‘ಭಾಗ್ಯಗಳಲ್ಲಿ ಶಾಶ್ವತ ಪರಿಹಾರ ಎಲ್ಲಿ?’

7

‘ಭಾಗ್ಯಗಳಲ್ಲಿ ಶಾಶ್ವತ ಪರಿಹಾರ ಎಲ್ಲಿ?’

Published:
Updated:

ಹನೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಎಸ್‍ಪಿ ರಾಜ್ಯಾಧ್ಯಕ್ಷ ಎನ್. ಮಹೇಶ್ ನನ್ನ ಸ್ನೇಹಿತರು. ಆದರೆ ಅಧಿಕಾರಕ್ಕೆ ಬಂದರೆ ಭಾಗ್ಯಗಳನ್ನು ಕೊಡುತ್ತಾರಾ ಎಂದು ಹೇಳಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಭಾಗ್ಯಗಳನ್ನು ಕೊಡುವುದಿಲ್ಲ ಬದಲಾಗಿ ರಾಜ್ಯದ ಜನತೆಗೆ ಬದುಕುವ ಹಕ್ಕನ್ನು ನೀಡುತ್ತೇವೆ ಬಿಎಸ್‍ಪಿ ರಾಜ್ಯಾಧ್ಯಕ್ಷ ಎನ್. ಮಹೇಶ್ ತಿರುಗೇಟು ನೀಡಿದರು.

ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಜೆಡಿಎಸ್ ಹಾಗೂ ಬಿಎಸ್‍ಪಿ ಮೈತ್ರಿಕೂಟದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಸೋಮವಾರ ಕೊಳ್ಳೇಗಾಲಕ್ಕೆ ಪ್ರಚಾರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್. ಮಹೇಶ್ ಗೆದ್ದರೆ ನಿಮಗೆ ಭಾಗ್ಯಗಳನ್ನು ನೀಡುತ್ತಾರಾ ಎಂದಿದ್ದಾರೆ. ನನ್ನಂತಹ ಸಾಮಾನ್ಯ ವ್ಯಕ್ತಿಯನ್ನು ಗುರುತಿಸಿದ ಅವರಿಗೆ ನನ್ನ ಅಭಿನಂದನೆಗಳು. ನಾವು ಅಧಿಕಾರಕ್ಕೆ ಬಂದರೆ ಭಾಗ್ಯಗಳನ್ನು ಕೊಡುವುದಿಲ್ಲ ಬದಲಾಗಿ ರಾಜ್ಯದ ಆರೂವರೆ ಕೋಟಿ ಜನತೆ ನೆಮ್ಮದಿಯಾಗಿ ಬದುಕುವ ಹಕ್ಕು ಕೊಡುತ್ತೇವೆ. ನಾಲ್ಕೂವರೆ ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ 3200 ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಈ ನಾಡಿಗೆ ಬಂದೊದಗಿದ ಅನಿಷ್ಟ. ನೊಂದ ರೈತರನ್ನು ಸಂತೈಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಸಲುವಾಗಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದರು.

ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯಗಳನ್ನು ನೀಡುವ ಮೂಲಕ ತಾತ್ಕಾಲಿಕ ಪರಿಹಾರ ನೀಡಿದೆ. ಇದಕ್ಕೆ ನಮ್ಮ ವಿರೋಧವಿಲ್ಲ ಆದರೆ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯದ ಜನತೆಗೆ ಭಾಗ್ಯಗಳನ್ನು ಕೊಡುವುದರ ಮೂಲಕ ಅವರನ್ನು ವಂಚಿಸುವ ಕೆಲಸವಾಗುತ್ತಿದೆ. ಅನ್ನಭಾಗ್ಯದ ಹೆಸರಿನಲ್ಲಿ ನೀಡುತ್ತಿರುವ ಅಕ್ಕಿ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ. ಆದರೂ ಹಸಿವುಮುಕ್ತ ಕರ್ನಾಟಕವನ್ನಾಗಿ ಮಾಡುತ್ತೇವೆ ಎಂಬ ಕಾಂಗ್ರೆಸ್ ಕಲ್ಪನೆ ಒಂದು ವಿಕೃತ ಕಲ್ಪನೆ ಎಂದು ಛೇಡಿಸಿದರು.

ಜೆಡಿಎಸ್ ಹಾಗೂ ಬಿಎಸ್‍ಪಿ ಮೈತ್ರಿಕೂಟದಿಂದ ರಾಜ್ಯದಲ್ಲಿ ಹೊಸ ಪರ್ವ ಆರಂಭವಾಗಿದೆ. ಈ ಮೈತ್ರಿಕೂಟದ ಸರ್ಕಾರತ ಅಧಿಕಾರಕ್ಕೆ ಬರುತ್ತಿದ್ದಂತೆ ರೈತರ, ಸ್ತ್ರಿ ಶಕ್ತಿ ಸ್ವಸಹಾಯ ಮಹಿಳಾ ಸಂಘ ಹಾಗೂ ನೇಕಾರರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಡಲಾಗುವುದು. ರೈತರು ಸಾಲ ಮಡಿದರೂ ಅದನ್ನು ನಿಗದಿತ ಸಮಯಕ್ಕೆ ತೀರಿಸುವ ಕೃಷಿ ನೀತಿಯನ್ನು ಜಾರಿಗೊಳಿಸಲಾಗುವುದು.

ಮುಖಂಡ ಪೊನ್ನಾಚಿ ಮಹದೇವಸ್ವಾಮಿ ಮಾತನಾಡಿ ಕ್ಷೇತ್ರದ ಹಾಲಿ ಶಾಸಕ ಆರ್. ನರೇಂದ್ರ ಮತ ಪ್ರಚಾರಕ್ಕೆ ಮೂರು ಕಡೆ ಮುಖಭಂಗವಾಗಿದೆ. ಯಾವ ಅಭಿವೃದ್ಧಿ ಕೆಲಸ ಮಾಡಿ ಮತ ಕೇಳಲು ಬಂದಿದ್ದೀರಾ ಎಂದು ಮೂರು ಗ್ರಾಮಗಳ ಜನತೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರೀತನ್‍ನಾಗಪ್ಪ ಕ್ಷೇತ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಜತೆಗೆ ಅವರಿಗೆ ಕ್ಷೇತ್ರದ ಸಮರ್ಪಕ ಪರಿಚಯವೇ ಇಲ್ಲ. ಇಂಥ ಅಭ್ಯರ್ಥಿಗಳಿಗೆ ಮತ ನೀಡಿ ನಿಮ್ಮ ಮತಗಳನ್ನು ಪೋಲು ಮಾಡಿಕೊಳ್ಳದೆ ಜೆಡಿಎಸ್‍ನಿಂದ ಸ್ಪರ್ಧಿಸಿರುವ ಎಂ.ಆರ್. ಮುಂಜುನಾಥ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಕಾರ್ಯದರ್ಶಿ ಪಂಚಾಕ್ಷರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕಾಮರಾಜು, ಮುಖಂಡರಾದ ಶಿವಮೂರ್ತಿ, ಮಂಜೇಶ, ಶಾಗ್ಯ ಮಹೇಶ್, ನಂದೀಶ್ ಇದ್ದರು.

ಕುಮಾರಸ್ವಾಮಿ ಬರಲಿಲ್ಲ..!

ಸಂಜೆ 5 ಗಂಟೆಗೆ ಪ್ರಾರಂಭವಾದ ಗಾಳಿ ಸಹಿತ ಮಳೆ 8 ಗಂಟೆಯವ ರೆಗೂ ನಿರಂತರವಾಗಿ ಸುರಿ ಯಿತು. ಇದರಿಂದ 5 ಗಂಟೆಗೆ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮ 6:30ಕ್ಕೆ ಪ್ರಾರಂಭವಾಯಿತು. ಮಳೆ ಹಾಗೂ ಕಾರ್ಮೋಡ ಕವಿದಿದ್ದ ಕಾರಣ ಹೆಲಿಕ್ಯಾಪ್ಟರ್ ಹಾರಾಟ ನಿಷೇಧಗೊಂಡ ಹಿನ್ನಲೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಕುಮಾರಸ್ವಾಮಿ ಬರುತ್ತಾರೆಂದು ತಿಳಿದು ಕ್ಷೇತ್ರದ ಜನತೆ ಜನರು ನಿರಾಶೆಯಿಂದ ಹಿಂದಿರುಗಬೇಕಾಯಿತು. ಮಳೆ ಜೋರಾದ ಕಾರಣ ಹಿನ್ನೆಲೆ ವೇದಿಕೆ ಅಸ್ತವ್ಯಸ್ಥಗೊಂಡು ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರು ಮಳೆಗೆ ಸಿಲುಕಿ ಹೈರಾಣಾದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry