ಮಂಗಳವಾರ, ಮಾರ್ಚ್ 9, 2021
23 °C
ಕುಷ್ಟಗಿ: ಕಾಂಗ್ರೆಸ್‌ ಅಭ್ಯರ್ಥಿ ಅಮರೇಗೌಡ ಬಯ್ಯಾಪುರ ಅಭಿಮತ

ಜನಸ್ಪಂದನವೇ ಗೆಲುವಿನ ಮಾನದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಸ್ಪಂದನವೇ ಗೆಲುವಿನ ಮಾನದಂಡ

ಕುಷ್ಟಗಿ: ಕೃಷಿ ಕುಟುಂಬದಿಂದ ಬಂದು, ಮಂಡಲ ಪಂಚಾಯಿತಿ ಪ್ರಧಾನರಾಗಿ ನಂತರ ಮೂರು ಬಾರಿ ಲಿಂಗಸುಗೂರು ಶಾಸಕರಾಗಿ ಅಧಿಕಾರದ ಒಂದೊಂದೇ ಮೆಟ್ಟಿಲು ಏರುವ ಮೂಲಕ ಸಚಿವರೂ ಆಗಿ 2008ರಲ್ಲಿ ಈ ಕ್ಷೇತ್ರದ ಶಾಸಕರಾಗಿ 'ಸೋಲಿಲಿಲ್ಲದ ಸರದಾರ' ಎಂದೇ ಅಭಿಮಾನಿಗಳಿಂದ ಕರೆಯಿಸಿಕೊಂಡ ಅಮರೇಗೌಡ ಬಯ್ಯಾಪುರ 2013ರಲ್ಲಿ ಇದೇ ಕ್ಷೇತ್ರದಲ್ಲಿ ಪರಾಭವಗೊಂಡದ್ದು ಇತಿಹಾಸ. ಈಗ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ 'ಪ್ರಜಾವಾಣಿ'ಗೆ ನೀಡಿರುವ ಸಂದರ್ಶನ ಹೀಗಿದೆ...

ಬಯ್ಯಾಪುರ ಅವರನ್ನೇ ಏಕೆ ಚುನಾಯಿಸಬೇಕು?

ಯಾರು ಜನರಿಗೆ ಹೆಚ್ಚಿನ ರೀತಿಯಲ್ಲಿ ಸ್ಪಂದಿಸುತ್ತಾರೆ. ಅಭಿವೃದ್ಧಿ ಮತ್ತು ಆಡಳಿತಕ್ಕೆ ಒತ್ತು ನೀಡಿ, ನ್ಯಾಯಸಮ್ಮತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ಆಧಾರದಲ್ಲಿ ಕೆಲಸ ಮಾಡುವವರನ್ನು ಬೆಂಬಲಿಸಿ ಎನ್ನುತ್ತೇನೆ. ಹಾಗಾಗಿ ನನ್ನನ್ನು ಬೆಂಬಲಿಸಿ ಎಂದು ಕೇಳುವುದರಲ್ಲಿ ತಪ್ಪಿಲ್ಲ.

ಕಳೆದ ಚುನಾವಣೆಯಲ್ಲಿ ಸೋಲಿಗೆ ಏನು ಕಾರಣ?

ಈ ಕ್ಷೇತ್ರದಲ್ಲಿ ಮೊದಲ ಬಾರಿ ಗೆದ್ದಾಗ ತೆಗೆದುಕೊಂಡ ಮತಗಳಿಗಿಂತ ಕಳೆದ ಬಾರಿ ಸೋತಾಗ ಅದಕ್ಕಿಂತ ಹೆಚ್ಚು ಮತ ಪಡೆದಿದ್ದೆ. ಈ ಕ್ಷೇತ್ರದಲ್ಲಿ ನಾನು ಅಲ್ಪಸಂಖ್ಯಾತ. ನಮ್ಮ ಸಮುದಾಯದ ಗೋನಾಳ ರಾಜಶೇಖರರೆಡ್ಡಿ ಎಂಬ ಎದುರಾಳಿ ಹಣಕೊಟ್ಟು ಯುವಕರನ್ನು ಮೋಡಿ ಮಾಡಿ ರೆಡ್ಡಿ ಲಿಂಗಾಯತರ ಶೇ 30ರಷ್ಟು ಮತ ಪಡೆದಕಾರಣ ಸೋಲುಂಟಾಯಿತೇ ಹೊರತು ಜನರು ನನ್ನನ್ನು ಸೋಲಿಸಲಿಲ್ಲ.

ಅಲ್ಪಸಂಖ್ಯಾತರ ಮತಗಳು ಇಡಿಯಾಗಿ ದಕ್ಕಲಿವೆಯೆ?

ಅಲ್ಪಸಂಖ್ಯಾತರಿಗೆ ಮೊದಲಿನಿಂದಲೂ ಕಾಂಗ್ರೆಸ್‌ ಬಗ್ಗೆ ಒಲವು ಇದೆ. ಈಗ ಬಿಜೆಪಿಯವರ ನಡೆನುಡಿ ಮುಸಲ್ಮಾನರಲ್ಲಿ ಬೇಸರ ತಂದಿದೆ. ಹಾಗಾಗಿ ಇವರ ಅತಿ ಹೆಚ್ಚಿನ ಒಲವು ಕಾಂಗ್ರೆಸ್‌ ಕಡೆಗೆ ವ್ಯಕ್ತವಾಗಿದೆ.

ಗೆಲುವಿಗೆ ಅಭಿವೃದ್ಧಿಯೇ ಮಾನದಂಡವೇ?

ಕೆಲಸ ಕಾರ್ಯಗಳು ಮತ್ತು ಜನರೊಂದಿಗಿನ ಸ್ಪಂದನೆ ಗೆಲುವಿಗೆ ಪ್ರಮುಖ ಮಾನದಂಡಗಳಾಗುತ್ತವೆ.  ಯಾವ ಊರಿನಲ್ಲಿ ಏನು ಮಾಡಬೇಕು ಎಂಬ ವಿವೇಚನೆ ಇರಬೇಕು. ಕುಡಿಯುವ ನೀರಿಗೆ ಈ ಕ್ಷೇತ್ರದಲ್ಲಿ ಹಾಲಿ ಶಾಸಕರು ಹಣ ಒದಗಿಸಲಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಕಾಲೊನಿಗಳಿಗೆ ಸಮರ್ಪಕ ನೀರಿನ ವ್ಯವಸ್ಥೆ, ಅವರ ಬದುಕು ರೂಪಿಸುವ ಉಪಕಸುಬುಗಳಿಗೆ ಬೇಕಾದ ವ್ಯವಸ್ಥೆ ಮಾಡಲಿಲ್ಲ.ನನ್ನ ಅವಧಿಯಲ್ಲಿ ಈಗಿನಷ್ಟು ಅನುದಾನ ಬರುತ್ತಿರಲಿಲ್ಲ. ಬಂದ ಅನುದಾನವನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸಿದ್ದೆ.

ಕೃಷ್ಣಾ ಬಿ ಸ್ಕೀಂ ನಲ್ಲಿ ನಿಮ್ಮ ವೈಫಲ್ಯದ ಆರೋಪ ಇದೆಯಲ್ಲ?

ವೈಫಲ್ಯ ಹಾಲಿ ಶಾಸಕರದ್ದು, ನನ್ನದಲ್ಲ. ಹಿಂದೆ ಶಾಸಕನಾಗಿದ್ದಾಗ ನೀರಾವರಿ ಹೋರಾಟ ಸಮಿತಿ, ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ಮಾಡಿ ಬೆಂಗಳೂರು, ಹುಬ್ಬಳ್ಳಿಗೆ ನಿಯೋಗ ಕೊಂಡೊಯ್ದು ಸಮಿತಿಯ ಮಾರ್ಗದರ್ಶನದಂತೆ ಕೆಲಸ ಮಾಡಿದ್ದೆ. ಆದರೆ, ಹಾಲಿ ಶಾಸಕರು ಹೋರಾಟ ಸಮಿತಿಯನ್ನು ನಿರ್ಲಕ್ಷಿಸಿದ ಪರಿಣಾಮ ಸಮಿತಿಯ ಕೆಲವರು ರಾಜೀನಾಮೆ ನೀಡುವಂತಾಯಿತು.

ಮಾಜಿ ಶಾಸಕನಾಗಿದ್ದರೂ ನೀರಾವರಿ ಸಚಿವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಲು ಎರಡು ಬಾರಿ ದಿನಾಂಕ ನಿಗದಿಪಡಿಸಿ ಹಾಲಿ ಶಾಸಕರಿಗೆ ಮಾಹಿತಿ ನೀಡಿದ್ದೆ. ಆದರೆ, ತಾ.ಪಂ ಜಿ.ಪಂ. ಚುನಾವಣೆ ನೆಪದಲ್ಲಿ ಬರಲು ಶಾಸಕರೇ ಹಿಂದೇಟು ಹಾಕಿದರು.

ಚುನಾವಣೆ ಬಂದಾಗ ಧರ್ಮದ ವಿಚಾರ ಪ್ರಸ್ತಾಪವೇಕೆ?

ವೀರಶೈವ - ಲಿಂಗಾಯತ ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯ, ಎರಡೂ ಒಂದೇ ಎಂಬುದೇ ನನ್ನ ನಿಲುವು. ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದ ಯಾವ ಸಭೆಯಲ್ಲೂ ಭಾಗಿಯಾಗಿಲ್ಲ. 'ಪಂಚಪೀಠದವರನ್ನು ತಲೆಯ ಮೇಲೆ ಹೊತ್ತು ಕೊಳ್ಳಿ. ಬಸವಣ್ಣನನ್ನು ಹೃದಯದಲ್ಲಿ ಇಟ್ಟು ಕೊಳ್ಳಿ ಎಂಬ ಮಾತನ್ನು ಈಗಲೂ ಪಾಲಿಸುತ್ತಿದ್ದೇವೆ. ಕೊಪ್ಪಳದಲ್ಲಿ ಸ್ವತಃ ರಾಯರಡ್ಡಿಯವರೇ ಸಭೆ ನಡೆಸಿದರೂ ಅದನ್ನು ಬೆಂಬಲಿಸಲಿಲ್ಲ.

ಇದು ಕೊನೆಯ ಚುನಾವಣೆಯೆ?

ಇಲ್ಲ. ಬದುಕಿನ ಕೊನೆಯ ಕ್ಷಣದವರೆಗೂ ಇದೇ ಕ್ಷೇತ್ರದಲ್ಲಿ ಇರುತ್ತೇನೆ, ಸ್ಪರ್ಧಿಸುವ ಶಕ್ತಿ ಇರುವವರೆಗೂ ಚುನಾವಣಾ ರಾಜಕಾರಣದಲ್ಲಿ ಸಕ್ರಿಯನಾಗಿದ್ದು ಜನರ ಹಿತ ಕಾಯುವಲ್ಲಿ ಬದ್ಧತೆ ಮೆರೆಯುತ್ತೇನೆ.

ಕ್ಷೇತ್ರದ ಬಗೆಗಿನ ಕನಸುಗಳೇನು?

ಕ್ಷೇತ್ರಕ್ಕೆ ಕುಡಿಯುವ ನೀರಿನ ಅವಶ್ಯತೆ ಹೆಚ್ಚಾಗಿದೆ. ಕೃಷ್ಣಾ ನದಿಯಿಂದ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳ್ಳಲು ಇನ್ನೂ ಅಂದಾಜು ಮೂರು ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೆ ಲಭ್ಯ ಇರುವ ಅನುದಾನ ಬಳಸಿಕೊಂಡು ಜನರಿಗೆ ತೊಂದರೆಯಾಗದಂತೆ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಬೇಕು.

-ನಾರಾಯಣರಾವ ಕುಲಕರ್ಣಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.