ದೇಶದ ಅಸ್ತಿತ್ವ ಉಳಿಸುವ ಚುನಾವಣೆ

7
ಜಮಖಂಡಿ: ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿಕೆ

ದೇಶದ ಅಸ್ತಿತ್ವ ಉಳಿಸುವ ಚುನಾವಣೆ

Published:
Updated:

ಜಮಖಂಡಿ: ‘ರಾಜ್ಯ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆ ದೇಶದ ಅಸ್ತಿತ್ವ ಉಳಿಸುವ, ಡಾ.ಅಂಬೇಡ್ಕರ್‌ ಬರೆದ ಸಂವಿಧಾನ ರಕ್ಷಿಸುವ ಹಾಗೂ ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಎತ್ತಿದ ದನಿಗೆ ಉತ್ತರ ಕೊಡುವ ಚುನಾವಣೆಯಾಗಿದೆ’ ಎಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.

ಜಮಖಂಡಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಿದ್ದು ನ್ಯಾಮಗೌಡ ಪರವಾಗಿ ಚುನಾವಣೆ ಪ್ರಚಾರಾರ್ಥ ಇಲ್ಲಿನ ಬಸವ ಭವನ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಒಳ್ಳೆಯ ದಿನಗಳು ಬರಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ, ಲೀಟರ್‌ ಪೆಟ್ರೋಲ್‌ ಬೆಲೆ ₹78 ಹಾಗೂ ಒಂದು ಅಡುಗೆ ಅನಿಲ ಸಿಲಿಂಡರ್‌ ಬೆಲೆ ₹780ಕ್ಕೆ ಏರಿಕೆಯಾಗಿದೆ. ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಪೆಟ್ರೋಲ್‌ ದರ ₹65 ಹಾಗೂ ಅಡುಗೆ ಅನಿಲ ಸಿಲಿಂಡರ್‌ ಬೆಲೆ ₹400 ಇತ್ತು. ಹಾಗಾಗಿ ನಮಗೆ ಹಳೆಯ ದಿನಗಳನ್ನು ಕೊಟ್ಟರೆ ಸಾಕು’ ಎಂದರು.

‘ಈಗ ನಡೆಯುವ ಚುನಾವಣೆ ಶಾಸಕ ಸಿದ್ದು ನ್ಯಾಮಗೌಡ ಅವರೊಬ್ಬರಿಗೆ ಮಾತ್ರ ಸೀಮಿತವಾದ ಚುನಾವಣೆಯಲ್ಲ. ಬದಲಾಗಿ ಅವರನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಮಾಡುವ ಚುನಾವಣೆ ಎನಿಸಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಮಾತನಾಡಿ, ‘ಗುಜರಾತ್‌ನಲ್ಲಿ ನರಮೇಧ ಮಾಡಿಸಿದ್ದ ವ್ಯಕ್ತಿ ದೇಶದ ಪ್ರಧಾನಿ ಆಗಿರುವುದು ಹಾಗೂ 6 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ ಮತ್ತು ಗುಜರಾತ್‌ನಿಂದ ಗಡಿಪಾರುಗೊಂಡಿದ್ದ ವ್ಯಕ್ತಿ ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷರಾಗಿರುವುದು ದುರಂತ’ ಎಂದರು.

‘ಈಗ ರಾಜ್ಯ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆ ಒಂದು ರೀತಿಯಲ್ಲಿ ಸೆಮಿಫೈನಲ್‌ ಕುಸ್ತಿ ಇದ್ದಂತೆ. ಮುಂದಿನ ವರ್ಷ ಲೋಕಸಭೆಗೆ ನಡೆಯುವ ಚುನಾವಣೆ ಫೈನಲ್‌ ಕುಸ್ತಿ. ಈಗ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾದರೆ, ಮುಂದಿನ ವರ್ಷ ಲೋಕಸಭೆಗೆ ನಡೆಯುವ ಚುನಾವಣೆ ನಂತರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ದೇಶದ ಪ್ರಧಾನಿಯಾಗಲು ಸಾಧ್ಯವಾಗುತ್ತದೆ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆತ್ಮಸ್ಥೈರ್ಯ ಕುಂದಿಸಲು ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ ಇಲಾಖೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಬ್ರಿಟಿಷರಿಗೆ ಅಂಜದವರು ಪ್ರಧಾನಿ ಮೋದಿ ಅವರಿಗೆ ಅಂಜುತ್ತಾರೆಯೇ’ ಎಂದು ಪ್ರಶ್ನಿಸಿದರು.

ಸಿದ್ದು ನ್ಯಾಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಮತಗಿ (ಅಮೀನಗಡ): ‘ಬಾಗಲಕೋಟ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿ ಹುಲ್ಲಪ್ಪ ಮೇಟಿ ಅವರನ್ನು ಬಹುಮತದಿಂದ ಗೆಲ್ಲಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಹೇಳಿದರು.

ಕಮತಗಿ ಪಟ್ಟಣಕ್ಕೆ ಮೇಟಿ ಪರ ಪ್ರಚಾರದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ನಬಿ ತಹಸೀಲ್ದಾರ ಸಿ.ಎಂ.ಇಬಾಹಿಂ ಅವರನ್ನು ಸನ್ಮಾನಿಸಿದರು. ಕಾಂಗ್ರೆಸ್ ಮುಖಂಡ ಮುರುಗೇಶ ಕಡ್ಲಿಮಟ್ಟಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಹಾಂತೇಶ ಅಂಗಡಿ, ರಮೇಶ ಕಡ್ಲಿಮಟ್ಟಿ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry