ಮೇಲ್ನೋಟಕ್ಕೆ ಮೂವರು; ಒಳನೋಟಕ್ಕೆ ಇಬ್ಬರು

7
ಗುರುಮಠಕಲ್ ವಿಧಾನಸಭಾ ಕ್ಷೇತ್ರ: ಕಣದಲ್ಲಿ 12 ಮಂದಿ ಹುರಿಯಾಳುಗಳು

ಮೇಲ್ನೋಟಕ್ಕೆ ಮೂವರು; ಒಳನೋಟಕ್ಕೆ ಇಬ್ಬರು

Published:
Updated:

ಯಾದಗಿರಿ: ದಿನವೂ ಬದಲಾಗುತ್ತಿರುವ ರಾಜಕೀಯ ಸನ್ನಿವೇಶಗಳಿಂದಾಗಿ ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರ ಗಮನ ಸೆಳೆಯುತ್ತಿದೆ. ಬಿಜೆಪಿಯ ವೆಂಕಟರೆಡ್ಡಿ ಮುದ್ನಾಳ ಕ್ಷೇತ್ರ ಬದಲಿಸಿ ಯಾದಗಿರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಇದರಿಂದ ಉಂಟಾಗಿರುವ ಇರಿಸುಮುರಿಸಿನಿಂದ ಇಲ್ಲಿನ ಬಿಜೆಪಿ ಮುಖಂಡರು ಇನ್ನೂ ಹೊರ ಬಂದಿಲ್ಲ. ಹಾಗಾಗಿ, ಹಗಲು–ರಾತ್ರಿ ಚುನಾವಣಾ ಕಣದಲ್ಲಿನ ಚಿತ್ರಣಗಳು ಬದಲಾಗುತ್ತಿವೆ.

ಈ ಬಾರಿ ಚುನಾವಣಾ ಕಣದಲ್ಲಿ ಒಟ್ಟು 12 ಮಂದಿ ಹುರಿಯಾಳುಗಳು ಸ್ಪರ್ಧಿಸಿದ್ದಾರೆ. ಆದರೆ, ಕಾಂಗ್ರೆಸ್, ಬಿಜೆಪಿ, ಪ್ರಾದೇಶಿಕ ಪಕ್ಷ ಜೆಡಿಎಸ್‌ನ ಅಭ್ಯರ್ಥಿಗಳೇ ಮತದಾರರ ಗಣನೆಯಲ್ಲಿದ್ದಾರೆ. ಗುರುಮಠಲ್‌ ಕ್ಷೇತ್ರದಲ್ಲಿ ಚುನಾವಣೆ ಎಂದೊಡನೆ ಮಲ್ಲಿಕಾರ್ಜುನ ಖರ್ಗೆ ಇಲ್ಲಿನ ಜನರಿಗೆ ನೆನಪಾಗುತ್ತಾರೆ. 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡನೆಯ ನಂತರವೂ ಕಾಂಗ್ರೆಸ್ ಎರಡು ಬಾರಿ ಈ ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಮೂಲಕ ರಾಜ್ಯದ ಕಾಂಗ್ರೆಸ್‌ ಭದ್ರಕೋಟೆ ಅಂತಲೇ ಈ ಕ್ಷೇತ್ರ ಖ್ಯಾತಿ ಪಡೆದಿದೆ.

ಅಂತಹ ಕಾಂಗ್ರೆಸ್ ಭದ್ರಕೋಟೆಯಲ್ಲಿ ಅಧಿಕಾರದ ಅಸ್ತಿತ್ವಕ್ಕಾಗಿ ಜೆಡಿಎಸ್‌ನ ನಾಗನಗೌಡ ಹಗಲಿರುಳು ಕಣ್ಣೆವೆ ಮುಚ್ಚದೇ ಮತಪ್ರಚಾರ ನಡೆಸಿದ್ದಾರೆ. ಮುದ್ನಾಳರ ಬೆಂಬಲಿಗರ ಬೆನ್ನಿಗೆ ಬಿದ್ದು ಜೆಡಿಎಸ್‌ನತ್ತ ಸೆಳೆಯುತ್ತಿದ್ದಾರೆ. ಇದರಿಂದಾಗಿ ಕ್ಷೇತ್ರದಲ್ಲಿ ಜೆಡಿಸ್ ದಿನದಿಂದ ದಿನಕ್ಕೆ ಪ್ರಬಲವಾಗುತ್ತಿದೆ.

ಅಧಿಕಾರ ಉಳಿಸಿಕೊಳ್ಳುವ ಉಮೇದಿಯಲ್ಲಿ ಕಾಂಗ್ರೆಸ್‌ನ ಬಾಬುರಾವ ಚಿಂಚನಸೂರ ಛಿದ್ರಗೊಂಡ ಕಾರ್ಯಕರ್ತರನ್ನು ಒಂದೂಗೂಡಿಸುವಲ್ಲಿ ನಿರತರಾಗಿದ್ದಾರೆ. ಅದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಸಂಬಂಧಿ ರಾಧಾಕೃಷ್ಣ ಅವರನ್ನು ಕ್ಷೇತ್ರಕ್ಕೆ ಕರೆಯಿಸಿ ಪ್ರಚಾರ ಕೂಡ ನಡೆಸಿದ್ದಾರೆ. ಗುರುಮಠಕಲ್‌ನಲ್ಲಿಯ ಖರ್ಗೆ ಅವರ ಬೆಂಬಲಿಗರಲ್ಲಿದ್ದ ಅಸಮಾಧಾನವನ್ನು ರಾಧಾಕೃಷ್ಣ ಶಮನಗೊಳಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ, ಬಾಬುರಾವ ಚಿಂಚನಸೂರ ಅವರಿಗೆ ಇದ್ದ ವಿರೋಧಿ ಅಲೆ ಸ್ವಲ್ಪಮಟ್ಟಿಗೆ ತಣ್ಣಗಾಗಿದೆ. ಇದರಿಂದಾಗಿ ಕಾಂಗ್ರೆಸ್‌ ಮತಪ್ರಚಾರವನ್ನು ಮತ್ತಷ್ಟೂ ಬಿರುಸುಗೊಳಿಸಿದೆ.

ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್‌ನ ಬಾಬುರಾವ ಚಿಂಚನಸೂರ, ಜೆಡಿಎಸ್‌ನ ನಾಗನಗೌಡ ಕಂದಕೂರ ಹಾಗೂ ಬಿಜೆಪಿಯ ಯುವ ಹುರಿಯಾಳು ಸಾಯಿಬಣ್ಣ ಬೋರಬಂಡಾ ಅವರ ಮಧ್ಯೆ ಸೆಣಸಾಟ ಇರುವುದು ಕಂಡಬರುತ್ತದೆ. ಆದರೆ, ಒಳನೋಟ ಹೊಕ್ಕರೆ ಕಾಂಗ್ರೆಸ್– ಜೆಡಿಎಸ್‌ ನಡುವೆ ತೀವ್ರ ಪೈಪೋಟಿ ಕಾಣಿಸುತ್ತದೆ.

ಬಿಜೆಪಿಯ ಸಾಯಿಬಣ್ಣ ಬೋರಬಂಡಾ ಅವರಿಗೆ ಟಿಕೆಟ್‌ ಸಿಕ್ಕಿರುವುದೇ ಬಿಜೆಪಿಯ ಮುಖಂಡರಲ್ಲಿ ಅಚ್ಚರಿ ಹುಟ್ಟಿಸಿದೆ. ಯಾವ ಮಾನದಂಡದ ಮೇಲೆ ವರಿಷ್ಠರು ಸಾಯಿಬಣ್ಣ ಅವರಿಗೆ ಟಿಕೆಟ್‌ ನೀಡಿದ್ದಾರೆ ಎಂಬುದಾಗಿ ಬಿಜೆಪಿಯ ಕಾರ್ಯಕರ್ತರೇ ಪ್ರಶ್ನಿಸಿಕೊಳ್ಳುತ್ತಿದ್ದಾರೆ. ವರಿಷ್ಠರ ತೀರ್ಮಾನ ಸರಿಯಿಲ್ಲ ಎಂಬುದಾಗಿ ಗುರುಮಠಕಲ್‌ನ ಬಿಜೆಪಿ ಯುವ ಘಟಕದ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಗೆ ಮುಂದಾದ ಪ್ರಕರಣ ಗಮನಿಸಿದರೆ ಕ್ಷೇತ್ರದಲ್ಲಿ ಬಿಜೆಪಿ ಬಲಹೀನವಾಗುತ್ತಿದೆ ಅನ್ನಿಸುತ್ತದೆ.

ಇದೇ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗರತ್ನಾ ಕುಪ್ಪಿ ಟಿಕೆಟ್ ಹಂಚಿಕೆಗೂ ಮುಂಚೆ ಟಿಕೆಟ್ ಯಾರಿಗೇ ಸಿಕ್ಕರೂ ಪಕ್ಷಕ್ಕಾಗಿ ದುಡಿಯುವುದಾಗಿ ಘೋಷಿಸಿದ್ದರು. ಆದರೆ, ಟಿಕೆಟ್ ಹಂಚಿಕೆಯ ನಂತರ ಅವರು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಮತಪ್ರಚಾರ ನಡೆಸುತ್ತಿರುವ ಸಾಯಿಬಣ್ಣ ಅವರ ಜತೆ ಪ್ರಮುಖ ಮುಖಂಡರು ಕಾಣಿಸಿಕೊಳ್ಳುತ್ತಿಲ್ಲ.

ಕ್ಷೇತ್ರದಲ್ಲಿ ಹತ್ತಿಕುಣಿ, ಗುರುಮಠಲ್‌, ಸೈದಾಪುರ ಹೋಬಳಿಗಳು ಸೇರಿವೆ. ಹತ್ತಿಕುಣಿ ಹೋಬಳಿಯಲ್ಲಿ ಸಂಪೂರ್ಣ ವೆಂಟಕರೆಡ್ಡಿ ಮುದ್ನಾಳ ಅವರ ಬೆಂಬಲಿಗರೇ ಹೆಚ್ಚಿದ್ದಾರೆ. ಆದರೆ, ಮುದ್ನಾಳ ಅವರು ಟಿಕೆಟ್‌ ಹಂಚಿಕೆಯಾದ ಮೇಲೆ ಗುರುಮಠಕಲ್‌ ಕ್ಷೇತ್ರದಲ್ಲಿ ಸಾಯಿಬಣ್ಣ ಬೋರಬಂಡಾ ಪರವಾಗಿ ಎಲ್ಲೂ ಪ್ರಚಾರ ನಡೆಸಿ ಬೆಂಬಲ ಸೂಚಿಸಿಲ್ಲ. ಇದರಿಂದ ಇಲ್ಲಿನ ಬಿಜೆಪಿ ಕಾರ್ಯಕರ್ತರು, ಮತದಾರರು ಗೊಂದಲದಲ್ಲಿ ಇದ್ದಾರೆ.

ಕೆಲವರು ಜೆಡಿಎಸ್ ಸೇರಿದ್ದಾರೆ. ಹಲವರು ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಮೂಲ ಬಿಜೆಪಿಯ ಕಾರ್ಯಕರ್ತರು ತಟಸ್ಥ ಧೋರಣೆ ಅನುಸರಿಸುತ್ತಿದ್ದಾರೆ. ಹಾಗಾಗಿ, ಮೂರೂ ಹೋಬಳಿಗಳಲ್ಲಿ ಒಂದೊಂದು ಪಕ್ಷಗಳ ಕಡೆ ಒಲವು–ನಿಲುವುಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry