ಭ್ರಷ್ಟ, ನಿಷ್ಕ್ರಿಯ ಕಾಂಗ್ರೆಸ್ ಸರ್ಕಾರ ಬದಲಿಸಿ

7
ಮತ್ತೆ ಗುಡುಗಿದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌

ಭ್ರಷ್ಟ, ನಿಷ್ಕ್ರಿಯ ಕಾಂಗ್ರೆಸ್ ಸರ್ಕಾರ ಬದಲಿಸಿ

Published:
Updated:

ಬೈಂದೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರ ರಾಜ್ಯದ ಅಭಿವೃದ್ಧಿ ಪರ ಇಲ್ಲ. ರಾಜ್ಯದ ಜನರ ಸುರಕ್ಷತೆ ಮತ್ತು ರಾಷ್ಟ್ರೀಯ ಸುರಕ್ಷತೆ ಜತೆ ಚೆಲ್ಲಾಟವಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ ಎಂದು ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಮೀನುಗಾರರ ಹಿತ ಕಾಯದೆ ನಿರ್ಲಕ್ಷ್ಯ ಮಾಡಿದೆ. ಬಂದರುಗಳ ಅಭಿವೃದ್ಧಿ ಮಾಡಲು ಸರ್ಕಾರಕ್ಕೆ ಆಸಕ್ತಿಯಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿಲ್ಲ. ಕೇಂದ್ರದ ಹಣ ಬಳಕೆ ಮಾಡದೆ ದುರುಪ ಯೋಗ ಮಾಡಲಾಗುತ್ತಿದೆ. ಅದು ಭ್ರಷ್ಟಾಚಾರದಲ್ಲಿ ನಿರತವಾಗಿದೆ. ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆದ ಬಳಿಕ ದೇಶದ ಚಿತ್ರ ಣವೇ ಬದಲಾಗಿದೆ. ಬಡವರಿಗೆ ಕೇಂದ್ರ ಸರ್ಕಾರ ಬೆಂಬಲವಾಗಿ ನಿಂತಿದೆ ಎಂದು ಹೇಳಿದರು.

ಉತ್ತರ ಪ್ರದೇಶ ರಾಮನ ಜನ್ಮ ಭೂಮಿ ಎಂದ ಯೋಗಿ ಕರ್ನಾಟಕಕ್ಕೆ ರಾಮನೊಂದಿಗೆ ಎರಡು ಸಂಬಂಧಗಳಿವೆ ಎಂದರು. ರಾಮನ ಸಹಯೋಗಿ ಗುಹ ಮೀನುಗಾರ. ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಗುಹನ ಬಂಧುಗಳಿದ್ದಾರೆ. ರಾಮನ ಪರಮ ಭಕ್ತ ಹನುಮಂತ ಕರ್ನಾಟಕದವನು. ಯೋಗಿ ಆದಿತ್ಯನಾಥ ಯಾಕೆ ಮತ್ತೆಮತ್ತೆ ಕರ್ನಾಟಕಕ್ಕೆ ಬರುತ್ತಾರೆ ಎಂದು ಸಿದ್ಧರಾಮಯ್ಯ ಕೇಳುತ್ತಿದ್ದಾರೆ. ಕರ್ನಾಟಕದಲ್ಲಿ ಬಡವರು, ಕೃಷಿಕರು, ಮೀನುಗಾರರು ಹಾಗೂ ಯುವಜನರು ಸಂಕಷ್ಟದಲ್ಲಿದ್ದು, ಅವರಿಗೆ ಭಾರತೀಯ ಜನತಾ ಪಾರ್ಟಿಯ ಬೆಂಬಲ ನೀಡಲು ಬರುತ್ತೇನೆ. ಅದರ ಮೂಲಕ ರಾಮ ರಾಜ್ಯ ಸ್ಥಾಪನೆ ಉದ್ದೇಶಕ್ಕಾಗಿ ನಾನು ಇಲ್ಲಿಗೆ ಬರುತ್ತಿದ್ದೇನೆ ಎಂದು ಹೇಳಿದರು.

ಭಾರತೀಯ ಜನತಾ ಪಾರ್ಟಿ ಬಡವರ, ರೈತರ, ಮೀನುಗಾರರ ಹಾಗೂ ಯುವ ಜನರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಆಡಳಿತ, ಎಲ್ಲರ ಹಿತರಕ್ಷಣೆ, ಯಾವುದೇ ಬೇಧ ಭಾವವಿಲ್ಲದೆ ಎಲ್ಲರ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ. ಆದರೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯವನ್ನು ಕಾಂಗ್ರೆಸ್‌ನ ಎಟಿಎಂ ಮಾಡಿ, ಲೂಟಿ ಹೊಡೆಯುತ್ತಿದೆ ಎಂದರು.

ಈಗ ರಾಜ್ಯದ ಜನರಿಗೆ ಬದಲಾವಣೆ ಮಾಡುವ ಅವಕಾಶ ಬಂದಿದೆ. ಬೈಂದೂರಿನಲ್ಲಿ ಪಕ್ಷದ ಅಭ್ಯರ್ಥಿ ಬಿ.ಎಂ. ಸುಕುಮಾರ ಶೆಟ್ಟಿ ಅವರನ್ನು ಆಯ್ಕೆಮಾಡುವ ಮೂಲಕ ಬಿ.ಎಸ್. ಯಡಿಯೂರಪ್ಪ ಸರ್ಕಾರವನ್ನು ತರಬೇಕು. ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು.

ಬೈಂದೂರು ಬಿಜೆಪಿ ಅಭ್ಯರ್ಥಿ ಬಿ. ಎಂ. ಸುಕುಮಾರ ಶೆಟ್ಟಿ ಅವರಿಗೆ ತಮಗೆ ಮತ ನೀಡಿ ಗೆಲ್ಲಿಸಿದರೆ ಬೈಂದೂರಿನ ಅಭಿವೃದ್ಧಿಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು ಕೆಲಸ ಮಾಡುವ, ರಾಜ್ಯದ ಮಾದರಿ ಕ್ಷೇತ್ರವಾಗಿ ಪರಿವರ್ತಿಸುವ ಭರವಸೆ ನೀಡಿ ಮತ ಯಾಚಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನವೀನ ಕುತ್ಯಾರು, ವಿಭಾಗದ ಪ್ರಭಾರಿ ಉದಯಕುಮಾರ್ ಶೆಟ್ಟಿ, ಉಸ್ತುವಾರಿ ಪ್ರವೀಣ ಗುರ್ಮೆ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ. ಬಾಬು ಶೆಟ್ಟಿ, ಶಂಕರ ಪೂಜಾರಿ, ಸುರೇಶ ಬಟವಾಡಿ, ಶೋಭಾ ಪುತ್ರನ್, ಬಿಜೆಪಿ ಜಿಲ್ಲಾ ಮುಖಂಡಾರದ ಸಂಧ್ಯಾ ರಮೇಶ್, ಗುರುರಾಜ್ ಗಂಟಿಹೊಳೆ, ಕ್ಷೇತ್ರ ಯುವಮೋರ್ಚಾ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಿಯದರ್ಶಿನಿ ದೇವಾಡಿಗ, ನವೀನಚಂದ್ರ ಉಪ್ಪುಂದ, ಇತರರು ಇದ್ದರು.

ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಸ್ವಾಗತಿಸಿದರು. ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಕ್‌ಕುಮಾರ ಶೆಟ್ಟಿ ನಿರೂಪಿಸಿದರು. ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಭಟ್ ವಂದಿಸಿದರು.

ಮೋದಿ, ಯೋಗಿ ಪರ ಜೈಕಾರ

ಆದಿತ್ಯನಾಥ ತ್ರಾಸಿಗೆ ಬರುವುದು ಸೋಮವಾರವಷ್ಟೆ ಗೊತ್ತಾಗಿದ್ದರೂ ರಾತ್ರಿ ಕಳೆಯುವುದರೊಳಗೆ ಅಗತ್ಯ ಏರ್ಪಾಡು ಮಾಡಲಾಯಿತು. ಸುಮಾರು 4 ಸಾವಿರದಷ್ಟು ಕಾರ್ಯ ಕರ್ತರು ಸೇರಿದ್ದರು. ಯೋಗಿ ಕಡಲತೀರದ ತಾತ್ಕಾಲಿಕ ಹ್ಯಾಲಿಪ್ಯಾಡ್‌ಗೆ ಬಂದು ಕಾರಿನಲ್ಲಿಯೇ ಸಭಾ ಸ್ಥಳಕ್ಕೆ ಬಂದರು. ಯೋಗಿ ಬರುತ್ತಿದ್ದಂತೆ ಮಾತನಾಡುತ್ತಿದ್ದಾಗ, ನಿರ್ಗಮಿಸುತ್ತಿದ್ದಾಗ ಕಾರ್ಯಕರ್ತರು ,ಮೋದಿ ಮೋದಿ’, ’ಯೋಗಿ ಯೋಗಿ’ ಎಂದು ಘೋಷಣೆ ಕೂಗಿದರು. ಯೋಗಿ ಕಮಾಂಡೋಗಳ ರಕ್ಷಣೆಯಲ್ಲಿ ಬಂದರು.

‘ಮಾದರಿ ಸರ್ಕಾರ’

ರಾಜ್ಯದ ಅಭಿವೃದ್ಧಿ ಹೇಗೆ ಮಾಡಬಹುದೆನ್ನುವುದಕ್ಕೆ ತಮ್ಮ ಆಡಳಿತ ಇರುವ ಉತ್ತರ ಪ್ರದೇಶವನ್ನು ಉದಾಹರಿಸಿದ ಅವರು, ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದು ವರ್ಷದಲ್ಲೇ ₹86,000 ಕೋಟಿ ರೈತ ಸಾಲ ಮನ್ನಾ ಮಾಡಲಾಗಿದೆ. 11 ಲಕ್ಷ ವಸತಿ ಹೀನರಿಗೆ ಮನೆ, 40 ಲಕ್ಷ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಕರ್ನಾಟಕ ವಿಕಾಸ ಹೊಂದುತ್ತಿದೆ ಎಂದು ಹೇಳುತ್ತಿರುವ ಸಿದ್ದ ರಾಮಯ್ಯ ಸರ್ಕಾರ ಇದಕ್ಕಿಂತ ಹೆಚ್ಚಿನದನ್ನು ಮಾಡಬಹುದಾಗಿತ್ತು. ಆದರೆ, ಏನೂ ಮಾಡಿಲ್ಲ. ಬದಲಿಗೆ ಅದು ಜೆಹಾದಿಗಳ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಹಿಂದೂ ಯುವಕರ ಕೊಲೆಗಡುಕರನ್ನು ಶಿಕ್ಷಿಸುತ್ತಿಲ್ಲ ಎಂದು ಆರೋಪ ಮಾಡಿದರು.

**

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೆ ಡಬಲ್ ಎಂಜಿನ್‌ನೊಂದಿಗೆ ಅಭಿವೃದ್ಧಿ ಬಂಡಿಯನ್ನು ವೇಗವಾಗಿ ತೆಗೆದುಕೊಂಡು ಹೋಗಬಹುದು

– ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry