ಬಿಜೆಪಿ ಅಪಾಯಕಾರಿ: ಪ್ರಕಾಶ್‌ ರೈ

7
ಕಾಂಗ್ರೆಸ್‌, ಜೆಡಿಎಸ್‌ ಯಾವುದಾದರೂ ಒಂದು ಪಕ್ಷಕ್ಕೆ ಬಹುಮತ ನೀಡಲು ಕರೆ

ಬಿಜೆಪಿ ಅಪಾಯಕಾರಿ: ಪ್ರಕಾಶ್‌ ರೈ

Published:
Updated:
ಬಿಜೆಪಿ ಅಪಾಯಕಾರಿ: ಪ್ರಕಾಶ್‌ ರೈ

ಮೈಸೂರು: ‘ಸಂವಿಧಾನವನ್ನು ಬದಲಿಸಲು ಮುಂದಾಗಿರುವ ಬಿಜೆಪಿಗೆ ಮತ ಹಾಕಬೇಡಿ. ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಪೈಕಿ ಒಂದು ಪಕ್ಷವನ್ನು ಆಯ್ಕೆ ಮಾಡಿ. ಮತ್ತೊಂದನ್ನು ವಿರೋಧ ಪಕ್ಷ ಸ್ಥಾನದಲ್ಲಿ ಕೂರಿಸಿ’ ಎಂದು ನಟ ಪ್ರಕಾಶ್ ರೈ ಮನವಿ ಮಾಡಿದರು.

‘ಸಂವಿಧಾನ ಉಳಿವಿಗಾಗಿ ಕರ್ನಾಟಕ’ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಂವಿಧಾನ ಉಳಿಸಿ ಸಮಾರೋಪ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಬಿಜೆಪಿ ವಿರುದ್ಧ ಮಾತನಾಡುತ್ತೇನೆ ಎಂದ ಮಾತ್ರಕ್ಕೆ ಉಳಿದ ಪಕ್ಷಗಳ ಪರವಾಗಿದ್ದೇನೆ ಎಂದಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲೂ ಭ್ರಷ್ಟಾಚಾರದ ಸಮಸ್ಯೆ ಇದೆ. ಆದರೆ, ನಮ್ಮ ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳಲು ಬಿಜೆಪಿಯವರು ಮುಂದಾಗಿದ್ದಾರೆ. ಉಳಿದ ಪಕ್ಷಗಳಿಗಿಂತ ಬಿಜೆಪಿ ಅಪಾಯಕಾರಿ. ಹೀಗಾಗಿ, ಮತದಾರರು ಯೋಚಿಸಿ ಮತ ಹಾಕಬೇಕು’ ಎಂದು ಸಲಹೆ ನೀಡಿದರು.

‘ಬಿಜೆಪಿ ಜತೆ ಸೇರುವುದಿಲ್ಲ ಎಂದು ಜೆಡಿಎಸ್‌ನ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ. ಆದರೆ, ಅವರ ಮಗ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಬಗ್ಗೆ ಮಾತನಾಡುತ್ತಿಲ್ಲ.

ಜಾತ್ಯತೀತ ಪಕ್ಷ ಎಂದು ಹೇಳಿಕೊಂಡು ಫಲಿತಾಂಶ ಬಂದ ಬಳಿಕ ಕೋಮುವಾದಿ ಪಕ್ಷಕ್ಕೆ ತಮ್ಮನ್ನು ಮಾರಿಕೊಂಡರೆ, ದೊಡ್ಡ ಚಳವಳಿ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ನೀವು (ಜೆಡಿಎಸ್‌, ಬಿಜೆಪಿ) ಈ ಹಿಂದೆ ಆಟವಾಡಿದ್ದು ಜನರಿಗೆ ಗೊತ್ತಿದೆ. ಬಿಜೆಪಿಯವರು ತೀಟೆ ತೀರಿಸಿಕೊಳ್ಳಲು ಹೊಂದಾಣಿಕೆ ಮಾಡಿಕೊಂಡರು. ಅವರ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳು ಆಗಿದ್ದನ್ನು ಜನ ಮರೆತಿಲ್ಲ’ ಎಂದು ದೂರಿದರು.

ರಾಜ್ಯದಲ್ಲಿ ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಹಿರಿಯರಾದ ಯಡಿಯೂರಪ್ಪ ಅವರನ್ನು ಹೆಚ್ಚು ದಿನಗಳ ಕಾಲ ಮುಖ್ಯಮಂತ್ರಿಯಾಗಿರಲು ಬಿಡುವುದಿಲ್ಲ. ರೆಡ್ಡಿ ಸಹೋದರರು, ಅನಂತಕುಮಾರ ಹೆಗಡೆ ಹಾಗೂ ಪ್ರತಾಪ ಸಿಂಹ ಅವರಂತವರು ವಿಧಾನಸೌಧವನ್ನು ಆಳುತ್ತಾರೆ. ಯೋಗಿ, ಅಮಿತ್ ಶಾ ಅವರಿಗೆ ಕರ್ನಾಟಕವು ಬೇಸಿಗೆಯ ರೆಸಾರ್ಟ್‌ ಅಗುತ್ತದೆ ಎಂದರು.

‘ಕಲಬುರ್ಗಿಯಲ್ಲಿ ತೊಗರಿ ಬೆಳೆಗಾರರ ಹಿತ ಕಾಯುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ರಾಜ್ಯದಲ್ಲಿ 9 ಲಕ್ಷ ಟನ್ ತೊಗರಿ ಬೆಳೆಯುತ್ತಾರೆ. ಆದರೆ, 2015ರಲ್ಲಿ ಅದಾನಿ ಅವರಿಗೆ ಸೇರಿದ ಕಂಪನಿಗೆ ತೊಗರಿ ಆಮದು ಮಾಡಿಕೊಳ್ಳಲು ಪರವಾನಗಿ ನೀಡಲಾಗಿದೆ.

1.5 ಲಕ್ಷ ಟನ್ ತೊಗರಿಯನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ಇದರಿಂದ ನಮ್ಮ ರೈತರಿಗೆ ತೊಂದರೆ ಉಂಟಾಗಿದೆ’ ಎಂದು ದೂರಿದರು.

ಹಿರಿಯ ವಕೀಲ ಎ.ಕೆ.ಸುಬ್ಬಯ್ಯ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಮಗ ಯತೀಂದ್ರ ಅವರನ್ನು ಸೋಲಿಸಲು ಜೆಡಿಎಸ್‌ ಹಾಗೂ ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಸೋಲಿಸಲು ಇವರು ಯಾರು? ಜನ ತಾನೇ ಅವರನ್ನು ಸೋಲಿಸಬೇಕಾದವರು’ ಎಂದು ಹೇಳಿದರು.

ಮತದಾರರಿಗೆ ಈ ಪಕ್ಷಗಳು ಅವಮಾನ ಮಾಡುತ್ತಿವೆ. ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಇದ್ದರೂ, ಜೆಡಿಎಸ್‌ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಜಿ.ಟಿ.ದೇವೇಗೌಡ ಬಿಜೆಪಿ ಪರ ಹಾಗೂ ಬಿಜೆಪಿಯವರು ದೇವೇಗೌಡರ ಪರ ಮಾತನಾಡುತ್ತಿರುವುದರ ಮರ್ಮವೇನು’ ಎಂದು ಸುಬ್ಬಯ್ಯ ಪ್ರಶ್ನಿಸಿದರು.

‘ಮೈಸೂರಿನಲ್ಲಿ ಕಚೇರಿ ಸ್ಥಾಪನೆ’

‘ಜಸ್ಟ್ ಆಸ್ಕಿಂಗ್ ಪ್ರತಿಷ್ಠಾನ’ದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಅದು ನಿರಂತರವಾಗಿ ಮುಂದುವರಿಯುತ್ತದೆ. ಏನಿಲ್ಲವೆಂದರೂ ಅದು ಕನಿಷ್ಠ 10 ವರ್ಷಗಳ ಪಯಣ’ ಎಂದು ನಟ ಪ್ರಕಾಶ್‌ ರೈ ಈ ಸಂದರ್ಭದಲ್ಲಿ ಹೇಳಿದರು.

‘ಈ ಪ್ರತಿಷ್ಠಾನದ ಒಂದು ಕಚೇರಿಯನ್ನು ಮೈಸೂರಿನಲ್ಲೂ ಮಾಡುತ್ತೇನೆ. ರಂಗಭೂಮಿ ಕಲಾವಿದರು, ಉಪನ್ಯಾಸಕರು, ಸಮಾಜ ಸೇವಕರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ. ಜೂನ್‌ನಿಂದ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸುತ್ತೇನೆ’ ಎಂದರು.

‘ಮೋದಿ ನಂಬರ್‌ ಒನ್‌ ಕಳ್ಳ’

‘ನರೇಂದ್ರ ಮೋದಿ ನಂಬರ್‌ ಒನ್‌ ಕಳ್ಳ. ದೇಶದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ, ಅದರ ಬಗ್ಗೆ ಮಾತನಾಡುತ್ತಿಲ್ಲ. ದಲಿತರು, ಮಹಿಳೆಯರಿಗೆ ಉದ್ಯೋಗ ನೀಡಿಲ್ಲ. ಆರ್‌ಎಸ್ಎಸ್‌ ಹಾಗೂ ಬಿಜೆಪಿಯ ನಿರುದ್ಯೋಗಿಗಳಿಗಾದರೂ ಉದ್ಯೋಗ ಕೊಡಿ ಎಂದರೆ ಅದನ್ನೂ ಮಾಡುತ್ತಿಲ್ಲ’ ಎಂದು ದೂರಿದರು.

ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಬಿಜೆಪಿ ಸಂಸದರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಇದೆ. ಬಿಜೆಪಿ ಎಂದರೆ ‘ಬಲತ್ಕಾರ್‌ ಜಾನ್‌ಲೇವ್ ‍ಪಾರ್ಟಿ’ (ಅತ್ಯಾಚಾರ, ಕೊಲೆ ಮಾಡುವ ಪಕ್ಷ) ಎಂದು ಜರಿದರು.

**

ಪ್ರಧಾನಿ ನರೇಂದ್ರ ಮೋದಿ ಸುಳ್ಳರ ಸುಳ್ಳ. ಸುಳ್ಳೇಂದ್ರ ಯಾರು ಎಂಬುದು ಜನರಿಗೂ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವುದಿಲ್ಲ

– ಪ್ರಕಾಶ್‌ ರೈ, ನಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry