ಶನಿವಾರ, ಮಾರ್ಚ್ 6, 2021
32 °C

ಬೆಂಗಳೂರು ಟೆಸ್ಟ್‌ಗೆ ಕೊಹ್ಲಿ ಇಲ್ಲ: ರಹಾನೆ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಟೆಸ್ಟ್‌ಗೆ ಕೊಹ್ಲಿ ಇಲ್ಲ: ರಹಾನೆ ನಾಯಕ

ಬೆಂಗಳೂರು: ‌ಜೂನ್‌ 14ರಿಂದ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಫ್ಗಾನಿಸ್ತಾನ ಎದುರಿನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸುವರು.

ವಿರಾಟ್ ಕೊಹ್ಲಿ ಇಂಗ್ಲೆಂಡ್‌ನಲ್ಲಿ ಕೌಂಟಿ ತಂಡದಲ್ಲಿ ಆಡುವುದರಿಂದ ರಹಾನೆ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ. ರೋಹಿತ್‌ ಶರ್ಮಾ, ಭುನವೇಶ್ವರ್ ಕುಮಾರ್‌ ಮತ್ತು ಜಸ್‌ಪ್ರೀತ್ ಬೂಮ್ರಾ ಕೂಡ ಈ ಟೆಸ್ಟ್ ಪಂದ್ಯದಲ್ಲಿ ಆಡುತ್ತಿಲ್ಲ.

ನಗರದಲ್ಲಿ ಮಂಗಳವಾರ ನಡೆದ ಆಯ್ಕೆ ಸಮಿತಿ ಸಭೆಯ ನಂತರ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್‌ ತಂಡದ ಮಾಹಿತಿ ನೀಡಿದರು.

‘ಅಫ್ಗಾನಿಸ್ಥಾನ ಎದುರಿನ ಏಕೈಕ ಟೆಸ್ಟ್, ಇಂಗ್ಲೆಂಡ್‌ ಎದುರಿನ ಏಕದಿನ ಸರಣಿ, ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟ್ವೆಂಟಿ–20 ಸರಣಿ ಹಾಗೂ ‘ಎ’ ತಂಡಗಳ ತ್ರಿಕೋನ ಏಕದಿನ ಸರಣಿ ಮತ್ತು ನಾಲ್ಕು ದಿನಗಳ ಪಂದ್ಯಗಳ ಸರಣಿಗೆ ತಂಡಗಳನ್ನು ಆಯ್ಕೆ ಮಾಡಲಾಯಿತು’ ಎಂದು ಪ್ರಸಾದ್ ತಿಳಿಸಿದರು.

ವಿಶ್ರಾಂತಿ ನೀಡಲಾದ ನಾಲ್ವರು ಆಟಗಾರರು ಕೂಡ ಬಿಸಿಸಿಐ ಗುತ್ತಿಗೆಯಲ್ಲಿ ಹೊಸದಾಗಿ ಆರಂಭಿಸಿರುವ ‘ಎ ಪ್ಲಸ್‌’ ದರ್ಜೆಯಲ್ಲಿ ಸೇರಿದವರಾಗಿದ್ದಾರೆ. ಟೆಸ್ಟ್ ತಂಡದಲ್ಲಿರುವ ‘ಎ ಪ್ಲಸ್‌’ ದರ್ಜೆಯ ಏಕೈಕ ಆಟಗಾರ ಶಿಖರ್‌ ಧವನ್ ಆಗಿದ್ದಾರೆ. ಪಾರ್ಥಿವ್ ಪಟೇಲ್‌ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಕೂಡ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಕನ್ನಡಿಗ ಕರುಣ್ ನಾಯರ್‌, ಚೈನಾಮನ್‌ ಬೌಲರ್‌ ಕುಲದೀಪ್ ಯಾದವ್‌ ಮತ್ತು ಮುಂಬೈನ ವೇಗಿ ಶಾರ್ದೂಲ್ ಠಾಕೂರ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಕನ್ನಡಿಗ ಕೆ.ಎಲ್‌.ರಾಹುಲ್ ಕೂಡ ತಂಡದಲ್ಲಿದ್ದು ತೀವ್ರ ಕುತೂಹಲ ಕೆರಳಿಸಿದ್ದ ರವಿಚಂದ್ರನ್ ಅಶ್ವಿನ್ ಅವರಿಗೂ ಅವಕಾಶ ನೀಡಲಾಗಿದೆ. 2016 ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಅಜೇಯ 303 ರನ್ ಗಳಿಸಿದ್ದ ಕರುಣ್‌ ನಾಯರ್‌ ನಂತರ ಮಿಂಚಲಿಲ್ಲ. ಕಳೆದ ವರ್ಷದ ಮಾರ್ಚ್‌ನಲ್ಲಿ ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಕೊನೆಯದಾಗಿ ಆಡಿದ್ದರು. ಒಟ್ಟು ಆರು ಪಂದ್ಯಗಳಲ್ಲಿ ಅವರು ಗಳಿಸಿರುವ ರನ್‌ 374.

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮುರಳಿ ವಿಜಯ್‌, ಕೆ.ಎಲ್‌.ರಾಹುಲ್‌ ಮತ್ತು ಶಿಖರ್ ಧವನ್‌ ಅವರಿಗೆ ಅವಕಾಶ ನೀಡಿರುವ ಆಯ್ಕೆ ಸಮಿತಿ ಈ ಭಾಗದಲ್ಲಿ ಸ್ಪರ್ಧೆಗೆ ಅವಕಾಶ ಒದಗಿಸಿದೆ. ಸ್ಪಿನ್ ವಿಭಾಗದಲ್ಲಿ ಅಶ್ವಿನ್ ಜೊತೆ ರವೀಂದ್ರ ಜಡೇಜ ಮತ್ತು ಕುಲದೀಪ್ ಯಾದವ್ ಇದ್ದಾರೆ. ಭುವನೇಶ್ವರ್ ಕುಮಾರ್ ಮತ್ತು ಬೂಮ್ರಾ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್‌ಗೆ ಮೊನಚು ನೀಡುವ ಜವಾಬ್ದಾರಿ ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ ಅವರಿಗೆ ವಹಿಸಲಾಗಿದೆ. ಶಾರ್ದೂಲ್ ಠಾಕೂರ್‌ ತಂಡದಲ್ಲಿರುವ ಹೊಸಮುಖ.

ರೋಹಿತ್ ಶರ್ಮಾ ಬದಲಿಗೆ ಕರುಣ್ ನಾಯರ್ ಸ್ಥಾನ ಗಳಿಸಿಕೊಂಡಿದ್ದು ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಸರಣಿಯಲ್ಲಿ ಗಾಯಗೊಂಡಿದ್ದ ವೃದ್ಧಿಮಾನ್ ಸಹಾ ವಿಕೆಟ್ ಕೀಪಿಂಗ್‌ ಮಾಡುವರು.

ಶ್ರೇಯಸ್‌, ಕರುಣ್‌ಗೆ ನಾಯಕತ್ವ: ಇಂಗ್ಲೆಂಡ್‌ನಲ್ಲಿ ನಡೆಯಲಿರುವ ‘ಎ’ ತಂಡಗಳ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಶ್ರೇಯಸ್‌ ಅಯ್ಯರ್ ಮುನ್ನಡೆಸುವರು. ಜೂನ್‌ 22ರಿಂದ ಸರಣಿ ನಡೆಯಲಿದ್ದು ಭಾರತ ‘ಎ’ ತಂಡ ಇಂಗ್ಲೆಂಡ್‌ ಲಯನ್ಸ್‌ ‘ಎ’ ಮತ್ತು ವೆಸ್ಟ್ ಇಂಡೀಸ್‌ ’ಎ’ ತಂಡಗಳನ್ನು ಎದುರಿಸಲಿದೆ.

ಭಾರತ ‘ಎ’ ತಂಡವನ್ನು ನಾಲ್ಕು ದಿನಗಳ ಪಂದ್ಯದಲ್ಲಿ ಕರುಣ್‌ ಮುನ್ನಡೆ ಸುವರು. ಜುಲೈ 16ರಂದು ಈ ಪಂದ್ಯ ಆರಂಭವಾಗಲಿದೆ. ಕೌಂಟಿ ತಂಡಗಳ ಜೊತೆ ಈ ತಂಡ ಮೂರು ದಿನಗಳ ಕೆಲವು ಪಂದ್ಯಗಳನ್ನೂ ಆಡಲಿದೆ.‌

ಕೊಹ್ಲಿ ಕೌಂಟಿ ಆಡುವುದಕ್ಕೆ ಕಾರಣ ಇದೆ

ಐತಿಹಾಸಿಕ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಕೌಂಟಿ ಪಂದ್ಯಗಳಲ್ಲಿ ಆಡಲು ವಿರಾಟ್ ಕೊಹ್ಲಿ ಅವರಿಗೆ ಅವಕಾಶ ನೀಡಿರುವುದರ ಕುರಿತ ಪ್ರಶ್ನೆಗೆ ಉತ್ತರಿಸಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹಂಗಾಮಿ ಗೌರವ ಕಾರ್ಯದರ್ಶಿ ಅಮಿತಾಬ್‌ ಚೌಧರಿ ‘ಕೊಹ್ಲಿ ಕೌಂಟಿ ಆಡಲು ತೆರಳುವುದಕ್ಕೆ ಸಮರ್ಪಕ ಕಾರಣವಿದೆ’ ಎಂದಷ್ಟೇ ಹೇಳಿದರು.

‘ಕೊಹ್ಲಿ ವಿಷಯದಲ್ಲಿ ಬಿಸಿಸಿಐ ಸೂಕ್ತ ನಿರ್ಧಾರವನ್ನೇ ಕೈಗೊಂಡಿದೆ. ಇದಕ್ಕೆ ಕಾರಣವೇನು ಎಂಬುದು ಗುಟ್ಟಿನ ವಿಷಯ. ಅದನ್ನು ಈಗ ಬಹಿರಂಗಗೊಳಿಸಲು ಸಾಧ್ಯವಿಲ್ಲ’ ಎಂದು ಅವರು ತಿಳಿಸಿದರು.

ಮಯಂಕ್‌ಗೆ ಎರಡೂ ತಂಡಗಳಲ್ಲಿ ಅವಕಾಶ

ಕಳೆದ ಬಾರಿಯ ರಣಜಿ ಟೂರ್ನಿಯಲ್ಲಿ ಅಮೋಘ ಆಟ ಆಡಿದ್ದ ಮಯಂಕ್ ಅಗರವಾಲ್‌ ಭಾರತ ತಂಡದಲ್ಲಿ ಸ್ಥಾನ ಗಳಿಸುವ ಕನಸು ಈಡೇರಲಿಲ್ಲ. ಆದರೆ ಅವರಿಗೆ ಭಾರತ ‘ಎ’ ತಂಡಗಳಲ್ಲಿ ಸ್ಥಾನ ನೀಡಲಾಗಿದೆ. ಏಕದಿನ ಮತ್ತು ನಾಲ್ಕು ದಿನಗಳ ಪಂದ್ಯಗಳಲ್ಲಿ ಅವರು ಆಡಲಿದ್ದಾರೆ.

‘ಮಯಂಕ್ ಅಗರವಾಲ್ ಉತ್ತಮ ಬ್ಯಾಟ್ಸ್‌ಮನ್‌. ಆದರೆ ಭಾರತ ತಂಡದಲ್ಲಿ ಅವರಿಗೆ ಸ್ಥಾನ ನೀಡಲು ಆಗಲಿಲ್ಲ. ಮುಂದೊಂದು ದಿನ ಖಂಡಿತಾ ಅವಕಾಶ ಪಡೆದುಕೊಳ್ಳಲಿದ್ದಾರೆ’ ಎಂದು ಎಂ.ಎಸ್.ಕೆ ಪ್ರಸಾದ್ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.