ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರದರ್ಶಕ ಆಡಳಿತ ನನ್ನ ಆದ್ಯತೆ

ಭಾಲ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ಕೆ. ಸಿದ್ರಾಮ ಸಂದರ್ಶನ
Last Updated 9 ಮೇ 2018, 8:20 IST
ಅಕ್ಷರ ಗಾತ್ರ

ಭಾಲ್ಕಿ: ಕಳೆದ ಎರಡು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಕೆ.ಸಿದ್ರಾಮ ಅವರು 2013ರಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 48 ಸಾವಿರ ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಈ ಸಲ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಸಿದ್ರಾಮ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವರ್ಚಸ್ಸು ತಮ್ಮ ಗೆಲುವಿಗೆ ಸಹಕಾರಿ ಆಗಲಿದೆ ಎಂದು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರಕಾಶ ಖಂಡ್ರೆ ಬಿಜೆಪಿ ತೊರೆದಿರುವುದರಿಂದ ಹೊಡೆತವಾಗಿದೆಯೇ?

ಪ್ರಕಾಶ ಖಂಡ್ರೆ ಅವರಿಗೆ ಬಿಜೆಪಿ ಎಲ್ಲವನ್ನೂ ನೀಡಿತ್ತು. ಹೈಕಮಾಂಡ್‌ ನಡೆಸಿದ ಸಮೀಕ್ಷೆಯಲ್ಲಿ ಕಾರ್ಯಕರ್ತರು ನನ್ನ ಹೆಸರು ಸೂಚಿಸಿದ್ದರಿಂದ ಪಕ್ಷ ನನಗೆ ಟಿಕೆಟ್‌ ಕೊಟ್ಟಿತು. ಈ ಒಂದೇ ಕಾರಣಕ್ಕೆ ಪಕ್ಷ ತೊರೆದಿದ್ದಾರೆ. ಅವರು ಪಕ್ಷ ಬಿಟ್ಟಿರುವುದರಿಂದ ಯಾವುದೇ ಪರಿಣಾಮ ಆಗುವುದಿಲ್ಲ.

ಖಂಡ್ರೆದ್ವಯರ ರಾಜಕಾರಣದ ನಡುವೆ ನಿಮ್ಮ ಸೆಣಸಾಟ ಹೇಗೆ ನಡೆದಿದೆ?

ಇಬ್ಬರು ಸಹೋದರರು ಒಂದಾಗಿ 2013ರ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದರು. ಜನ ಈಗ ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಹಣ ಬಲದ ಆಟ ನಡೆಯುವುದಿಲ್ಲ. ಮತದಾರರು ಎಲ್ಲೆಡೆ ನನಗೆ ಬೆಂಬಲ ಸೂಚಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ.

ಕೆಲ ಪ್ರಮುಖರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಅದರ ಬಗ್ಗೆ ಏನು ಹೇಳುತ್ತೀರಿ?

ಪಕ್ಷ ನಿಷ್ಠೆ ಹೊಂದಿರುವವರು ನನ್ನ ಜೊತೆಗೆ ಇದ್ದಾರೆ. ವ್ಯಕ್ತಿ ನಿಷ್ಠೆ ಹೊಂದಿರುವ ಕೆಲವರು ರಾಜೀನಾಮೆ ನೀಡಿ ಪಕ್ಷ ತೊರೆದಿದ್ದಾರೆ. ರಾಜಕೀಯದಲ್ಲಿ ಇದು ಸಹಜ. ಅದರ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಅವರಿಂದ ಯಾವುದೇ ಹೊಡೆತ ಬೀಳುವುದಿಲ್ಲ. ಎಲ್ಲ ಸಮುದಾಯದ ನಿಷ್ಠಾವಂತ ಕಾರ್ಯಕರ್ತರು ನನ್ನ ಬೆಂಬಲಕ್ಕೆ ನಿಂತಿದ್ದಾರೆ.

ಯಡಿಯೂರಪ್ಪ, ಯೋಗಿ ಆದಿತ್ಯನಾಥ ಅವರ ಪ್ರಚಾರದಿಂದ ನಿಮ್ಮ ಶಕ್ತಿ ಹೆಚ್ಚಿದೆಯೇ?

ಹೌದು! ಖಂಡಿತ. ತಾಲ್ಲೂಕಿನಲ್ಲಿ ಬಿಜೆಪಿ ಶಕ್ತಿ ದ್ವಿಗುಣವಾಗಿದೆ. ಕಾರ್ಯಕರ್ತರಲ್ಲಿ ಪಕ್ಷಕ್ಕಾಗಿ ನಿಸ್ವಾರ್ಥ ಸೇವೆಗೈಯಬೇಕು, ಏನೇ ಆಗಲಿ ಈ ಚುನಾವಣೆಯಲ್ಲಿ ಕಮಲವನ್ನು ಅರಳಿಸಬೇಕು ಎನ್ನುವ ಸಂಕಲ್ಪ ಮೂಡಿದೆ.

 ಕ್ಷೇತ್ರದಲ್ಲಿ ನೀವು ಗುರುತಿಸಿರುವ ಸಮಸ್ಯೆಗಳು ಯಾವವು?

ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರು ₹ 1 ಸಾವಿರ ಕೋಟಿ ಅನುದಾನ ತಂದಿದ್ದೇನೆ ಎಂದು ಎಲ್ಲೆಡೆ ಹೇಳುತ್ತಿದ್ದಾರೆ. ಲಾಧಾ, ಖುದಾವಂದಪುರ, ಹಲಸಿ ಹಾಗೂ ಇತರೆಡೆ ಜನರು ಕುಡಿಯಲು ನೀರು ಕೇಳುತ್ತಿದ್ದಾರೆ. ತಳವಾಡ, ಮರಾಠಾ ತಳವಾಡ, ತೆಲಗಾಂವ್‌, ಅತನೂರ ಸೇರಿದಂತೆ ಅನೇಕ ಕಡೆಗಳಲ್ಲಿ ಗ್ರಾಮೀಣ ರಸ್ತೆಗಳು ಸುಧಾರಣೆ ಆಗಿಲ್ಲ. ಜನರಿಗೆ ತುಂಬಾ ತೊಂದರೆ ಆಗುತ್ತಿದೆ.

ಚುನಾವಣೆಯಲ್ಲಿ ಜಯ ಗಳಿಸಿದರೆ ನಿಮ್ಮ ಆದ್ಯತೆ ಏನು?

ಪಟ್ಟಣದ ಹಾಳಾದ ರಸ್ತೆ, ಚರಂಡಿಗಳನ್ನು ಸುಧಾರಿಸುವುದು, ಕಾರಂಜಾ ಜಲಾಶಯದಿಂದ ಪೈಪ್‌ಲೈನ್ ಮೂಲಕ ಪಟ್ಟಣಕ್ಕೆ ನೀರು ತರುವುದು, ತಾಲ್ಲೂಕಿನ ಜನರಿಗೆ ಅಗತ್ಯವಾಗಿರುವ ರಸ್ತೆ, ವಿದ್ಯುತ್‌, ನೀರಾವರಿ, ಶಾಲೆಗಳ ಸುಧಾರಣೆ ಸೇರಿದಂತೆ ಇತರ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದು, ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡುವುದು ನನ್ನ ಆದ್ಯತೆ ಆಗಲಿದೆ. ನನಗೆ ಯಾವುದೇ ಆಸೆ ಇಲ್ಲ. ಹಾಗಾಗಿಯೇ ಉಡಿಚಾಚಿ ಭಿಕ್ಷೆ ಬೇಡಿದ್ದೇನೆ.

ನಿಮ್ಮನ್ನು ಏಕೆ ಆಯ್ಕೆ ಮಾಡಬೇಕು?

ಈ ಮುಂಚೆ ಜನ ತಲಾ ಎರಡು ಅವಧಿಗೆ ಪ್ರಕಾಶ ಖಂಡ್ರೆ ಮತ್ತು ಈಶ್ವರ ಖಂಡ್ರೆ ಅವರನ್ನು ಆಯ್ಕೆ ಮಾಡಿ ನೋಡಿದ್ದಾರೆ. ನನ್ನ ಸರಳತೆ, ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿ.ಎಸ್‌.ಯಡಿಯೂರಪ್ಪ ಅವರ ಮೇಲಿನ ಅಭಿಮಾನದಿಂದ ಒಂದು ಬಾರಿ ನನಗೂ ಸೇವೆ ಮಾಡುವ ಅವಕಾಶ ನೀಡಬೇಕು ಎಂದುಕೊಂಡಿದ್ದಾರೆ.

–ಬಸವರಾಜ್‌ ಎಸ್‌.ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT