ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಯ ವಿರುದ್ಧ ಲಂಡನ್‌ ಕೋರ್ಟ್‌ ತೀರ್ಪು

Last Updated 8 ಮೇ 2018, 19:30 IST
ಅಕ್ಷರ ಗಾತ್ರ

ಲಂಡನ್‌: ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಉದ್ಯಮಿ ವಿಜಯ್‌ ಮಲ್ಯಗೆ ಭಾರಿ ಹಿನ್ನಡೆಯಾಗಿದೆ.

ಭಾರತದ ಬ್ಯಾಂಕ್‌ಗಳು ಮಲ್ಯ ವಿರುದ್ಧ ದಾಖಲಿಸಿದ್ದ ₹10 ಸಾವಿರ ಕೋಟಿ ಸಾಲ ವಂಚನೆ ಪ್ರಕರಣದ ತೀರ್ಪು ಮಂಗಳವಾರ ಹೊರಬಿದ್ದಿದೆ. ಭಾರತದ 13 ಬ್ಯಾಂಕುಗಳ ಒಕ್ಕೂಟದ ವಾದವನ್ನು ಲಂಡನ್‌ ನ್ಯಾಯಾಲಯ ಎತ್ತಿ ಹಿಡಿದಿದೆ.

ಮಲ್ಯ ವಂಚನೆ ಪ್ರಕರಣದ ಸಂಬಂಧ ಭಾರತದ ನ್ಯಾಯಾಲಯ ನೀಡಿದ ಆದೇಶದ ಅನುಸಾರ ನಡೆದುಕೊಳ್ಳುವಂತೆ ನ್ಯಾಯಾಧೀಶ ಆ್ಯಂಡ್ರೂ ಹೆನ್‌ಶಾ ಅವರು ಬ್ಯಾಂಕ್‌ಗಳಿಗೆ ಸೂಚಿಸಿದ್ದಾರೆ.

ಮಲ್ಯ ತಮ್ಮ ಒಡೆತನದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ಗಾಗಿ ಭಾರತದ ವಿವಿಧ ಬ್ಯಾಂಕ್‌ಗಳಿಂದ ಅಂದಾಜು ₹9000 ಕೋಟಿ ಸಾಲ ಪಡೆದು ಮರು ಪಾವತಿಸದೆ ವಂಚಿಸಿರುವುದು ನಿಜ. ಮಲ್ಯ ಉದ್ದೇಶಪೂರ್ವಕ ಸುಸ್ತಿದಾರ ಎನ್ನುವ ಆರೋಪದಲ್ಲಿ ಹುರುಳಿದೆ ಎಂದು ಅವರು ಹೇಳಿದ್ದಾರೆ.

ಆಸ್ತಿ ಮುಟ್ಟುಗೋಲು ಆದೇಶ ರದ್ದು ಮಾಡುವಂತೆ ಮಲ್ಯ ಪರ ವಕೀಲರು ಮಾಡಿಕೊಂಡ ಮನವಿಯನ್ನೂ ನ್ಯಾಯಾಧೀಶ ಆ್ಯಂಡ್ರೂ ವಜಾಗೊಳಿಸಿದ್ದಾರೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುಮತಿ ನಿರಾಕರಿಸಿದ್ದಾರೆ.

‘ನಾವು ಭಾರತದ ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳುತ್ತೇವೆ’ ಎಂದು  ಬ್ಯಾಂಕ್‌ಗಳ ಪರ ವಕೀಲರು ಪ್ರತಿಕ್ರಿಯಿಸಿದ್ದಾರೆ.

ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಲು ಮಲ್ಯ ಪರ ವಕೀಲರು ನಿರಾಕರಿಸಿದ್ದಾರೆ. ಸದ್ಯ, ವಿಜಯ್‌ ಮಲ್ಯ ಲಂಡನ್‌ನಲ್ಲಿ ನೆಲೆಸಿದ್ದಾರೆ.

ಮಲ್ಯ ಆಸ್ತಿ ಮುಟ್ಟುಗೋಲಿಗೆ ಮತ್ತೆ ಆದೇಶ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಉದ್ಯಮಿ ವಿಜಯ್‌ ಮಲ್ಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ದೆಹಲಿ ನ್ಯಾಯಾಲಯ ಮಂಗಳವಾರ ಹೊಸದಾಗಿ ಆದೇಶ ಹೊರಡಿಸಿದೆ.

ಆಸ್ತಿ ಮುಟ್ಟುಗೋಲಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಕ್ಕೆ ಇದುವರೆಗೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಮಲ್ಯ ಆಸ್ತಿ ಮುಟ್ಟುಗೋಲಿಗೆ ಮತ್ತೊಮ್ಮೆ ಆದೇಶ ಹೊರಡಿಸಿತು. ಅರ್ಜಿಯ ಮುಂದಿನ ವಿಚಾರಣೆಯನ್ನು ಜುಲೈ 5ಕ್ಕೆ ನಿಗದಿ ಪಡಿಸಿದೆ.

ವಿದೇಶಿ ವಿನಿಮಯ ನಿಯಮ ಉಲ್ಲಂಘನೆಗೆ (ಫೆರಾ) ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಮನ್ಸ್ ಉಲ್ಲಂಘಿಸಿರುವ ಮಲ್ಯ ಆಸ್ತಿ ಮುಟ್ಟುಗೋಲಿಗೆ ಅನುಮತಿ ಕೋರಿ ಜಾರಿ ನಿರ್ದೇಶನಾಲಯ ನ್ಯಾಯಾಲಯದ ಮೊರೆ ಹೋಗಿತ್ತು.

ಅರ್ಜಿಯ ವಿಚಾರಣೆ ನಡೆಸಿದ್ದ ದೆಹಲಿಯ ನ್ಯಾಯಾಲಯ, ಬೆಂಗಳೂರು ಪೊಲೀಸ್‌ ಕಮಿಷನರ್‌ ಮೂಲಕ ಮಲ್ಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಮಾರ್ಚ್‌ 27ರಂದು ನಿರ್ದೇಶನ ನೀಡಿತ್ತು.

ಯುಬಿಎಲ್‌ 4.13 ಕೋಟಿ ಷೇರು ಇ.ಡಿ ಕೈವಶ

ವಿಜಯ್ ಮಲ್ಯ ಈ ಹಿಂದೆ ಮುಖ್ಯಸ್ಥರಾಗಿದ್ದ ಯುನೈಟೆಡ್‌ ಬ್ರೂವರೀಸ್‌ ಲಿಮಿಟೆಡ್‌ನ (ಯುಬಿಎಲ್‌) 4.13 ಕೋಟಿ ಷೇರುಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಇದರೊಂದಿಗೆ ಜಾರಿ ನಿರ್ದೇಶನಾಲಯವು ಯುಬಿಎಲ್‌ನಲ್ಲಿ 4. 27ಕೋಟಿ ಷೇರು (ಶೇ 16.15ರಷ್ಟು) ಹೊಂದಿದಂತಾಗಿದೆ. ಎಂಟು ಪ್ರವರ್ತಕ ಕಂಪನಿಗಳು ಶೇ 15.63ರಷ್ಟು ಷೇರು ಹೊಂದಿವೆ.

ಷೇರುಪೇಟೆಯ ನಿಯಂತ್ರಣ ಸಂಸ್ಥೆಗಳಿಗೆ ಯುಬಿಎಲ್‌ ಸಲ್ಲಿಸಿದ ಮಾಹಿತಿಯಲ್ಲಿ ಈ ವಿಷಯವನ್ನು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT