ಭಾನುವಾರ, ಮಾರ್ಚ್ 26, 2023
31 °C
ಮತದಾನ ಜಾಗೃತಿ: ಪೇಂಟ್ ಮೈ ಸಿಟಿ ಕಾರ್ಯಕ್ರಮ ಆಯೋಜನೆ; ಸೈಕಲ್ ಜಾಥಾ

‘ಮತದಾನ ಪ್ರಕ್ರಿಯೆ; ತಪ್ಪದೇ ಪಾಲ್ಗೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮತದಾನ ಪ್ರಕ್ರಿಯೆ; ತಪ್ಪದೇ ಪಾಲ್ಗೊಳ್ಳಿ’

ಬಾಗಲಕೋಟೆ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಸಂವಿಧಾನದತ್ತ ಈ ಹಕ್ಕನ್ನು ತಪ್ಪದೇ ಚಲಾಯಿಸಿ’ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಸಿಇಒ ವಿಕಾಸ್ ಸುರಳಕರ್ ಹೇಳಿದರು.

ಇಲ್ಲಿನ ನಗರಸಭೆ ಆವರಣದಲ್ಲಿ ಮಂಗಳವಾರ ಮತದಾನ ಜಾಗೃತಿಗಾಗಿ ಆಯೋಜಿಸಿದ್ದ ಪೇಂಟ್ ಮೈ ಸಿಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಮುಕ್ತವಾಗಿ ಚಲಾಯಿಸಬೇಕು. ನೂರಕ್ಕೆ ನೂರರಷ್ಟು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು. ಮತದಾನದಿಂದ ನಾವು ದೂರ ಉಳಿದರೆ ಸಂವಿಧಾನ ನೀಡಿರುವ ಹಕ್ಕನ್ನು ಕಳೆದುಕೊಂಡಂತಾಗುತ್ತದೆ’ ಎಂದರು.

ಮಾನವ ಸರಪಳಿ ರಚನೆ: ಮತದಾನ ಜಾಗೃತಿಗಾಗಿ ನಗರಸಭೆಯ ಎದುರು ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆಯಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತ ಗಣಪತಿ ಪಾಟೀಲ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಿ.ಎಸ್.ಶಿರೂರ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಬಳ್ಳಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ಶಾಂತಾ ಕಡಿ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಪಾಲ್ಗೊಂಡಿದ್ದರು.

ಸೈಕಲ್‌ ಜಾಥಾ

ಬಾಗಲಕೋಟೆ: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ಸಹಯೋಗದಲ್ಲಿ ಸಾರ್ವಜನಿಕರಿಗೆ ಮತದಾನದ ಮಹತ್ವ ತಿಳಿಸಲು ಮಂಗಳವಾರ ನಗರದಲ್ಲಿ ಸೈಕಲ್‌ ಜಾಥಾ ಆಯೋಜಿಸಲಾಗಿತ್ತು.

ಕಡ್ಡಾಯ ಮತದಾನಕ್ಕೆ ಉತ್ತೇಜಿಸುವ ಹಾಗೂ ಶೇಕಡಾವಾರು ಮತದಾನದ ಪ್ರಮಾಣ ಹೆಚ್ಚಿಸುವ ದೃಷ್ಟಿಯಿಂದ ನಡೆದ ಜಾಥಾಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಿಇಒ ವಿಕಾಸ್‌ ಸುರಳಕರ ಚಾಲನೆ ನೀಡಿದರು.

ಮತದಾನ ಜಾಗೃತಿ ಸೈಕಲ್ ಜಾಥಾ ಜಿಲ್ಲಾ ಆಡಳಿತ ಭವನದಿಂದ ಪ್ರಾರಂಭವಾಗಿ ಎ.ಪಿ.ಎಂ.ಸಿ, ದಡ್ಡನೇವರ ಆಸ್ಪತ್ರೆ ಕ್ರಾಸ್, ಸ್ಟೇಷನ್ ರೋಡ್, ಬಾಗಲಕೋಟೆ ಬಸ್ ನಿಲ್ದಾಣ, ಬಸವೇಶ್ವರ ಸರ್ಕಲ್, ವಲ್ಲಭಾಯಿ ಚೌಕ, ಗರ್ಲ್ಸ್‌ ಹೈಸ್ಕೂಲ್, ಮುಚಖಂಡಿ ಕ್ರಾಸ್ (ಕೆಂಪ ರೋಡ್), ವಿದ್ಯಾಗಿರಿ 21 ನೇ ಕ್ರಾಸ್, ವಿದ್ಯಾಗಿರಿ ಕಾಲೇಜು ಸರ್ಕಲ್, ವಿದ್ಯಾಗಿರಿ ಏಳನೇ ಕ್ರಾಸ್, ಒಂಬತ್ತನೇ ಕ್ರಾಸ್, ಕಾಲೇಜು ಸರ್ಕಲ್, ಕಾಳಿದಾಸ ಸರ್ಕಲ್ ಮಾರ್ಗವಾಗಿ ನಗರಸಭೆ ಆವರಣದಲ್ಲಿ ಮುಕ್ತಾಯವಾಯಿತು.

ಜಾಥಾದ ಉದ್ದಕ್ಕೂ ಮತದಾನ ಜಾಗೃತಿಯ ಪ್ಲೇ ಕಾರ್ಡ್‌ಗಳನ್ನು ಪ್ರದರ್ಶಿಸಲಾಯಿತು. ಮೇ 12 ರಂದು ಜರಗುವ ವಿಧಾನಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಿ.ಎಸ್.ಶಿರೂರ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಬಳ್ಳಾರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಲಾಸ ಘಾಡಿ, ಡಾ.ಗಿರೀಶ ಮೇಟಿ, ಡಾ. ಗಿರೀಶ ನಾಯಕ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.