‘ಕ್ಷೇತ್ರದ ಆರ್ಥಿಕ ಸದೃಢತೆಗೆ ಆದ್ಯತೆ’

7
ಶಿಕಾರಿಪುರ ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ. ಬಳಿಗಾರ್ ಭರವಸೆ

‘ಕ್ಷೇತ್ರದ ಆರ್ಥಿಕ ಸದೃಢತೆಗೆ ಆದ್ಯತೆ’

Published:
Updated:
‘ಕ್ಷೇತ್ರದ ಆರ್ಥಿಕ ಸದೃಢತೆಗೆ ಆದ್ಯತೆ’

ಸರ್ಕಾರಿ ಸೇವೆ ತೊರೆದು ರಾಜಕೀಯ ಕ್ಷೇತ್ರಕ್ಕೆ ಬರಲು ಕಾರಣ?

ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಒಡನಾಡಿಯಾದ ಕಾರಣ ರಾಜಕೀಯ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಯಿತು. 20 ವರ್ಷಗಳಿಂದ ಕ್ಷೇತ್ರದ ಜನರ ಜತೆ ಒಡನಾಟ ಹೊಂದಿದ್ದೆ. ಜನರೇ ಅಪೇಕ್ಷೆ ಪಟ್ಟ ಕಾರಣ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದೇನೆ.

ಯಾವ ವಿಷಯದ ಆಧಾರದ ಮೇಲೆ ಚುನಾವಣೆಯಲ್ಲಿ ಮತಯಾಚಿಸುತ್ತೀರಾ?

ತಾಲ್ಲೂಕಿನ ಜನರ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾದ ನೀರಾವರಿ ಯೋಜನೆ ನೀಡುವಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಫಲರಾಗಿದ್ದಾರೆ. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಿಲ್ಲ ಈ ವಿಷಯವನ್ನು ಜನತೆಗೆ ತಿಳಿಸುವ ಜತೆ ಈ ಕಾರ್ಯಗಳನ್ನು ನಾನು ಮಾಡುತ್ತೇನೆ ಎಂದು ಭರವಸೆ ನೀಡುವ ಮೂಲಕ ಮತಯಾಚಿಸುತ್ತಿದ್ದೇನೆ.

 ನಿಮಗೇ ಏಕೆ ಜನ ವೋಟು ಹಾಕಬೇಕು?

40 ವರ್ಷಗಳಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜಕೀಯ ಅಧಿಕಾರ ನಡೆಸಿ ತಾಲ್ಲೂಕಿನಲ್ಲಿ ರಸ್ತೆ,ಕಟ್ಟಡ ನಿರ್ಮಾಣ ಮಾಡುವ ಜತೆ ತಮ್ಮ ಭವಿಷ್ಯವನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಜನಸಾಮಾನ್ಯರ ಬದುಕು ಕಟ್ಟಿಕೊಳ್ಳುವ ವ್ಯವಸ್ಥೆ ನಿರ್ಮಾಣ ಮಾಡಲಿಲ್ಲ. ತಾಲ್ಲೂಕಿನ ರೈತನ ಮಗನಾದ ನನಗೆ ತಾಲ್ಲೂಕಿನ ಜನರ ಸಮಸ್ಯೆ ಬಗ್ಗೆ ಅರಿವಿದೆ. ಅದಕ್ಕಾಗಿ ರೈತರಿಗೆ ಪೂರಕವಾದ ಶಾಶ್ವತ ಏತನೀರಾವರಿ ಯೋಜನೆ ಅನುಷ್ಠಾನ ಮಾಡಲು, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು,ಕೌಶಲ ಅಭಿವೃದ್ಧಿ ಯೋಜನೆ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡುವ ಮೂಲಕ ಉದ್ಯೋಗ ಸೃಷ್ಟಿಸಲು,ರೈತರ ಬೆಳೆಗಳಿಗೆ ಸೂಕ್ತವಾದ ಮಾರುಕಟ್ಟೆ ಹಾಗೂ ಬೆಲೆ ಒದಗಿಸಲು ನನಗೆ ಮತ ಹಾಕಬೇಕು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಗೆಲ್ಲುವ ವಿಶ್ವಾಸವಿದೆಯೇ?

ಬೇರು ಮಟ್ಟದ ಕಾರ್ಯಕರ್ತರ ಪಡೆ ನನ್ನ ಜತೆ ಇದೆ. ನೀರಾವರಿಗೋಸ್ಕರ ನಾನು ಪಾದಯಾತ್ರೆ ಮಾಡಿದ್ದನ್ನು ಪಕ್ಷಾತೀತವಾಗಿ ಮೆಚ್ಚಿಕೊಂಡಿದ್ದಾರೆ. ಕಳೆದ 5ವರ್ಷದಿಂದ ಜನರ ಜತೆಯಲ್ಲಿ ಇದ್ದು,ಅವರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದೇನೆ. ಪ್ರತಿ ಮನೆಗೆ ತೆರಳಿ ಮತ ಕೇಳುವ ಪ್ರಯತ್ನ ಮಾಡಿದ್ದೇನೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀಡಿದ ಯೋಜನೆಗಳು ಹಾಗೂ ಸೊರಬ ಶಾಸಕ ಮಧು ಬಂಗಾರಪ್ಪ ಬೆಂಬಲ ನನಗೆ ಇದ್ದು ಗೆಲುವು ಸಾಧಿಸುತ್ತೇನೆ.

ಚುನಾವಣೆಯಲ್ಲಿ ಗೆದ್ರೆ ಏನು ಮಾಡುತ್ತೀರಾ ?

ತಾಲ್ಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಮಾಡಿಸಲು ಆದ್ಯತೆ ನೀಡುತ್ತೇನೆ. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಮಾಡುತ್ತೇನೆ. ತಾಲ್ಲೂಕಿನಲ್ಲಿ ಗುಣಮಟ್ಟದ ಭತ್ತ ಬೆಳೆಯುತ್ತಿದ್ದು,ಈ ಭತ್ತಕ್ಕೆ ಪೂರಕ ಮಾರುಕಟ್ಟೆ ವ್ಯವಸ್ಥೆ ಮಾಡುತ್ತೇನೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶ ಒದಗಿಸುವ ಕಾರ್ಯಕ್ರಮ ಆಯೋಜಿಸುತ್ತೇನೆ.

ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಎಚ್‌.ಟಿ. ಬಳಿಗಾರ್‌ ಸ್ಪರ್ಧಿಸಿದ್ದಾರೆ. ತಾಲ್ಲೂಕಿನ ಮತ್ತಿಕೋಟೆ ಗ್ರಾಮದವರಾದ ಎಚ್.ಟಿ. ಬಳಿಗಾರ್‌ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಕ್ಷೇತ್ರದಲ್ಲಿ ಇದ್ದಾರೆ. ಒಂದು ಬಾರಿ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿದ ಅನುಭವ ಬಳಿಗಾರ್‌ಗೆ ಇದೆ. ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪ್ರಬಲ ಪೈಪೋಟಿ ನೀಡಲು ಪ್ರಯತ್ನ ನಡೆಸಿದ್ದಾರೆ. ತಮ್ಮ ಗೆಲುವಿಗಾಗಿ ಕೂಡ ಅವರು ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ಬಳಿಗಾರ್ ಪರ ಈಚೆಗೆ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಜೆಡಿಎಸ್‌ ಯುವ ಘಟಕ ಅಧ್ಯಕ್ಷ ಮಧು ಬಂಗಾರಪ್ಪ ಪ್ರಚಾರ ನಡೆಸಿದ್ದಾರೆ.ಜೆಡಿಎಸ್‌ ಅಭ್ಯರ್ಥಿಯಾಗಿ ಎಚ್.ಟಿ.ಬಳಿಗಾರ್ ‘ಪ್ರಜಾವಾಣಿ’ ಜತೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry