ಶುಕ್ರವಾರ, ಮಾರ್ಚ್ 5, 2021
28 °C
ಎಸ್ಸೆಸ್ಸೆಲ್ಸಿ: 31ಕ್ಕೆ ಸ್ಥಾನಕ್ಕೆ ಕುಸಿದ ಜಿಲ್ಲೆ, ಶೇ100ರ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳು ಶೂನ್ಯ,

ನಗರದವರು, ಬಾಲಕಿಯರ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದವರು, ಬಾಲಕಿಯರ ಮೇಲುಗೈ

ಚಿಕ್ಕಬಳ್ಳಾಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯ ಸಾಧನೆ ಈ ಬಾರಿ ಕಳೆದ ವರ್ಷಕ್ಕಿಂತಲೂ ಕಳಪೆಯಾಗಿದೆ. ಕಳೆದ ವರ್ಷ 70.13ರಷ್ಟು ಫಲಿತಾಂಶ ಗಳಿಸಿ, 28ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 68.2ರಷ್ಟು ಫಲಿತಾಂಶ ಪಡೆಯುವ ಮೂಲಕ 31ನೇ ಸ್ಥಾನಕ್ಕೆ ಕುಸಿದಿದೆ. ಫಲಿತಾಂಶದಲ್ಲಿ ಸಹ ಶೇ 1.9 ರಷ್ಟು ಇಳಿಕೆಯಾಗಿದೆ.

ಈ ವರ್ಷ ಪರೀಕ್ಷೆ ಬರೆದ ಹೊಸಬರ ಪೈಕಿ ಶೇ 68.2ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಪಾಸಾದವರ ಪ್ರಮಾಣ ಶೇ68.19ರಷ್ಟಿದೆ. ಶೇ 65.98 ಬಾಲಕರು ಮಾತ್ರ ಉತೀರ್ಣರಾಗಿದ್ದಾರೆ.

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಈ ಬಾರಿ ನಗರ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಸಾಧನೆ (ಶೇ 70.10) ಮಾಡಿದ್ದಾರೆ. ಶೇ 68.67ರಷ್ಟು ಗ್ರಾಮೀಣ ಪ್ರತಿಭೆಗಳು ಗೆಲುವಿನ ನಗೆ ಬೀರಿದ್ದಾರೆ. ಈ ಬಾರಿ ಖಾಸಗಿಯಾಗಿ ಪರೀಕ್ಷೆ ಬರೆದ 425 ವಿದ್ಯಾರ್ಥಿಗಳ ಪೈಕಿ ಕೇವಲ 11 ಮತ್ತು ಮರು ಪರೀಕ್ಷೆ ಬರೆದ 2,020 ವಿದ್ಯಾರ್ಥಿಗಳಲ್ಲಿ 305 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕನ್ನಡ ಮಾಧ್ಯಮದವರಿಗಿಂತ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರೇ ಹೆಚ್ಚಿನ ಸಂಖ್ಯೆಯಲ್ಲಿ (ಶೇ83.26) ಉತ್ತೀರ್ಣರಾಗಿದ್ದಾರೆ.

32 ಶಾಲೆಗಳ ಉತ್ತಮ ಸಾಧನೆ

ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 278 ಪ್ರೌಢಶಾಲೆಗಳಿವೆ. ಈ ಪೈಕಿ 30 ಖಾಸಗಿ, 1ಅನುದಾನಿತ ಶಾಲೆ ಶೇ100 ರಷ್ಟು ಫಲಿತಾಂಶ ಪಡೆದಿವೆ. ಈ ಬಾರಿ ಒಂದೇ ಒಂದು ಸರ್ಕಾರಿ ಶಾಲೆ ಶೇ100 ರಷ್ಟು ಫಲಿತಾಂಶ ಪಡೆದಿಲ್ಲ. ಯಾವುದೇ ಶಾಲೆಯಲ್ಲಿ ಶೂನ್ಯ ಫಲಿತಾಂಶ ದಾಖಲಾಗಿಲ್ಲ.

ತಾಲ್ಲೂಕುವಾರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು

ಚಿಂತಾಮಣಿಯ ಆರ್.ಕೆ.ವಿಷನ್ ಪ್ರೌಢಶಾಲೆಯ ವಿದ್ಯಾರ್ಥಿನಿ ಧನಲಕ್ಷ್ಮೀ (623) ಮತ್ತು ಕಿಶೋರ್ ವಿದ್ಯಾಭವನ ಪ್ರೌಢಶಾಲೆಯ ವಿದ್ಯಾರ್ಥಿನಿ ಅನಘಾ ರಾವ್ (623), ಬಾಗೇಪಲ್ಲಿ ತಾಲ್ಲೂಕಿನ ಬಿಜಿಎಸ್ ಶಾಲೆಯ ವಿದ್ಯಾರ್ಥಿ ಮಣಿಕುಮಾರ್ (619), ಗೌರಿಬಿದನೂರು ತಾಲ್ಲೂಕಿನ ಬಿಜಿಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಅಮೀನಾ ಮರೈ ಎಸ್‌.ಪಠಾಣ್ (617) ಮತ್ತು ಜಿ.ಜೀವನ್ ರೆಡ್ಡಿ (617), ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಪ್ರೌಢಶಾಲೆಯ ವಿದ್ಯಾರ್ಥಿ ಸಚಿನ್ (616), ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಜ್ಞಾನಜ್ಯೋತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಆರ್.ಚಂದುಶ್ರೀ (612), ಕ್ರಿಸೆಂಟ್ ಪ್ರೌಢಶಾಲೆಯ ವಿದ್ಯಾರ್ಥಿನಿ ತುಬಾ ನುದ್ರತ್ (612), ಗುಡಿಬಂಡೆಯ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಜೆ.ಆರ್.ವರುಣ್ (593) ಅವರು ತಾಲ್ಲೂಕುವಾರು ಫಲಿತಾಂಶದಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದಾರೆ.

ಗುಡಿಬಂಡೆ ಉತ್ತಮ ಸಾಧನೆ

ತಾಲ್ಲೂಕುವಾರ ಫಲಿತಾಂಶದಲ್ಲಿ ಈ ಬಾರಿ ಗುಡಿಬಂಡೆ ತಾಲ್ಲೂಕು ಉತ್ತಮ ಸಾಧನೆ (ಶೇ82.93) ತೋರಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಕಳೆದ ಬಾರಿ ಕೂಡ ಎರಡನೇ ಸ್ಥಾನದಲ್ಲಿದ್ದ (ಶೇ 76.78) ಚಿಂತಾಮಣಿಯ ಸ್ಥಾನ ಪಲ್ಲಟವಾಗಿಲ್ಲ. ಆದರೆ ಕಳೆದ ವರ್ಷ ತಾಲ್ಲೂಕುವಾರು ಫಲಿತಾಂಶದಲ್ಲಿ ಮೊದಲ ಸ್ಥಾನದಲ್ಲಿದ್ದ ಶಿಡ್ಲಘಟ್ಟ ಈ ಬಾರಿ ಮೂರನೇ ಸ್ಥಾನಕ್ಕೆ (ಶೇ 75.28) ಇಳಿದಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.