ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತದಲ್ಲಿ ಕೆಕೆಆರ್‌ಗೆ ಮುಂಬೈ ಇಂಡಿಯನ್ಸ್ ಸವಾಲು

Last Updated 8 ಮೇ 2018, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ಆತಿಥೇಯ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದವರು ಐಪಿಎಲ್‌ನ ಬುಧವಾರದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಆರಂಭದಲ್ಲಿ ನಿರಂತರ ಸೋಲಿನೊಂದಿಗೆ ನಿರಾಸೆ ಕಂಡಿದ್ದ ಮುಂಬೈ ಇಂಡಿಯನ್ಸ್ ನಂತರ ಸುಧಾರಿಸಿಕೊಂಡು ಗೆಲುವಿನ ಹಾದಿಯಲ್ಲಿ ಸಾಗುತ್ತಿದೆ. ಕಳೆದ ಎರಡು ಪಂದ್ಯಗಳಲ್ಲಿ ಗೆದ್ದು ಪ್ಲೇ ಆಫ್‌ ಹಂತದ ಹೊಸ್ತಿಲಿನಲ್ಲಿದೆ. ಹ್ಯಾಟ್ರಿಕ್ ಜಯದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಲು ತಂಡ ಶ್ರಮಿಸಲಿದೆ.

ಎರಡೂ ತಂಡಗಳೂ ತಲಾ 10 ಪಂದ್ಯಗಳನ್ನು ಆಡಿದ್ದು ಕೆಕೆಆರ್‌ 10 ಮತ್ತು ಮುಂಬೈ ಇಂಡಿಯನ್ಸ್ ಎಂಟು ಪಾಯಿಂಟ್ ಗಳಿಸಿದೆ. ಐಪಿಎಲ್‌ನ ಎಲ್ಲ ಆವೃತ್ತಿಯಲ್ಲೂ ಕೆಕೆಆರ್ ಎದುರು ಮುಂಬೈ ಇಂಡಿಯನ್ಸ್‌ ಆಧಿಪತ್ಯ ಸ್ಥಾಪಿಸಿದೆ. 21 ಪಂದ್ಯಗಳ ಪೈಕಿ 17ನ್ನು ಮುಂಬೈ ಗೆದ್ದಿದೆ. ಐಪಿಎಲ್‌ನಲ್ಲಿ ತಂಡವೊಂದು ನಿರ್ದಿಷ್ಟ ಎದುರಾಳಿ ವಿರುದ್ಧ ಗಳಿಸಿದ ಅತಿ ಹೆಚ್ಚು ಜಯ ಇದಾಗಿದೆ.

ಮೇ ಆರರಂದು ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲೂ ಕೆಕೆಆರ್ ಸೋತಿತ್ತು. ಇದು ಮುಂಬೈ ವಿರುದ್ಧ ತಂಡದ ನಿರಂತರ ಏಳನೇ ಸೋಲು. 2015ರ ಏಪ್ರಿಲ್‌ ಎಂಟರಂದು ಕೊನೆಯದಾಗಿ ಈ ತಂಡದ ವಿರುದ್ಧ ಕೆಕೆಆರ್‌ ಗೆದ್ದಿತ್ತು. 2015ರಲ್ಲೂ ಮುಂಬೈ ಇಂಡಿಯನ್ಸ್ ಸೋಲಿನ ಸುಳಿಯಿಂದ ಎದ್ದು ಬಂದಿತ್ತು. ಕೊನೆಯ ಎಂಟು ಪಂದ್ಯಗಳ ಪೈಕಿ ಏಳನ್ನು ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಅದೇ ಹಾದಿಯಲ್ಲಿ ಹೆಜ್ಜೆ ಹಾಕಿರುವ ತಂಡಕ್ಕೆ ಬುಧವಾರವೂ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದೆ.

ಆಲ್‌ರೌಂಡರ್ ಸುನಿಲ್ ನಾರಾಯಣ್‌ ಲಯ ಕಳೆದುಕೊಂಡಿರುವುದು ಕೆಕೆಆರ್‌ ತಂಡದ ಆತಂಕಕ್ಕೆ ಕಾರಣವಾಗಿದೆ. ಆರಂಭದಲ್ಲಿ ತಂಡದ ಗೆಲುವಿನಲ್ಲಿ‍ ಪ್ರಮುಖ ಪಾತ್ರ ವಹಿಸಿದ್ದ ನಾರಾಯಣ್‌ ನಂತರ ಕಳೆಗುಂದಿದ್ದರು. ಕಳೆದ ಪಂದ್ಯದಲ್ಲಿ ಅವರನ್ನು ಕೆಳಕ್ರಮಾಂಕದಲ್ಲಿ ಆಡಿಸಲಾಗಿತ್ತು.

ಆದರೆ 182 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಲು ತಂಡಕ್ಕೆ ಸಾಧ್ಯವಾಗಲಿಲ್ಲ. ರಾಬಿನ್ ಉತ್ತಪ್ಪ ಮತ್ತು ನಿತೀಶ್ ರಾಣಾ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದರೂ ಉಳಿದವರಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ. ತಂಡದ ವೇಗಿಗಳು ಕೂಡ ನಿರೀಕ್ಷೆಗೆ ತಕ್ಕ ಆಟ ಆಡುವಲ್ಲಿ ವಿಫಲರಾಗಿದ್ದಾರೆ. ಮಿಷೆಲ್ ಜಾನ್ಸನ್‌ ಮತ್ತು ಟಾಮ್ ಕುರನ್‌ ಬಹುತೇಕ ಎಲ್ಲ ಪಂದ್ಯಗಳಲ್ಲೂ ದುಬಾರಿಯಾಗಿದ್ದಾರೆ.

ಬೆರಳಿಗೆ ಗಾಯಗೊಂಡಿರುವ ಶಿವಂ ಮಾವಿ ಕಳೆದ ಪಂದ್ಯದಲ್ಲಿ ಆಡಿರಲಿಲ್ಲ. ಅವರ ಬದಲಿಗೆ ಕಣಕ್ಕೆ ಇಳಿದಿದ್ದ ಕನ್ನಡಿಗ ಪ್ರಸಿದ್ಧ ಕೃಷ್ಣ ಪರಿಣಾಮ ಬೀರಲಿಲ್ಲ. ಬುಧವಾರದ ಪಂದ್ಯದಲ್ಲಿ ಮಾವಿ ಕಣಕ್ಕೆ ಇಳಿಯುವರೇ ಎಂಬುದು ಇನ್ನೂ ಖಚಿತವಾಗಲಿಲ್ಲ.

ಇತ್ತ, ಮುಂಬೈ ಇಂಡಿಯನ್ಸ್ ಎಲ್ಲ ವಿಭಾಗಗಳಲ್ಲೂ ಬಲ ಪಡೆದುಕೊಂಡಿದೆ. ರೋಹಿತ್ ಶರ್ಮಾ ಬ್ಯಾಟಿಂಗ್ ವಿಭಾಗದ ಶಕ್ತಿ ಎನಿಸಿದ್ದಾರೆ. ಪಾಂಡ್ಯ ಸಹೋದರರಾದ ಹಾರ್ದಿಕ್ ‍ಮತ್ತು ಕೃಣಾಲ್‌ ಮಿಂಚುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ದುಬಾರಿಯಾದ ಬೆನ್ ಕಟ್ಟಿಂಗ್‌ ಬದಲಿಗೆ ವೇಗಿ ಮುಸ್ತಫಿಜುರ್ ರಹಿಮಾನ್‌ಗೆ ಸ್ಥಾನ ಸಿಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT