ಹರಪನಹಳ್ಳಿಯಲ್ಲಿ ರಂಗೇರಿದೆ ಚುನಾವಣಾ ಕಣ

7

ಹರಪನಹಳ್ಳಿಯಲ್ಲಿ ರಂಗೇರಿದೆ ಚುನಾವಣಾ ಕಣ

Published:
Updated:

ಹರಪನಹಳ್ಳಿ: ತಾಲ್ಲೂಕಿನಲ್ಲಿ ಸದ್ಯ ಬಿರು ಬಿಸಿಲಿಗಿಂತ ಚುನಾವಣೆ ಕಾವು ಹೆಚ್ಚಿದೆ. ಮೂರು ಪಕ್ಷಗಳ ನಾಯಕರ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಯಾರು ಗೆಲುವಿನ ಮೆಟ್ಟಿಲು ಏರಲಿದ್ದಾರೆ ಎಂಬುದು ಕ್ಷೇತ್ರದ ಜನರಲ್ಲಿ ಕುತೂಹಲ ಕೆರಳಿಸಿದೆ.

20013ರ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದ ಹುರಿಯಾಳುಗಳು ಮತ್ತೆ ಈಗ ಮುಖಾಮುಖಿ ಆಗಿದ್ದಾರೆ. ಆಗ ಕೆಜೆಪಿಯಿಂದ ಸ್ಪರ್ಧಿಸಿದ್ದ ಅರಸೀಕೆರೆ ಎನ್.ಕೊಟ್ರೇಶ್‌ ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ. ಕಾಂಗ್ರೆಸ್ಸಿನಿಂದ ಶಾಸಕ ಎಂ.ಪಿ.ರವೀಂದ್ರ, ಬಿಜೆಪಿಯಿಂದ ಜಿ.ಕರುಣಾಕರ ರೆಡ್ಡಿ ಕಣದಲ್ಲಿದ್ದಾರೆ. ಉಳಿದಂತೆ 13 ಜನರು ಸ್ಪರ್ಧೆಯಲ್ಲಿದ್ದಾರೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಹೀಗಿದ್ದರೂ ಉಳಿದ ಅಭ್ಯರ್ಥಿಗಳನ್ನು ಇಲ್ಲಿ ಕಡೆಗಣಿಸುವಂತಿಲ್ಲ. ಈಗಾಗಲೇ ತಮ್ಮ ಅಭ್ಯರ್ಥಿಗಳ ಪರ ಆ ಪಕ್ಷದ ನಾಯಕರು ಬಂದು ಮತಯಾಚಿಸಿದ್ದಾರೆ. ರವೀಂದ್ರ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೊಟ್ರೇಶ್ ಪರ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ  ಎಚ್.ಡಿ.ಕುಮಾರಸ್ವಾಮಿ ಬಹಿರಂಗ ಸಮಾವೇಶ ನಡೆಸಿದ್ದರೆ, ಕರುಣಾಕರ ರೆಡ್ಡಿ ಪರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಷೋ ನಡೆಸಿದ್ದಾರೆ.

ಸದ್ಯ ಕ್ಷೇತ್ರದಲ್ಲಿ ಪ್ರಬಲ ತ್ರಿಕೋನ ಸ್ಪರ್ಧೆಯಿದ್ದು, ಯಾರು ವಿಜಯದ ಮಾಲೆ ಧರಿಸಲಿದ್ದಾರೆ ಎಂದು ಹೇಳುವುದು ಕಷ್ಟ. ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ಮೂವರು ಅಭ್ಯರ್ಥಿಗಳು ಸರಿಸಮನಾಗಿ ಅಂದರೆ 40 ಸಾವಿರಕ್ಕೂ ಹೆಚ್ಚು ಮತ ಗಳಿಸಲಿದ್ದಾರೆ. ಆದರೆ ಗೆಲುವಿನ ಮತಗಳನ್ನು ಯಾರು ಗಳಿಸುತ್ತಾರೆ ಅವರಿಗೆ ವಿಜಯದ ಮಾಲೆ ಒಲಿಯಲಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

‘ಹರಪನಹಳ್ಳಿ ತಾಲ್ಲೂಕನ್ನು ಬಳ್ಳಾರಿಗೆ ಸೇರಿಸಿ ಸಂವಿಧಾನದ 371ಜೆ ಸೌಲಭ್ಯ‌ ತಾಲ್ಲೂಕಿಗೆ ಸಿಗುವಂತೆ ಮಾಡಿದ್ದೇನೆ. 60 ಕೆರೆಗಳು ನೀರು ತುಂಬಿಸುವ ಯೋಜನೆ ಹಾಗೂ ಗರ್ಭಗುಡಿ ಬ್ರೀಡ್ಜ್ ಕಂ ಬ್ಯಾರೇಜ್ ನಿಮಾರ್ಣಕ್ಕೆ ಚಾಲನೆ ನೀಡಿದ್ದೇನೆ’ ಎಂದು ಶಾಸಕ ಎಂ.ಪಿ.ರವೀಂದ್ರ ಮತಯಾಚನೆಯಲ್ಲಿ ತೊಡಗಿದ್ದಾರೆ.

ಮಾಜಿ ಸಚಿವ  ಕರುಣಾಕರ ರೆಡ್ಡಿ ತಾವು ಶಾಸಕರಾಗಿದ್ದ ವೇಳೆ ತಾಲ್ಲೂಕಿಗೆ ಸಾಕಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವುದನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ.

‘ತಾಲ್ಲೂಕಿನ ಮಗನಾದ ನನಗೆ ಒಂದು ಬಾರಿ ಅವಕಾಶ ನೀಡಿದರೆ ಕ್ಷೇತ್ರದಲ್ಲಿ ಬಹಳ ದಿನಗಳಿಂದ ಬೇರೂರಿರುವ ಸಮಸ್ಯೆಗಳಿಗೆ ಮುಕ್ತಿ ನೀಡುತ್ತೇನೆ’ ಎಂದು ಜೆಡಿಎಸ್ ಅಭ್ಯರ್ಥಿ ಕೊಟ್ರೇಶ್ ಮತ ಕೇಳಿದರು.

ಪ್ರಮುಖ ಮೂರು ಪಕ್ಷಗಳನ್ನು ಹೊರತುಪಡಿಸಿದರೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದಿಂದ ಆರ್. ಕೃಷ್ಣಮೂರ್ತಿ, ಸಿಪಿಐ (ಎಂ.ಎಲ್.) ಪಕ್ಷದಿಂದ ಇದ್ಲಿ ರಾಮಪ್ಪ, ಜನಹಿತದಿಂದ ಅಬ್ದುಲ್ ಬಾರಿ, ಸಮಾಜವಾದಿ ಪಕ್ಷದಿಂದ ಬಿ.ಎಲ್.ಚನ್ನಾನಾಯ್ಕ, ಎಐಎಂಇಪಿ ಯಿಂದ  ಕೆ.ಲಲಿತಮ್ಮನಾಯ್ಕ, ಪಕ್ಷೇತರರಾಗಿ ಜಿ.ಕಲಿವೀರಗೌಡ, ಗಡಗಿ ಗಜೇಂದ್ರ, ಎ.ಟಿ.ದಾದಾ ಖಲಂದರ್, ಮನ್ಸೂರ್ ಬಾಷಾ, ಡಿ.ಮಂಜಪ್ಪ, ರಾಜಪ್ಪ, ಬಿ.ವಿನಯಕುಮಾರ, ಎಚ್.ಟಿ.ಶ್ರೀಪತಿ ಕಣದಲ್ಲಿದ್ದಾರೆ. 

ಹರಪನಹಳ್ಳಿ ಕ್ಷೇತ್ರ 2008ರಲ್ಲಿ ಎಸ್ಸಿಯಿಂದ ಸಾಮಾನ್ಯ ಮೀಸಲು ಕ್ಷೇತ್ರವಾಗಿ ಬದಲಾಯಿತು. ಸ್ವಾತಂತ್ರ್ಯ ಪೂರ್ವದಿಂದಲೂ ಕ್ಷೇತ್ರ ಕಾಂಗ್ರೆಸ್ ಭದ್ರ ಕೋಟೆಯಾಗಿದೆ.  ಆರಂಭದಲ್ಲಿ ಒಂದು ಬಾರಿ ಪಿಎಸ್‌ಪಿ ಮತ್ತು ಒಂದು ಬಾರಿ ಬಿಜೆಪಿ ಹೊರತು ಪಡಿಸಿದರೆ 10 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಹರಿಜನ, ಲಂಬಾಣಿ, ಭೋವಿ, ಛಲವಾದಿ, ಕೊರಚ, ಕೊರಮ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನುಳಿದಂತೆ ವಾಲ್ಮೀಕಿ-30, ಮುಸ್ಲಿಂ ಹಾಗೂ ಇತರೆ ಮತದಾರರಿದ್ದಾರೆ. 50 ಸಾವಿರ ಸಂಖ್ಯೆಯಲ್ಲಿರುವ ವೀರಶೈವ ಮತಗಳು ನಿರ್ಣಾಯಕ ಪಾತ್ರವಹಿಸಲಿವೆ.

ಎಷ್ಟು ಮತದಾರರರು?

ಪುರುಷರು-1,03,360,

ಮಹಿಳೆಯರು-97,669,

ಇತರೆ-17 ಸೇರಿ

ಒಟ್ಟು 2,01,046 ಮತದಾರರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry