ಗುರುವಾರ , ಫೆಬ್ರವರಿ 25, 2021
17 °C
ನವಲಗುಂದ ವಿಧಾನಸಭಾ ಕ್ಷೇತ್ರ: ಮುನ್ನೆಲೆಗೆ ಬಾರದ ಮಹದಾಯಿ ಕಳಸಾ ಬಂಡೂರಿ ಜಲ ವಿವಾದ

ರೈತ ಬಂಡಾಯದ ನೆಲದಲ್ಲಿ ತ್ರಿಕೋನ ಸ್ಪರ್ಧೆ

ಎಂ.ಚಂದ್ರಪ್ಪ Updated:

ಅಕ್ಷರ ಗಾತ್ರ : | |

ರೈತ ಬಂಡಾಯದ ನೆಲದಲ್ಲಿ ತ್ರಿಕೋನ ಸ್ಪರ್ಧೆ

ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ ಹೋರಾಟ ಮತ್ತು ರೈತ ಬಂಡಾಯದಿಂದ ಸದಾ ಸುದ್ದಿಯಲ್ಲಿರುವ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ, ಜೆಡಿಎಸ್‌ನ ಎನ್‌.ಎಚ್‌.ಕೋನರೆಡ್ಡಿ ಮತ್ತು ಕಾಂಗ್ರೆಸ್‌ನ ವಿನೋದ ಅಸೂಟಿ ಸೇರಿ 13 ಜನ ಕಣದಲ್ಲಿದ್ದು, ಕ್ಷೇತ್ರದ ಆದಿಪತ್ಯಕ್ಕಾಗಿ ಪೈಪೋಟಿ ನಡೆಸಿದ್ದಾರೆ.

ಮಹದಾಯಿ ವಿವಾದ ಚುನಾವಣಾ ವಿಷಯವಾಗಿ ಕ್ಷೇತ್ರದಲ್ಲಿ ಮುನ್ನೆಲೆಗೆ ಬಾರದಿದ್ದರೂ ಗುಪ್ತಗಾಮಿನಿಯಾಗಿದೆ. ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ 1000ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಕವಲು ದಾರಿಗಳಿದ್ದರೂ ಮೂರು ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ರೈತರು ಇಲ್ಲಿದ್ದಾರೆ. ಯಾವುದೇ ನಿರ್ದಿಷ್ಟ ಪಕ್ಷಕ್ಕೆ ಬೆಂಬಲ ಸೂಚಿಸುವ ಕುರಿತು ವೇದಿಕೆ ತೀರ್ಮಾನಿಸಿಲ್ಲ.

‘ಯಾವುದೇ ಪಕ್ಷವನ್ನು ಬೆಂಬಲಿಸುವುದು ಅವರವರ ವೈಯಕ್ತಿಕ ವಿವೇಚನೆಗೆ ಬಿಟ್ಟ ವಿಚಾರ’ ಎನ್ನುತ್ತಾರೆ ಕಳಸಾ ಬಂಡೂರಿ ಹೋರಾಟ ವೇದಿಕೆ ನೂತನ ಅಧ್ಯಕ್ಷ ಬಸಪ್ಪ ಬೀರಣ್ಣನವರ.

ಆರಂಭದಿಂದ ಬಿಜೆಪಿ ಮೇಲಿದ್ದ ಮಹದಾಯಿ ಆಕ್ರೋಶವನ್ನು ಸ್ವತ ಪ್ರಧಾನಿ ನರೇಂದ್ರ ಮೋದಿ ಮತ್ತು ಆ ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಶಾ ತಣ್ಣಗಾಗಿಸಲು ಕೊನೆಗಳಿಕೆಯಲ್ಲಿ ಯತ್ನಿಸಿದ್ದಾರೆ. ಆದರೆ, ಇದು ಎಷ್ಟರ ಮಟ್ಟಿಗೆ ಕೆಲಸ ಮಾಡಲಿದೆ ಎಂಬುದು ಹೇಳಲಾಗದು.

ಚುನಾವಣಾ ಚದುರಂಗದಾಟದ ಹೊರತಾಗಿಯೂ ಮಹದಾಯಿ ಹೋರಾಟಗಾರರಲ್ಲಿ ರಾಜಕೀಯ ಪಕ್ಷಗಳೆಡೆಗಿನ ಕೋಪ ಕಡಿಮೆಯಾಗಿಲ್ಲ. ಹೀಗಾಗಿ ಯಾವ ಪಕ್ಷದ ಅಭ್ಯರ್ಥಿಗೆ ‘ನೀರುಣಿಸುತ್ತಾರೆ’ ಎಂಬುದು ಕಾದುತೋಡಬೇಕಿಗಿದೆ.

ಸಾಲಮನ್ನಾ ಹಾಗೂ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬದ್ಧವಾಗಿರುವ ಪಕ್ಷಕ್ಕೆ ನಮ್ಮ ಮತ ಎಂದು ಮತ್ತೆ ಕೆಲ ರೈತರು ನೇರವಾಗಿ ಹೇಳುತ್ತಾರೆ. ಕ್ಷೇತ್ರದಲ್ಲಿ ಜಾತಿ ಹಿತಾಸಕ್ತಿಯೂ ದೊಡ್ಡ ಮಟ್ಟ ದಲ್ಲಿ ಕೆಲಸ ಮಾಡು‌ತ್ತಿದೆ.

ಕಗೆ ಆಂತರಿಕ ಬೇಗುದಿ: ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಯುವಕ ವಿನೋದ ಅಸೂಟಿ ಅವರನ್ನು ಗೆಲ್ಲಿಸಬೇಕೆಂಬ ಒಲವು ಮತದಾರರಲ್ಲಿದೆ. ಆದರೆ, ಆಂತರಿಕ ಕಲಹ, ಭಿನ್ನಾಭಿಪ್ರಾಯ ತೊಡಕಾಗಿ ‍ಪರಿಣಮಿಸಿದೆ. ಪಕ್ಷದ ಹಿರಿಯ ನಾಯಕ ಕೆ.ಎನ್‌.ಗಡ್ಡಿಗೆ ಟಿಕೆಟ್‌ ತಪ್ಪಿದ ಪರಿಣಾಮ ಮತ ಧ್ರುವೀಕರಣ ಆಗಲಿದೆ ಎಂಬ ರಾಜಕೀಯ ವಿಶೇಷಣೆ ನಡೆದಿದೆ.

ಇನ್ನು ಕಾಂಗ್ರೆಸ್‌ ವಿರುದ್ಧ ಬಂಡಾಯ ಸಾರಿ ಪಕ್ಷೇತರರಾಗಿ ಕಣದಲ್ಲಿರುವ ಶಿವಾನಂದ ಕರಿಗಾರ, ಟಿಕೆಟ್‌ ಸಿಗದೇ ಅಸಮಾಧಾನಗೊಂಡಿರುವ ಅಣ್ಣಿಗೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಕಾಶ್‌ ಅಂಗಡಿ, ಸಚಿವ ವಿನಯ ಕುಲಕರ್ಣಿ ಅವರ ಸಹೋದರ ವಿಜಯ ಕುಲಕರ್ಣಿ ಅವರಿಂದ ಪಕ್ಷಕ್ಕೆ ನಷ್ಟವಾಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್‌ ಮುಖಂಡರ ಈ ಆಕ್ರೋಶ ಜೆಡಿಎಸ್‌ ಪಾಲಿನ ಮತಗಳಾಗಿ ಪರಿವರ್ತನೆ ಯಾಗಲಿವೆ ಎಂಬ ಮಾತು ದಟ್ಟವಾಗಿದೆ. ಈ ಎಲ್ಲ ಬೆಳವಣಿಗೆಗಳು ಕಾಂಗ್ರೆಸ್‌ ಪಾಲಿಗೆ ಮುಳ್ಳಿನ ಹಾದಿಯಾಗಿದೆ.

‘ಕಾಂಗ್ರೆಸ್‌ನವರು ಅಕ್ಕಿ ಕೊಟ್ಟಿರುವ ಋಣ ನಮ್ಮ ಮೇಲಿದೆ. ಅದಕ್ಕೆ ನಾವು ಕಾಂಗ್ರೆಸ್‌ ನಿಷ್ಠರಾಗಿದ್ದೆವು. ಈಗ ಜೆಡಿಎಸ್‌ನವರು ಬ್ಯಾಂಕ್‌ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅವರಿಗೂ ಒಂದು ಅವಕಾಶ ಕೊಟ್ಟು ನೋಡೋಣ. ಯಾರೇ ಅಧಿಕಾರಕ್ಕೆ ಬಂದರೂ ಹೊಲದಲ್ಲಿ ದುಡಿಮೆ ನಿಲ್ಲಲ್ಲ’ ಎನ್ನುತ್ತಾರೆ ಮತಕ್ಷೇತ್ರ ವ್ಯಾಪ್ತಿಯ ಕುಸುಗಲ್‌ ನಿವಾಸಿ ಮೆಹಬೂಬ್‌.

ಬೆಣ್ಣಿಹಳ್ಳದ ಕಣ್ಣೀರಿಗೂ ಬೇಕು ಮುಕ್ತಿ

ಮಳೆಗಾಲದಲ್ಲಿ ಉಕ್ಕಿ ಹರಿಯುವ ಬೆಣ್ಣಿಹಳ್ಳ–ತುಪ್ಪರಿ ಹಳ್ಳದ ಸಮಸ್ಯೆಗೂ ಶಾಶ್ವತ ಪರಿಹಾರ ಒದಗಿಸಬೇಕೆಂಬ ಬಹುದಿನಗಳ ಕೂಗು ಇಂದಿಗೂ ಈಡೇರಿಲ್ಲ. ಮಳೆಗಾಲದಲ್ಲಿ ಸುತ್ತಮುತ್ತಲಿನ ರೈತರ ಬೆಳೆಗಳನ್ನು ಆಪೋಶನ ಮಾಡಿ, ಸಂಕಷ್ಟ ತಂದೊಡ್ಡುವ ಹಳ್ಳಕ್ಕೆ ಅಲ್ಲಲ್ಲಿ ಚೆಕ್‌ಡ್ಯಾಂ ನಿರ್ಮಿಸಿದರೆ ಕಷ್ಟವೂ ತಪ್ಪಲಿದೆ. ನೀರಿನ ಸಮಸ್ಯೆಯೂ ಕಡಿಮೆಯಾಗಲಿದೆ. ಆದರೆ, ಈವರೆಗೂ ಯಾವ ಜನಪ್ರತಿನಿಧಿಯೂ ಈ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಕ್ಷೇತ್ರದ ಜನರು ದೂರುತ್ತಿದ್ದಾರೆ.

‘ನಮಗೆ ಮಳೆ ಬಂದ್ರೆ ಅನ್ನ, ಇಲ್ಲಾಂದ್ರೆ ಕೆಲಸ ಹುಡುಕಿಕೊಂಡು ಗುಳೆ ಹೋಗಬೇಕು. ನೀರಿನ ಸಮಸ್ಯೆ ತುಂಬಾ ಇದೆ. ನೀರಿಗಾಗಿ ಮೂರ್ನಾಲ್ಕು ಕಿ.ಮೀ ನಡೆದುಕೊಂಡು ಹೋಗಿ ಹೊಸಕೆರೆಯಿಂದ ನೀರು ತರಬೇಕು. ವೋಟು ಕೇಳೋಕೆ ಬರೋರಿಗೆ ಇದು ಕಾಣುವುದಿಲ್ಲವೇ’ ಎಂದು ಶೆಲವಡಿ ಗ್ರಾಮದ ಬಿ.ವೈ.ನಾಗನೂರ ಪ್ರಶ್ನಿಸುತ್ತಾರೆ.

ಬರದಿಂದ ತತ್ತರಿಸಿರುವ ನವಲಗುಂದ ಭಾಗದ ದುಡಿವ ಕೈಗಳಿಗೆ ಉದ್ಯೋಗವಿಲ್ಲ. ಉತ್ತಮ ರಸ್ತೆಗಳಿದ್ದರೂ ಇಡೀ ಕ್ಷೇತ್ರದಲ್ಲಿ ಒಂದೇ ಒಂದು ಕೈಗಾರಿಕೆ ಇಲ್ಲ. ಮಳೆಗಾಲ ಹೊರತುಪಡಿಸಿದರೆ ಉಳಿದೆಲ್ಲ ಸಮಯ ಬಹುತೇಕರು ವಲಸೆ ಹೋಗಬೇಕಾದ ಪರಿಸ್ಥಿತಿ ಇದೆ. ಡಿಪ್ಲೊಮಾ, ಎಂಜಿನಿಯರಿಂಗ್‌ ಕಾಲೇಜುಗಳೂ ಇಲ್ಲ. ಉನ್ನತ ವ್ಯಾಸಂಗ ಹಾಗೂ ಕೆಲಸ ಕಾರ್ಯಗಳಿಗೆ ಹುಬ್ಬಳ್ಳಿ, ಧಾರವಾಡಕ್ಕೆ ಹೋಗಬೇಕು. ಒಳಚರಂಡಿ ವ್ಯವಸ್ಥೆ ಇಲ್ಲ. ಕ್ಷೇತ್ರದ ಬಹುತೇಕ ಬಡವರಿಗೆ ನಿವೇಶನ ನೀಡಿಲ್ಲ. ಪಟ್ಟಣದ ಸಮೀಪ 50 ಎಕರೆ ಭೂಮಿ ಖರೀದಿಸಿದ್ದರೂ ಈವರೆಗೂ ನಿವೇಶನ ಹಂಚಿಕೆ ಮಾಡದಿರುವುದು ಕೂಡ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.