ಸೋಮವಾರ, ಮಾರ್ಚ್ 1, 2021
31 °C
ಯುವಮೋರ್ಚಾ ಪದಾಧಿಕಾರಿಯ ಹರ್ಷ

ನಮೋ ಆಪ್‌ ಮೂಲಕ ಪ್ರಧಾನಿ ಮೋದಿ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮೋ ಆಪ್‌ ಮೂಲಕ ಪ್ರಧಾನಿ ಮೋದಿ ಸಂವಾದ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ಜೊತೆ ಸೋಮವಾರ ನಮೋ ಆಪ್‌ ಮೂಲಕ ಲೈವ್‌ ಸಂವಾದ ನಡೆಸಿದ್ದು, ಮಂಗಳೂರು ದಕ್ಷಿಣ ವಿಭಾಗದ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ನಂದನ್‌ ಮಲ್ಯ ಅವರ ಪ್ರಶ್ನೆಗೆ ಪ್ರಧಾನಿ ಉತ್ತರಿಸಿದ್ದಾರೆ.

30 ನಿಮಿಷಗಳ ಕಾಲ ನಡೆದ ಚರ್ಚೆಯಲ್ಲಿ ಕರ್ನಾಟಕದ ಬಿಜೆಪಿ ಯುವಮೋರ್ಚಾದ ಮೂವರು ಪದಾಧಿಕಾರಿಗಳು ಸಂವಾದ ನಡೆಸಿದರು. ಬೆಂಗಳೂರಿನ ತೇಜಸ್ವಿ ಸೂರ್ಯ ಮತ್ತು ಕೊಪ್ಪಳದ ಶರಣು ಅವರೊಂದಿಗೆ ಮಂಗಳೂರಿನ ನಂದನ್‌ ಮಲ್ಯ ಕೂಡ ಸಂವಾದದಲ್ಲಿ ಪ್ರಶ್ನೆಗಳನ್ನು ಮಂಡಿಸಿದರು.

ಗುಣಾತ್ಮಕ ಶಿಕ್ಷಣ ಮತ್ತು ಅವಕಾಶಗಳ ಕುರಿತು ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಧಾನಿ ಮೋದಿ ಅವರು, ‘ 20ನೇ ಶತಮಾನದ ಕೊನೆ ಭಾಗದಲ್ಲಿ ಭಾರತವು 21ನೇ ಶತಮಾನದ ಆಗಮನದ ಬಗ್ಗೆ ಬಹಳ ಚರ್ಚೆ ನಡೆಸಿತು. ಆದರೆ ಹೊಸ ಶತಮಾನವನ್ನು ಸ್ವಾಗತಿಸಬೇಕಾದ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಹೊಸ ಶತಮಾನದ ಹೊಸ್ತಿಲಲ್ಲಿ ಇದೀಗಷ್ಟೇ ಭಾರತ ಕಾಲಿಡುತ್ತಿದೆ’ ಎಂದು ಹೇಳಿದರು.

ಉನ್ನತ ಶಿಕ್ಷಣ ಪಡೆಯುವ ಎಲ್ಲ ಕೇಂದ್ರಗಳಿಗೆ ಸಂಬಂಧಿಸಿದ ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿಯನ್ನು ಸ್ಥಾಪಿಸುವ ಮೂಲಕ ಗುಣಾತ್ಮಕ ಶಿಕ್ಷಣದತ್ತ ಹೆಜ್ಜೆ ಇಡಲಾಗುತ್ತಿದೆ. ಮಾನವ ಸಂಪನ್ಮೂಲ ಸಚಿವಾಲಯ ಈ ನಿಟ್ಟಿನಲ್ಲಿ ಗ್ಯಾನ್‌ ( GIAN– ) ಸ್ವಯಂ (SWAYAM) ಮುಂತಾದ ಹೊಸ ಸರಣಿ ಪ್ರಯತ್ನಗಳನ್ನು ನಡೆಸಿದೆ. ಆವಿಷ್ಕಾರ ಮತ್ತು ಸಂಶೋಧನೆಯತ್ತ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಪ್ರೋತ್ಸಾಹ ನೀಡಲು 20 ಸಂಸ್ಥೆಗಳನ್ನು ಗುರುತಿಸಿ ಆಯ್ದ ಸಂಸ್ಥೆಗಳಿಗೆ ₹ 10 ಸಾವಿರ ಕೋಟಿ ನೆರವು ನೀಡಲಾಗುವುದು. ಎಲ್ಲ ಐಐಎಂಗಳಿಗೆ ಸ್ವಾಯತ್ತೆ ನೀಡಲಾಗಿದೆ. ಯುಜಿಸಿ ಕೂಡ 60 ಉನ್ನತ ಶಿಕ್ಷಣ ಕೇಂದ್ರಗಳಿಗೆ ಸ್ವಾಯತ್ತೆ ನೀಡಿದೆ. 2014–15 ಮತ್ತು 2015–16ನೇ ಸಾಲಿನ ಬಜೆಟ್‌ನಲ್ಲಿ ಆರು ಐಐಟಿಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದರು.

‘ಪ್ರಧಾನಿ  (#YouthWithModi) ಅವರಿಗೆ ಟ್ವೀಟ್‌ ಮಾಡಿದ್ದರಿಂದ ಪ್ರಧಾನಿ ಕಚೇರಿಯು ತಮ್ಮ ಸ್ವವಿವರನ್ನು ಕೋರಿತ್ತು. ಚರ್ಚೆಯಲ್ಲಿ ಭಾಗವಹಿಸಿ ತುಂಬ ಖುಷಿಯಾಗಿದೆ’ ಎಂದು ನಂದನ್‌ ಹೇಳಿದ್ದಾರೆ. ಸೇಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಪದವಿ ಓದಿದ್ದ ನಂದನ್‌ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ ಉದ್ಯಮ ನಡೆಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.