ಮಂಗಳವಾರ, ಮಾರ್ಚ್ 2, 2021
31 °C
ಬಿಜೆಪಿ ವಿರುದ್ಧ ಆಕ್ರೋಶ : ಶಾಸಕ ಫಿರೋಜ್‌ ಸೇಠ್‌

‘ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೂರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೂರು’

ಬೆಳಗಾವಿ: ‘ನಾನು ಮತಯಾಚನೆಗಾಗಿ ಈಚೆಗೆ ಪಾದಯಾತ್ರೆ ನಡೆಸಿದ ವೇಳೆ ಪಾಕಿಸ್ತಾನ್ ಜಿಂದಾಬಾದ್‌ ಎಂಬ ಘೋಷಣೆ ಕೂಗಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಿಜೆಪಿಯವರ ವಿರುದ್ಧ ಸೈಬರ್‌ ಅಪರಾಧ ವಿಭಾಗದ ಪೊಲೀಸರಿಗೆ ದೂರು ನೀಡಲಾಗುವುದು. ನನ್ನ ದೇಶ ಭಕ್ತಿ ಪ್ರಶ್ನಿಸಿದವರಿಗೆ ತಕ್ಕಪಾಠ ಕಲಿಸಲಾಗುವುದು’ ಎಂದು ಉತ್ತರ ಕ್ಷೇತ್ರದ ಹಾಲಿ ಶಾಸಕ, ಕಾಂಗ್ರೆಸ್‌ ಅಭ್ಯರ್ಥಿ ಫಿರೋಜ್‌ ಸೇಠ್‌ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿಡಿಯೋ, ಆಡಿಯೋ ಪ್ರದರ್ಶಿಸಿದ ಅವರು, ‘ಯಾರೂ ಆ ಘೋಷಣೆ ಕೂಗಿರುವುದು ವಿಡಿಯೋದಲ್ಲಿಲ್ಲ. ಸ್ಥಳೀಯ ಮುಖಂಡ ಅಜೀಜ್‌ಖಾನ್‌ ಜಿಂದಾಬಾದ್‌ ಎಂದು ಯಾರೋ ಕೂಗಿದ್ದಾರೆ. ಆದರೆ, ಬಿಜೆಪಿಯವರು ಹೊಲಸು ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎಷ್ಟೇ ದೊಡ್ಡವರಿರಲಿ, ಚಿಕ್ಕವರಿರಲಿ. ಅವರನ್ನು ಸುಮ್ಮನೆ ಬಿಡುವುದಿಲ್ಲ. ಕಾನೂನು ಪ್ರಕಾರ ಕ್ರಮವಾಗಲಿ. ಈ ವಿಡಿಯೋ ಫಾರ್ವರ್ಡ್‌ ಮಾಡಿದವರ ವಿರುದ್ಧವೂ ಕ್ರಮಕ್ಕೆ ಒತ್ತಾಯಿಸಲಾಗುವುದು. ಸುಳ್ಳು ಹಬ್ಬಿಸುವಲ್ಲಿ ಬಿಜೆಪಿ ಹಾಗೂ ಅಂಗ ಸಂಸ್ಥೆಗಳ ಕೈವಾಡವಿದೆ. ನನಗೆ ವ್ಯಾಪಕ ಬೆಂಬಲ ಸಿಗುತ್ತಿರುವುದನ್ನು ಸಹಿಸಲಾಗದವರು ಹೀಗೆ ಮಾಡುತ್ತಿದ್ದಾರೆ’ ಎಂದು ದೂರಿದರು.

ಬೆಂಕಿ ಹಚ್ಚಲು ಸಿದ್ಧವಾಗಿದ್ದಾರೆ:

‘ಹೇಗಾದರೂ ಸರಿಯೇ ಗೆಲ್ಲಬೇಕು ಎಂದು ಬಿಜೆಪಿಯವರು ರಾಜ್ಯದಾದ್ಯಂತ ಬೆಂಕಿ ಹಚ್ಚಲು ಸಿದ್ಧವಾಗಿದ್ದಾರೆ. ದೇಶಭಕ್ತಿ ಬಗ್ಗೆ ನಾನು ಅವರಿಂದ ಕಲಿಯಬೇಕಾಗಿಲ್ಲ’ ಎಂದು ಜೈ ಹಿಂದೂಸ್ತಾನ್‌, ಜೈ ಕರ್ನಾಟಕ ಎಂದು ಘೋಷಣೆ ಕೂಗಿದರು.

‘ಮರಾಠರು, ಲಿಂಗಾಯತರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮಾಜದವರೂ ನನ್ನನ್ನು ಪ್ರೀತಿಸುತ್ತಾರೆ. ಎಲ್ಲ ಧಾರ್ಮಿಕ ಕೇಂದ್ರಗಳ ಬಗ್ಗೆಯೂ ಗೌರವವಿದೆ. ಎಲ್ಲರ ಕೆಲಸವನ್ನೂ ಮಾಡಿಕೊಟ್ಟಿದ್ದೇನೆ. ಮತ ವಿಭಜನೆ, ಧ್ರುವೀಕರಣ ಮಾಡುವ ಬಿಜೆಪಿಯವರ ಯತ್ನ ಸಫಲವಾಗುವುದಿಲ್ಲ’ ಎಂದು ತಿರುಗೇಟು ನೀಡಿದರು.

‘ಎಐಎಂಐಎಂನವರು ಜೆಡಿಎಸ್‌ಗೆ ಬೆಂಬಲ ನೀಡುತ್ತಿದ್ದಾರೆ. ಜೆಡಿಎಸ್‌ ಬಿಜೆಪಿಗೆ ಬೆಂಬಲ ಕೊಡುತ್ತಿದೆ. ಇದು ಗುಟ್ಟಿನ ವಿಷಯವೇನಲ್ಲ’ ಎಂದು ಟೀಕಿಸಿದರು.

ಎಲ್ಲರೂ ನಮ್ಮೊಂದಿಗಿದ್ದಾರೆ:

‘ಶಾಸಕರು ನಮ್ಮ ಅಧಿಕಾರ ಕಿತ್ತುಕೊಳ್ಳುತ್ತಿದ್ದಾರೆ ಎಂದು ಮೇಯರ್‌ ಸೇರಿದಂತೆ ಪಾಲಿಕೆಯ ಕೆಲ ಸದಸ್ಯರು ಆರೋಪಿಸಿದ್ದಾರೆ. ಬಿಜೆಪಿಗೆ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದಾರೆ. ಹೇಗಾದರೂ ಮಾಡಿಕೊಳ್ಳಲಿ. ಆದರೆ, ನನಗೆ ಎಲ್ಲ ಭಾಷಿಕರೂ ಬೆಂಬಲ ನೀಡುತ್ತಿದ್ದಾರೆ. ಪಾಲಿಕೆಗೆ ಸಾಮಾನ್ಯವಾಗಿ ಬರುವ ಅನುದಾನ ತ್ಯಾಜ್ಯ ವಿಲೇವಾರಿಗೂ ಸಾಲದು. ನಾವು ವಿಶೇಷ ಅನುದಾನ ತಂದಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಸಮಿತಿ ಯೋಜನೆಗಳನ್ನು ನಿರ್ಧರಿಸುತ್ತದೆ. ನಾನೊಬ್ಬನೇ ಎಲ್ಲ ನಿರ್ಧಾರ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕಾಂಗ್ರೆಸ್‌ನಲ್ಲಿದ್ದು ಎಲ್ಲವನ್ನೂ ಪಡೆದುಕೊಂಡ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಬಿಜೆಪಿ ಸೇರಿದ್ದಾರೆ. ಈಗ, ಕಾಂಗ್ರೆಸ್‌ ಏನು ಮಾಡಿದೆ ಎಂದು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಕಾಲೇಜು, ಶಾಲೆ ಹೇಗೆ ಕಟ್ಟಬೇಕು ಎನ್ನುವುದು ಅವರ ಯೋಚನೆ. ಅವರೇಕೆ ರಾಷ್ಟ್ರಧ್ವಜ ಸ್ಥಾಪಿಸಲಿಲ್ಲ. ನನಗೆ ದೇಶಾಭಿಮಾನ ಇರುವುದರಿಂದ ಧ್ವಜಸ್ತಂಭ ನಿರ್ಮಿಸಿದ್ದೇನೆ. ಬಿಜೆಪಿಯವರಿಂದ ಪಾಠ ಕಲಿಯಬೇಕಾಗಿಲ್ಲ’ ಎಂದರು.

ನಗರಪಾಲಿಕೆ ಸದಸ್ಯರಾದ ಪಿಂಟು ಸಿದ್ದಿಕಿ, ಪುಷ್ಪಾ ಪರ್ವತರಾವ್‌, ಅನುಶ್ರೀ ದೇಶಪಾಂಡೆ, ಜಯಶ್ರೀ ಮಾಳಗಿ, ಡಾ.ದಿನೇಶ್‌ ನಾಶಿಪುಡಿ, ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ರಾಜು ಸೇಠ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.