ಕುಮಾರ ಗಂಧರ್ವರ ಸುಳೇಭಾವಿಯಲ್ಲಿ ಮತ್ತೆ ಸಾಮರಸ್ಯ

7
‘ಕೈ’ಗೆ ಬಾಗಿಲು ತೆರೆದ ಬಿಜೆಪಿ ಕೋಟೆ * ಕಾಂಗ್ರೆಸ್ ಪ್ರಚಾರಕ ಯುವಕರ ಮೋದಿ ಪ್ರೇಮ * ಇಲ್ಲಿ ಲಕ್ಷ್ಮಿಗೆ ಸೈ, ಅಲ್ಲಿ ಯಡಿಯೂರಪ್ಪಗೆ ಜೈ

ಕುಮಾರ ಗಂಧರ್ವರ ಸುಳೇಭಾವಿಯಲ್ಲಿ ಮತ್ತೆ ಸಾಮರಸ್ಯ

Published:
Updated:
ಕುಮಾರ ಗಂಧರ್ವರ ಸುಳೇಭಾವಿಯಲ್ಲಿ ಮತ್ತೆ ಸಾಮರಸ್ಯ

ಕರ್ನಾಟಕದ ಪ್ರಖ್ಯಾತ ಹಿಂದೂಸ್ತಾನಿ ಗಾಯಕ ದಿವಂಗತ ಕುಮಾರ ಗಂಧರ್ವ ಅವರ ಮೇಧಾವಿ ಮಗ ಮುಕುಲ್ ಶಿವಪುತ್ರ, ಮಧ್ಯಪ್ರದೇಶದ ಉಜ್ಜಯಿನಿ ದೇವಾಲಯದ ಮುಂದೆ ಭಿಕ್ಷೆ ಬೇಡುವ ಪರಿ ಉತ್ತರ ಭಾರತದಲ್ಲಿ ದೊಡ್ಡ ಸುದ್ದಿಯಾಗಿತ್ತು. ಖಿನ್ನತೆಯಿಂದ ಹೊರಬಂದಿರುವ ಅಸಾಧಾರಣ ಪ್ರತಿಭೆ ಮುಕುಲ್ ಮತ್ತೆ ಹಾಡತೊಡಗಿರುವುದು ಚೇತೋಹಾರಿ ಸಂಗತಿ.

ಬೆಳಗಾವಿಯ ಪತ್ರಕರ್ತ ಮಿತ್ರರೊಬ್ಬರು ‘ಸುಳೇಭಾವಿಗೆ ಹೋಗೋಣ ಬರ‍್ರಿ’ ಎಂದು ಕರೆದರು. ‘ಏನಾದರೂ ವಿಶೇಷ ಇಲ್ಲದಿದ್ದರೆ ಯಾಕೆ ಹೋಗೋದು’ ಎಂದೆ. ‘ಅಲ್ಲಿ ಕುಮಾರ ಗಂಧರ್ವರ ಹಳೇ ಮನೆ ಈಗಲೂ ಇದೆ’ ಎಂದಾಗ ತಡೆಯಲಾಗಲಿಲ್ಲ. ರಾತ್ರಿ ಒಂಬತ್ತು ದಾಟಿದ್ದ ಸಂಗತಿಯೂ ಲೆಕ್ಕಕ್ಕೆ ಬರಲಿಲ್ಲ. ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ಹದಿನೈದು ಕಿ.ಮೀ ಸಾಗಿ, ಎಡಕ್ಕೆ ಹೊರಳಿ ಎರಡು ಕಿ.ಮೀ ಕ್ರಮಿಸಿದರೆ ಅದೇ ಸುಳೇಭಾವಿ.

ಹತ್ತು ದಾಟಿದ್ದರಿಂದ ಬಹುತೇಕ ಮೌನ ಹೊದ್ದು ಕದವಿಕ್ಕಿ ಮಲಗಿತ್ತು. ಕುಮಾರ ಗಂಧರ್ವರು ಹುಟ್ಟಿದ ಮನೆಯಲ್ಲಿ ಹಳ್ಳಿ ಹೋಟೆಲು ನಡೆಸುತ್ತಾ ಅದರಲ್ಲೇ ವಾಸವಿರುವ ರುದ್ರಪ್ಪ ನಾಗನೂರು- ಪಾರ್ವತವ್ವ ದಂಪತಿ ನಗೆಮೊಗದಿಂದಲೇ ಒಳ ಕರೆದದ್ದು ಅವರ ದೊಡ್ಡತನ. ಕುಮಾರ ಗಂಧರ್ವರು ಹುಟ್ಟಿದ ಈ ಮನೆ ಈಗಲೂ ಹೆಚ್ಚೂಕಡಿಮೆ ಅಂದಿನಷ್ಟೇ ಭದ್ರ. ಶಿವರುದ್ರಪ್ಪ ಸಿದ್ದರಾಮಯ್ಯ ಕೊಂಕಾಳಿಮಠ ಅವರು ಕುಮಾರ ಗಂಧರ್ವ ಎಂದೇ ಖ್ಯಾತರಾಗಿ 1947ರ ಹೊತ್ತಿಗೆ ಮಧ್ಯಪ್ರದೇಶದ ದೇವಸ್ ಸೇರಿದ್ದು, ಶ್ವಾಸಕೋಶದ ಕ್ಯಾನ್ಸರ್ ಬಂದು ಶಸ್ತ್ರಚಿಕಿತ್ಸೆಯ ನಂತರ ಹಾಡುಗಾರಿಕೆ ನಿಂತು, ಮತ್ತೆ ಶುರುವಾದದ್ದು ದೊಡ್ಡ ರೋಚಕ ಸಿನಿಮೀಯ ಕತೆ.

ಕುಮಾರ ಗಂಧರ್ವರ ತಂದೆ ಮತ್ತು ರುದ್ರಪ್ಪ ನಾಗನೂರು ಅವರ ತಂದೆ ಮಲ್ಲೇಶಪ್ಪ ಗೆಳೆಯರು– ಸಹಪಾಠಿಗಳು. ಮನೆಯನ್ನು ರುದ್ರಪ್ಪ ಅವರ ತಂದೆಗೆ ಮಾರಲಾಗಿತ್ತು. ಮನೆಯ ವಿಶಾಲ ಹಜಾರ ಮಲ್ಲೇಶಪ್ಪನವರ ಕಾಲದಲ್ಲೇ ಹೋಟೆಲಾಗಿತ್ತು. ಸನಿಹದ ಸಾಂಬ್ರಾ ವಾಯು ನೆಲೆಯಿಂದ ಬ್ರಿಟಿಷ್ ಅಧಿಕಾರಿಗಳು ಚಹಾ ಕುಡಿಯಲು ಈ ಹೋಟೆಲಿಗೆ ಬರುತ್ತಿದ್ದರು, ತುಂಬಿಸಿಕೊಂಡೂ ಒಯ್ಯುತ್ತಿದ್ದರು ಎಂದು ರುದ್ರಪ್ಪ ಹೇಳುತ್ತಾರೆ. ಹೆಚ್ಚೂ ಕಡಿಮೆ ಏಳು ದಶಕಗಳಷ್ಟು ಹಳೆಯ ಈ ಹೋಟೆಲ್ ಆಗಿನ ಕಾಲಕ್ಕೆ ಬಹಳ ಪ್ರಸಿದ್ಧವಂತೆ.

ಹತ್ತು ಹನ್ನೆರಡು ಕೊಡ ನೀರು ಹಿಡಿಯುವ ದೊಡ್ಡ ಗುಡಾಣ, ತಲೆಬಾಗಿಲಿನ ಮೇಲೆ ಇಟ್ಟಿರುವ ಚೌಕಾಕೃತಿಯ ದೊಡ್ಡ ಕನ್ನಡಿ ಹಾಗೂ ಹಿತ್ತಿಲಿನಲ್ಲಿನ ಪತ್ರೆ ಮರದ ಕೆಳಗೆ ಪುಟ್ಟ ಈಶ್ವರ ನಂದಿಯ ವಿಗ್ರಹಗಳಷ್ಟೇ ಕುಮಾರ ಗಂಧರ್ವರ ಕಾಲದಿಂದ ಈಗಲೂ ಉಳಿದು ಬಂದಿರುವ ಕುರುಹುಗಳು.

1992ರಲ್ಲಿ ನಿಧನರಾಗುವವರೆಗೆ ಆಗಾಗ ಸುಳೇಭಾವಿಯ ಮನೆಗೆ ಬಂದು, ಊರಿನ ಮಹಾಲಕ್ಷ್ಮಿ ದೇವಾಲಯದಲ್ಲಿ ಹಾಡಿ ಹೋಗುತ್ತಿದ್ದರು ಕುಮಾರ ಗಂಧರ್ವ. ಆನಂತರ ಅವರ ವಂಶಸ್ಥರು ಇಲ್ಲಿಗೆ ಬಂದದ್ದು ಅಪರೂಪ. ಅವರು ಹಾಡುತ್ತಿದ್ದ ದೇವಾಲಯ ನೋಡಲೆಂದು ಹೊರಟರೆ, ಕಣ್ಣಿಗೆ ಬಿದ್ದದ್ದು ಎರಡಾಳೆತ್ತರದ ಲಂಬಾಕೃತಿಯ ಬಜರಂಗದಳದ ಹಳೆಯ ಮಾಸಲು ಬೋರ್ಡು. ಸ್ವಲ್ಪ ಮುಂದೆ ಸಾಗಿದರೆ ಇತ್ತೀಚಿನ ರಾಮನವಮಿ ಶೋಭಾಯಾತ್ರೆಯ ಭಿತ್ತಿಪತ್ರಗಳು. ಬಾಗಿಲು ಹಾಕಿದ್ದ ಮಹಾಲಕ್ಷ್ಮಿ ದೇವಾಲಯದೊಳಕ್ಕೆ ಇಣುಕಿ, ಒಂದು ಕಾಲದ ಗಂಧರ್ವ ಗಾಯನವನ್ನು ಕಲ್ಪಿಸಿಕೊಳ್ಳುತ್ತಿದ್ದಂತೆ ಮಿತ್ರರು ಹೇಳಿದರು- ಈ ಗುಡಿಯ ಪೂಜಾರಿ ನಾಯಕ ಜನಾಂಗದವರು. ಈ ಭಾಗದ ಬಹುತೇಕ ಲಕ್ಷ್ಮಿ ದೇವಾಲಯಗಳಿಗೆ ಅವರೇ ಅರ್ಚಕರಂತೆ.

ವಾಪಸು ಹೊರಟರೆ ದಾರಿಯಲ್ಲಿ ಮೂರ್ನಾಲ್ಕು ಅಡಿ ಎತ್ತರದ ಗೂಡಿನಲ್ಲಿದ್ದ ದೇವರು ಕರೆಮ್ಮ (ಕರಿಯಮ್ಮ). ಅದರ ಪಕ್ಕದಲ್ಲಿ ತಲೆಯೆತ್ತಿ ನೋಡಬೇಕಾದ ಎತ್ತರದ ಧ್ವಜಸ್ತಂಭದಲ್ಲಿ ಹಾರುವ ಭಗವಾಧ್ವಜ. ಧ್ವಜಸ್ತಂಭ ಮತ್ತು ಕರೆಮ್ಮ ಗುಡಿಯ ಕೆಲವೇ ಅಡಿಗಳಷ್ಟು ಹಿಂದೆ ದೊಡ್ಡದೊಂದು ಮಸೀದಿ. ವಿಚಿತ್ರ ನೋಟ. ಮೊದಲು ಇದ್ದದ್ದು ಕರೆಮ್ಮ ಗುಡಿ. ಆನಂತರ ಕಟ್ಟಿದ್ದು ಮಸೀದಿ. ಎಲ್ಲವೂ ಅನ್ಯೋನ್ಯವಾಗಿದ್ದ ಕಾಲದಲ್ಲಿ, ಕರೆಮ್ಮನ ಗುಡಿಗೆ ಕೆಲವೇ ಅಡಿಗಳ ದೂರದಲ್ಲಿ ಮಸೀದಿ ಕಟ್ಟಿಕೊಳ್ಳಲು ಊರಿನ ಹಿರಿಯರು ಬಿಟ್ಟಿದ್ದರಂತೆ. ನಮ್ಮದೂ ಒಂದು ದೇವರ ಗುಡಿ, ಅದೂ (ಮಸೀದಿ) ಒಂದು ದೇವರ ಗುಡಿ, ಕಟ್ಟಿಕೊಳ್ಳವಲ್ಯ್ರಾಕ ಎಂಬುದು ಅಂದಿನ ಸಹನಶೀಲತೆ. ಮೊದಲು ಸಣ್ಣದಿದ್ದ ಮಸೀದಿ ಆನಂತರ ದೊಡ್ಡದಾಯಿತು. ಆದರೂ ಅದರ ಬಗ್ಗೆ ಚರ್ಚೆ ಇರಲಿಲ್ಲ. 2002ರ ಹೊತ್ತಿಗೆ ಊರಿಗೆ ಬಜರಂಗದಳದ ಪ್ರವೇಶ ಆಯಿತು. ಕರೆಮ್ಮನ ಗುಡಿ ಪಕ್ಕ ಮಸೀದಿಯ ಕೆಲವೇ ಅಡಿ ದೂರದಲ್ಲಿ, ದಿನ ಬೆಳಗಾಗುವುದರಲ್ಲಿ ಸಿಮೆಂಟು ಕಟ್ಟೆ ಕಟ್ಟಿ ಭಗವಾಧ್ವಜ ಪಟಪಟಿಸಿತು. ಹಿಂದೂ-ಮುಸ್ಲಿಮರು ಸೇರಿ ವಿಜೃಂಭಣೆಯಿಂದ ಆಚರಿಸುತ್ತಿದ್ದ ಮೊಹರಂ ಹಬ್ಬಕ್ಕೆ ಸಂಚಕಾರ. ಎರಡು ಕೋಮುಗಳ ನಡುವೆ ಬಿಗುವಿನ ಸ್ಥಿತಿ, ಗಲಭೆ, ಪೊಲೀಸ್ ಪಹರೆ. ಸುತ್ತಮುತ್ತಲ ಸೀಮೆಯಲ್ಲಿ ಕೋಮುಗಲಭೆಯ ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಸುಳೇಭಾವಿ ಪೊಲೀಸ್ ದಾಖಲೆಗಳಲ್ಲಿ ನಮೂದಾಯಿತು. ಹತ್ತು ವರ್ಷಗಳ ಕಾಲ ಕೋರ್ಟಿನಲ್ಲಿ ಕೇಸುಗಳು. ಪೊಲೀಸ್ ಠಾಣೆ ಮತ್ತು ಕೋರ್ಟಿಗೆ ಅಲೆದಾಟ. ವಕೀಲರಿಗೆ ಫೀಜು. ಭಗವಾ ಹುಡುಗರು ಬಸವಳಿದರು. ಪ್ರಮೋದ ಮುತಾಲಿಕರು ಬಜರಂಗದಳವನ್ನು ತೊರೆಯುವಂತಾಯಿತು. ಸುಳೇಭಾವಿಗೆ ಬರುವುದೂ ನಿಂತಿತು. ಕಾಲ ಉರುಳಿದಂತೆ ಬಜರಂಗದಳದ ಬೋರ್ಡು ಮಾಸಿತು. ಈಗ ಮಸೀದಿ-ಕರೆಮ್ಮ-ಭಗವಾಧ್ವಜದ ಸಹ ಬಾಳ್ವೆ ಕಾಣಬಹುದು. ಅನ್ಯೋನ್ಯತೆಯ ಮೊಹರಂ ಆಚರಣೆ ಮತ್ತೆ ಆರಂಭ ಆಗಿದೆ. ಕೆಲವು ಹುಡುಗರು ಈಗಲೂ ಭಗವಾಧ್ವಜವನ್ನು ನೋಡಿಕೊಳ್ಳುತ್ತಾರೆ. ಹಳೆಯದಾದರೆ ಹೊಸದನ್ನು ಏರಿಸುತ್ತಾರೆ. ಆದರೆ ಮೊದಲಿನ ಕೋಮು ಕಿಚ್ಚು ಈಗ ಕಾಣದು. ನೇಕಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಊರು ಹಿಂದೂ-ಮುಸ್ಲಿಂ ಕಥನವನ್ನು ಹಿಂದೆ ತಳ್ಳಿ, ಅನ್ನ ನೀರು ನೆರಳಿನ ಚಿಂತೆಗೆ ಮರಳಿದೆ. ಈ ಮುನ್ನ ಬಿಜೆಪಿಯ ಭದ್ರಕೋಟೆ ಎನಿಸಿದ್ದ ಸುಳೇಭಾವಿ ಈಗ ಕಾಂಗ್ರೆಸ್ಸಿಗೂ ತೆರೆದಿದೆ. ಬೆಳಗಾವಿ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಹುರಿಯಾಳು ಲಕ್ಷ್ಮಿ ಹೆಬ್ಬಾಳ್ಕರ ಮತ್ತು ಬಿಜೆಪಿಯ ಹಾಲಿ ಶಾಸಕ ಸಂಜಯ ಪಾಟೀಲ ಇಲ್ಲಿ ಮುಖಾಮುಖಿಯಾಗಿದ್ದಾರೆ.

ಮುಂದೆ ಎಂದಾದರೂ ಮತ್ತೆ ಕೋಮು ಸಾಮರಸ್ಯ ಕದಡುವ ಕಿಡಿ ಇಲ್ಲಿ ಹಾರುವುದೇ ಎಂದರೆ, ‘ಇಲ್ಲ’ ಎನ್ನುತ್ತಾರೆ ಸ್ಥಳೀಯರು.

ಬೀಳ್ಕೊಂಡು ಬೆಳಗಾವಿಗೆ ಮರಳುವ ದಾರಿಯಲ್ಲಿ ಊಟಕ್ಕೆಂದು ರಸ್ತೆ ಪಕ್ಕದ ಡಾಬಾದತ್ತ ಹೊರಳಿದರೆ, ಸಾಲುಗಟ್ಟಿ ನಿಂತ ಬಗೆ ಬಗೆಯ ವಾಹನಗಳು. ರಾಜಕೀಯ ಪಕ್ಷಗಳ ಕಾರ್ಯಕರ್ತರು. ಮರಿ ಮುಖಂಡರು. ಗಿಡಗಳ ಮರೆಯ ದೊಡ್ಡ ಮೇಜಿನ ಸುತ್ತ ಕುಳಿತ ಪಡ್ಡೆಗಳು ದಿನದ ಪ್ರಚಾರ ಕಾರ್ಯ ಮುಗಿಸಿ ವಿರಮಿಸಿದ್ದರು. ನಶೆಯೇರಿತ್ತು. ಏರಿದ ದನಿಯಲ್ಲಿ ಮಾತುಕತೆ. ಅವಾಚ್ಯ, ಅಸಭ್ಯ ಮಾತುಗಳು. ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದರೂ ಬಿಜೆಪಿಯ ಅಭಿಮಾನಿಗಳು. ನಡು ನಡುವೆ ಮೋದಿಯವರಿಗೆ ಮತ್ತು ಯಡಿಯೂರಪ್ಪ ಅವರಿಗೆ ಜೈಕಾರ.

ಊಟ ಮುಗಿಸಿ ಹೊರಟಾಗ ಆ ಗುಂಪಿನ ಕಡೆಯಿಂದ ಕಿವಿಗೆ ಬಿದ್ದ ಮಾತು- ಸ್ಥಳೀಯವಾಗಿ ಲಕ್ಷ್ಮಿ ಹೆಬ್ಬಾಳ್ಕರ (ಬೆಳಗಾವಿ ಗ್ರಾಮಾಂತರ ಅಭ್ಯರ್ಥಿ) ಗೆಲ್ಲಬೇಕು, ಆದರೆ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕು. ಅಚ್ಛೇ ದಿನ್‌ ಆಯೇಂಗೇ... ಅಚ್ಛೇ ದಿನ್ ಆಯೇಂಗೇ... ಪಂದ್ರಾಹ್ ತಾರೀಖ್ ಕೋ ಅಚ್ಛೇ ದಿನ್‌ ಆಯೇಂಗೇ... (ಒಳ್ಳೆಯ ದಿನಗಳು ಬರುತ್ತವೆ... ಬಂದೇ ಬರುತ್ತವೆ... ಇದೇ 15ನೇ ತೇದಿಯಂದು ಬರುತ್ತವೆ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry