ಧರ್ಮಸ್ಥಳಕ್ಕೆ ಹೊರಟ 2 ಬಸ್‌ ತಡೆ

7
ಮತ ಗಿಟ್ಟಿಸಲು ಆಮಿಷದ ಗುಮಾನಿ; ದೂರು

ಧರ್ಮಸ್ಥಳಕ್ಕೆ ಹೊರಟ 2 ಬಸ್‌ ತಡೆ

Published:
Updated:

ಚಿಕ್ಕಮಗಳೂರು: ಜಿಲ್ಲೆಯ ಸಖರಾಯಪಟ್ಟಣದಿಂದ ಎರಡು ಖಾಸಗಿ ಬಸ್ಸುಗಳಲ್ಲಿ ಮಂಗಳವಾರ ಮುಂಜಾನೆ ಧರ್ಮಸ್ಥಳಕ್ಕೆ ಪ್ರವಾಸ ಹೊರಟಿದ್ದ ಸುಮಾರು 50 ಮಹಿಳೆಯರನ್ನು ತಡೆದು ಮನೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.

‘ಈ ಮಹಿಳೆಯರಿಗೆ ಆಮಿಷ ವೊಡ್ಡಿ ಧರ್ಮಸ್ಥಳಕ್ಕೆ ಪ್ರವಾಸ ಕರೆದೊಯ್ಯಲಾಗುತ್ತಿದೆ ಎಂದು ದೂರು ಬಂದಿತ್ತು. ಚುನಾವಣೆ ನೀತಿ ಸಂಹಿತೆ ತಂಡ ಕ್ಷಿಪ್ರ ಕಾರ್ಯಾಚರಣೆ ದಳದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಎರಡು ಖಾಸಗಿ ಬಸ್ಸುಗಳಲ್ಲಿ ಸುಮಾರು 50 ಮಹಿಳೆಯರು ಧರ್ಮಸ್ಥಳಕ್ಕೆ ಹೊರಟಿರುವುದು ಕಂಡುಬಂದಿದೆ. ಪ್ರವಾಸ ಹೋಗದಂತೆ ಅಧಿಕಾರಿಗಳು ಮಹಿಳೆಯರಿಗೆ ಬುದ್ಧಿ ಹೇಳಿ ಕಳಿಸಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆ ಮಹಿಳೆಯರು ಚಿಕ್ಕಮಗಳೂರಿನ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಬಂದಿದ್ದಾರೆ, ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಧರ್ಮಸ್ಥಳಕ್ಕೆ ಹೊರಟಿದ್ದಾರೆ ಎಂದು ಮಾಹಿತಿ ಮೇರೆಗೆ ನಗರದ ಕ್ಷಿಪ್ರ ಕಾರ್ಯಾಚರಣೆ ದಳದ ಅಧಿಕಾರಿ ಎಂ.ವಿ.ತುಷಾರಮಣಿ ತಲಾಷ್‌ ಮಾಡಿದ್ದಾರೆ. ಪ್ರವಾಸ ಹೊರಟಿರುವುದು ಸರಿಯಲ್ಲ, ಹೋದರೆ ಪ್ರಕರಣ ದಾಖಲಿಸುತ್ತೇವೆ ಎಂದು ಎಚ್ಚರಿಸಿ ಅವರನ್ನು ವಾಪಸ್‌ ಕಳಿಸಿದ್ದಾರೆ’ ಎಂದು ತಿಳಿಸಿದರು.

‘ಕೆಲವರು ವೈಯಕ್ತಿಕವಾಗಿ ಟಿಕೆಟ್‌ ಪಡೆದಿದ್ದರು. ಮೂವತ್ತು ಮಂದಿಗೆ ಒಟ್ಟಾಗಿ ಒಂದು ಟಿಕೆಟ್‌ ಖರೀದಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ’ ಎಂದರು.

‘ಈ ಪ್ರಕರಣದ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಮತಗಿಟ್ಟಿಸಲು ಒಂದು ಪಕ್ಷದವರು ಈ ಮಹಿಳೆಯರಿಗೆ ಧರ್ಮಸ್ಥಳಕ್ಕೆ ಕರೆದೊಯ್ಯುವ ಆಮಿಷವೊಡಿದ್ದಾರೆ ಎಂದು ಗುಮಾನಿ ವ್ಯಕ್ತವಾಗಿದೆ.

ರಜೆ ಘೋಷಣೆ

ಚಿಕ್ಕಮಗಳೂರು: ವಿಧಾನ ಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಇದೇ 12ರಂದು ಜಿಲ್ಲೆಯ ಎಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳಿಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಸ್ಥಳೀಯ ಸಂಸ್ಥೆಗಳ, ಖಾಸಗಿ ಶಾಲಾ ಕಾಲೇಜುಗಳ, ವಾಣಿಜ್ಯ ಸಂಸ್ಥೆಗಳ, ಕೈಗಾರಿಕೆಗಳ ನೌಕರರಿಗೆ ಅಂದು ವೇತನ

ಸಹಿತ ರಜೆ ನೀಡಲು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ಮದ್ಯ ಮಾರಾಟ ನಿಷೇಧ ಇಂದು

ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇದೇ 9ರಂದು ಜಿಲ್ಲೆಗೆ ಆಗಮಿಸುವುದರಿಂದ ಚಿಕ್ಕಮಗಳೂರು ನಗರದ 10 ಕೀ.ಮೀ ವ್ಯಾಪ್ತಿಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರವೆರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಆದೇಶ ನೀಡಿದ್ದಾರೆ.

ನಿಷೇಧಾಜ್ಞೆ ಜಾರಿ

ಚಿಕ್ಕಮಗಳೂರು: ರಾಜ್ಯ ವಿಧಾನಸಭಾ ಚುನಾವಣೆ ನಿಮಿತ್ತ ಜಿಲ್ಲೆಯಲ್ಲಿ ಇದೇ 10ರ ಸಂಜೆ 6 ಗಂಟೆಯಿಂದ ಇದೇ 12ರ ಮಧ್ಯರಾತ್ರಿವರೆಗೆ ಜಿಲ್ಲಾಧ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಎಣಿಕೆ ನಿಮಿತ್ತ ಇದೇ 15 ರಂದು ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಆದೇಶ ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry