ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗು ತುಂಬಿದೆ ಕಣ: ಬದಲಾಗುವುದೇ ಏಕತಾನತೆಯ ಪಯಣ?

Last Updated 8 ಮೇ 2018, 19:30 IST
ಅಕ್ಷರ ಗಾತ್ರ

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದೆರಡು ಚುನಾವಣೆಗಳ ಫಲಿತಾಂಶವು ಒಂದೇ ತೆರನಾಗಿದೆ. ಈ ಬಾರಿ ಮತದಾರರು ಬೇರೆಯೇ ತೀರ್ಪು ನೀಡಲಿದ್ದಾರೆಯೇ ಎಂಬ ಬಗ್ಗೆ ಕುತೂಹಲವಿದೆ.

ಜೆಡಿಎಸ್ ಮುಖ್ಯಮಂತ್ರಿ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಈ ಚುನಾವಣೆಯಲ್ಲಿ ರಾಮನಗರದ ಜೊತೆಗೆ ಚನ್ನಪಟ್ಟಣದಲ್ಲಿಯೂ ಸ್ಪರ್ಧೆಗೆ ಇಳಿದಿರುವುದು ವಿಶೇಷ. ಹೀಗಾಗಿ ಅಲ್ಲಿನ ಚುನಾವಣೆ ಇನ್ನಷ್ಟು ರಂಗು ತುಂಬಿಕೊಂಡಿದೆ. ಒಂದೊಂದು ಕ್ಷೇತ್ರವೂ ಬಹುಮುಖ್ಯ ಎಂಬುದು ಕುಮಾರಸ್ವಾಮಿ ಅವರಿಗೆ ಮನವರಿಕೆ ಆದಂತೆ ಇದೆ. ಕಳೆದ ಬಾರಿ ಇಲ್ಲಿ ಅವರ ಪತ್ನಿ ಅನಿತಾ ಪರಾಭವಗೊಂಡಿದ್ದರು. ಆದರೆ, ಈ ಬಾರಿ ಜೆಡಿಎಸ್ ಅಲೆ ಇದೆ ಎಂಬ ಕಾರಣಕ್ಕೆ ಎಚ್‌ಡಿಕೆ ಸ್ವತಃ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಎಚ್‌.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಇಬ್ಬರೂ ಜಿಲ್ಲೆಯಿಂದಲೇ ಗೆದ್ದು ಮುಖ್ಯಮಂತ್ರಿ ಆದವರು. ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಗೌಡರ ಕುಟುಂಬಕ್ಕೆ ಹೊಸತೇನೂ ಅಲ್ಲ. 1985ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರು ಹೊಳೆನರಸೀಪುರದ ಜೊತೆಗೆ ಇಲ್ಲಿನ ಸಾತನೂರು ಕ್ಷೇತ್ರದಿಂದಲೂ ಸ್ಪರ್ಧೆ ಎದುರಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಗೆದ್ದ ಬಳಿಕ ಇಲ್ಲಿ ರಾಜೀನಾಮೆ ನೀಡಿದ್ದರು. 1989ರ ಚುನಾವಣೆಯಲ್ಲಿ ಅವರು ಕನಕಪುರ ಹಾಗೂ ಹೊಳೆನರಸೀಪುರ ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ್ದರು. ಆದರೆ ಎರಡೂ ಕ್ಷೇತ್ರಗಳಲ್ಲಿ ಮುಖಭಂಗ ಅನುಭವಿಸಬೇಕಾಯಿತು.

ಈ ಬಾರಿ ಕುಮಾರಸ್ವಾಮಿ ಅವರಿಗೆ ಒಂದೆಡೆ, ರಾಮನಗರದಲ್ಲಿ ಡಿಕೆಎಸ್ ಸಹೋದರರ ಬೆಂಬಲದಿಂದ ಅಭ್ಯರ್ಥಿಯಾಗಿರುವ ಇಕ್ಬಾಲ್ ಹುಸೇನ್‌ ಪೈಪೋಟಿ ಒಡ್ಡಿದ್ದಾರೆ. ಚನ್ನಪಟ್ಟಣದಲ್ಲಂತೂ ಅವರು ತ್ರಿಕೋನ ಸ್ಪರ್ಧೆ ಎದುರಿಸಬೇಕಿದೆ.

ಜಿಲ್ಲೆಯಲ್ಲಿ ಪ್ರಮುಖವಾಗಿ ಚರ್ಚೆಯಲ್ಲಿ ಇರುವ ಮತ್ತೊಂದು ಸಂಗತಿ ಎಂದರೆ ಪಕ್ಷಾಂತರದ್ದು. ಈ ಬಾರಿ ಜಿಲ್ಲೆಯ ಇಬ್ಬರು ಶಾಸಕರು ತಮ್ಮ ಪಕ್ಷ ನಿಷ್ಠೆ ಬದಲಿಸಿದ್ದಾರೆ. 2008ರ ಚುನಾವಣೆಯ ನಂತರ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಚನ್ನಪಟ್ಟಣದ ಶಾಸಕ ಸಿ.ಪಿ.ಯೋಗೇಶ್ವರ್‌ ಮರು ವರ್ಷದ ಉಪ
ಚುನಾವಣೆಯಲ್ಲಿ ಮುಖಭಂಗ ಅನುಭವಿಸಬೇಕಾಯಿತು. ನಂತರದ ಮತ್ತೊಂದು ಉಪ ಚುನಾವಣೆಯಲ್ಲಿ ಅವರು ಬಿಜೆಪಿಯಿಂದ ಗೆದ್ದು ಸಚಿವರೂ ಆದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಿಸಿ, ಸಿಗದಿದ್ದಾಗ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಗೆದ್ದು ಬೀಗಿದರು. ಮೊದಲ ಪಕ್ಷಾಂತರಕ್ಕೆ ಪಾಠ ಕಲಿಸಿದ್ದ ಮತದಾರರು ಎರಡನೇ ಬಾರಿ ಅವರನ್ನು ಅಪ್ಪಿಕೊಂಡಿದ್ದರು. ಈ ಬಾರಿ ಯೋಗೇಶ್ವರ್‌ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ನೀರಾವರಿ ಯೋಜನೆಯಿಂದ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಂಡಿರುವ ಅವರಿಗೆ ಪಕ್ಷಾಂತರದ ಸಂಗತಿಯು ಮುಳುವಾಗುತ್ತದೆಯೇ ಇಲ್ಲ ವರವಾಗುತ್ತದೆಯೇ ಎಂಬುದನ್ನು ಮತದಾರರು ನಿರ್ಧರಿಸಲಿದ್ದಾರೆ.

ಒಂದು ಕಾಲದಲ್ಲಿ ಕುಮಾರಸ್ವಾಮಿಯವರ ಸಹೋದರನಂತಿದ್ದ ಎಚ್.ಸಿ.ಬಾಲಕೃಷ್ಣ ಇಂದು ಜೆಡಿಎಸ್‌ನಿಂದ ಬಂಡಾಯ ಎದ್ದು ಕಾಂಗ್ರೆಸ್‌ ಪಾಳಯ ಸೇರಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಮಾಗಡಿ ಕ್ಷೇತ್ರದಲ್ಲಿ ಅವರ ವಿರುದ್ಧ ಜೆಡಿಎಸ್ ರಣಕಹಳೆ ಊದುತ್ತಿದೆ. ಕೆಂಪೇಗೌಡರು ಆಳಿ ಹೋದ ಕೋಟೆ ಮೈದಾನದಲ್ಲಿ ಉಭಯ ಪಕ್ಷಗಳು ಭರ್ಜರಿ ಸಮಾವೇಶಗಳ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾಗಿದೆ. ಬಾಲಕೃಷ್ಣ ಅವರು ಡಿ.ಕೆ. ಶಿವಕುಮಾರ್ ಪಡೆ ಸೇರಿಕೊಂಡಿದ್ದು, ಅವರ ಬೆಂಬಲದೊಂದಿಗೆ ಐದನೇ ಬಾರಿ ಶಾಸಕರಾಗುವ ಪ್ರಯತ್ನದಲ್ಲಿ ಇದ್ದಾರೆ. ಕಳೆದ ಬಾರಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ.ಮಂಜುನಾಥ್‌ ಅವರನ್ನು ಜೆಡಿಎಸ್‌ಗೆ ಕರೆತಂದು, ಅವರಿಗೆ ಪಟ್ಟ ಕಟ್ಟಲು ದೇವೇಗೌಡ ಪ್ರಯತ್ನ ನಡೆಸಿದ್ದಾರೆ.

ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ನಂತರ ಪರಾಜಿತಗೊಂಡು ಕ್ಷೇತ್ರ ಬದಲಿಸಿದ್ದ ಎಚ್.ಎಂ. ರೇವಣ್ಣ ಅವರನ್ನು ಈ ಬಾರಿ ಕಾಂಗ್ರೆಸ್ ಚನ್ನಪಟ್ಟಣದಲ್ಲಿ ಸ್ಪರ್ಧೆಗೆ ಇಳಿಸಿರುವುದರ ಹಿಂದೆ ಯಾವ ತಂತ್ರಗಾರಿಕೆ ಅಡಗಿದೆ ಎಂಬುದು ಮತದಾರರ ಕುತೂಹಲಕ್ಕೆ ಕಾರಣವಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮಗೆ ಟಾಂಗ್ ನೀಡಿರುವ ಕುಮಾರಸ್ವಾಮಿ ಅವರನ್ನು ಕಟ್ಟಿಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತ ರೇವಣ್ಣ ಅವರನ್ನು ಇಲ್ಲಿ ಕಣಕ್ಕೆ ಇಳಿಸಿದ್ದಾರೆ ಎಂಬ ಮಾತಿದೆ. ಕ್ಷೇತ್ರದಲ್ಲಿ ಇಬ್ಬರು ಒಕ್ಕಲಿಗ ನಾಯಕರ ನಡುವಿನ ಕಿತ್ತಾಟದ ಲಾಭ ಪಡೆದು, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಒಟ್ಟುಗೂಡಿಸಿ ಗೆಲುವು ಕಾಣುವ ವಿಶ್ವಾಸದಲ್ಲಿ ರೇವಣ್ಣ ಪ್ರಚಾರ ನಡೆಸಿದ್ದಾರೆ.

ಇಷ್ಟೆಲ್ಲ ರಾಜಕೀಯ ಬೆಳವಣಿಗೆಗಳ ನಡುವೆಯೂ ಕನಕಪುರವು ಜೆಡಿಎಸ್ ಹಾಗೂ ಬಿಜೆಪಿ ಪಾಲಿಗೆ ಅಭೇದ್ಯ ಕೋಟೆಯಾಗಿಯೇ ಉಳಿದಿರುವುದು ಅಲ್ಲಿನ ಕಾರ್ಯಕರ್ತರ ಹುಬ್ಬೇರುವಂತೆ ಮಾಡಿದೆ. ಒಂದು ಕಾಲಕ್ಕೆ ರಾಜಕೀಯ ವೈರಿ ಎಂದೇ ಬಿಂಬಿತವಾಗಿದ್ದ ಡಿ.ಕೆ. ಶಿವಕುಮಾರ್‌ ಅವರಿಗೆ ಸಡ್ಡು ಹೊಡೆಯದೇ ಜೆಡಿಎಸ್ ತಣ್ಣಗಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ಎಷ್ಟೆಲ್ಲ ವಿಕಾಸ ಪರ್ವ ಯಾತ್ರೆ, ಪರಿವರ್ತನಾ ಯಾತ್ರೆಗಳ ಸದ್ದು ಮೊಳಗಿದ್ದರೂ ಕನಕಪುರದಲ್ಲಿ ಮಾತ್ರ ಕಾಂಗ್ರೆಸ್ ಹೊರತುಪಡಿಸಿ ಅನ್ಯ ಪಕ್ಷಗಳ ಸಭೆ–ಸಮಾವೇಶಗಳು ನಡೆದಿಲ್ಲ. ಕುಮಾರಸ್ವಾಮಿ ಇಲ್ಲಿಗೆ ಕಾಲಿಟ್ಟು ವರ್ಷಗಳೇ ಕಳೆದಿವೆ. ಚುನಾವಣೆ ಘೋಷಣೆ ಬಳಿಕ ’ದೊಡ್ಡಗೌಡ’ರು ಇತ್ತ ಮುಖ ಮಾಡಿಲ್ಲ. ಬಿಜೆಪಿಯ ಯಾವ ನಾಯಕರೂ ಇತ್ತ ತಲೆ ಹಾಕಿಲ್ಲ.

ಇದೆಲ್ಲದರಿಂದ ಹಿರಿಹಿರಿ ಹಿಗ್ಗುತ್ತಿರುವ ಶಿವಕುಮಾರ್‌ ಈ ಬಾರಿ ಪ್ರಚಂಡ ಗೆಲುವಿನ ಕನಸು ಕಾಣತೊಡಗಿದ್ದಾರೆ. ಜೆಡಿಎಸ್, ಬಿಜೆಪಿಯ ಅಭ್ಯರ್ಥಿಗಳು ಸ್ವಂತ ಶಕ್ತಿಯಿಂದ ಮತ ಯಾಚನೆ ಮಾಡತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT