ಶನಿವಾರ, ಮೇ 15, 2021
25 °C

ಹುಳುಗಳೇ ಆಹಾರವಾದಾಗ!

ಪೃಥ್ವಿರಾಜ್‌ Updated:

ಅಕ್ಷರ ಗಾತ್ರ : | |

ಹುಳುಗಳೇ ಆಹಾರವಾದಾಗ!

ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪರ್ಯಾಯ ಆಹಾರಗಳ ಸಂಶೋಧನೆಯಲ್ಲಿ ತೊಡಗಿರುವ ಸಂಶೋಧಕರು ಹೊಸ ಬಗೆಯ ಖಾದ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಮುಂದೊಂದು ದಿನ ಆಹಾರ ಕೊರತೆ ಹೆಚ್ಚಾದರೆ ಇವುಗಳನ್ನು ತಿನ್ನಲೇಬೇಕಾದ ಅನಿವಾರ್ಯತೆ ಬರಬಹುದು.

ಹುಳುಗಳಲ್ಲಿ ಪೋಷಕಾಂಶಗಳು! 

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ವರದಿ ಪ್ರಕಾರ ಸುಮಾರು 1,900 ಹುಳು ಪ್ರಭೇದಗಳು ಆಹಾರವಾಗಿ ಸೇವಿಸಲು ಯೋಗ್ಯವಾಗಿವೆ. ಇವುಗಳಲ್ಲಿ ನಾರಿನ ಅಂಶ, ಖನಿಜಗಳು ಮತ್ತು ಲೋಫ್ಯಾಟ್ ಪ್ರೊಟೀನ್ಸ್ ಹೇರಳವಾಗಿವೆ. ಕೆಲವು ಪ್ರಾಣಿಗಳು ಮತ್ತು ಪಕ್ಷಿಗಳು ಚಿಟ್ಟೆಗಳನ್ನು, ಕೆಲವು ರೀತಿಯ ಹುಳುಗಳನ್ನು, ಜೇನುನೊಣಗಳನ್ನು ಮತ್ತು ಕೀಟಗಳನ್ನು ಭಕ್ಷಿಸುತ್ತವೆ. ಮುಂದಿನ ದಿನಗಳಲ್ಲಿ ಇವು ಕೂಡ ನಮ್ಮ ಆಹಾರವಾಗಬಹುದು.

ಕಳೆಯೇ ಆಹಾರ!

ಹೊಲಗಳಲ್ಲಿ, ತೋಟಗಳಲ್ಲಿ ಬೆಳೆಯುವ ಕಳೆಯನ್ನು ಕಿತ್ತು ಹೊರಹಾಕುತ್ತೇವೆ. ಆದರೆ ಇದು ಮುಂಬರುವ ದಿನಗಳಲ್ಲಿ ಪ್ರಮುಖ ಆಹಾರವಾಗುವ ಸಾಧ್ಯತೆ ಇದೆ ಎಂದು ಕೆಲವು ಸಂಶೋಧನೆಗಳು ತಿಳಿಸಿವೆ. ಈಗಾಗಲೇ ಇದು ಜೈವಿಕ ಇಂಧನವಾಗಿ ಬಳಕೆಯಾಗುತ್ತಿದೆ. ಇದು ವೇಗವಾಗಿ ಬೆಳಯುವ ಗುಣವನ್ನೂ ಹೊಂದಿದೆ. ಇದರಲ್ಲಿ ಆರೋಗ್ಯ ಹೆಚ್ಚಿಸುವಂತಹ ಜೀವಸತ್ವಗಳು ಮತ್ತು ಖನಿಜಗಳು ಪುಷ್ಕಳವಾಗಿವೆ.

ಜೀನ್ ಎಡಿಟಿಂಗ್

ಆರೋಗ್ಯ ಮತ್ತು ಕೃಷಿ ಕ್ಷೇತ್ರದಲ್ಲಿ ಜೀನ್‌ ಎಡಿಟಿಂಗ್ (ವಂಶವಾಹಿ ಮಾರ್ಪಾಟು) ತಂತ್ರಜ್ಞಾನ ಹೊಸತೇನಲ್ಲ. ಪ್ರಸ್ತುತ ನಾವು ಸೇವಿಸುತ್ತಿರುವ ಕೆಲವು ವಿಧದ ಹಣ್ಣುಗಳು, ಧಾನ್ಯಗಳು ಈ ಮೂಲಕವೇ ಬಂದಿವೆ. ಆದರೆ ಈಚೆಗಷ್ಟೇ ಅಭಿವೃದ್ಧಿಯಾಗಿರುವ ‘ಸಿಎಎಸ್‌–9’ ಎಂಬ ಜೀನ್‌ ಎಡಿಟಿಂಗ್ ವಿಧಾನ ಮತ್ತಷ್ಟು ಬದಲಾವಣೆ ತರುವ ಸಾಧ್ಯತೆ ಇದೆ. ಈಗಾಗಲೇ ಈ ವಿಧಾನದ ಮೂಲಕ ಎಷ್ಟು ಹೊತ್ತಾದರೂ ಕಪ್ಪುಬಣ್ಣಕ್ಕೆ ತಿರುಗದ ಸೇಬುಹಣ್ಣು, ಚುಕ್ಕಿಗಳಿಲ್ಲದ ಆಲೂಗೆಡ್ಡೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ವಿಧಾನ ಪೂರ್ಣಪ್ರಮಾಣದಲ್ಲಿ ಬಳಕೆಗೆ ಬಂದರೆ, ಸಾಸಿವೆ ಕಾಳು ಗಾತ್ರದ ಕುಂಬಳಕಾಯಿ, ಕುಂಬಳಕಾಯಿ ಗಾತ್ರದ ನೆಲ್ಲಿಕಾಯಿ ಬಳಕೆಗೆ ಬಂದರೂ ಆಶ್ಚರ್ಯವಿಲ್ಲ.

ಪ್ರಿಂಟರ್‌ನಿಂದ ತಟ್ಟೆಗೆ! 

ಪ್ರಸ್ತುತ 3ಡಿ ಪ್ರಿಂಟರ್‌ಗಳು ಹಲವು ಕ್ಷೇತ್ರಗಳಲ್ಲಿ ಪರಾಕ್ರಮ ತೋರಿಸುತ್ತಿವೆ. ಮುಖ್ಯವಾಗಿ ನಿರ್ಮಾಣ ಕ್ಷೇತ್ರದಲ್ಲಿ ಈ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ಕಟ್ಟಡ ನಿರ್ಮಿಸಲು ಬೇಕಾದ ಇಟ್ಟಿಗೆ, ಮರಳು, ಕಬ್ಬಿಣವನ್ನು ನಿರ್ದಿಷ್ಟ ಪ್ರಮಾಣದಲ್ಲಿ  ಇಟ್ಟು, ನಮ್ಮ ಇಷ್ಟದ ವಿನ್ಯಾಸ ಆಯ್ಕೆಮಾಡಿಕೊಂಡರೆ ಉಳಿದ ಕೆಲಸವನ್ನು 3ಡಿ ಪ್ರಿಂಟರ್ ನೋಡಿಕೊಳ್ಳುತ್ತದೆ. ಈ ವಿಧಾನ ಆಹಾರ ಪದಾರ್ಥಗಳ ತಯಾರಿಯಲ್ಲೂ ಪ್ರವೇಶಿಸಲಿದೆ. ಚಾಕಲೇಟ್ ಅಥವಾ ಬಿಸ್ಕಿಟ್‌ಗಳಿಗಾಗಿ ಆನ್‌ಲೈನ್‌ಲ್ಲಿ ಆರ್ಡರ್ ಮಾಡಿದರೆ, ಮನೆಯಲ್ಲಿದ್ದುಕೊಂಡೇ ನಮ್ಮ ತಟ್ಟೆಗೆ ನೇರವಾಗಿ ಪ್ರಿಂಟ್‌ ಹಾಕಿಕೊಳ್ಳಬಹುದು. ಅಗತ್ಯವಾದ ಪದಾರ್ಥಗಳನ್ನು ನೀಡಿದರೆ, ಇಷ್ಟವೆನಿಸಿದ ಆಹಾರ ಕೂಡಲೇ ತಯಾರಾಗಬಹುದು.

ಕೃತಕ ಮಾಂಸ 

ಮಾಂಸಹಾರ ಬಳಕೆ ಹೆಚ್ಚಾಗುತ್ತಿದೆ. ಬೆಳೆಯುತ್ತಿರುವ ಜನಸಂಖ್ಯೆಗೆ ತಕ್ಕಂತೆ ಮಾಂಸಾಹಾರವನ್ನು ಪೂರೈಕೆ ಮಾಡುವುದು ಮುಂದಿನ ದಿನಗಳಲ್ಲಿ ಕಷ್ಟವಾಗಬಹುದು. ಹೀಗಾಗಿ ಕೃತಕ ಮಾಂಸ ತಯಾರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮೊದಲಾಗಿವೆ. ಇನ್ನು ಒಂದೆರಡು ದಶಕಗಳಲ್ಲಿ ಕಡಿಮೆ ಖರ್ಚಿನಲ್ಲಿ ಸಹಜ ಮಾಂಸವನ್ನೇ ಹೋಲುವ ‘ಫ್ರೆಷ್‌ ಮೀಟ್‌’ ಬಳಕೆಗೆ ಬರಬಹುದು. ಇದು ವಾಸನೆ ಮತ್ತು ರುಚಿಯಲ್ಲಿ ಪ್ರಾಣಿಗಳ ಮಾಂಸವನ್ನೇ ಹೋಲುತ್ತದೆ.

ಸಿಗುತ್ತಿಲ್ಲ ಮೀನುಗಳು

ಆಹಾರ ಮತ್ತು ಉದ್ಯೋಗಕ್ಕಾಗಿ ಹಲವು ದೇಶಗಳು ಸಮುದ್ರವನ್ನೇ ಅವಲಂಬಿಸಿವೆ. ಆದರೆ ಪರಿಸರ ಮಾಲಿನ್ಯದಿಂದಾಗಿ ಸಮುದ್ರದಲ್ಲಿನ ಜಲಚರಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಹೀಗಾಗಿ ಕೃತಕ ಮೀನುಗಳನ್ನು ಸೃಷ್ಟಿಸುವ ಕೆಲಸವೂ ಆರಂಭವಾಗಿದೆ. ಸುಮಾರು 35 ದೇಶಗಳಲ್ಲಿ ಸಹಜವಾಗಿ ಹಿಡಿಯುವ ಮೀನುಗಳಿಗಿಂತ ಇವುಗಳ ಸಂಖ್ಯೆಯೇ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಈ ವಿಧಾನವನ್ನೇ ಹೆಚ್ಚು ನೆಚ್ಚಿಕೊಳ್ಳಬೇಕಾದ ಅಗತ್ಯ ಎದುರಾಗಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.