ಕಾಂಗ್ರೆಸ್‌ನಿಂದ ಬೆಂಗಳೂರು ಅಭಿವೃದ್ಧಿ ಅಸಾಧ್ಯ: ಪ್ರಧಾನಿ ನರೇಂದ್ರ ಮೋದಿ

7

ಕಾಂಗ್ರೆಸ್‌ನಿಂದ ಬೆಂಗಳೂರು ಅಭಿವೃದ್ಧಿ ಅಸಾಧ್ಯ: ಪ್ರಧಾನಿ ನರೇಂದ್ರ ಮೋದಿ

Published:
Updated:
ಕಾಂಗ್ರೆಸ್‌ನಿಂದ ಬೆಂಗಳೂರು ಅಭಿವೃದ್ಧಿ ಅಸಾಧ್ಯ: ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಬಿಜೆಪಿ ಕಾರ್ಯಕರ್ತರ ಹತ್ಯೆ,  ಬಾಲಕಿಯರು ಸುರಕ್ಷಿತರಲ್ಲ, ಜನದಟ್ಟಣೆ ಇರುವ ರಸ್ತೆಗಳಲ್ಲಿ ಸಾಮಾನ್ಯ ನಾಗರಿಕರ ಹತ್ಯೆ, ಸ್ವಲ್ಪ ಮಳೆ ಬಂದ್ರೂ ಪೂರ್ತಿ ಬೆಂಗಳೂರು ನೀರಿನಲ್ಲಿ ಮುಳುಗುತ್ತೆ, ತಣ್ಣನೆ ನೀರಿನಲ್ಲಿ ಬೆಂಕಿ ಬರುವ ಊರು ಬೆಂಗಳೂರು ಅಂತ ವಿಶ್ವಕ್ಕೆ ಗೊತ್ತಾಗಿದೆ ಇದು ಕಾಂಗ್ರೆಸ್ ಕೊಡುಗೆ ಎಂದು ಮೋದಿ ಟೀಕಿಸಿದರು.

ಕೆಂಪೇಗೌಡ ನಾಡು, ಐಟಿಬಿಟಿ ರಾಜಧಾನಿ ಬೆಂಗಳೂರು ಜನರಿಗೆ ನಮಸ್ಕಾರಗಳು ಎಂದು ಪ್ರಧಾಮಿ ನರೇಂದ್ರ ಮೋದಿ ಕನ್ನಡದಲ್ಲಿ ಭಾಷಣ ಆರಂಭಿಸಿದರು. ಬಳಿಕ ಈಚೆಗೆ ನಿಧನರಾದ ವಿಜಯ್‌ಕುಮಾರ್ ಅವರ ಒಡನಾಟ ನೆನೆದು ಶ್ರದ್ಧಾಂಜಲಿ ಸಲ್ಲಿಸಿದರು.

ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮೋದಿ ಮಾತನಾಡಿದರು.

ಕರ್ನಾಟಕದ ಜನರು ನನಗೆ ಇಷ್ಟೊಂದು ಪ್ರೀತಿ, ಆಶೀರ್ವಾದ ಕೊಟ್ಟಿದ್ದೀರಿ. ಭಾಷೆ ನಮ್ಮನ್ನು ಬೇರ್ಪಡಿಸಲಾರದು. ಸುಳ್ಳು ಆರೋಪಗಳು ನಮ್ಮ–ನಿಮ್ಮ ನಡುವೆ ಅಡ್ಡ ನಿಲ್ಲದು. ಭಾಷಾಂತರ ಬೇಡ ಅಂತ ನೀವು ಹೇಳ್ತೀರಿ. ಆದರೆ ಟಿವಿ ಮೂಲಕ ನನ್ನ ಭಾಷಣ ಹಳ್ಳಿಹಳ್ಳಿ ತಲುಪುತ್ತೆ. ಹಿಂದಿ ಬಾರದವರಿಗೆ ತಲುಪಲು ಭಾಷಾಂತರ ಅನಿವಾರ್ಯ ಎಂದರು.

ಕರ್ನಾಟಕದ ಈ ಮುಖ್ಯಮಂತ್ರಿಗೆ ಬೆಂಗಳೂರು ಅಂದ್ರೆ ಯಾಕಿಷ್ಟು ಸಿಟ್ಟೋ ಗೊತ್ತಿಲ್ಲ. ಕಾಂಗ್ರೆಸ್‌ಗೂ ಪ್ರೀತಿ ಇಲ್ಲ. ಹೀಗಾಗಿ ಬೆಂಗಳೂರಿನ ತ್ರಿವಳಿಗಳಿಗೆ ಬೆಂಗಳೂರು ಭಾಗ್ಯ ನೋಡುವ ಜವಾಬ್ದಾರಿ ಕೊಟ್ಟಿದ್ದಾರೆ.

ಬೆಂಗಳೂರಿನ ತ್ರಿವಳಿಗಳು ಯಾರು ಅಂತ ಗೊತ್ತಿದೆ ತಾನೆ? ಇಡೀ ಜಗತ್ತು ಗೌರವಿಸುವ ಈ ನಗರಕ್ಕೆ ತ್ರಿವಳಿಗಳಿಂದ ಅವಮಾನ ಆಗಿದೆ. ಇವರ ಕರಾಮತ್ತಿನಿಂದ ಕಳೆದ ಐದು ವರ್ಷಗಳಲ್ಲಿ ಬೆಂಗಳೂರು ಪಾಹಿಮಾಂ ಪಾಹಿಮಾಂ ಅಂತ ಆರ್ತವಾಗಿ ಬೇಡಿಕೊಳ್ಳುತ್ತಿದೆ. ಅವರು ಒಬ್ಬರಿಗೊಬ್ಬರು ಸಹಕಾರ ಕೊಡ್ತಾ ಬೆಂಗಳೂರನ್ನು ಹಾಳು ಮಾಡಿದ್ದಾರೆ. ಗೃಹಮಂತ್ರಿಯಾಗಿದ್ದವರೇ ಪೊಲೀಸ್ ಅಧಿಕಾರಿಯ ನಿಗೂಢ ಸಾವಿಗೆ ಕಾರಣರಾಗಿದ್ದಾರೆ. ಅವರು ಯಾರು ಅಂತ ನಿಮಗೆ ಗೊತ್ತಿದೆ ತಾನೆ? ಜೈಲಿಗೆ ಹೋಗಬೇಕಾದವರು ಸರ್ಕಾರದಲ್ಲಿದ್ದಾರೆ. ಇದು ಕಾಂಗ್ರೆಸ್‌ ಸರ್ಕಾರ? ಎಂದು ಪ್ರಶ್ನೆ ಮಾಡಿದರು.

ಭೂಮಾಫಿಯಾದಲ್ಲಿ ಸಕ್ರಿಯರಾಗಿರುವವರು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಕೊಲ್ಲಿ ದೇಶಗಳಲ್ಲಿರುವ ದುಡ್ಡು ತಂದು ಬೆಂಗಳೂರಿನಲ್ಲಿ ಬಂಡವಾಳ ಹೂಡುವ ದೊಡ್ಡ ಷಡ್ಯಂತ್ರ ಹೂಡುವವರು ಯಾರು ಅಂತ ನಿಮಗೆ ಗೊತ್ತಿದೆ. ಇವರ ವಿರುದ್ಧ ಮೊಕದ್ದಮೆಗಳು ಇಲ್ಲವೇ? ಶಾಸಕನ ಸುಪುತ್ರ ಜನರನ್ನು ಹೊಡೆದುಬಡಿದು ತೊಂದರೆ ಕೊಡ್ತಿದ್ದಾನೆ. ಅದು ಯಾರು ಅಂತ ನಿಮಗೆ ಗೊತ್ತಿದೆ? ಇಂಥವರ ಬಳಿ ಅಧಿಕಾರ, ಸರ್ಕಾರ, ಬೆಂಗಳೂರಿನ ಆಡಳಿತ ಇದೆ. ಹೀಗಾಗಿಯೇ ಕಾಂಗ್ರೆಸ್‌ ಪಿಪಿಪಿ– ಪುದುಚೆರಿ, ಪಂಜಾಬ್ ಮತ್ತು ಪರಿವಾರಗಳಿಗೆ ಸೀಮಿತವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ನಮ್ಮ ಬಿಜೆಪಿ ಕಾರ್ಯಕರ್ತರ ಮೇಲೆ ಹತ್ಯೆ ಪ್ರಯತ್ನ ನಡೆದಿದೆ. ಬಾಲಕಿಯರು ಸುರಕ್ಷಿತರಲ್ಲ. ಜನದಟ್ಟಣೆ ಇರುವ ರಸ್ತೆಗಳಲ್ಲಿ ಸಾಮಾನ್ಯ ನಾಗರಿಕರ ಹತ್ಯೆ ನಡೆಯುತ್ತಿದೆ. ಸ್ವಲ್ಪ ಮಳೆ ಬಂದ್ರೂ ಪೂರ್ತಿ ಬೆಂಗಳೂರು ನೀರಿನಲ್ಲಿ ಮುಳುಗುತ್ತೆ. ತಣ್ಣನೆ ನೀರಿನಲ್ಲಿ ಬೆಂಕಿ ಬರುವ ಊರು ಬೆಂಗಳೂರು ಅಂತ ವಿಶ್ವಕ್ಕೆ ಗೊತ್ತಾಗಿದೆ.

ಬೆಂಗಳೂರಿನ ತ್ರಿವಳಿಗಳ ಕಥೆ ಗೊತ್ತಾಯ್ತು ತಾನೆ. ರಾಜ್ಯದಲ್ಲಿ ಇನ್ನೊಂದು ತ್ರಿವಳಿಕೂಟ ಇದೆ. ಅದು ವಿಎಸ್‌ಎನ್‌. ಇದು ಇಡಿ ದೇಶದ ಕಾಂಗ್ರೆಸ್‌ಗೆ ಎಟಿಎಂ ಥರ ಕೆಲಸ ಮಾಡುತ್ತೆ. ಲೋಕಾಯುಕ್ತ ಮುಚ್ಚಿಹಾಕಿರುವ ಮುಖ್ಯಮಂತ್ರಿ ತಮ್ಮ ಬ್ರೀಫ್‌ಕೇಸ್‌ನಲ್ಲಿ ಚಾರಿತ್ರ್ಯ ಪ್ರಮಾಣ ಪತ್ರ ಹಿಡಿದುಕೊಂಡು ಓಡಾಡ್ತಿದ್ದಾರೆ ಎಂದರು.

ಕಳೆದ ಐದು ವರ್ಷಗಳ ಆಡಳಿತವನ್ನು ಕಾಂಗ್ರೆಸ್ ಬೆಂಗಳೂರಿನ ಜನರ ಮುಂದೆ ಇಡಬೇಕು. ನಾನು ಈ ಸಿದ್ದರಾಮಯ್ಯ ಸರ್ಕಾರದ ಐದು ವರ್ಷಗಳ ದೊಡ್ಡ ಹಗರಣ ಈಗ ನಿಮ್ಮ ಮುಂದೆ ಇಡ್ತೀನಿ. ಕಾಂಗ್ರೆಸ್‌ನ ಸಮಸ್ಯೆಗಳಿವು... ದಿಲ್ಲಿಯಿಂದ ಹಳ್ಳಿತನಕ ಎಲ್ಲರಿಗೂ ನೆಹರು ಕುಟುಂಬವೇ ದೇವರು, ಅಪರಾಧಗಳು, ರೈತರ ಆತ್ಮಹತ್ಯೆ ಮತ್ತು ಹಾಹಾಕಾರ, ಐದನೇ ಸಂಗತಿ ಅಂದ್ರೆ ಕರ್ನಾಟಕದ ಸಮಾಜವನ್ನು ಒಡೆದು ಆಳುವ ನೀತಿ. ಕಾಂಗ್ರೆಸ್‌ನ ಐದು ಪಂಚಮಹಾಪಾತಕಗಳು ದೇಶದ ಭವಿಷ್ಯವನ್ನು ಹಾಳುಮಾಡಿದೆ. ಇಂಥ ಸರ್ಕಾರ ಈಗ ಮಹಾಕಾವ್ಯ ಬರೆಯುವ ಕೆಲಸ ಮಾಡುತ್ತಿದೆ.

ರವಿ ಕಾಣದ್ದನ್ನು ಕವಿ ಕಂಡ ಅನ್ನೋದು ಗಾದೆಮಾತು. ಆ ಕವಿಯ ಕಲ್ಪನೆಗೂ ನಿಲುಕದ ಕೆಲಸಗಳನ್ನು ಕಾಂಗ್ರೆಸ್ ಮಾಡ್ತಿದೆ. ಕಾಂಗ್ರೆಸ್ ಮಹಾಕಾವ್ಯದಲ್ಲಿ (ಪ್ರಣಾಳಿಕೆ) ಒಂದೇ ಒಂದು ವಾಕ್ಯ ಸರಿಯಿಲ್ಲ. ಎಲ್ಲದರಲ್ಲಿಯೂ ವ್ಯಾಕರಣ, ಕಾಗುಣಿತ, ವಾಕ್ಯದಲ್ಲಿ ದೋಷಗಳಿವೆ. ಇದು ಕನ್ನಡ ಭಾಷೆಗೆ ಅವರು ಮಾಡಿದ ಅವಮಾನ ಎಂದರು.

ನಾವು ಭೂಮಿಯೊಂದಿಗೆ, ರೈತರೊಂದಿಗೆ ಜೊತೆಗೆ ಒಡನಾಟ ಇಟ್ಟುಕೊಂಡಿರುವವರು. ಅದಕ್ಕೆ ನಾವು ಮಹಾಕಾವ್ಯ ಬರೆಯಲ್ಲ. ವಚನ ಕೊಡ್ತೀವಿ. ಅದೇ ನಮ್ಮ ಪ್ರಣಾಳಿಕೆಯಾಗಿದೆ. ಕರ್ನಾಟಕದಿಂದ ಭ್ರಷ್ಟಾಚಾರ ನಿರ್ಮೂಲನೆ ಮಾಡ್ತೀವಿ, ಹೊಲಗಳಿಗೆ ನೀರು ಕೊಡ್ತೀವಿ, ಬೆಳೆಗೆ ಉತ್ತಮ ಬೆಲೆ ದೊರಕಿಸಿಕೊಡ್ತೀವಿ. ಇದು ನಮ್ಮ ವಚನ. ಆಧುನಿಕ ಶಿಕ್ಷಣ, ಉದ್ಯೋಗಾವಕಾಶಗಳು ಕಲ್ಪಿಸ್ತೇವೆ, ಉದ್ಯಮಿಗಳಿಗೆ ಪ್ರಾಮಾಣಿಕ ವ್ಯವಹಾರ ಕಲ್ಪಿಸುವ ವಚನ ಕೊಟ್ಟಿದ್ದೇವೆ. ಸಮಾಜವನ್ನು ಒಡೆದು ಆಳುವ ರಾಜಕೀಯದಿಂದ ಮುಕ್ತಿ ಕೊಡ್ತೀವಿ, ಮಹಿಳೆಯರಿಗೆ ರಕ್ಷಣೆ ಕೊಡ್ತೀವಿ, ಯಡಿಯೂರಪ್ಪ ಸರ್ಕಾರದ ಮೊದಲ ಸಚಿವ ಸಂಪುಟದಲ್ಲಿಯೇ ಈ ಎಲ್ಲ ವಚನ ಈಡೇರಿಸುವ ನೀಲನಕ್ಷೆ ತಯಾರಾಗುತ್ತೆ ಎಂದರು.

ಬೆಂಗಳೂರಿನ ಎಲ್ಲೆಡೆ ಮೆಟ್ರೊ ತಲುಪಿಸ್ತೇವೆ. ಕೆರೆಗಳ ಜೀರ್ಣೋದ್ಧಾರ ಮಾಡಲು ನಾಡಪ್ರಭು ಕೆಂಪೇಗೌಡ ಹೆಸರಿನಲ್ಲಿ 2500 ಕೋಟಿ ರೂಪಾಯಿ ವಿಶೇಷ ನಿಧಿ ಮಾಡ್ತೀವಿ, ಸ್ವಯಂ ಸೇವಾ ಸಂಘಗಳ ಸಹಯೋಗದಲ್ಲಿ ರಾಜ್ಯ ಸರ್ಕಾರ ಸರಿಯಾಗಿ ಕೆಲಸ ಮಾಡಿದರೆ ನೋಡುನೋಡುತ್ತಿದ್ದಂತೆ ನಮ್ಮ ಬೆಂಗಳೂರು ಶೂನ್ಯ ತ್ಯಾಜ್ಯ ನಗರವಾಗುತ್ತೆ. ನಮಗೆ ಅವಕಾಶ ಕೊಡಿ. ಕಸರಹಿತ ಬೆಂಗಳೂರು ಮಾಡ್ಥೀವಿ, ಮಹಿಳೆಯರ ರಕ್ಷಣೆಗಾಗಿ ಕಿತ್ತೂರು ರಾಣಿ ಚೆನ್ನಮ್ಮ ವಿಶೇಷ ಪಡೆಗಳನ್ನು ರಚಿಸ್ತೀವಿ. ಇವತ್ತು ಇಡಿ ಜಗತ್ತು ಭಾರತವನ್ನು ಆಸೆಯ ಕಂಗಳಿಂದ ನೋಡ್ತಿದೆ. ಆದರೆ ಕಾಂಗ್ರೆಸ್‌ನವರು ಅಧಿಕಾರ ಇಲ್ಲದಿದ್ದರೆ ನೀರಿನಲ್ಲದ ಮೀನಿನಂತೆ ಚಡಪಡಿಸ್ತಾರೆ.

ಈ ದೇಶದಲ್ಲಿ ಅರ್ಥಶಾಸ್ತ್ರಜ್ಞರಾದ ಪ್ರಧಾನಿ ಇದ್ರು. ಮೇಡಂ ಸೋನಿಯಾ ರಿಮೋಟ್‌ನಿಂದ ಸರ್ಕಾರ ನಡೆಸ್ತಾ ಇದ್ರು. ದೇಶದ ಅರ್ಥವ್ಯವಸ್ಥೆ ಬಗ್ಗೆ ಆತಂಕ ಮೂಡಿತ್ತು, ನಾವು ಅಧಿಕಾರಕ್ಕೆ ಬಂದ ನಾಲ್ಕು ವರ್ಷದಲ್ಲಿ ನಮ್ಮ ದೇಶದ ಮಾತ್ರವಲ್ಲ, ಇಡೀ ಜಗತ್ತಿನ ಆರ್ಥಿಕತೆಗೆ ನಮ್ಮ ದೇಶ ಶಕ್ತಿಕೊಟ್ಟಿದೆ. ವಿಶ್ವಬ್ಯಾಂಕ್ ಸೇರಿದಂತೆ ಯಾವುದೇ ಜಾಗತಿಕ ಆರ್ಥಿಕ ಸಂಸ್ಥೆಗಳಲ್ಲಿ ಭಾರತದ ಉಲ್ಲೇಖವು ಸಕಾರಾತ್ಮಕವಾಗಿ ಆಗುತ್ತೆ. ಭಾರತ ಜಗತ್ತಿನ ಆಶಾಕಿರಣ ಆಗಿದೆ ಜಗತ್ತಿನ ಅತಿದೊಡ್ಡ ವಿದೇಶಿ ಬಂಡವಾಳ ಹೂಡಿಕೆಯ ದೇಶ ನಮ್ಮದು. ವರ್ಲ್ಡ್‌ ಬ್ಯಾಂಕ್ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಶ್ರೇಯಾಂಕದಲ್ಲಿ ಭಾರತಕ್ಕೆ ಉಚ್ಚಸ್ಥಾನವಿದೆ ಎಂದು ಮೋದಿ ಹೇಳಿದರು.

ಸಂಪರ್ಕ ವ್ಯವಸ್ಥೆ ಸುಧಾರಣೆಯ ದೊಡ್ಡ ಪ್ರಯತ್ನ ಈಗ ಸಾಗಿದೆ. ಇಂಥ ಪ್ರಯತ್ನ ಈ ಹಿಂದೆ ಎಂದೂ ಆಗಿರಲಿಲ್ಲ. 70 ವರ್ಷಗಳಲ್ಲಿ ಆಗದ ಸಾಧನೆಯನ್ನು ನಾಲ್ಕು ವರ್ಷಗಳಲ್ಲಿ ನಾವು ಮಾಡಿದ್ದೇವೆ. ಬೆಂಗಳೂರಿನಲ್ಲಿ ಅತಿದೊಡ್ಡ ಗ್ಯಾಸ್‌ ಪೈಪ್‌ಲೈನ್ ಈಗ ಆಗುತ್ತಿದೆ, ಜಗತ್ತಿನ ಅತಿದೊಡ್ಡ ಸಮುದ್ರ ಸೇತುವೆ ನಾವು ಕಟ್ಟಿದ್ದೇವೆ. ಬುಲೆಟ್‌ ರೈಲನ್ನು ದೇಶದಲ್ಲಿ ಓಡಿಸುವ ಪ್ರಯತ್ನ ಈಗ ಆಗುತ್ತಿದೆ. ಇಷ್ಟು ವರ್ಷ ಇವರು ಸರ್ಕಾರ ನಡೆಸಿದ್ದಾರೆ. ವಾಯುಯಾನ ನೀತಿಯನ್ನೇ ಮಾಡಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಅದನ್ನು ರಚಿಸಿದೆವು ಭಾರತದ ಯಾವುದೇ ನಗರದ ವಿಮಾನ ನಿಲ್ದಾಣಕ್ಕೆ ಹೋಗಿಬನ್ನಿ. ಜನರು ಬಂದು ಹೋಗುವ ಪ್ರಮಾಣ ಎಷ್ಟು ಹೆಚ್ಚಾಗಿದೆ ಗಮನಿಸಿ. ಈ ಹಿಂದೆ ಇದು ಏಕೆ ಸಾಧ್ಯವಾಗಲಿಲ್ಲ. ಯಾಕಂದ್ರೆ ಹಿಂದಿನ ಸರ್ಕಾರಕ್ಕೆ ದೂರದೃಷ್ಟಿ ಇರಲಿಲ್ಲ, ವಾಯುಯಾನ ರೂಪಿಸಿದ ಫಲವನ್ನು ಒಂದೇ ವರ್ಷದಲ್ಲಿ ನಿಮಗೆ ಸಿಗುವಂತೆ ಮಾಡ್ತೀವಿ. ಹವಾಯ್ ಚಪ್ಪಲಿ ಹಾಕಿಕೊಂಡವರೂ ವಿಮಾನಯಾನ ಮಾಡುವ ಕನಸು ನನ್ನದು. ಅದು ಶೀಘ್ರ ನೆರವೆರಲಿದೆ ಎಂದರು.

ಏಕಕಾಲಕ್ಕೆ ಭಾರತದ ನೂರು ನಗರಗಳಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. 2–3ನೇ ಹಂತದ ಪಟ್ಟಣಗಳಲ್ಲಿಯೂ ವಿಮಾನನಿಲ್ದಾಣ ಕಟ್ಟುವ ಕೆಲಸ ನಡೆಯುತ್ತಿದೆ. ಸಣ್ಣಸಣ್ಣ ನಗರಗಳಿಗೂ ವೈಮಾನಿಕ ಸಂಪರ್ಕ ಕಲ್ಪಿಸುವ ಮೂಲಕ ಆರ್ಥಿಕತೆ ಸುಧಾರಣೆಗೆ ಗಮನ ಕೊಡ್ತಿದ್ದೇವೆ. ಭಾರತದಲ್ಲಿ ವೈಮಾನಿಕ ರಂಗ ವೇಗದಿಂದ ಬೆಳೆಯುತ್ತಿದೆ, ವಿಮಾನಯಾನದ ಬೆಲೆಗಳು ಕಡಿಮೆ ಮಾಡಿದ್ದೇವೆ. ಸಾಮಾನ್ಯ ನಾಗರಿಕರು ಈಗ ವಿಮಾನ ಏರಿ ಸಮಯ ಉಳಿಸಬಹುದು. ಭಾರತದ ಏರ್‌ಕಂಡೀಷನ್ ಕೋಚ್‌ಗಳಲ್ಲಿ ಎಷ್ಟು ಜನರು ಓಡಾಡ್ತಾರೋ ಅದಕ್ಕಿಂತ ಹೆಚ್ಚು ಜನರು ವಿಮಾನದಲ್ಲಿ ಓಡಾಡ್ತಿದ್ದಾರೆ. ಇದು ಕೇಳಿ ನಿಮಗೆ ಆಶ್ಚರ್ಯ ಆಗಬಹುದು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry