ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣದಲ್ಲಿ ಜೆಡಿಎಸ್‌, ಬಿಜೆಪಿ ಹಗ್ಗಜಗ್ಗಾಟ

ಕಾಂಗ್ರೆಸ್‌ ಪರ ಅಬ್ಬರದ ಪ್ರಚಾರ ಆರಂಭಿಸಿರುವ ಜಿಲ್ಲೆಯ ನಾಯಕರು
Last Updated 8 ಮೇ 2018, 14:08 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್‌ ಹಾಗೂ ಜೆಡಿಎಸ್‌ ಅಭ್ಯರ್ಥಿ ರವಿಕುಮಾರ ಪಾಟೀಲ ಮಧ್ಯೆ ಈಗಲೂ ತೀವ್ರ ಸ್ಪರ್ಧೆ ಕಂಡು ಬರುತ್ತಿದ್ದು, ಹಗ್ಗಜಗ್ಗಾಟದಲ್ಲಿ ಯಾರೂ ಗೆಲ್ಲುತ್ತಾರೆ ಎಂಬುದು ಸ್ಪಷ್ಟವಾಗಿ ಕಂಡು ಬರುತ್ತಿಲ್ಲ.

ಇಬ್ಬರು ಅಭ್ಯರ್ಥಿಗಳು ಮತದಾರರ ಮನವೊಲಿಸಲು ಮನೆಯಿಂದ ಮನೆಗೆ ಭೇಟಿ ಕೊಡುತ್ತಿದ್ದಾರೆ. ಗೆಲುವಿಗಾಗಿ ಅವಿಶ್ರಾಂತ ಪ್ರಚಾರ ನಡೆಸುತ್ತಿದ್ದು, ಇಬ್ಬರು ನಾಯಕರ ಬಗ್ಗೆ ಸಮಾನಾಂತರ ಮಾತುಗಳು ಕೇಳಿ ಬರುತ್ತಿವೆ. ಶಕ್ತಿನಗರ, ಚಂದ್ರಬಂಡಾ, ಯರಗೇರಾ, ಗಿಲ್ಲೇಸುಗೂರು, ಕಲ್ಮಲಾ ಹೋಬಳಿಗಳಲ್ಲಿ ಯುವಕರ ಗುಂಪುಗಳು ತಮ್ಮ ನಾಯಕರನ್ನು ಗೆಲ್ಲಿಸಲು ಪ್ರಚಾರ ನಡೆಸುತ್ತಿದ್ದಾರೆ. ಯಾವುದೇ ಒಂದು ಹೋಬಳಿ ಒಂದೇ ಪಕ್ಷದ ಹಿಡಿತದಲ್ಲಿ ಉಳಿದಿಲ್ಲ.

ಶಕ್ತಿನಗರ, ಚಂದ್ರಬಂಡಾ ಹೋಬಳಿಗಳಲ್ಲಿ ಚುನಾವಣೆ ಪೂರ್ವ ಬಿಜೆಪಿ ಬಲ ಹೆಚ್ಚಾಗಿತ್ತು. ಆದರೆ, ಗಿಲ್ಲೇಸುಗೂರಿನಲ್ಲಿ ಈಚೆಗೆ ನಡೆದ ಜೆಡಿಎಸ್‌ ಪ್ರಚಾರ ಸಭೆಯಲ್ಲಿ ಕೆಲವು ನಾಯಕರು ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದರು. ಇದರಿಂದ ಶಕ್ತಿನಗರ ಕಡೆಯಲ್ಲೂ ಜೆಡಿಎಸ್‌ ಬೆಂಬಲಿಗರ ಸಂಖ್ಯೆ ವೃದ್ಧಿಸಿದೆ. ಕ್ಷೇತ್ರದಾದ್ಯಂತ ಸಮಬಲ ಸ್ಪರ್ಧೆ ಕಂಡು ಬರುತ್ತಿದೆ.

2013 ರ ಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದ ತಿಪ್ಪರಾಜು ಹವಾಲ್ದಾರ್ ಅವರು ಗ್ರಾಮೀಣ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಪ್ರಮುಖವಾಗಿ ನಾರಾಯಣಪುರ ಎಡದಂಡೆ ಕಾಲುವೆ (ಎನ್‌ಆರ್‌ಬಿಸಿ)ಯನ್ನು ಗ್ರಾಮೀಣ ಭಾಗಕ್ಕೆ ವಿಸ್ತರಿಸಿಕೊಂಡಿರುವುದು ಹಾಗೂ ಆರು ಗಂಟೆ ಕೊಡುತ್ತಿದ್ದ ತ್ರಿಪೇಸ್‌ ವಿದ್ಯುತ್‌ನ್ನು 12 ಗಂಟೆಗೆ ಹೆಚ್ಚಿಸಲು ನಡೆಸಿದ ಹೋರಾಟಗಳನ್ನು ಅವರು ಉಲ್ಲೇಖಿಸುತ್ತಿದ್ದಾರೆ.

ರಾಜಕೀಯ ಅಧಿಕಾರ ಇಲ್ಲದಿದ್ದರೂ ಗ್ರಾಮೀಣ ಜನರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿರುವ ರವಿ ಪಾಟೀಲ ಅವರು, ಇನ್ನೂ ಹೆಚ್ಚು ಅಭಿವೃದ್ಧಿ ಕೆಲಸ ಮಾಡುವುದಕ್ಕಾಗಿ ರಾಜಕೀಯ ಶಕ್ತಿ ನೀಡುವಂತೆ ಕೋರುತ್ತಿದ್ದಾರೆ. ಇನ್ನೊಂದು ಗಮನಾರ್ಹ ವಿಷಯವೆಂದರೆ, ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿರುವುದಕ್ಕೆ ಗ್ರಾಮೀಣ ಭಾಗದಲ್ಲಿ ಇವರ ಬಗ್ಗೆ ಸ್ವಲ್ಪ ಅನುಕಂಪವೂ ಕಂಡು ವ್ಯಕ್ತವಾಗುತ್ತಿದೆ. ರವಿ ಪಾಟೀಲ ಅವರು ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರ್ಪಡೆಯಾದಾಗ, ಇವರೊಂದಿಗೆ ಬಾರದೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಯುವಕರ ಗುಂಪುಗಳು ಪರೋಕ್ಷವಾಗಿ ರವಿ ಪಾಟೀಲ ಅವರನ್ನು ಬೆಂಬಲಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಬೆಂಬಲಿಗರು ನೀಡುವ ಸಲಹೆ ಹಾಗೂ ಕೋರುವ ನೆರವಿಗೆ ರವಿ ಪಾಟೀಲ ಸ್ಪಂದಿಸುತ್ತಿರುವುದು ಕೂಡಾ ಅವರಿಗೆ ಶ್ರೀರಕ್ಷೆಯಾಗಿ ಮಾರ್ಪಾಡಾಗುತ್ತಿದೆ. ಇನ್ನೊಂದು ಕಡೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಬಿಜೆಪಿ ಸಾಧನೆಗಳನ್ನು ನೋಡಿ ಜನರು ಮತಗಳನ್ನು ನೀಡುತ್ತಾರೆ. ಗ್ರಾಮೀಣದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎನ್ನುವ ವಿಶ್ವಾಸದ ಮಾತುಗಳಲ್ಲಿ ತಿಪ್ಪರಾಜು ಹವಾಲ್ದಾರ್‌ ಅವರು ತೇಲಾಡುತ್ತಿದ್ದಾರೆ.

ಕಾಂಗ್ರೆಸ್‌ ಅಬ್ಬರದ ಪ್ರಚಾರ: ಚುನಾವಣೆ ಆರಂಭವಾದ ಬಳಿಕ ಮತದಾರರ ಮನವೊಲಿಸುವ ಕೆಲಸವನ್ನು ಬಿರುಸಿನಿಂದ ಆರಂಭಿಸಿದ ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ದದ್ದಲ ಅವರಿಗೂ ಸಾಕಷ್ಟು ಬೆಂಬಲಿಗರ ಪಡೆ ಇದೆ.

ತೆಲಂಗಾಣದ ಗದ್ವಾಲ್‌ ಕಾಂಗ್ರೆಸ್‌ ಶಾಸಕಿ ಅರುಣಾ ಅವರು ಗ್ರಾಮೀಣ ಕ್ಷೇತ್ರದಲ್ಲಿ ಕೆಲವು ದಿನಗಳಿಂದ ನಿರಂತರ ಪ್ರಚಾರ ನಡೆಸುತ್ತಿದ್ದಾರೆ. ವಿಧಾನ ಪರಿಷತ್‌ ಎನ್‌.ಎಸ್‌.ಬೋಸರಾಜು, ರವಿ ಬೋಸರಾಜು ಹಾಗೂ ಅವರ ಬೆಂಬಲಿಗರು ತೀರಾ ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿ ಮಿಂಚಿನ ಪ್ರಚಾರ ಆರಂಭಿಸಿದ್ದಾರೆ. ಮೇ 12 ಕ್ಕೆ ಮತದಾನ ನಡೆಯಲಿದ್ದು, ಉಳಿದ ಕೊನೆಯ ದಿನಗಳಲ್ಲಿ ಈಗ ಕಂಡು ಬರುತ್ತಿರುವ ಗ್ರಾಮೀಣ ಕ್ಷೇತ್ರದ ಚಿತ್ರಣವು ಬದಲಾವಣೆಯಾದರೂ ಅಚ್ಚರಿ ಪಡಬೇಕಿಲ್ಲ.

**
ಯಾವುದೇ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿ, ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯಕ್ಕೆ ಒತ್ತು ಕೊಟ್ಟು ಕೆಲಸ ಮಾಡಬೇಕು. ಈ ಬದ್ಧತೆ ಇಟ್ಟುಕೊಂಡು ಜನರಲ್ಲಿ ಅಭ್ಯರ್ಥಿಗಳು ಮತ ಕೇಳಬೇಕು
– ಹಫೀಜ್‌ವುಲ್ಲಾ, ಯರಗೇರಾ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT