ಸತತ ಎರಡನೇ ವರ್ಷವೂ ಅಗ್ರಸ್ಥಾನ ಕಾಯ್ದುಕೊಂಡ ಉಡುಪಿ

7
ಫಲ ನೀಡಿದ ಅಧಿಕಾರಿಗಳು– ಶಿಕ್ಷಕರ ಶ್ರಮ

ಸತತ ಎರಡನೇ ವರ್ಷವೂ ಅಗ್ರಸ್ಥಾನ ಕಾಯ್ದುಕೊಂಡ ಉಡುಪಿ

Published:
Updated:
ಸತತ ಎರಡನೇ ವರ್ಷವೂ ಅಗ್ರಸ್ಥಾನ ಕಾಯ್ದುಕೊಂಡ ಉಡುಪಿ

ಉಡುಪಿ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸತತ ಎರಡನೇ ವರ್ಷವೂ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಕಾಯ್ದುಕೊಳ್ಳುವ ಮೂಲಕ ಸಾಧನೆ ಮಾಡಿದೆ.

2016–17ನೇ ಸಾಲಿನಲ್ಲಿ ಉಡುಪಿ ಜಿಲ್ಲೆ 84.23ರಷ್ಟು ಫಲಿತಾಂಶ ಪಡೆದು ಮೊದಲ ಸ್ಥಾನ ಪಡೆದಿತ್ತು, ಈ ಬಾರಿ 88.18ರಷ್ಟು ಫಲಿತಾಂಶ ಪಡೆಯುವ ಮೂಲಕ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಒಟ್ಟಾರೆ ಫಲಿತಾಂಶದಲ್ಲಿಯೂ ಗಣನೀಯ ಏರಿಕೆಯಾಗಿರುವುದರಿಂದ ಅನುತ್ತೀರ್ಣ ಗೊಂಡಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಜಿಲ್ಲೆಯನ್ನು ಮೊದಲ ಸ್ಥಾನದಲ್ಲಿಯೇ ಮುಂದುವರೆಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಶ್ರಮವಹಿಸಿ ಕೆಲಸ ಮಾಡಿದ್ದು ಫಲ ನೀಡಿದೆ.

ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕು ಎಂಬ ಗುರಿ ಸಾಧನೆಗೆ ಯೋಜನೆ ರೂಪಿಸಲಾಯಿತು. ಕಲಿಕೆಯಲ್ಲಿ ಸ್ವಲ್ಪ ಹಿಂದುಳಿದ ವಿದ್ಯಾರ್ಥಿಗಳಿಗೆ ‘ವಿಶ್ವಾಸ ಕಿರಣ’ ವಿಶೇಷ ಬೋಧನೆ ನೀಡಲಾಯಿತು. ಶಾಲಾ ಸಮಯದ ಅವಧಿ ವಿಸ್ತರಣೆ ಮಾಡಿದ್ದರಿಂದ ವಿದ್ಯಾರ್ಥಿಗಳಿಗೆ ಕಲಿಸಲು ಅಧಿಕ ಸಮಯ ಲಭ್ಯವಾಯಿತು. ಅಲ್ಲದೆ ಶಾಲೆಯಲ್ಲಿ ನಡೆಯುತ್ತಿದ್ದ ಪ್ರತಿ ಪರೀಕ್ಷೆಯ ನಂತರ ಫಲಿತಾಂಶ ವಿಶ್ಲೇಷಣೆ ಮಾಡಿ, ಲೋಪ ಸರಿಪಡಿಸುವ ಕೆಲಸ ಮಾಡಲಾಯಿತು ಎಂದು ಡಿಡಿಪಿಐ ಶೇಷಶಯನ ‘ಪ್ರಜಾವಾಣಿ’ಗೆ ತಿಳಿಸಿದರು.

ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ದತ್ತು ಪಡೆಯುವ ವಿನೂತನ ಕಾರ್ಯಕ್ರಮ ಅನುಷ್ಠಾನ ಮಾಡಲಾಯಿತು. ಶೈಕ್ಷಣಿಕವಾಗಿ ಹಿಂದುಳಿದ ಕೊರಗ ಸಮುದಾಯದ ವಿದ್ಯಾರ್ಥಿಗಳಿಗೆ ವಸತಿ ಶಿಬಿರ ಏರ್ಪಡಿಸಲಾಯಿತು. ಇದರಿಂದಾಗಿ ಆ ಸಮುದಾಯದ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಾಗಲು ಕಾರಣವಾಯಿತು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಜೊತೆಗೆ ಶೇ 90ರಷ್ಟು ಅಂಕ ಗಳಿಸುವ ಸಾಮರ್ಥ್ಯ ಇರುವ ಮಕ್ಕಳಿಗೂ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಈ ಎಲ್ಲ ಯೋಚನೆ ಹಾಗೂ ಯೋಜನೆಗಳು ಫಲ ನೀಡಿದ್ದು, ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಶಿಕ್ಷಕರು, ಸಿಬ್ಬಂದಿ ಎಲ್ಲರ ಶ್ರಮದ ಕಾರಣ ಉತ್ತೀರ್ಣ ಪ್ರಮಾಣವೂ ಹೆಚ್ಚಾಗಿದೆ ಎಂದು ಅವರು ಹೇಳಿದರು.

**

ನಾನೂ ಸೇರಿದಂತೆ ಎಲ್ಲ ಅಧಿಕಾರಿಗಳು ಶಾಲೆಗಳಿಗೆ ನಿರಂತರವಾಗಿ ಭೇಟಿ ನೀಡಿ ಮೇಲ್ವಿಚಾರಣೆ ಮಾಡಿ ಮಾರ್ಗದರ್ಶನ ನೀಡಿದೆವು. ಫಲಿತಾಂಶ ಹೆಚ್ಚಾಗಲು ಇದು ಸಹ ಒಂದು ಕಾರಣ

– ಶೇಷಶಯನ,ಡಿಡಿಪಿಐ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry