ಮಂಗಳವಾರ, ಮಾರ್ಚ್ 2, 2021
31 °C
ಹಣಗೆರೆಕಟ್ಟೆ ಸೌಹಾರ್ದ ಧಾರ್ಮಿಕ ಕೇಂದ್ರಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ ಭೇಟಿ

ಸಾಂಕ್ರಾಮಿಕ ರೋಗ: ಮುನ್ನೆಚ್ಚರಿಕೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂಕ್ರಾಮಿಕ ರೋಗ: ಮುನ್ನೆಚ್ಚರಿಕೆ ಕ್ರಮ

ತೀರ್ಥಹಳ್ಳಿ: ನಾಡಿನ ಪ್ರಸಿದ್ಧ ಸೌಹಾರ್ದ ಧಾರ್ಮಿಕ ಕೇಂದ್ರ ಹಣಗೆರೆಕಟ್ಟೆ ಸುತ್ತಮುತ್ತ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದ್ದು, ಕಾಲರಾ ರೋಗಕ್ಕೆ ತುತ್ತಾದ ನಾಲ್ವರು ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾನೂರು ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಹಜರತ್ ಸೈಯದ್ ಸಾದತ್ ದರ್ಗಾ ಹಾಗೂ ಭೂತರಾಯ ಚೌಡೇಶ್ವರಿ ದೇವಸ್ಥಾನವನ್ನು ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಚ್ಚಿಸಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದೆ.

‘ಪ್ರತಿನಿತ್ಯ ಸಾವಿರಾರು ಭಕ್ತರು ಬರುತ್ತಿದ್ದು, ವಿಶೇಷವಾಗಿ ಹುಣ್ಣಿಮೆ, ಅಮಾವಾಸ್ಯೆಯಂದು 15 ಸಾವಿರಕ್ಕೂ ಹೆಚ್ಚು ಭಕ್ತರು ಸೇರುತ್ತಾರೆ. ಭಕ್ತರ ದಟ್ಟಣೆಯಿಂದಾಗಿ ಇಡೀ ಹಣಗೆರೆಕಟ್ಟೆಯ ಸುತ್ತಲಿನ ಪ್ರದೇಶ ಕಸದಿಂದ ಕಲುಷಿತಗೊಳ್ಳುತ್ತಿದೆ. ದೇವಸ್ಥಾನವನ್ನು ಮುಚ್ಚಿಸಿದ್ದರೂ ಭಕ್ತರು ದೇವರಿಗೆ ಕುರಿ, ಕೋಳಿಯನ್ನು ಅರ್ಪಿಸುತ್ತಲೇ ಇದ್ದಾರೆ. ಇದರಿಂದಾಗಿ ರೋಗ ಉಲ್ಬಣಿಸುವ ಸಾಧ್ಯತೆ ಇದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.

‘ದೇವರಿಗೆ ಅರ್ಪಿಸಿದ ಕುರಿ, ಕೋಳಿ ಎಡೆ ಇಟ್ಟು ಪೂಜಿಸುವ ಪದ್ಧತಿ ಇದೆ. ಕುರಿ, ಕೋಳಿ ತ್ಯಾಜ್ಯದ ನಿರ್ವಹಣೆ ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಹಣಗೆರೆಕಟ್ಟೆಯ ಸುತ್ತಮುತ್ತಲ ಪ್ರದೇಶ ಕೊಳಕು ವಾಸನೆಯಿಂದ ಕೂಡಿದೆ. ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ’ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬಂದಿವೆ.

ಹಣಗೆರೆ ಗ್ರಾಮದಲ್ಲಿ ಕಾಲರಾ, ಮಸರೂರು ಗ್ರಾಮದಲ್ಲಿ ಡೆಂಗಿ ಜ್ವರ ಪತ್ತೆಯಾಗಿರುವ ಕಾರಣ ಸಾಂಕ್ರಾಮಿಕ ರೋಗ ತಡೆಗಟ್ಟುವ ಕುರಿತು ಆರೋಗ್ಯ ಇಲಾಖೆ, ವೈದ್ಯೇತರ ಸಿಬ್ಬಂದಿ ಸ್ಥಳೀಯ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ರೋಗ ನಿಯಂತ್ರಣಕ್ಕೆ ಯತ್ನಿಸುತ್ತಿದ್ದಾರೆ.

ಮಸರೂರು, ಹೊಸ ಅಗ್ರಹಾರ ಗ್ರಾಮದ ತೋಟದಲ್ಲಿನ ಅಡಿಕೆ ಹಾಳೆ ಮೇಲೆ ಸಂಗ್ರಹಗೊಂಡ ನೀರು ಲಾರ್ವಾ ಉತ್ಪತ್ತಿ ತಾಣವಾಗಿದೆ. ಎಡೀಸ್‌ ಈಜಿಪ್ಟ್‌ ಸೊಳ್ಳೆ ಉಗಮಕ್ಕೆ ನಿಂತ ನೀರು ಸಹಕಾರಿಯಾಗಿದ್ದು ಡೆಂಗಿ ಜ್ವರ ಕಂಡು ಬಂದಿದೆ. ಗ್ರಾಮದಲ್ಲಿ 9 ಡೆಂಗಿ ಪೀಡಿತರು ಕಾಣಿಸಿಕೊಂಡಿದ್ದಾರೆ. ಎರಡು ಬಾರಿ ಫಾಗಿಂಗ್ ನಡೆಸಲಾಗಿದ್ದು ರೋಗ ನಿಯಂತ್ರಣಕ್ಕೆ ಇಲಾಖೆ ಕ್ರಮ ಕೈಗೊಂಡಿದೆ.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ.

‘ರೋಗ ಪೀಡಿತರ ಮನೆಯಲ್ಲಿ ಪೈಪ್‌ಲೈನ್ ಒಡೆದು ಶೌಚಾಲಯದ ನೀರು ಕುಡಿಯುವ ನೀರಿನ ಪೈಪಿಗೆ ಸೇರಿದ್ದರಿಂದ ರೋಗ ಕಾಣಿಸಿಕೊಂಡಿದೆ. ರೋಗ ಉಲ್ಬಣವಾಗದಂತೆ ಎಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಕಿರಣ್ ತಿಳಿಸಿದ್ದಾರೆ.

ಹಣಗೆರೆಕಟ್ಟೆಗೆ ಸಾವಿರಾರು ಭಕ್ತರು ಭೇಟಿ ನೀಡುವುದರಿಂದ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗುತ್ತಿದೆ. ಮೂರು ತಿಂಗಳಿಗೆ ₹ 4 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗುತ್ತಿದ್ದರೂ ಈ ಪ್ರದೇಶದ ಅಭಿವೃದ್ಧಿಗೆ ಮುಜರಾಯಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದ್ದರೂ ಹುಂಡಿ ಹಣ ಎಣಿಸಿಕೊಂಡು ಹೋಗುವ ಕೆಲಸಕ್ಕಷ್ಟೇ ಮುಜರಾಯಿ ಇಲಾಖೆ ಸೀಮಿತವಾಗಿದೆ’ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಸದ ರಾಶಿ ಬೆಟ್ಟದಂತೆ ಬೆಳೆಯುತ್ತಿದ್ದರೂ ಅದರ ವಿಲೆ ಆಗುತ್ತಿಲ್ಲ. ಹರಕೆಗೆ ಒಪ್ಪಿಸಿದ ಪ್ರಾಣಿಗಳ ತ್ಯಾಜ್ಯದ ಸಂಸ್ಕರಣ ಘಟಕ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. 2017ರಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಹಣಗೆರೆಯಲ್ಲಿನ ಕಸ ವಿಲೆಗೆ ಪ್ರಯತ್ನಿಸಿದ್ದರೂ ನಿರೀಕ್ಷಿತ ಪ್ರಮಾಣದ ಯಶಸ್ಸು ಸಿಕ್ಕಿಲ್ಲ. ಪ್ರವಾಸಿಗರು, ಭಕ್ತರಿಂದ ತುಂಬಿರುವ ಹಣಗೆರೆಕಟ್ಟೆಯ ಸುತ್ತಮುತ್ತಿನ ಜನರಿಗೆ ಪ್ರವಾಸಿಗರಿಂದ ಕಿರಿಕಿರಿ ಅನುಭವಿಸುವಂತಾಗಿದೆ ಎನ್ನುತ್ತಾರೆ ಸ್ಥಳೀಯರು. ಸಾಂಕ್ರಾಮಿಕ ರೋಗದ ಭೀತಿ ಕುರಿತು ಈಚೆಗೆ ‘ಪ್ರಜಾವಾಣಿ’ ವಿಸ್ತೃತ ವರದಿ ಮಾಡಿತ್ತು.

**

ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಲ್ಲಿ ರೋಗದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ

– ಡಾ.ವೆಂಕಟೇಶ್, ಜಿಲ್ಲಾ ಆರೋಗ್ಯಾಧಿಕಾರಿ 

**

ಹಣಗೆರೆಕಟ್ಟೆಯಲ್ಲಿ ಸಾಂಕ್ರಾಮಿಕ ರೋಗ ಹರಡುತ್ತಿರುವ ಕುರಿತು ಮಾಹಿತಿ ಇದೆ. ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಕಳುಹಿಸಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ

– ಡಾ.ಎಂ.ಲೋಕೇಶ್, ಜಿಲ್ಲಾಧಿಕಾರಿ 

- ಶಿವಾನಂದ ಕರ್ಕಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.