ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾದಿಯರ ಸೇವೆಗೆ ನಮನ...

Last Updated 8 ಮೇ 2018, 19:30 IST
ಅಕ್ಷರ ಗಾತ್ರ

ಆರೋಗ್ಯ ಸೇವಾ ನಿರತ ಬಳಗದಲ್ಲಿ ದಾದಿಯರ ಕರ್ತವ್ಯ ಪರಿಣಾಮಕಾರಿ. ರೋಗಿಗಳ ನೋವು ನಿವಾರಿಸುವ ಪ್ರಯತ್ನವಾಗಿ ಸಹೋದರತೆಯ ಸ್ಪಂದನ, ಸಾಂತ್ವನಗಳಿಂದ ಕಾರ್ಯಶೀಲರಾದ ದಾದಿಯರು ವಿಶ್ವವಂದ್ಯರಾಗಿದ್ದಾರೆ.

ಆಧುನಿಕ ನರ್ಸಿಂಗ್ ವಿಜ್ಞಾನಕ್ಕೆ ಅನುಪಮ ಕೊಡುಗೆ ನೀಡಿದ ಶ್ರೇಷ್ಠ ದಾದಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನ ಮೇ 12. ಈ ದಿನವನ್ನು ವಿಶ್ವ ದಾದಿಯರ ದಿನವನ್ನಾಗಿ ಜಗತ್ತಿನೆಲ್ಲೆಡೆ ಆಚರಿಸಲಾಗುತ್ತಿದೆ. ಭಾರತ, ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯ, ಕೆನಡಾ ಸೇರಿದಂತೆ ಅನೇಕ ದೇಶಗಳಲ್ಲಿ ದಾದಿಯರ ದಿನವನ್ನು ಆಚರಿಸುತ್ತಾರೆ. ಮೇ 6ರಿಂದ 12ವರೆಗೆ ರಾಷ್ಟ್ರೀಯ ದಾದಿಯರ ವಾರ ಎಂದು ಪರಿಗಣಿಸಲಾಗಿದೆ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ದಾದಿಯರ ದಿನವನ್ನು ಆಚರಿಸುತ್ತವೆ. ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದಂದು ಸಾಧಕರಾದ ದಾದಿಯರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕರ್ನಾಟಕ ಸರಕಾರವು ಪ್ರತಿವರ್ಷ ವಿಶ್ವದಾದಿಯರ ದಿನವನ್ನು ಆಚರಿಸುತ್ತದೆ.

1850ರ ಕ್ರೈಮೆನ್ ಯುದ್ಧದ ಗಾಯಾಳುಗಳನ್ನು ಉಪಚರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ, ಸದಾ ಸ್ಮರಣೀಯರಾಗಿರುವ ದಾದಿ ಫ್ಲಾರೆನ್ಸ್ ನೈಟಿಂಗೆಲ್ ಅವರು 1820 ಮೇ 12ರಂದು ಜನಿಸಿದರು. ಲಂಡನ್‍ನ ಬರಾಕ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಾ ಸಾಧನೆ ಮಾಡಿದ ಮಾತೃಹೃದಯಿ.
ಕರ್ತವ್ಯ ತಲ್ಲೀನತೆ, ನರ್ಸಿಂಗ್ ಶಾಲೆಯ ಸ್ಥಾಪನೆ ಮುಂತಾದ ಮಹತ್ತರ ಧ್ಯೇಯೋದ್ದೇಶಗಳನ್ನು ಸಾಧಿಸಿಕೊಂಡು ತನ್ನ ಬದುಕನ್ನು ಆಧುನಿಕ ನರ್ಸಿಂಗ್ ವಿಜ್ಞಾನಕ್ಕೆ ಸಮರ್ಪಿಸಿಕೊಂಡ ಧೀರೋದಾತ್ತ ಮಹಿಳೆ ಫ್ಲಾರೆನ್ಸ್ ನೈಟಿಂಗೇಲ್.

ಇವರ ಸೇವೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ 1953ರಲ್ಲಿ ಅಮೆರಿಕದಲ್ಲಿ ದಾದಿಯರ ದಿನಾಚರಣೆಗೆ ಪ್ರಸ್ತಾವನೆ ಬಂದಿತ್ತು. 1974ರಲ್ಲಿ ಮೊದಲ ಬಾರಿ ದಾದಿಯರ ದಿನವನ್ನು ಆಚರಿಸಲಾಯಿತು. ಈಗ 45ನೆಯ ವರ್ಷಾಚರಣೆಯಲ್ಲಿ ಸಾಗುತ್ತಿರುವ ದಾದಿಯರ ದಿನ ಶುಶ್ರೂಷಾ ಸೇವೆ ಮತ್ತು ಸಾಮಾಜಿಕ ಸ್ಪಂದನೆಯ ಬಹುಮುಖ ಕ್ರಿಯಾಶೀಲತೆಯನ್ನು ವ್ಯಕ್ತಪಡಿಸುತ್ತದೆ.

ಗರ್ಭಿಣಿಯರ ಆರೈಕೆ, ಶಿಶುಳ ಆರೈಕೆ, ವಿವಿಧ ವ್ಯಾಧಿಗಳಿಂದ ಬಳಲುವ ರೋಗಿಗಳ ನೋವು ಶಮನಕ್ಕೆ ಪ್ರಯತ್ನ ಇತ್ಯಾದಿಗಳಿಗೆ ವೈದ್ಯರ ನಿರ್ದೇಶನದಂತೆ ದಾದಿಯರು ಕಾರ್ಯ ನಿರ್ವಹಿಸುತ್ತಾರೆ.

1871ರಲ್ಲಿ ಮದ್ರಾಸ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಕೋರ್ಸ್‌ ಆರಂಭಗೊಂಡಿತ್ತು. 1908ರಲ್ಲಿ ಕೋಲ್ಕತ್ತಾದ ಪ್ರಸಿದ್ಧ ವೈದ್ಯರಾಗಿದ್ದ ಡಾ.ಬಿ.ಸಿ.ರಾಯ್ ಅವರು ಪುರುಷ ಅಭ್ಯರ್ಥಿಗಳನ್ನೂ ನರ್ಸಿಂಗ್ ಕಲಿಕೆಗಾಗಿ ಪ್ರೋತ್ಸಾಹಿಸಿದರು. ಇತ್ತೀಚಿನ ವರ್ಷಗಳಿಂದೀಚೆಗೆ ತುರ್ತುಚಿಕಿತ್ಸೆ, ಮೂಳೆಗಳ ವಿಭಾಗ, ತೀವ್ರ ನಿಗಾ ವಿಭಾಗ, ಮಾನಸಿಕ ವಿಭಾಗ ಇತ್ಯಾದಿ ವಿಭಾಗಗಲ್ಲಿ ಪುರುಷ ದಾದಿಯರು `ಬ್ರದರ್ಸ್' ಆಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಪದವಿ, ಸ್ನಾತಕೋತ್ತರ ಪದವಿ ಇರುವ ನರ್ಸಿಂಗ್ ವಿಜ್ಞಾನದಲ್ಲಿ ಸಂಶೋಧನಾ ವಿಭಾಗವೂ ಇದೆ.

ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೃತ್ತಿನಿರತ ಸಿಸ್ಟರ್ಸ್, ಬ್ರದರ್ಸ್‍ಗಳಿಗೆ ಶುಭಾಶಯ ಸಲ್ಲಬೇಕು.

ಕೆಎಂಸಿಯಲ್ಲಿ ದಾದಿಯರ ದಿನ: ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ದಾದಿಯರ ದಿನವನ್ನು ಮೇ 10ರಂದು ಆಚರಿಸಲಾಗುತ್ತಿದೆ. ಕೆಎಂಸಿಯ ಸಂಸ್ಥಾಪಕರ ದಿನವನ್ನೂ ಇದೇ ವೇಳೆ ಆಚರಿಸಲಾಗುವುದು. ಸಂಸ್ಥೆಯ ಅತ್ಯುತ್ತಮ ನೌಕರರನ್ನು, ಸಾಧಕರಾದ ದಾದಿಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು.

-ಎಲ್.ಎನ್.ಭಟ್ ಮಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT