ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 8 ಮೇ 2018, 19:30 IST
ಅಕ್ಷರ ಗಾತ್ರ

ವಿಜಯಲಕ್ಷ್ಮಿ, ಊರುಬೇಡ
ನಾನು 2015ರಲ್ಲಿ SBI ನಲ್ಲಿ ₹ 35 ಲಕ್ಷ ಗೃಹಸಾಲ ತೆಗೆದುಕೊಂಡಿದ್ದೇನೆ. ನನ್ನ ಪ್ರಶ್ನೆ ಏನೆಂದರೆ ಈಗ ಅಸಲು ₹ 33.30 ಲಕ್ಷವಾಗಿದೆ. ಇದರಲ್ಲಿ ನಾನು ₹ 13.30 ಸಾಲ ಮರುಪಾವತಿಸಲು ರೆಡಿ ಇದ್ದೇನೆ. ಈ ಬಗ್ಗೆ ನಮ್ಮ ಶಾಖೆಯಲ್ಲಿ ವಿಚಾರಿಸಿದಾಗ ₹ 13.30 ಸಾಲ ತೀರಿಸಿದ ನಂತರ ಉಳಿದ ₹ 20 ಲಕ್ಷಕ್ಕೆ ಬ್ಯಾಂಕಿನ ಅಧಿಕಾರಿಗಳಿಂದ ಮೊದಲಿನ ಹಾಗೆ  Validation ಮಾಡಿಸಬೇಕಾಗುತ್ತದೆ ಎನ್ನುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ.  Validation ಮಾಡಿದರೆ ಮೊದಲ ಒಂದಿಷ್ಟು ವರ್ಷ ಬಡ್ಡಿ ಮುರಿಯುತ್ತಾರೆ. ನಂತರ ಅಸಲು ಕಡಿಮೆ ಆಗುತ್ತದೆ ಎನ್ನುತ್ತಾರೆ. ನಾನೇನು ಮಾಡಲಿ?

ಉತ್ತರ: ಗೃಹಸಾಲ ಪಡೆದಾಗ EMI ಪ್ರಾರಂಭವಾಗುತ್ತದೆ ಹಾಗೂ ಇಲ್ಲಿ ಬರುವ ಮೊತ್ತದಲ್ಲಿ ಮೊದಲ ಕೆಲವು ವರ್ಷಗಳ ಕಾಲ ಸಿಂಹಪಾಲು ಬಡ್ಡಿಗೆ ಜಮಾ ಆಗುತ್ತದೆ ಹಾಗೂ ಕ್ರಮೇಣ ಅಸಲು ಕಡಿಮೆ ಆಗುತ್ತದೆ. ಇದು ಸರಿಯಾದ ಮಾ‌ರ್ಗ ಹಾಗೂ ಇದರಲ್ಲಿ ಮೋಸ ಇಲ್ಲ.

ನಿಮ್ಮ ಪ್ರಶ್ನೆ ನನಗೆ ತಿಳಿದಂತೆ, ಬ್ಯಾಂಕಿನವರು ₹ 13.30 ಲಕ್ಷ ಕಟ್ಟಿಸಿಕೊಂಡು ಉಳಿಯುವ ₹ 20 ಲಕ್ಷಕ್ಕೆ ಹೊಸ ಸಾಲವೆಂದು ಪರಿಗಣಿಸಿ, ನಾನು ಮೇಲೆ ವಿವರಿಸಿದಂತೆ ಈ ಹೊಸ ಸಾಲದ EMI ಗಳಲ್ಲಿ ಮೊದಲು ಬಡ್ಡಿಗೆ ಹೆಚ್ಚಿನ ಮೊತ್ತ ಜಮಾ ಮಾಡಿಕೊಳ್ಳುತ್ತಾರೆ.

ಯಾವುದೇ ಸ್ಥಿರ ಆಸ್ತಿಯ ಪತ್ರ (Property Documents) ಪಡೆದು ಅಡಮಾನ ಸಾಲ ಕೊಡುವಾಗ ವಕೀಲರಿಂದ ಪರಿಶೀಲಿಸುವುದು ಹಾಗೂ Engineer ಗಳಿಂದ Valuation ಮಾಡಿಸುವುದು ಕ್ರಮಬದ್ಧವಾಗಿದೆ. ಆದರೆ ನೀವು ವಿವರಿಸಿದಂತೆ, ಒಮ್ಮೆ ಈ ಕೆಲಸ ಪ್ರಥಮ ಸಾಲ ಕೊಡುವಾಗಲೇ ಆಗಿದ್ದು, ಮತ್ತೊಮ್ಮೆ ಮಾಡಿಸುವ ಅವಶ್ಯವಿರಲಾರದು. ಆದರೆ ಆಯಾ  ಬ್ಯಾಂಕುಗಳು ಅನುಸರಿಸುವ ಪದ್ಧತಿಯನ್ನು ಗ್ರಾಹಕರು ಒಪ್ಪಬೇಕಾಗುತ್ತದೆ.
***
ಮೋಹನ್ ಕುಮಾರ್. ಜಿ.ಎನ್., ಧಾರವಾಡ 
LIC policy ಪಡೆಯಲು SSLC ಆಗಿದ್ದರೆ ಸಾಕಾ?

ಉತ್ತರ: ಜೀವ ವಿಮೆ ಮಾಡಿಸಲು, ವಿದ್ಯಾರ್ಹತೆ ಎಂಬುದಿಲ್ಲ. ನೀವು SSLC ಆಗಿದ್ದರೆ ಒಳ್ಳೆಯದೇ. ಪಾಲಿಸಿ ಮಾಡಿಸುವ ಮುನ್ನ ಜನನ ತಾರೀಕಿನ ಪುರಾವೆ ಒದಗಿಸಬೇಕು.

ಜೀವವಿಮೆಯಲ್ಲಿ ವಿಮೆಗೆ ಹೆಚ್ಚಿನ ಪ್ರಾಧಾನ್ಯ  ಇರುತ್ತದೆ. ಎಲ್ಲಾ ತರಹದ ಪಾಲಿಸಿಗಳಲ್ಲಿ ಅವಧಿಗೆ ಮುನ್ನ 5, 15, 20 ವರ್ಷಗಳಾಗುತ್ತಲೇ ಪಡೆಯುವ ಪಾಲಿಸಿ ತುಂಬಾ ಜನಪ್ರಿಯ (Most popular) ಆಗಿದೆ. ಇದನ್ನು Money Back ಪಾಲಿಸಿ ಎಂಬುದಾಗಿ ಕರೆಯುತ್ತಾರೆ. ಇಲ್ಲಿ ಇರುವ ವಿಶೇಷತೆ ಏನೆಂದರೆ ಸ್ವಲ್ಪ ವರ್ಷಗಳ ಅಂತರದಲ್ಲಿ ಹಣ ಸಿಗುವುದರಿಂದ ಮುಂದಿನ ಪ್ರೀಮಿಯಂ ಹಣ ಕಟ್ಟಲು ಅನುಕೂಲವಾಗುತ್ತದೆ.  ವಿಮೆ ಮಾಡಿದ ವ್ಯಕ್ತಿಗೆ ವಿಮಾ ಅವಧಿ ಮುಗಿಯುವಾಗ ಬದುಕಿದ್ದರೂ ಹಣ ದೊರೆತು, ಅಕಾಲ ಮರಣಕ್ಕೀಡಾದಾಗ ಸಹಜವಾಗಿ ಕುಟುಂಬಕ್ಕೆ ವಿಮೆ ಮೊತ್ತ ದೊರೆಯುವಂತಿರಬೇಕು.
**
ಡಾ. ಮುರಳೀಧರ, ತೀರ್ಥಹಳ್ಳಿ
ಸೆಕ್ಷನ್ 80TTE ಅಡಿಯಲ್ಲಿ ಉಳಿತಾಯ ಖಾತೆಯಲ್ಲಿ ಪಡೆಯುವ ಗರಿಷ್ಠ ಬಡ್ಡಿ ತೆರಿಗೆ ವಿನಾಯಿತಿ ಹೊಂದಿದ್ದು, ಈ ವಿನಾಯಿತಿ FDಗೂ ಅನ್ವಯವಾಗುತ್ತಿದೆಯೇ?

ಉತ್ತರ: ಸೆಕ್ಷನ್ 80TTA (TTE ಆಗಿರುವುದಿಲ್ಲ) ಉಳಿತಾಯ ಖಾತೆಗೆ ಮಾತ್ರ ಸಂಬಂಧಿಸಿದ್ದು, ಈ ಸೌಲತ್ತು FD ಅಥವಾ ಇನ್ನಿತರ ಠೇವಣಿಗಳ ಬಡ್ಡಿಗೆ ಅನ್ವಯವಾಗುವುದಿಲ್ಲ. ಸೆಕ್ಷನ್ 80TTA ಗರಿಷ್ಠ ಮಿತಿ ₹ 10,000. PF, GPF, PPF ಖಾತೆಗಳಿಗೆ ಬರುವ ಬಡ್ಡಿ ಸೆಕ್ಷನ್ 10 (11) ಆಧಾರದ ಮೇಲೆ ಸಂಪೂರ್ಣ ರಿಯಾಯಿತಿ ಹೊಂದಿದೆ.

ನೀವು ಹಿರಿಯ ನಾಗರಿಕರಾದಲ್ಲಿ ತಾ. 1–4–2018ರ ನಂತರ ಪಡೆಯುವ ಬ್ಯಾಂಕ್– ಅಂಚೆ ಕಚೇರಿ ಠೇವಣಿಯಲ್ಲಿ ಗರಿಷ್ಠ ₹ 50,000 ಸೆಕ್ಷನ್ 80TTB ಆಧಾರದ ಮೇಲೆ ವಿನಾಯಿತಿ ಪಡೆಯಬಹುದು. (ನಿಮ್ಮ ಒಟ್ಟು ಆದಾಯದಲ್ಲಿ ಹೀಗೆ ಬರುವ ಠೇವಣಿ ಮೇಲಿನ ಬಡ್ಡಿಯಲ್ಲಿ ಗರಿಷ್ಠ ₹  50,000 ಕಳೆದು ತೆರಿಗೆ ಸಲ್ಲಿಸಬಹುದು)
**
ದೀಪಕ್‌ಕುಮಾರ್, ಶಿವಮೊಗ್ಗ
ವಯಸ್ಸು 35, ದ್ವಿತೀಯ ದರ್ಜೆ ಸಹಾಯಕ. ಜಿಲ್ಲಾ ಪಂಚಾಯತ್ ಆಫೀಸು. ನನ್ನ ವೇತನ ₹ 35,408. ಕಡಿತ PT 200, EGIS 240, GPF 1000, KGID 1,500, Postal RD 189 ಒಟ್ಟು ₹ 3009. ಕೈಗೆ ₹ 32,399 ಬರುತ್ತದೆ. ಇದರಲ್ಲಿ ಮನೆ ಖರ್ಚು ₹ 15,000 ಕಳೆದು ₹ 17,399 ಉಳಿಯುತ್ತದೆ. ನನ್ನ ಸಂಸಾರ: ನಾನು, ಹೆಂಡತಿ ಹಾಗೂ ಒಂದು ವರ್ಷದ ಮಗ. ತೆರಿಗೆ ಉಳಿಸಲು ಹಾಗೂ ಉತ್ತಮ ಉಳಿತಾಯಕ್ಕೆ ಮಾರ್ಗದರ್ಶನ ಮಾಡಿ?

ಉತ್ತರ: ಆದಾಯ ತೆರಿಗೆ ಉಳಿಸಲು ಸೆಕ್ಷನ್ 80C  ಆಧಾರದ ಮೇಲೆ ಗರಿಷ್ಠ ₹  1.50 ಲಕ್ಷ ಉಳಿತಾಯ ಮಾಡಿ. Postal RD ಹಾಗೂ PT  ಬಿಟ್ಟು, ನೀವು ಈ ಯೋಜನೆಯಲ್ಲಿ ಈಗ ವಾರ್ಷಿಕವಾಗಿ
₹  32,880 ತೊಡಗಿಸುತ್ತಿದ್ದೀರಿ.

ನೀವು ಕಟ್ಟುವ GPF ಮುಖಾಂತರ ಅಥವಾ ಹೊಸತಾಗಿ ಪ್ರಾರಂಭಿಸಿ PPF ಖಾತೆಯಲ್ಲಿ ತಿಂಗಳಿಗೆ ₹  10,000 ತುಂಬಿರಿ. ಈ ಉಳಿತಾಯದಲ್ಲಿ ಬಡ್ಡಿಗೆ ತೆರಿಗೆ ಇರುವುದಿಲ್ಲ.

80C ಹೊರತುಪಡಿಸಿ ವಾರ್ಷಿಕವಾಗಿ 80CCD (1B) ಆಧಾರದ ಮೇಲೆ, ನ್ಯಾಷನಲ್ ಪೆನ್ಶನ್ ಯೋಜನೆಯಲ್ಲಿ ₹ 50,000 ತುಂಬಿರಿ. ಇವೆರಡರಿಂದ ₹ 2 ಲಕ್ಷ ನಿಮ್ಮ ಒಟ್ಟು ಆದಾಯದಿಂದ ಕಳೆದು ಸಲ್ಲಿಸಬಹುದು. ಈ ಮಾರ್ಗದಿಂದ ನಿಮ್ಮ ತೆರಿಗೆ ಹೊರೆ ಬಹಳಷ್ಟು ಕಡಿಮೆ ಆಗುತ್ತದೆ. ಈ  ಹೂಡಿಕೆಗಳಲ್ಲಿ ಭದ್ರತೆ ಹಾಗೂ ಖಚಿತ ವರಮಾನ ಕೂಡಾ ಇದೆ. ಜೊತೆಗೆ ಜೀವನದ ಸಂಜೆಯಲ್ಲಿ ದೊಡ್ಡ ಮೊತ್ತ ನಿಮ್ಮದಾಗುತ್ತದೆ.

ಇನ್ನು ಉಳಿಯುವ ಅಲ್ಪ ಸ್ವಲ್ಪ ಹಣವನ್ನು ವಾರ್ಷಿಕ ಆರ್.ಡಿ. ಮಾಡಿ, ಬಂಗಾರ ಕೊಳ್ಳಿರಿ ಹಾಗೂ ನಿಮ್ಮ ಮಗುವಿನ ಮದುವೆಗೆ ಮೀಸಲಾಗಿಡಿ. ಈ ಪ್ರಕ್ರಿಯೆ ನಿರಂತರವಾಗಿರಲಿ. ಈ ಎಲ್ಲಾ ಆರ್ಥಿಕ ಪ್ಲ್ಯಾನ್ ನಿಮಗೆ ಹೇಳಿ ಮಾಡಿಸಿದಂತಿದೆ.
ತಪ್ಪದೇ ಅನುಸರಿಸಿರಿ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.
**
ಗೋಪಾಲ್. ಐ., ರಾಯಚೂರು
ನಾನು ಎಸ್.ಸಿ. ಪಂಗಡಕ್ಕೆ ಸೇರಿದವನು. ನಾನು ನಿಮ್ಮ ಅಭಿಮಾನಿ. ದಯವಿಟ್ಟು ನನಗೆ ಜೀವನದಲ್ಲಿ ಮುಂದೆ ಬರಲು, ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಮಾರ್ಗದರ್ಶನ ಮಾಡಿರಿ. ನನ್ನ ಪ್ರಶ್ನೆ: ನಾನು ಬಿ.ಬಿ.ಎಂ. ಮುಗಿಸಿದ್ದೇನೆ. ವಯಸ್ಸು 30. ಅವಿವಾಹಿತ. ನಾನು ಮತ್ತು ಇನ್ನಿಬ್ಬರು ಗೆಳೆಯರು ಸೇರಿ ಸಿಮೆಂಟ್ ಬ್ರಿಕ್ಸ್ ಫ್ಯಾಕ್ಟರಿ ಲೀಸ್ ಮೇಲೆ ಪಡೆದು ವ್ಯವಹಾರ ಮಾಡಬೇಕೆಂದಿದ್ದೇವೆ. 3 ಜನ ಸೇರಿ ಜಂಟಿ ಖಾತೆ ತೆರೆಯಬಹುದೇ, ಉಳಿತಾಯ ಅಥವಾ ಚಾಲ್ತಿ ಖಾತೆ ಯಾವುದು ತೆರೆಯಬೇಕು. ತೆರಿಗೆ ವಿನಾಯಿತಿ ಹೇಗೆ, ಮೂರು ಜನರಿಂದ ಸಾಲ ಹೇಗೆ ಪಡೆಯಬೇಕು. ಪಾರ್ಟನರ್‌ಶಿಪ್‌ ಒಳ್ಳೆಯದೇ ಹಾಗೂ ನಾವು ಎಸ್.ಸಿ. ಗ್ರೂಪಿಗೆ ಸೇರಿರುವುದರಿಂದ, ನಮ್ಮಂತಹ ನಿರುದ್ಯೋಗಿಗಳಿಗೆ ಈ ವ್ಯವಹಾರ ಮಾಡಲು ಯಾವ ರೀತಿಯ ಸೌಲತ್ತು ಸಿಗುತ್ತದೆ. ಎಲ್ಲಾ ವಿಚಾರ ಸವಿಸ್ತಾರವಾಗಿ ತಿಳಿಸಿ.

ಉತ್ತರ: ನೀವು ಪದವೀಧರರು ಹಾಗೂ ಎಸ್.ಸಿ. ಪಂಗಡದವರಾದ್ದರಿಂದ ನಿಮ್ಮಂತಹ ನಿರುದ್ಯೋಗಿಗಳಿಗೆ ಸ್ವಂತ ಉದ್ಯೋಗ ಮಾಡಲು ತುಂಬಾ ಸಾಲ ಸೌಲತ್ತುಗಳನ್ನು ಸರ್ಕಾರ ಒದಗಿಸುತ್ತದೆ. ಎಸ್.ಸಿ. ಅಥವಾ ಇತರರಿಗೂ ಬ್ಯಾಂಕುಗಳು Mudra ಯೋಜನೆಯಲ್ಲಿ ಅವರವರ ಅವಶ್ಯಕತೆಗನುಗುಣವಾಗಿ ಗರಿಷ್ಠ ₹ 10 ಲಕ್ಷಗಳ ತನಕ ಸಾಲ ನೀಡುತ್ತವೆ. ಆದರೆ ಇಲ್ಲಿ ಸಾಲಕ್ಕೆ ಅನುದಾನ (Subsidy) ಇಲ್ಲ. ನೀವು S.C., ST Corporation, Govt Of Karnataka ಇಲ್ಲಿ ಸಾಲ ಪಡೆದರೆ ಸಾಲಕ್ಕೆ ಸಬ್ಸಿಡಿ ದೊರೆಯುತ್ತದೆ. ಸಬ್ಸಿಡಿ ಎಂದರೆ ರಿಯಾಯ್ತಿ ಧನ. ವಾಪಸು ಕೊಡುವ ಅವಶ್ಯವಿಲ್ಲ.

ಎಲ್ಲಾ ರೀತಿಯಿಂದ ಇದು ನಿಮಗೆ ಅನುಕೂಲ. ಇಲ್ಲಿ ವಿಚಾರಿಸಿ. ನೀವು ಸಾಲ ಪಡೆಯುವ ಮುನ್ನ ಒಂದು ಪ್ರಾಜೆಕ್ಟ್ ರಿಪೋರ್ಟ್ ಕೊಡಬೇಕಾಗುತ್ತದೆ. ಇದರಲ್ಲಿ ನೀವು ಮಾಡುವ ಉದ್ಯೋಗದ ವಿವರಣೆ, ಬೇಕಾಗುವ ಬಂಡವಾಳ ಈ ವಿಚಾರದಲ್ಲಿ ವಿವರಣೆ ನೀಡಬೇಕು. ರಾಯಚೂರಿನ ಚಾರ್ಟ್‌ರ್ಡ್ ಅಕೌಂಟೆಂಟ್ ಬಳಿ ಈ ವಿಚಾರ ತಿಳಿಸಿ ಮಾಡಿಸಿಕೊಳ್ಳಿ. ನೀವು ಮೂರೂ ಜನ ಸೇರಿ ಜಂಟಿ ಖಾತೆ (Joint Account) ಬ್ಯಾಂಕಿನಲ್ಲಿ ತೆರೆಯುವ ಅವಕಾಶವಿದೆ. ಇಂತಹ ಉದ್ಯೋಗ ಮಾಡುವಾಗ ಕಡ್ಡಾಯವಾಗಿ ಚಾಲ್ತಿ ಖಾತೆ (Current Account) ಯನ್ನೇ ತೆರೆಯಬೇಕು. ನೀವು ಪಾರ್ಟನರ್‌ಶೀಪ್‌ನಲ್ಲಿ ಮಾಡಿರಿ.

ಪಾರ್ಟನರ್‌ಶಿಪ್‌ ಡೀಡ್ ಮಾಡಿಸಿ, ರಿಜಿಸ್ಟ್ರಾರ್ ಆಫ್ ಫರ್ಮ್ಸ್ (Register of Firms) ನಲ್ಲಿ ನೋಂದಾಯಿಸಬೇಕಾಗುತ್ತದೆ. ಲಾಭ ನಷ್ಟ ಸಮನಾಗಿ ಹಂಚಿಕೊಳ್ಳಿ. ಈ ಎಲ್ಲ ಕೆಲಸ ಅಂದರೆ project Report ನಿಂದ Partnership deed Registration  ಕೆಲಸ ಚಾರ್ಟ್‌ರ್ಡ್ ಅಕೌಂಟೆಂಟರು ನಿಮಗೆ ಮಾಡಿ ಕೊಡುತ್ತಾರೆ.

ಸದ್ಯದ ಪರಿಸ್ಥಿತಿಯಲ್ಲಿ ತೆರಿಗೆ ಭಯವಿಲ್ಲ. ನಿಮಗೊಂದು ಕಿವಿಮಾತು. ನೀವು ಮಾಡುವ ಉದ್ಯೋಗದಲ್ಲಿ ಹೆಚ್ಚಿನ ಆಸಕ್ತಿ ಇರಲಿ. ಕಷ್ಟಪಟ್ಟು ದುಡಿದರೆ ಈ ಉದ್ಯೋಗದಲ್ಲಿ ಶೇ 25 ರಷ್ಟು ಕನಿಷ್ಠ ಲಾಭ ಪಡೆಯಬಹುದು. ಸಾಲ ಸಕಾಲದಲ್ಲಿ ತೀರಿಸಿ, ವ್ಯವಹಾರ ಇನ್ನೂ ದೊಡ್ಡದು ಮಾಡುವಲ್ಲಿ ಇನ್ನೂ ಹೆಚ್ಚಿನ ಸಾಲ ಪಡೆಯಬಹುದು. ನಿಮಗೆ ಶುಭವಾಗಲಿ.
**
ಮಧುಸೂದನ್. ಎಚ್.ಆರ್., ಬೆಂಗಳೂರು
ನಾನು ಪಿಂಚಣಿ ಪಡೆಯುವ ಹಿರಿಯ ನಾಗರಿಕ. ನೀವು ಬಹಳಷ್ಟು ಜನರಿಗೆ ಉಳಿತಾಯ ಮಾಡಲು ಪ್ರೇರಣೆ ಹಾಗೂ ಪ್ರಚೋದನೆ ಮಾಡುತ್ತೀರಿ. ಇದರಿಂದ ಅವಶ್ಯವಿರುವವರಿಗೆ ತುಂಬಾ ಉಪಕಾರವಾಗುತ್ತದೆ. ನಿಮಗೆ ಧನ್ಯವಾದಗಳು. ನನ್ನ ಪ್ರಶ್ನೆ: (1) ಪ್ರಧಾನಮಂತ್ರಿ ವಯೋ ವಂದನಾ ಯೋಜನೆ (PMVVY) ಯಲ್ಲಿ ಶೇ 8 ಬಡ್ಡಿ ಬರುತ್ತಿದ್ದು, ಈ ಯೋಜನೆ ನೀವು ಏತಕ್ಕಾಗಿ ಶಿಫಾರಸು ಮಾಡುತ್ತಿಲ್ಲ. ಈ ಯೋಜನೆಯಲ್ಲಿ ಏನಾದರೂ ಲೋಪದೋಷಗಳಿವೆಯೇ ತಿಳಿಯುತ್ತಿಲ್ಲ. ನಾನು ಬ್ಯಾಂಕ್ ಠೇವಣಿ ಅವಧಿ ಮುಗಿಯುತ್ತಲೇ ಅವುಗಳನ್ನು ಈ ಠೇವಣಿಗೆ ವರ್ಗಾಯಿಸಬೇಕೆಂದಿದ್ದೇನೆ. ನಿಮ್ಮ ಸಲಹೆ ತಿಳಿಸಿರಿ. (2) ನಾನು ಸೇವೆಯಲ್ಲಿದ್ದಾಗ LIC ಯವರ ಜೀವನ ಸುರಕ್ಷಾ ಪಾಲಿಸಿ ಮಾಡಿಸಿದ್ದೆ. ಈಗ ಅದರಿಂದ ಬರುವ ಹಣಕ್ಕೆ ತೆರಿಗೆ ವಿನಾಯಿತಿ ಇದೆಯೇ ತಿಳಿಸಿರಿ. (3) ನಾನು ಸ್ವಲ್ಪ ಹಣ NABARD Tax Free ಬಾಂಡ್‌ನಲ್ಲಿ ಹಾಕಿದ್ದು, ಇಲ್ಲಿ ಬರುವ ವಾರ್ಷಿಕ ಬಡ್ಡಿಯನ್ನು ಒಟ್ಟು ಆದಾಯಕ್ಕೆ ಸೇರಿಸಿ, ನಂತರ ವಿನಾಯಿತಿ ಅಡಿಯಲ್ಲಿ ತೋರಿಸಿ ತೆರಿಗೆ ಕಡಿಮೆ ಮಾಡಿಕೊಳ್ಳಬೇಕೇ?

ಉತ್ತರ: ಪ್ರಧಾನಮಂತ್ರಿ ವಯೊ ವಂದನಾ ಯೋಜನೆ ತುಂಬಾ ಚೆನ್ನಾಗಿದೆ. ಅದರಲ್ಲಿ ಲೋಪದೋಷಗಳಿಲ್ಲ. ಹಿರಿಯ ನಾಗರಿಕರಿಗೆ ಇದರ ಅವಧಿ 10 ವರ್ಷವಾದ್ದರಿಂದ ಇದರಿಂದ ಬಡ್ಡಿ ಸಿಗುತ್ತದೆ ಎನ್ನುವುದು ಮಾತ್ರ ಸಕಾರಾತ್ಮಕವಾಗಿದೆ. ಇಲ್ಲಿ ದ್ರವ್ಯತೆ ಇರುವುದಿಲ್ಲ (No Liquidity) ಇದೇ ವೇಳೆ ಅಂಚೆ ಕಚೇರಿ ಸೀನಿಯರ್ ಸಿಟಿಜನ್ ಠೇವಣಿ, ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯಬಹುದಾದರೂ ಕೂಡಾ ಶೇ 8.3 ಬಡ್ಡಿ ಬರುತ್ತದೆ. (ಇದು ಬದಲಾಗಬಹುದು) ಹಾಗೂ ಸೆಕ್ಷನ್ 80ಸಿ ಆಧಾರದ ಮೇಲೆ ವಿನಾಯಿತಿ ಪಡೆಯಬಹುದು. ಈ ಯೋಜನೆಯ ಗರಿಷ್ಠ ಮಿತಿ ₹ 15 ಲಕ್ಷ ಮಾತ್ರ.

ಮುಂದಿನ ಬಜೆಟ್ ಅವಧಿ (1–4–2018 = 31–3–2019) ರಲ್ಲಿ PMVVY  ಮಿತಿ ಕೂಡಾ ₹ 7.50 ಲಕ್ಷದಿಂದ ₹ 15 ಲಕ್ಷಕ್ಕೆ ಏರಿಸಲಾಗಿದೆ. ನೀವು ಯಾವುದು ಅನುಕೂಲವೋ ಅದನ್ನು ಆರಿಸಿಕೊಳ್ಳಿ. (2) ಜೀವನ್ ಸುರಕ್ಷಾ ಪಾಲಿಸಿ ಮಾಡಿಸಿದ ವರ್ಷ ಅಥವಾ ಪ್ರೀಮಿಯಂ ತುಂಬುವ ವರ್ಷಗಳು, ಮಾತ್ರ ಸೆಕ್ಷನ್ 80C ಆಧಾರದಲ್ಲಿ ವಿನಾಯಿತಿ ಪಡೆಯಲು ಸಾಧ್ಯ. ಇದರಿಂದ ನಂತರ ಅಂದರೆ ಈಗ ಬರುವ ಲಾಭಕ್ಕೆ ತೆರಿಗೆ ಕೊಡಬೇಕಾಗುತ್ತದೆ.

(3) ನಬಾರ್ಡ್ Tax Free Bondsನಲ್ಲಿ ಬರುವ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ನಿಮ್ಮ ಅನಿಸಿಕೆ ಸರಿ ಇದೆ. ಆದಾಯವನ್ನು ಒಟ್ಟು ಆದಾಯಕ್ಕೆ ಸೇರಿಸಿ ನಂತರ ವಿನಾಯಿತಿ ಅಡಿಯಲ್ಲಿ ಕಳೆದು ಉಳಿದ ಹಣಕ್ಕೆ ತೆರಿಗೆ ಸಲ್ಲಿಸಬೇಕು. ನಿಮ್ಮ ಎಲ್ಲಾ ಸಂಶಯಗಳಿಗೆ ನಾನು ಉತ್ತರಿಸಿದ್ದೇನೆ ಎಂದು ಕೊಂಡಿದ್ದೇನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT