‘ತಾಯ್ನೆಲದ ಋಣ ತೀರಿಸಲು ಅವಕಾಶ ನೀಡಿ’

7

‘ತಾಯ್ನೆಲದ ಋಣ ತೀರಿಸಲು ಅವಕಾಶ ನೀಡಿ’

Published:
Updated:

ಮುದ್ದೇಬಿಹಾಳ: ‘ನನಗೆ ಹಣದ ವ್ಯಾಮೋಹ ಇಲ್ಲ. ನನಗೆ ಸಾಕಷ್ಟು ಹಣ ಇದೆ, ಈ ತಾಲ್ಲೂಕಿನ ಅಭಿವೃದ್ಧಿಗಾಗಿ ನಾನು ಇಲ್ಲಿ ಸ್ಪರ್ಧಿಸಿದ್ದೇನೆ. ನೀವು ಈ ಬಾರಿ ಗೆಲ್ಲಿಸಿದರೆ ಮುಖ್ಯಮಂತ್ರಿಯಾಗಿ ತೋರಿಸುವೆ’ ಎಂದು ಜನಸಾಮಾನ್ಯರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಅಭ್ಯರ್ಥಿ ಡಾ.ಅಯ್ಯಪ್ಪ ದೊರೆ ಹೇಳಿದರು.

ಅವರು ಸೋಮವಾರ ಪಟ್ಟಣದ ವಿಬಿಸಿ ಪ್ರೌಢಶಾಲೆ ಆವರಣದಲ್ಲಿ ಜನ ಸಾಮಾನ್ಯರ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

‘ಇಲ್ಲಿ ಒಂದು ಉತ್ತಮ ದವಾಖಾನೆ ಇಲ್ಲ, ನಾರಾಯಣಪೂರ ಆಲಮಟ್ಟಿ ಜಲಾಶಯದ ಮಧ್ಯೆಯೇ ಇದ್ದರೂ ಕಾಲುವೆಗಳಲ್ಲಿ ನೀರು ಹರಿಯದೇ ಜಬ್ಬಲು ಬೆಳೆದು ನಿಂತಿದೆ. ಒಂದು ಉತ್ತಮ ಶಾಲೆ, ಗುಣಮಟ್ಟದ ಆಹಾರ, ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದ ಪರಸ್ಥಿತಿ ಇದೆ. ನನಗೆ ಮತ ನೀಡಿ ಗೆಲ್ಲಿಸಿದರೆ ನಿಮ್ಮ ಮನೆಯ ಮಗನಾಗಿ, ಆಳಾಗಿ ದುಡಿದು ನಿಮ್ಮ ಋಣ ತೀರಿಸುವೆ’ ಎಂದು ಹೇಳಿದರು.

‘ಇದು ವಿಜಯಪುರ ಜಿಲ್ಲೆ ಗಂಡು ಮೆಟ್ಟಿದ ಜಿಲ್ಲೆ. ಇಲ್ಲಿಯ ಮಣ್ಣಿಗೆ ಎಲ್ಲ ಶಕ್ತಿ ಇದ್ದರೂ ಅದನ್ನು ತೋರಿಸುತ್ತಿಲ್ಲ. ಇಲ್ಲಿಯ ಜನ ಬಡವರಾದರೂ ಅವರಿಗೆ ಅವಕಾಶ ಸಿಕ್ಕರೆ ಉತ್ತಮ ಜ್ಞಾನಿಗಳಾಗಿ ಬೆಳೆಯಬಲ್ಲರು. ಸಾವಿರಾರು ಕೋಟಿ ರೂಪಾಯಿಗಳ ಅನುದಾನ ಹಾಸನಕ್ಕೆ ಶಿವಮೊಗ್ಗೆ ಜಿಲ್ಲೆಗೆ ಬರುತ್ತದೆ. ವಿಜಯಪುರಕ್ಕೆ ಏಕಿಲ್ಲ’ ಎಂದು ಪ್ರಶ್ನಿಸಿದರು.

ರಾಜ್ಯ ಕಾರ್ಯದರ್ಶಿ ಸತೀಶ ಟಿ.ವಿ, ಡಾ.ಮೆಹಬೂಬ್ ಮುಲ್ಲಾ, ಪಾವಡೆಪ್ಪ ಹವಾಲ್ದಾರ್, ಕೆ.ಬಿ.ಮೇತ್ರಿ, ಸಂಗಮೇಶ ದೊರೆ, ಅಬ್ದುಲ್ ಹಣಗಿ, ಶ್ರೀಶೈಲ ಬಿಳೇಬಾವಿ, ವಿಶ್ವನಾಥ ಪಾಟೀಲ, ಎ.ಎಚ್.ಮೋಮಿನ್, ಮಹಾಂತೇಶ ಬಿರಾದಾರ, ಸಿದ್ದಣ್ಣ ಆಲಕೊಪ್ಪರ, ರಸೂಲ್‌ಸಾಬ್ ಖಾಜಿ, ವೀರೇಶ ರಕ್ಕಸಗಿ, ಕುಮಾರಪ್ಪ ಕೋರಿ, ಶೌಕತ್ಅಲಿ ಮುಲ್ಲಾ, ಇಮ್ತಿಯಾಜ್ ಜಮಾದಾರ, ಸಂಗಣ್ಣ ಸಂಗಮ, ಮಹೆಬೂಬ ಜಹಾಗಿರದಾರ ಪಾನವಾಲೆ, ಅಶೋಕ ಬೂದಿಹಾಳ, ಶರಣು ದೇಸಾಯಿ ಇದ್ದರು.

ಬಿಜೆಪಿ ತಾಲ್ಲೂಕು ಘಟಕದ ಉಪಾಧ್ಯಕ್ಷ ರಕ್ಕಸಗಿಯ ಶರಣಪ್ಪ ಪಟ್ಟಣಶೆಟ್ಟಿ, ಪದಾಧಿಕಾರಿ ಹಣಮಂತ ಬಿರಾದಾರ ಸೇರಿದಂತೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ತೊರೆದ ಹಲವರನ್ನು ಪಕ್ಷದ ಶಾಲು ಹೊದಿಸಿ, ಧ್ವಜ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

ತಾಲ್ಲೂಕು ಘಟಕದ ಅಧ್ಯಕ್ಷ ವಕೀಲ ಎನ್.ಆರ್.ಮೊಕಾಶಿ, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಯಲ್ಲಪ್ಪ ಹೆಗಡೆ ಮಾತನಾಡಿದರು. ರೈತ ಮೋರ್ಚಾ ಅಧ್ಯಕ್ಷ ಸಿದ್ದನಗೌಡ ಬಿರಾದಾರ ಸ್ವಾಗತಿಸಿದರು. ಜಯಕುಮಾರ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry