ಪ್ರಜ್ಞೆ ತಪ್ಪಿಸಿ ಆಭರಣ ಕದ್ದೊಯ್ದ ಆಟೊ ಚಾಲಕ

7

ಪ್ರಜ್ಞೆ ತಪ್ಪಿಸಿ ಆಭರಣ ಕದ್ದೊಯ್ದ ಆಟೊ ಚಾಲಕ

Published:
Updated:

ಬೆಂಗಳೂರು: ತನ್ನ ಆಟೊದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಪ್ರಜ್ಞೆ ತಪ್ಪಿಸಿದ್ದ ಚಾಲಕನೊಬ್ಬ, ಅವರ ಚಿನ್ನದ ಆಭರಣಗಳನ್ನು ಕದ್ದುಕೊಂಡು ಹೋಗಿದ್ದಾನೆ.

ಈ ಸಂಬಂಧ ಮಹಿಳೆಯು ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

‘ಮೇ 5ರಂದು ಶಾಪಿಂಗ್‌ಗಾಗಿ ಓರಿಯನ್ ಮಾಲ್‌ಗೆ ಹೋಗಿದ್ದೆ. ಶಾಪಿಂಗ್‌ ಮುಗಿದ ಬಳಿಕ ಮನೆಗೆ ವಾಪಸ್‌ ಹೋಗಲೆಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಟೊವೊಂದನ್ನು ಹತ್ತಿದ್ದೆ’ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

‘ಆಟೊದಲ್ಲಿ ಕುಳಿತುಕೊಂಡ ಕೆಲ ನಿಮಿಷಗಳಲ್ಲೇ ನನ್ನ ಪ್ರಜ್ಞೆ ತಪ್ಪಿತು. ಕೆಲ ನಿಮಿಷಗಳ ನಂತರ ನಾನು, ಮಂತ್ರಿಮಾಲ್‌ ಬಳಿಯ ರಸ್ತೆಯಲ್ಲಿ ನಿಂತುಕೊಂಡಿದ್ದೆ. ನನ್ನ ಚಿನ್ನದ ಕಿವಿಯೊಲೆ, ಬಳೆ, ನಕ್ಲೆಸ್, ಬ್ಯಾಗ್‌, ಕೈ ಗಡಿಯಾರ ಹಾಗೂ ಶಾಪಿಂಗ್ ಮಾಡಿದ ವಸ್ತುಗಳು ನನ್ನ ಬಳಿ ಇರಲಿಲ್ಲ. ಗಾಬರಿಗೊಂಡು ಪತಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡೆ’ ಎಂದಿದ್ದಾರೆ.

ಪೊಲೀಸರು, ‘ಮಹಿಳೆಯು ಆಟೊದಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಮತ್ತು ಬರುವ ಔಷಧವನ್ನು ಚಾಲಕ ಸಿಂಪಡಿಸಿದ್ದಾನೆ. ಅದರಿಂದಲೇ ಅವರ ಪ್ರಜ್ಞೆ ತಪ್ಪಿದೆ. ನಂತರ, ಆಭರಣಗಳನ್ನು ಬಿಚ್ಚಿಕೊಂಡು ಮಹಿಳೆಯನ್ನು ರಸ್ತೆಯಲ್ಲೇ ಇಳಿಸಿ ಹೋಗಿದ್ದಾನೆ’ ಎಂದರು.

‘ಆಟೊ ಸಂಚರಿಸುತ್ತಿದ್ದ ರಸ್ತೆಯಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ. ಮಹಿಳೆಯರು ಆಟೊದಲ್ಲಿ ಪ್ರಯಾಣಿಸುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಚಾಲಕನ ಬಗ್ಗೆ ಅನುಮಾನವಿದ್ದರೆ ನಿಯಂತ್ರಣ ಕೊಠಡಿ 100ಕ್ಕೆ ಕರೆ ಮಾಡಬಹುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry