ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಹೀಂಖಾನ್‌, ಸೂರ್ಯಕಾಂತ, ಮುನಿಯಪ್ಪ ಬಿರುಸಿನ ಪ್ರಚಾರ

ಮುಖಂಡ ಮಾಲೀಕಯ್ಯ ಗುತ್ತೇದಾರ ನೇತೃತ್ವದಲ್ಲಿ ಈಡಿಗ ಸಮಾಜದ ಸಭೆ
Last Updated 9 ಮೇ 2018, 8:14 IST
ಅಕ್ಷರ ಗಾತ್ರ

ಬೀದರ್‌: ಬೀದರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಹೀಂಖಾನ್‌, ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಹಾಗೂ ಬಿಎಸ್‌ಪಿ ಅಭ್ಯರ್ಥಿ ಮಾರಸಂದ್ರ ಮುನಿಯಪ್ಪ ಕ್ಷೇತ್ರದ ವಿವಿಧೆಡೆ ಮಂಗಳವಾರ ಬಿರುಸಿನ ಪ್ರಚಾರ ನಡೆಸಿ ಮತದಾರರ ಮನವೊಲಿಸಲು ಪ್ರಯತ್ನಿಸಿದರು.

ಕಾಂಗ್ರೆಸ್‌:
ಕಾಂಗ್ರೆಸ್ ಅಭ್ಯರ್ಥಿ ನಗರದ ಜಿಲ್ಲಾ ನ್ಯಾಯಾಲಯ, ಶಿವನಗರ, ತಾಲ್ಲೂಕಿನ ಚಿಕ್ಕಪೇಟೆ, ಬಸಂತಪುರ, ನಂದಗಾಂವ್‌ ಗ್ರಾಮಗಳಲ್ಲಿ ಪಾದಯಾತ್ರೆ, ಮನೆ ಮನೆಗೆ ಭೇಟಿ ನೀಡಿ ಮತಕೋರಿದರು. ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಿಗೆ ಮನವಿ ಮಾಡಿದರು.

‘ನನಗೆ ಕಡಿಮೆ ಅವಧಿ ದೊರಕಿದ್ದು, ಅದರಲ್ಲೇ ಬೀದರ್ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಧಿಕ ಪ್ರಮಾಣದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ’ ಎಂದು ತಿಳಿಸಿದರು.

‘ರಿಂಗ್‌ರಸ್ತೆಗಳಿಂದ ಬೃಹತ್ ವಾಹನಗಳು ನಗರದ ಹೊರಗೆಡೆಯಿಂದಲೇ ಹಾದು ಹೋಗುತ್ತಿರುವುದರಿಂದ ಸಂಚಾರ ದಟ್ಟಣೆ ಕಡಿಮೆಯಾಗಿದ್ದು, ನಗರದ ಜನತೆಗೆ ಅನುಕೂಲವಾಗಿದೆ. ಮಹಿಳೆಯರು ಹಾಗೂ ಮಕ್ಕಳ ಆಸ್ಪತ್ರೆ ನಿರ್ಮಾಣದಿಂದ ಓಲ್ಡ್‌ ಸಿಟಿ, ಅಷ್ಟೂರ, ತಾಜಲಾಪುರ, ಹಮಿಲಾಪುರ, ಗಾದಗಿ, ಗುಮ್ಮಾ ಮತ್ತಿತರ ಗ್ರಾಮಗಳ ಮಹಿಳೆಯರು ಮತ್ತು ಮಕ್ಕಳಿಗೆ ಸುಲಭವಾಗಿ ಆರೋಗ್ಯ ಸೇವೆ ದೊರೆಯಲಿದೆ’ ಎಂದು ಹೇಳಿದರು.

‘ತಾಂತ್ರಿಕ ಶಿಕ್ಷಣಕ್ಕೆ ಅನುಕೂಲವಾಗುವಂತೆ ನಗರದಲ್ಲಿ ಹೊಸ ಸರ್ಕಾರ ಎಂಜಿನಿಯರಿಂಗ್ ಕಾಲೇಜು, ವಿವಿಧ ಸಮುದಾಯಗಳ ಜನರಿಗೆ ಕಾರ್ಯಕ್ರಮ ನಡೆಸಲು ಸಮುದಾಯ ಭವನಗಳಿಗೆ ಅನುದಾನ ಮಂಜೂರು ಮಾಡಿಸಲಾಗಿದೆ’ ತಿಳಿಸಿದರು.

‘ರಸ್ತೆಗಳು, ಮೂಲಸೌಕರ್ಯಗಳ ವೃದ್ಧಿಯಿಂದ ಬೀದರ್‌ ಅಭಿವೃದ್ಧಿ ಹೊಂದಿದ ನಗರಗಳ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿದೆ. ನಗರವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಮತದಾರರು ನನಗೆ ಪೂರ್ಣಾವಧಿಯ ಅವಕಾಶ ಕೊಡಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ:
ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ನಗರದ ಗಾಂಧಿಗಂಜ್, ವಿದ್ಯಾನಗರ ಕಾಲೊನಿ ಮತ್ತಿತರ ಕಡೆಗಳಲ್ಲಿ ಪಾದಯಾತ್ರೆ ಮಾಡಿ ಮತಯಾಚಿಸಿದರು.
‘ಪಂಚಾಯಿತಿ ಸದಸ್ಯನಾಗದಿದ್ದರೂ ಹತ್ತು ವರ್ಷಗಳಲ್ಲಿ ಕ್ಷೇತ್ರದಲ್ಲಿ ಹಲವಾರು ಜನಪರ ಕಾರ್ಯಗಳನ್ನು ಕೈಗೊಂಡಿದ್ದೇನೆ. ಹಾಲಿ ಶಾಸಕರಿಗೆ ಎರಡು ಬಾರಿ ಆಯ್ಕೆ ಮಾಡಿದ್ದೀರಿ. ನನಗೂ ಒಮ್ಮೆ ಅವಕಾಶ ಕೊಡಿ’ ಎಂದು ಅವರು ಮನವಿ ಮಾಡಿದರು.

‘ನಗರದಲ್ಲಿ ಉದ್ಯೋಗ ಮೇಳ ಆಯೋಜಿಸಿ 2,400 ಜನ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಿದ್ದೇನೆ. 2,200 ಖಾಸಗಿ ಶಿಕ್ಷಕರನ್ನು ಅನುದಾನಕ್ಕೆ ಒಳಪಡಿಸಿದ್ದೇನೆ. ಅತಿಕ್ರಮಣ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ನಗರದ ಉದ್ಯಾನ ಪ್ರದೇಶಗಳಲ್ಲಿನ 2,400 ಮನೆಗಳನ್ನು ಉಳಿಸಿದ್ದೇನೆ. 2,653 ಅಂಗವಿಕಲರಿಗೆ ಮನೆ, 108 ಮಂದಿರ, ಚರ್ಚ್‌ಗಳ ಜೀರ್ಣೋದ್ಧಾರಕ್ಕೆ ಅನುದಾನ ಮಂಜೂರು ಮಾಡಿಸಿದ್ದೆ’ ಎಂದು ಹೇಳಿದರು.

‘ಮತದಾರರು ಆಶೀರ್ವದಿಸಿದರೆ ಬರ-ಗುಡಿಸಲು ಮುಕ್ತ ಬೀದರ್‌ ನಿರ್ಮಿಸಲು ಹಾಗೂ ನಿರುದ್ಯೋಗ ಸಮಸ್ಯೆ ನಿವಾರಿಸಲು ಪ್ರಯತ್ನಿಸಲಿದ್ದೇನೆ. ಕೊಳಾರ ಕೈಗಾರಿಕಾ ಪ್ರದೇಶದವನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಘೋಷಿಸುವುದು, ಎಲೆಕ್ಟ್ರಾನಿಕ್ಸ್ ಕ್ಲಸ್ಟರ್ ಸ್ಥಾಪಿಸುವುದು, ಚಿಲ್ಲರ್ಗಿ, ಮಾಳೆಗಾಂವ್ ಹತ್ತಿರ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸುವುದು, ಬೀದರ್‌ನಲ್ಲಿ ಮಹಿಳಾ ಎಂಜಿನಿಯರಿಂಗ್ ಕಾಲೇಜು ಆರಂಭಿಸುವುದು, ದಿನದ 24 ಗಂಟೆ ನೀರು ಪೂರೈಕೆ, ಒಳಚರಂಡಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವುದು, ನಗರದಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವುದು ನನ್ನ ಪ್ರಮುಖ ಆದ್ಯತೆಗಳು ಆಗಲಿವೆ’ ಎಂದು ಹೇಳಿದರು.

ಬಿಎಸ್‌ಪಿ:
ಬಿಎಸ್‌ಪಿ ಅಭ್ಯರ್ಥಿ ಮಾರಸಂದ್ರ ಮುನಿಯಪ್ಪ ಕ್ಷೇತ್ರದ ಗುಮ್ಮಾ ಗ್ರಾಮದಲ್ಲಿ ಬಹಿರಂಗ ಸಭೆ, ನಗರದ ನಯಕಮಾನ್ ಹಾಗೂ ಎದೆನ್ ಕಾಲೊನಿಯಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.

‘ಮತದಾರರು ಯಾವುದೇ ಆಮಿಷಕ್ಕೆ ಒಳಗಾಗಿ ಮತ ಚಲಾಯಿಸಬಾರದು’ ಎಂದು ಮನವಿ ಮಾಡಿದರು. ‘ಬಿಜೆಪಿ ಮತ್ತು ಕಾಂಗ್ರೆಸ್ ಉಳ್ಳವರ ಪಕ್ಷಗಳಾಗಿದ್ದರೆ ಬಹುಜನ ಸಮಾಜ ಪಕ್ಷ ಶೋಷಿತರು, ಬಡವರು ಹಾಗೂ ದಲಿತರ ಪರವಾದ ಪಕ್ಷವಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮನ್ನು ಆಯ್ಕೆ ಮಾಡಬೇಕು’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದತ್ತು ಸೂರ್ಯವಂಶಿ, ಸಂಯೋಜಕ ಎಂ.ಡಿ. ರಿಯಾಜ್, ಉಪಾಧ್ಯಕ್ಷ ಶಾಂತಕುಮಾರ, ಮುಖಂಡ ಡಿಸೋಜ, ಸುಂದರ, ಮಹಮ್ಮದ್ ಅಲಿ ಭಾಗವಹಿಸಿದ್ದರು.

ಈಡಿಗ ಸಮಾಜ ಮುಖಂಡರ ಸಭೆ

ಬೀದರ್‌: ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ನಗರದಲ್ಲಿ ಮಂಗಳವಾರ ಈಡಿಗ ಸಮಾಜದ ಮುಖಂಡರ ಸಭೆ ನಡೆಸಿದರು.

‘ಜನಪರ ಕಾಳಜಿ ಹೊಂದಿರುವ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ಅವರನ್ನು ಕ್ಷೇತ್ರದ ಈಡಿಗ ಸಮಾಜದವರು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪ ಅವರ ಜನಪರ ಕಾರ್ಯಗಳಿಂದಾಗಿ ಎಲ್ಲೆಡೆ ಬಿಜೆಪಿ ಪರವಾದ ವಾತಾವರಣ ಇದೆ. ನನಗೆ ಹೈ.ಕ ಭಾಗದ ನಾಲ್ಕು ಜಿಲ್ಲೆಗಳ ಉಸ್ತುವಾರಿ ಕೊಡಲಾಗಿದೆ. ನಾಲ್ಕು ಜಿಲ್ಲೆಗಳ 24 ಕ್ಷೇತ್ರಗಳ ಪೈಕಿ ಸುಮಾರು 15 ರಿಂದ 20 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ಇದೆ’ ಎಂದು ತಿಳಿಸಿದರು.

ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ, ಮುಂಡರಾದ ಬಾಬುವಾಲಿ, ಜಯಕುಮಾರ ಕಾಂಗೆ, ಡಾ. ರಾಜಶೇಖರ ಸೇಡಂಕರ್‌, ಈಡಿಗ ಸಮಾಜದ ದಿಲೀಪ ಗುತ್ತೆದಾರ, ಸತೀಶ ಗುತ್ತೆದಾರ, ವಿಷ್ಣು ಗುತ್ತೆದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT