ಸೋಮವಾರ, ಮಾರ್ಚ್ 1, 2021
23 °C
ತಿಪಟೂರಿನಲ್ಲಿ ನಡೆದ ಕಾಂಗ್ರೆಸ್ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ

ಕೊಬ್ಬರಿಗೆ ₹ 5 ಸಾವಿರ ಬೆಂಬಲ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಬ್ಬರಿಗೆ ₹ 5 ಸಾವಿರ ಬೆಂಬಲ ಬೆಲೆ

ತಿಪಟೂರು: ‘ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬೆಂಬಲ ಬೆಲೆ ಜತೆ ನೀಡುವ ಪ್ರೋತ್ಸಾಹ ಧನವನ್ನು ಕ್ವಿಂಟಾಲ್‍ಗೆ ₹ 5 ಸಾವಿರ ಹೆಚ್ಚಿಸಲಾಗುವುದು ರಮದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ‘ಬರದ ನಡುವೆ ಸೊರಗಿರುವ ತೆಂಗು ಬೆಳೆಗಾರರ ಕೈ ಹಿಡಿಯಲು ಕೊಬ್ಬರಿ ಬೆಂಬಲ ಬೆಲೆಯನ್ನು ಹೆಚ್ಚಿಸುವಂತೆ ಪ್ರಧಾನಿ ಮೋದಿ ಅವರನ್ನು ಕೋರಲಾಗಿತ್ತು. ಆದರೆ, ಅವರು ಅದಕ್ಕೆ ಸ್ಪಂದಿಸಲಿಲ್ಲ. ಬರದಿಂದ ತೆಂಗು ಬೆಳೆ ಹಾಳಾಗಿ ರೈತರಿಗೆ ಒಟ್ಟು 4500 ಕೋಟಿ ನಷ್ಟವಾಗಿದೆ. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ’ ಎಂದು ರಾಹುಲ್ ಟೀಕಿಸಿದರು.

ಸುಳ್ಳು ಮಾತುಗಾರರಿಂದ ಪ್ರಯೋಜನವಿಲ್ಲ: ‘ಸುಳ್ಳು ಮಾತುಗಾರರಿಂದ ದೇಶದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಕೊಟ್ಟ ಭರವಸೆಯನ್ನು ಈಡೇರಿಸಲಾಗದವರು ಮತ್ತೆ ಬಣ್ಣದ ಮಾತು ಆಡುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಪರೋಕ್ಷವಾಗಿ ಟೀಕಿಸಿದರು.

‘ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಹಣ ಹಾಕು ತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಐದು ರೂಪಾಯಿಯನ್ನೂ ಹಾಕಲಿಲ್ಲ. ಬದಲಿಗೆ ಗಬ್ಬರ್ ಸಿಂಗ್ ಟ್ಯಾಕ್ಸ್ (ಜಿಎಸ್‍ಟಿ) ನೆಪದಲ್ಲಿ ಬಡವರಿಗೂ ತೆರಿಗೆ ಹಾಕಿ ಸಂಕಷ್ಟ ತಂದೊಡ್ಡಿದೆ ಎಂದರು.

ಈ ತೆರಿಗೆ ಹಣದಿಂದ ಕೈಗಾರಿಕೋದ್ಯಮಿಗಳಿಗೆ ಸೇರಿದ ₹ 12 ಲಕ್ಷ ಕೋಟಿ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ನೋಟು ಅಮಾನ್ಯೀಕರಣದಿಂದಲೂ ಆಗರ್ಭ ಶ್ರೀಮಂತರಿಗೆ ಸಾವಿರಾರು ಕೋಟಿ ಅನುಕೂಲ ಮಾಡಿಕೊಟ್ಟಿದೆ. ನೀರಜ್ ಮೋದಿಯಂತಹ ಕೈಗಾರಿಕೋದ್ಯಮಿಗಳಿಗೆ ಮಾತ್ರ ಕೇಂದ್ರದ ಬಿಜೆಪಿ ಸರ್ಕಾರ ನೆರವು ನೀಡಿದೆ ಎಂದು ಟೀಕಿಸಿದರು.

ಸತತ ಬರದಿಂದ ಕಂಗಾಲಾಗಿದ್ದ ರೈತರಿಗೆ ನೆರವಾಗಲು ಸಾಲ ಮನ್ನಾ ಮಾಡುವಂತೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಕೋರಿಕೊಂಡಿದ್ದೆ. ಆದರೆ ಅವರು ಅದಕ್ಕೆ ಸ್ಪಂದಿಸಲಿಲ್ಲ. ರಾಜ್ಯ ಸರ್ಕಾರದಿಂದಲೇ ರೈತರಿಗೆ ನೆರವಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದೆ. ಅದರಂತೆ ಅವರು ತಕ್ಷಣ ಸಹಕಾರ ಸಂಘಗಳಲ್ಲಿ ಇದ್ದ ರೈತರ ಸಾಲವನ್ನು ₹ 50 ಸಾವಿರವರೆಗೆ ಮನ್ನಾ ಮಾಡಿದರು’ ಎಂದರು.

ಏಳು ಬಾರಿ ಬಸವಣ್ಣ: ರಾಹುಲ್ ಗಾಂಧಿ ಅವರು ತಮ್ಮ ಭಾಷಣದಲ್ಲಿ ಒಟ್ಟು ಏಳು ಬಾರಿ ಶರಣ ಬಸವಣ್ಣ ಅವರನ್ನು ಸ್ಮರಿಸಿದರು. ಭಾಷಣದ ಆರಂಭದಲ್ಲೇ ಬಸವಣ್ಣ ಅವರ `ನುಡಿದಂತೆ ನಡೆ’ ಪ್ರಸ್ತಾಪಿಸಿದ ರಾಹುಲ್, ರಾಜ್ಯದ ಕಾಂಗ್ರೆಸ್ ಸರ್ಕಾರ ಈ ವಾಕ್ಯವನ್ನು ಚಾಚೂ ತಪ್ಪದೆ ಪಾಲಿಸಿದೆ ಎಂದರು. ಬಸವಣ್ಣ ಅವರ ಸಿದ್ಧಾಂತವನ್ನು ಆಧರಿಸಿ ಸರ್ಕಾರ ನಡೆದಿದೆ ಎಂದು ಪದೇಪದೇ ವಿವರಣೆ ಕೊಟ್ಟ ರಾಹುಲ್, ಭಾಷಣದುದ್ದಕ್ಕೂ ಒಟ್ಟು ಏಳು ಬಾರಿ ಬಸವಣ್ಣ ಅವರ ಹೆಸರು ಹೇಳಿದರು.

ಷಡಕ್ಷರಿಗೆ ಸಚಿವ ಯೋಗ: ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಇಲ್ಲಿನ ಶಾಸಕ ಕೆ.ಷಡಕ್ಷರಿ ಅವರು ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಬೇಕಿತ್ತು. ಆದರೆ ಅದು ಸ್ವಲ್ಪದರಲ್ಲಿ ಕೈ ತಪ್ಪಿತು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರುವುದು ನಿಶ್ಚಯವಾಗಿದ್ದು, ಅದರಲ್ಲಿ ಇಲ್ಲಿನ ಶಾಸಕರೂ ಸೇರಿಕೊಳ್ಳಬೇಕೆಂಬ ಇಚ್ಛೆ ತಮ್ಮದಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಅಪಾರ ಅನುಭವ ಇರುವ ಕೆ.ಷಡಕ್ಷರಿ ಅವರು ಸಚಿವರಾಗುವ ಸಾಧ್ಯತೆ ಹೆಚ್ಚಿದೆ ಎಂದರು.

ಸಿಎಂ ಬದಲು ಎಚ್.ಎಂ: ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದರು. ಆದರೆ `ಅವರು ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಪ್ರಚಾರದಲ್ಲಿ ತೊಡಗಿರುವುದರಿಂದ ಬರಲಾಗಲಿಲ್ಲ. ತಮ್ಮ ಬದವರಿಗೆ ಅವರು ತಮ್ಮನ್ನೇ ಕಳುಹಿಸಿಕೊಟ್ಟರು’ ಎಂದು ಮುಖಂಡ ಎಚ್.ಎಂ. ರೇವಣ್ಣ ತಿಳಿಸಿದರು. ಸಿದ್ದರಾಮಯ್ಯ ಅವರೇ ಬಂದಿದ್ದಾರೆಂದು ಭಾವಿಸಿ ಕಾಂಗ್ರೆಸ್‍ಗೆ ಮತ ಹಾಕಿ ಎಂದು ಕೋರಿಕೊಂಡರು.

ಸಂಸದ ಎಸ್.ಪಿ. ಮುದ್ದಹನುಮೇಗೌಡ, ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ಷಡಕ್ಷರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುರೇಶ್, ಟಿ.ಎನ್. ಪ್ರಕಾಶ್, ಕಾಂತರಾಜು, ಸಿ.ಬಿ. ಶಶಿಧರ್ ಇದ್ದರು.

ತಿ‍ಪಟೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ರಾಹುಲ್ ಮತ್ತು ಎಚ್.ಎಂ. ರೇವಣ್ಣ ಅಕ್ಕಪಕ್ಕ ಕುಳಿತಿದ್ದರು. ಅವರಿಬ್ಬರು ಪರಸ್ಪರ ಮಾತನಾಡುತ್ತಿದ್ದಾಗ ರಾಹುಲ್ ಅವರ ಗಮನ ರೇವಣ್ಣ ಅವರ ಬಲಗೈಲ್ಲಿದ್ದ ಕೆಂಪು ದಾರದ ಕಡೆ ಹರಿಯಿತು.

ಅದೇನೆಂದು ಪ್ರಶ್ನಿಸಿದರೆಂದು ಕಾಣುತ್ತದೆ. ತಮ್ಮ ಕೈಯಲ್ಲಿದ್ದ ಕೆಂಪು ದಾರ ತೋರಿಸಿ ರೇವಣ್ಣ ಏನೋ ವಿವರಣೆ ನೀಡಿದರು. ಅದನ್ನು ತಮಗೆ ಕೊಡುತ್ತೀರಾ ಎಂದು ರಾಹುಲ್ ಕೇಳಿರಬೇಕು. ತಕ್ಷಣ ಅವರು ಕೈಯಿಂದ ದಾರ ತೆಗೆದು ರಾಹುಲ್ ಅವರ ಬಲಗೈಗೆ ತಾವೇ ಹಾಕಿದರು. ಕೈಯಲ್ಲಿ ದಾರ ನೋಡಿಕೊಂಡ ರಾಹುಲ್ ಮುಗುಳ್ನಕ್ಕರು.

ಪಾವಗಡ: ‘ಕೇಂದ್ರದ ಬಿಜೆಪಿ ಸರ್ಕಾರ ದಲಿತರು, ಆದಿವಾಸಿಗಳನ್ನು ನಿರ್ಲಕ್ಷ್ಯ ಮಾಡಿದೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ನ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ದಲಿತರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿದೆ. ಪ್ರಧಾನಿ ಮೋದಿ ಈ ಬಗ್ಗೆ ಮಾತನಾಡುತ್ತಿಲ್ಲ. ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ದೇಶದಲ್ಲಿನ ಆದಿವಾಸಿಗಳು, ದಲಿತರ ಹಿತ ಕಡೆಗಣಿಸಿದೆ. ದಲಿತರು ಮತ್ತು ಆದಿವಾಸಿಗಳ ಅಭಿವೃದ್ದಿಗೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಒತ್ತು ನೀಡಿದೆ ಎಂದರು.

‘ರೆಡ್ಡಿ ಸಹೋದರರು 35 ಸಾವಿರ ಕೋಟಿಯನ್ನು ಲೂಟಿ ಮಾಡಿದ್ದಾರೆ. ಅದರಲ್ಲಿ ರಾಜ್ಯದಲ್ಲಿನ ರೈತರ ಸಾಲವನ್ನು ನಾಲ್ಕು ಬಾರಿ ಮನ್ನಾ ಮಾಡಬಹುದಿತ್ತು’ ಎಂದರು.

ವೇದಿಕೆಯಿಂದ ಹೊರಗುಳಿದರು: ರಾಹುಲ್ ಗಾಂದಿ ಅವರು ಹೆಲಿಕಾಪ್ಟರ್ ನಿಂದ ಇಳಿದ ಕೂಡಲೇ ಕಾಂಗ್ರೆಸ್ ಅಭ್ಯರ್ಥಿ ವೆಂಕಟರವಣಪ್ಪ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು. ಆದರೆ ವೇದಿಕೆ ಹತ್ತಲಿಲ್ಲ. ಕಾರ್ಯಕ್ರಮ ಮುಗಿದ ನಂತರವೂ ಅವರನ್ನು ಬೀಳ್ಗೊಟ್ಟರು. ವೇದಿಕೆ ಹಿಂಭಾಗದಲ್ಲಿಯೇ ಇದ್ದು, ಕಾರ್ಯಕ್ರಮದ ಆಗು ಹೋಗುಗಳನ್ನು ನೋಡಿಕೊಂಡರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್, ಸಂಸದ ಬಿ.ಎನ್. ಚಂದ್ರಪ್ಪ, ಆಂಧ್ರ ಮಾಜಿ ಸಚಿವ ರಘುವೀರರೆಡ್ಡಿ, ರಾಜ್ಯ ಸಭೆ ಸದಸ್ಯ ಹನುಮಂತಯ್ಯ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುದೇಶ್ ಬಾಬು, ಗ್ರಾಮೀಣ ಘಟಕದ ಅಧ್ಯಕ್ಷ ಎಚ್.ವಿ. ವೆಂಕಟೇಶ್, ಮಾಜಿ ಶಾಸಕ ಸೋಮ್ಲಾನಾಯ್ಕ, ಜಿಲ್ಲಾ ಪಂಚಾಯಿತಿ ಸದಸ್ಯ ಪಾಪಣ್ಣ, ಚನ್ನಮಲ್ಲಯ್ಯ, ಗೌರಮ್ಮ, ಗಾಯಿತ್ರೀ ಬಾಯಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಮುಖಂಡ ಟಿ.ನರಸಿಂಹಯ್ಯ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.