ಪ್ರಧಾನಿಗೆ ಸಮನ್ವಯತೆ ಅರಿವೇ ಇಲ್ಲ

7
ಚಿಕ್ಕೋಡಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಗುಲಾಂನಬಿ ಆಜಾದ್‌ ಆರೋಪ

ಪ್ರಧಾನಿಗೆ ಸಮನ್ವಯತೆ ಅರಿವೇ ಇಲ್ಲ

Published:
Updated:

ಚಿಕ್ಕೋಡಿ: ‘ಕಳೆದ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಅನೇಕ ಪ್ರಧಾನಿಗಳನ್ನು ಸಮೀಪದಿಂದ ಕಂಡಿದ್ದೇನೆ. ಆದರೆ, ಈಗಿನ ಪ್ರಧಾನಿ ನರೇಂದ್ರ ಮೋದಿ  ಅವರ ನಡೆ–ನುಡಿ ಸ್ವಲ್ಪ ಭಿನ್ನವಾಗಿದ್ದು, ಬೇರೊಂದು ಗ್ರಹದಿಂದ ಬಂದವರಂತೆ ಕಾಣುತ್ತಾರೆ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಟೀಕಿಸಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಚಿಕ್ಕೋಡಿ–ಸದಲಗಾ ವಿಧಾನಸಭೆ ಕ್ಷೇತ್ರ ಮತ್ತು ನಿಪ್ಪಾಣಿ ವಿಧಾನಸಭೆ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಮಂಗಳವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದ ಪ್ರಧಾನಿ ಹುದ್ದೆಯ ಘನತೆ, ನಡವಳಿಕೆ, ಸ್ವಭಾವ, ಭಾಷಣ ವೈಖರಿ, ಧರ್ಮ–ಜಾತಿಗಳೊಂದಿಗಿನ ಸಮನ್ವಯತೆ ಬಗೆಗೆ ಅವರಿಗೆ ಅರಿವೇ ಇಲ್ಲ’ ಎಂದು ಜರಿದರು.

ಮಹಾನ್ ಸುಳ್ಳುಗಾರ: ‘ಪ್ರಧಾನಿ ಮೋದಿ ಸುಳ್ಳುಗಾರ. ಅವರು ಹೇಳುವುದೊಂದು ಮಾಡುವುದೊಂದು. ಬೆಂಗಳೂರು ರೈಲ್ವೆ ಕಾಮಗಾರಿಗೆ ₹17 ಸಾವಿರ ಕೋಟಿ ಕೇಂದ್ರ ನೀಡಿದೆ ಎಂದು ಕಳೆದ ಫೆಬ್ರುವರಿಯಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ, ಆ ಕಾಮಗಾರಿಯ ಒಟ್ಟು ಅಂದಾಜು ಮೊತ್ತವೇ ₹12 ಸಾವಿರ ಕೋಟಿ. ಅದರಲ್ಲಿ ತಲಾ ₹ 6 ಕೋಟಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲಿದೆ. ಇದು ಮೋದಿ ಹೇಳುವ ಸುಳ್ಳಿಗೆ ಸಾಕ್ಷಿ’ ಎಂದು ಅವರು ವ್ಯಂಗ್ಯವಾಡಿದರು.

ನಮ್ಮೊಂದಿಗೆ ಪ್ರೀತಿ, ಆರ್‌ಎಸ್‌ಎಸ್‌ನೊಂದಿಗೆ ಲಗ್ನ: ‘ನಾವು ಆರಿಸಿ ಬಂದಿದ್ದೇ ಸಂವಿಧಾನ ಬದಲಿಸಲು ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳುತ್ತಾರೆ. ಆರ್‌ಎಸ್‌ಎಸ್‌ ಮತ್ತು ಮೋಹನ್ ಭಾಗವತ್ ಅದನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ಪ್ರಧಾನಿ ಮೋದಿ, ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಲೇ ಬಡವರ್ಗದ ನನ್ನಂಥವರು ಪ್ರಧಾನಿ ಆಗಲು ಸಾಧ್ಯ ಎಂದು ಹೇಳುತ್ತಾರೆ. ಮೋದಿ ಅವರದ್ದು ನಮ್ಮೊಂದಿನ ಪ್ರೀತಿ ಮತ್ತು ಆರ್‌ಎಸ್‌ಎಸ್‌ ತತ್ವದೊಂದಿಗೆ ಲಗ್ನ’ ಎಂದು ಆಜಾದ್ ಕುಟುಕಿದರು.

ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.ಸಂಸದ ಪ್ರಕಾಶ ಹುಕ್ಕೇರಿ ಸ್ವಾಗತಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry