ ಹಾಡನ್ನು ಹಾಡುವುದನ್ನು ಏಕೆ ಬಿಡಬೇಕು ಅಂತ ಆ ಹಾಡನ್ನು ಹಾಡುತ್ತೇನೆ. ರಂಗಭೂಮಿಯಲ್ಲಿ ನಾನಿನ್ನೂ ಕಲಿಯವುದು ಸಾಕಷ್ಟಿದೆ. ನನ್ನದೇ ಆದ ಛಾಪು ಮೂಡಿಸುವ ಆಸೆ ಇದ್ದೇ ಇದೆ. ಹೊಸ ಪ್ರಯೋಗಗಳನ್ನು ಮಾಡುವಾಸೆಯೂ ಇದೆ.

ಸಿನಿಮಾ ರಂಗದಲ್ಲಿ ಯಶಸ್ಸು ಆಗಲಿಲ್ಲವೇಕೆ?

ಯಶಸ್ಸು ಆಗಲಿಲ್ಲ ಅನ್ನೋದಕ್ಕೆ ನಾನು ಅದರ ಕಡೆಗೆ ಹೆಚ್ಚು ಗಮನ ಹರಿಸಲಿಲ್ಲ ಅಂತಲೇ ಹೇಳಬಹುದು. ತುಂಬಾ ಅವಕಾಶಗಳು ಬಂದರೂ ಒಪ್ಪಿಕೊಳ್ಳಲಿಲ್ಲ. ಸಿನಿಮಾ ರಂಗದಲ್ಲಿ ಯಶಸ್ಸು ಪಡೆಯಲು ನಾನೇ ಮುನ್ನುಗ್ಗಲಿಲ್ಲ. ರಂಗಭೂಮಿಯೇ ನನ್ನ ಮೊದಲ ಆದ್ಯತೆ. ಹಾಗಂತ ಸಿನಿಮಾದ ಬಗ್ಗೆ ನಿರ್ಲಕ್ಷ್ಯವಿಲ್ಲ. ಮನಸಿಗೆ ಇಷ್ಟವಾಗುವ ಪಾತ್ರಗಳನ್ನೇ ನಾನು ಒಪ್ಪಿಕೊಳ್ಳೋದು. ಅಪ್ಪ ಯಾವುದನ್ನೂ ನನ್ನ ಮೇಲೆ ಹೇರುವುದಿಲ್ಲ. ಸಲಹೆ ಕೊಡುತ್ತಾರೆ. ನಿರ್ಧಾರ ತೆಗೆದುಕೊಳ್ಳುವುದು ನಾನೇ.

**
* ತುಂಬಾ ಸವಾಲೆನಿಸಿದ ಪಾತ್ರ ಯಾವುದು?

ಒಮ್ಮೆ ರಂಗಕರ್ಮಿ ಪ್ರಸನ್ನ ಸರ್ ಅವರು ಮೈಸೂರು ರಂಗಾಯಣಕ್ಕೆ ‘ಹ್ಯಾಮ್ಲೆಟ್’ ನಾಟಕ ಮಾಡಿಸುತ್ತಿದ್ದರು.  ಅದುವರೆಗೆ ಅದರ ನಾಯಕಿ ಒಫಿಲಿಯಾ ಪಾತ್ರವನ್ನು ನನ್ನಮ್ಮನೇ ಮಾಡುತ್ತಿದ್ದರು. ಆದರೆ, ಪ್ರಸನ್ನ ಸರ್ ಇದ್ದಕ್ಕಿದ್ದಂತೆ ನನ್ನನ್ನು ಕರೆಸಿ, ಈ ಪಾತ್ರವನ್ನು ನೀನೇ ಮಾಡಬೇಕು ಅಂದುಬಿಟ್ಟರು. ನನಗೋ ಮೊದಲೇ ಭಯ. ನಾಟಕಕ್ಕೆ ಉಳಿದಿರೋದು ಬರೀ ಮೂರು ದಿನ ಮಾತ್ರ.

ಪ್ರಸನ್ನ ಅವರ ನಂಬಿಕೆ ಹುಸಿಗೊಳಿಸಬಾರದು ಎಂದು ಪಾತ್ರಕ್ಕೆ ಒಪ್ಪಿಕೊಂಡೆ. ಮೂರು ದಿನವೂ ಪ್ರಸನ್ನ ಅವರೇ ಅಭಿಯನದ ಪಟ್ಟುಗಳನ್ನು ಕಲಿಸಿಕೊಟ್ಟರು. ಅಂದಂತೂ ಮರೆಯಲಾಗದ್ದು. ಅಮ್ಮನ ಸಹಕಾರವೂ ದೊರೆಯಿತು. ಕೊನೆಗೂ ‘ಹ್ಯಾಮ್ಲೆಟ್‌’ನಲ್ಲಿ ಅಮ್ಮನ ಸ್ನೇಹಿತರ ಜತೆ ಮುಖ್ಯ ಪಾತ್ರವನ್ನು ಮಾಡಿದೆ. ಮಜವೆಂದರೆ ಹ್ಯಾಮ್ಲೆಟ್ ಪಾತ್ರಧಾರಿಗೂ ನನಗೂ 40 ವರ್ಷ ವಯಸ್ಸಿನ ಅಂತರ. ಅಂಥ ಹಿರಿಯ ಕಲಾವಿದರ ಜತೆ ಅಭಿನಯಿಸುವುದು ದೊಡ್ಡ ಸವಾಲಾಗಿತ್ತು. ಈ ನಾಟಕದ ಮೂರು ಷೋಗಳು ನಡೆದವು. ರವೀಂದ್ರ ಕಲಾಕ್ಷೇತ್ರದಲ್ಲೂ ಅದನ್ನು ಅಭಿಯಸಿದೆವು. ಇಂದಿಗೂ ಜನರು ಆ ಪಾತ್ರದಿಂದ ನೆನಪಿಸಿಕೊಳ್ಳುತ್ತಾರೆ ಅನ್ನೋದು ಖುಷಿಯ ಸಂಗತಿ.
**
 ದಿಶಾ ಬಗ್ಗೆ ಒಂದಿಷ್ಟು

* ಏನಿಷ್ಟ: ಕುಚಲಕ್ಕಿ ಅನ್ನ, ತುಪ್ಪ, ಉಪ್ಪಿನಕಾಯಿ

* ಓದು: ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ, ಎಸ್.ಎಲ್.ಭೈರಪ್ಪ.
 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry