ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಪೈಪ್‌ಲೈನ್ ಮೂಲಕ ಮಲಪ್ರಭಾ ನೀರು

ಬಿ.ಎಸ್‌.ಯಡಿಯೂರಪ್ಪ ಭರವಸೆ
Last Updated 9 ಮೇ 2018, 10:04 IST
ಅಕ್ಷರ ಗಾತ್ರ

ಧಾರವಾಡ: ‘ಬಿಜೆಪಿ ಅಧಿಕಾರಕ್ಕೆ ಬಂದ ಒಂದು ತಿಂಗಳ ಒಳಗಾಗಿ ಉಪ್ಪಿನಬೆಟಗೇರಿ, ತಡಕೋಡ ಹಾಗೂ ನರೇಂದ್ರ ಗ್ರಾಮಕ್ಕೆ ಮಲಪ್ರಭಾ ನದಿಯಿಂದ ಪ್ರತ್ಯೇಕ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಧಾರವಾಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ಪ್ರಚಾರಕ್ಕೆ ಉಪ್ಪಿನ ಬೆಟಗೇರಿ ಗ್ರಾಮದ ಶ್ರೀಗುರು ವಿರೂಪಾಕ್ಷೇಶ್ವರ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಂಗಳವಾರ ಅವರು ಮಾತನಾಡಿದರು.

‘ಸೀಮಾ ಮಸೂತಿ ಕ್ಷೇತ್ರದ ಶಾಸಕಿಯಾಗಿದ್ದಾಗ ಕ್ಷೇತ್ರದ 14 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದ್ದರು. ಈ ಭಾಗದ ನೀರಿನ ಸಮಸ್ಯೆ ಕುರಿತು ಈಗಲೂ ಸೀಮಾ ಅವರೇ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಅದರ ಮುಂದುವರಿದ ಭಾಗವಾಗಿ ಈಗ ಪ್ರತ್ಯೇಕ ಪೈಪ್‌ಲೈನ್‌ ವ್ಯವಸ್ಥೆ ಮಾಡಲಾಗುವುದು’ ಎಂದರು.

ಹಾಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ‘ವೀರಶೈವ, ಲಿಂಗಾಯತ ಹಾಗೂ ಜಾತಿಗಳ ನಡುವೆ ವಿಷಬೀಜ ಬಿತ್ತಿದ ವಿನಯ ಕುಲಕರ್ಣಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಮಂತ್ರಿ ಎಂಬ ಸೊಕ್ಕಿನಲ್ಲಿ ಗೂಂಡಾಗಿರಿ, ಜಿಲ್ಲಾ ಪಂಚಾಯ್ತಿ ಸದಸ್ಯನ ಕೊಲೆ ಮಾಡಿದವರಿಗೆ ಬೆಂಬಲ ನೀಡಿದ್ದಾರೆ. ಇಷ್ಟು ಮಾತ್ರವಲ್ಲ ಮಂತ್ರಿಯಾಗಿ ಮಾಡಿರುವ ಹಗರಣ, ಭ್ರಷ್ಟಾಚಾರಗಳ ಕುರಿತು ಸಂಪೂರ್ಣ ತನಿಖೆ ನಡೆಸಿ ಜೈಲಿಗೆ ಕಳುಹಿಸುತ್ತೇನೆ’ ಎಂದು ಗುಡುಗಿದರು.

‘ಅಮೃತ ದೇಸಾಯಿ ಮೇಲೆ ಹೆಚ್ಚಾಗಿರುವ ವಿಶ್ವಾಸ ಹಾಗೂ ವಿನಯ ಕುಲಕರ್ಣಿ ವಿರುದ್ಧದ ಆಕ್ರೋಶ ಜನರಲ್ಲಿ ಹೆಚ್ಚಾಗಿದೆ. ಹೀಗಾಗಿ ಮೇ 17ರಂದು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಅಮೃತ ನನ್ನ ಪಕ್ಕದಲ್ಲಿರುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

‘ಅಧಿಕಾರಕ್ಕೆ ಬಂದ ತಕ್ಷಣವೇ ಗೋವಿನ ಜೋಳವನ್ನು ಪ್ರತಿ ಕ್ವಿಂಟಲ್‌ಗೆ ₹1500 ನೀಡಿ ಖರೀದಿಸಲು ಕ್ರಮ ಕೈಗೊಳ್ಳಲಾಗುವುದು. ಕಾಂಗ್ರೆಸ್‌ ಸರ್ಕಾರದಲ್ಲಿ ರದ್ದಾದ ಬಿಪಿಎಲ್ ಕಾರ್ಡ್‌ಗಳನ್ನು ಮರಳಿ ನೀಡಲಾಗುವುದು’ ಎಂದು ವಾಗ್ದಾನ ಮಾಡಿದ ಅವರು ಪಕ್ಷದ ಪ್ರಣಾಳಿಕೆಯಲ್ಲಿರುವ ಪ್ರಮುಖ ಘೋಷಣೆಗಳನ್ನು ಹೇಳಿದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ‘ವಿನಯ ಕುಲಕರ್ಣಿ ತನ್ನ ಮೂಲ ಊರು ನಾಯಕನೂರಿನಲ್ಲಿ ದಲಿತರ ಮೇಲೆ ನಡೆಸಿದ ದೌರ್ಜನ್ಯದ ಅರಿವು ಮೀರಾ ಕುಮಾರ್ ಅವರಿಗೆ ಇದ್ದಿದ್ದರೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಾಪಸ್ ಮರಳುತ್ತಿದ್ದರು. ನಾಯಕನೂರಿನಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಾದಾಗ ಅವರು ಊರು ತೊರೆಯಲು ಸಿದ್ಧರಾಗಿದ್ದರು. ಆಗ ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ್ ಅಲ್ಲಿಗೆ ತೆರಳಿ ಅವರ ಮನವೊಲಿಸಿದ್ದರು’ ಎಂದರು.

‘ಪ್ರಾಮಾಣಿಕ ನಾಯಕರಾದ ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ ಅವರನ್ನೇ ಕಾಂಗ್ರೆಸ್‌ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಈಗಲೂ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬಾರದು ಎಂಬ ದುರುದ್ದೇಶ ಹೊಂದಿದ್ದಾರೆ’ ಎಂದು ಲಿಂಗಾಯತರ ಪರವಾಗಿ ಜೋಶಿ ಮಾತನಾಡಿದರು.

ಪಕ್ಷದ ಅಭ್ಯರ್ಥಿ ಅಮೃತ ದೇಸಾಯಿ ಮಾತನಾಡಿ, ‘ಕಳೆದ ಐದು ವರ್ಷಗಳಲ್ಲಿ ವಿನಯ ಕುಲಕರ್ಣಿ ಆಸ್ತಿ 6ಪಟ್ಟು ಹೆಚ್ಚಾಗಿದ್ದೇ ದೊಡ್ಡ ಸಾಧನೆ. ಡೈರಿ ಹೊಂದಿರುವ ಅವರ ಗೂಂಡಾವರ್ತನೆಯಿಂದ ಬೇಸತ್ತಿರುವ ಕ್ಷೇತ್ರದ ಮತದಾರರು, ಮರಳಿ ಅವರನ್ನು ದನ ಕಾಯಲು ಕಳಿಸುವುದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಆವರಿಸಿದೆ’ ಎಂದು ಆರೋಪ ಮಾಡಿದರು.

ಸೀಮಾ ಮಸೂತಿ, ತವನಪ್ಪ ಅಷ್ಟಗಿ, ಸವಿತಾ ಅಮರಶೆಟ್ಟಿ ಇದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಸುರೇಶ ಮಸೂತಿ ಸೇರಿದಂತೆ ಹಲವರು ಇದೇ ಸಂದರ್ಭದಲ್ಲಿ ಬಿಜೆಪಿ ಸೇರಿದರು.

ಯಾದವಾಡದಲ್ಲಿ ‘ವಿಕೆ’ ಘೋಷಣೆ

ಹೆಲಿಕಾಪ್ಟರ್ ಮೂಲಕ ನವಲಗುಂದದಿಂದ ಯಾದವಾಡ ಗ್ರಾಮದಲ್ಲಿ ಸ್ಥಾಪಿಸಲಾಗಿದ್ದ ಹೆಲಿಪ್ಯಾಡ್‌ಗೆ ಬಂದಿಳಿದರು. ಅಲ್ಲಿಂದ ಉಪ್ಪಿನಬೆಟಗೇರಿಗೆ ಕಾರಿನ ಮೂಲಕ ಹೊರಟ ಅವರಿಗೆ, ಯಾದವಾಡದಲ್ಲಿ ಕಾಂಗ್ರೆಸ್‌ ಧ್ವಜ ಹಿಡಿದು ನಿಂತಿದ್ದ ಕಾರ್ಯಕರ್ತರು, ‘ವಿಕೆ’ (ವಿನಯ ಕುಲಕರ್ಣಿ) ಎಂದು ಘೋಷಣೆ ಕೂಗಿದರು. ಬಿಜೆಪಿ ಕಾರ್ಯಕರ್ತರೂ ಈ ಸಂದರ್ಭದಲ್ಲಿ ಇದ್ದರು. ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT