ಶುಕ್ರವಾರ, ಮಾರ್ಚ್ 5, 2021
18 °C

ಕೈಗೆ ಏನು ಕೊಟ್ಟರೂ ಕಲಾಕೃತಿ!

ಪ. ರಾಮಕೃಷ್ಣ ಶಾಸ್ತ್ರಿ Updated:

ಅಕ್ಷರ ಗಾತ್ರ : | |

ಕೈಗೆ ಏನು ಕೊಟ್ಟರೂ ಕಲಾಕೃತಿ!

ಕಳೆದ ವರ್ಷ ಹುಬ್ಬಳ್ಳಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಹಲವು ಊರುಗಳಲ್ಲಿ ಗಣೇಶ ಚತುರ್ಥಿಯ ಪೂರ್ವಭಾವಿಯಾಗಿ ಒಂದು ವಿಶೇಷ ಪ್ರಯೋಗ ನಡೆಯಿತು. ಅದು ಆರಾಧನೆಗೆ ಮಣ್ಣಿನ ಗಣೇಶ ವಿಗ್ರಹ ಇಡುವ ಬದಲು ಇಡೀ ತೆಂಗಿನಕಾಯಿಯಲ್ಲಿ ಕೊರೆದ ಗಣಪತಿಯ ವಿಗ್ರಹವನ್ನು ಪೂಜಿಸಿ ವಿಸರ್ಜಿಸುವ ವಿಶಿಷ್ಟ ವಿಧಾನ. ಕೆರೆಗಳ ಆರೋಗ್ಯವನ್ನು ರಕ್ಷಿಸುವ ಕಾಳಜಿ ಈ ಪ್ರಯೋಗದ ಹಿಂದಿತ್ತು.

ಪ್ರತಿ ಊರಿನಲ್ಲಿ ತೆಂಗಿನಕಾಯಿಯಲ್ಲಿ ಗಣೇಶನನ್ನು ತಯಾರಿಸಿ ಕೊಟ್ಟವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಮಹಿಳೆಯರು. ಅವರಿಗೆ ಇದರ ತಯಾರಿಕೆಗೆ ತರಬೇತಿ ನೀಡಿದವರು ಜಗದೀಶ ಗೌಡ ಭಾವಿಕಟ್ಟಿ ಎಂಬ ಕಲಾ ಸಾಧಕ.

‘ನನ್ನ ಕೈಗೆ ಹಳೆಯ ಪತ್ರಿಕೆ, ಕಡ್ಡಿ, ಹುಲ್ಲು, ಏನೇ ಕೊಡಿ. ಕೆಲವೇ ನಿಮಿಷಗಳಲ್ಲಿ ಅದರಿಂದ ಒಂದು ಸುಂದರ ಕಲಾಕೃತಿಯನ್ನು ಸೃಜಿಸಿ ತೋರಿಸಬಲ್ಲೆ’ ಎಂದು ಹೇಳುವುದಷ್ಟೇ ಅಲ್ಲ, ಮಾಡಿ ಮುಂದಿಡಬಲ್ಲ ಈ ಯುವ ಕಲಾವಿದ ಧಾರವಾಡದ ಕೆಲಗೇರಿಯವರು. ಎಸ್‍ಡಿಎಂ ಎಂಜಿನಿಯರಿಂಗ್ ಕಾಲೇಜಿನ ತೋಟಗಾರಿಕೆ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿರುವ ಅವರಿಗೆ ಬಿಡುವಿರುವಾಗ ಕಲಾ ಸಾಧನೆಯೇ ಏಕೈಕ ಹವ್ಯಾಸ. ಅದರಲ್ಲೂ ಸುಲಿಯದ ತೆಂಗಿನಕಾಯಿಗಳ ಸಿಪ್ಪೆಯನ್ನು ಕೊರೆದು ಅದನ್ನು ಕಲಾಕೃತಿಯಾಗಿ ಮಾರ್ಪಡಿಸುವುದರಲ್ಲಿ ಸಿದ್ಧಹಸ್ತರು. ಹೀಗೆ ಅವರು ತಯಾರಿಸಿರುವ ಗಣಪತಿ, ಬುದ್ಧ, ಗೋಮಟೇಶ್ವರ ಮೊದಲಾದ ವಿಗ್ರಹಗಳು ಕಂಡವರ ಮನಸ್ಸಿಗೂ ಮುದ ನೀಡುತ್ತವೆ. ಹಲವಾರು ಉತ್ಸವಗಳಲ್ಲಿ ಇವರ ಕಲಾಕೃತಿಗಳ ಪ್ರದರ್ಶನವೂ ಆಗಿದೆ.

ಜಗದೀಶ ಗೌಡ ಅವರು ಹಣ ಗಳಿಕೆಗಾಗಿ ಈ ಹವ್ಯಾಸ ಅಂಟಿಸಿಕೊಂಡಿಲ್ಲ. ‘ಇದು ಕೇವಲ ನನ್ನ ಮನಸ್ಸಿನ ಸಂತೋಷಕ್ಕಾಗಿ’ ಎನ್ನುತ್ತಾರೆ. ಆದರೂ ಇಂತಹ ಕಲಾಕೃತಿಗಳನ್ನು ಕಂಡವರು ತಮ್ಮ ಮನೆಯ ಷೋಕೇಸುಗಳಲ್ಲಿಡಲು ತೆಗೆದುಕೊಂಡು ಹೋಗುತ್ತಾರೆ. ಅವರ ಪರಿಶ್ರಮಕ್ಕೆ ಸೂಕ್ತ ಪ್ರತಿಫಲವನ್ನೂ ಕೊಡುತ್ತಾರೆ. ಒಂದು ಕಲಾಕೃತಿ ಎರಡೂವರೆ ಸಾವಿರದ ರೂಪಾಯಿವರೆಗೂ ಮಾರಾಟವಾಗಿದೆಯಂತೆ. ಮೆಚ್ಚಿದವರು ಕೊಟ್ಟದ್ದನ್ನಷ್ಟೇ ಅವರು ಸ್ವೀಕರಿಸುತ್ತಾರೆ.

ಹತ್ತನೆಯ ತರಗತಿ ಓದಿನ ಬಳಿಕ ಜಗದೀಶ ಅವರು ಮಾಡಿದ್ದು ಡಿಪ್ಲೊಮಾ. ಆ ದಿನಗಳಿಂದಲೇ ಕಲಾಕೃತಿ ಅರಳಿಸುವ ಕೌಶಲವನ್ನು ರೂಢಿಸಿಕೊಂಡರು. ತಂದೆ ವಿರೂಪಾಕ್ಷಗೌಡರಿಂದ ಬಂದ ಪಾರಂಪರಿಕ ಕಲೆ ಇದು. ಅವರೊಬ್ಬ ವಿಶಿಷ್ಟವಾದ ಹೆಜ್ಜೆ ಕಲಾವಿದ. ಹೆಜ್ಜೆ ಹಾಕುತ್ತಲೇ ಹಗ್ಗದಿಂದ ವಿವಿಧ ಕಲಾಕೃತಿಗಳನ್ನು ಸರಸರನೆ ಹೆಣೆಯುವ ಕಲೆಯ ಕೌಶಲ ಅವರದು. ಹೊಸದೊಂದು ಕಲೆಯನ್ನು ಕಲಿಯಲು ತುಡಿಯುತ್ತಿದ್ದ ಜಗದೀಶ ನಿರಂತರ ಶ್ರದ್ಧೆಯಿಂದ ತನ್ನ ಅರಿವನ್ನೇ ಗುರುವಾಗಿ ಹೊಂದಿ ತೆಂಗಿನಕಾಯಿಯ ಕಲೆಯನ್ನು ಕಲಿತುಕೊಂಡರು. ಈಗ ಒಂದು ದಿನದಲ್ಲಿ ಐದರ ತನಕ ಕಾಯಿಗಳನ್ನು ಕಲಾಕೃತಿಯಾಗಿ ಮಾಡಬಲ್ಲರು. ಏನುಂಟು ಕೇಳುವಂತಿಲ್ಲ. ಗಣಪತಿಯ ವಿವಿಧ ಭಂಗಿಗಳು, ಶಿವ, ನಂದಿ, ಗಿಣಿ, ಗೂಬೆಯಂತಹ ಪಕ್ಷಿಗಳು, ಬಸವೇಶ್ವರ ಮುಂತಾಗಿ ಐನೂರಕ್ಕಿಂತ ಹೆಚ್ಚು ರೂಪಕಗಳನ್ನು ತಯಾರಿಸಿದ್ದಾರೆ. ಒಂದು ತೆಂಗಿನಕಾಯಿ ಚಾಣದ ಮೊನೆಗೆ ಸಿಲುಕಿ ಕಲಾಕೃತಿಯಾಗಿ ರೂಪುಗೊಂಡು ಬಣ್ಣ ಹಚ್ಚಿ ತಯಾರಾಗಿ ನಿಲ್ಲಲು ಅವರಿಗೆ ಬೇಕಾಗುವ ಅವಧಿ ಕೇವಲ ಅರ್ಧ ತಾಸು ಮಾತ್ರ.

ಇಷ್ಟೇ ಅಲ್ಲ ಈ ಕಲಾವಿದನ ಕೈಗೆ ಸಿಕ್ಕಿದ ಯಾವುದೇ ವಸ್ತು ನಿರುಪಯೋಗಿಯಾಗುವುದಿಲ್ಲ. ಐಸ್‍ಕ್ರೀಮಿನ ಕಡ್ಡಿಗಳು ಆಕಾಶ ಬುಟ್ಟಿಯಾಗಿ ದೀಪಾವಳಿಯಲ್ಲಿ ಪ್ರಕಾಶ ಬೀರುತ್ತವೆ. ಹಾಗೆಯೇ ಅದರಿಂದ ಬೆಡ್‍ಲ್ಯಾಂಪ್, ಎತ್ತಿನ ಗಾಡಿ, ಕ್ರಿಸ್‍ಮಸ್ ಹಬ್ಬಕ್ಕೆ ಅಗತ್ಯವಾದ ಹೂದಾನಿ, ಲೇಖನಿಗಳನ್ನಿಡುವ ಸ್ಟ್ಯಾಂಡ್ ಇವೆಲ್ಲವೂ ಹುಟ್ಟಿಕೊಳ್ಳುತ್ತವೆ. ತೆಂಗಿನ ಹಸೀ ಗರಿಗಳಿಂದ ವಿಧವಿಧದ ಹೂಗಳು, ಹಳೆಯ ಪತ್ರಿಕೆಗಳಿಂದ ಬುಟ್ಟಿಗಳೂ ತಯಾರಾಗುತ್ತವೆ. ಹೊಲದಲ್ಲಿರುವ ಕಳೆಯ ಹುಲ್ಲು ಅವರ ಕೈಗಳಲ್ಲಿ ಟೋಪಿಯಾಗಿ, ಶಿವಲಿಂಗವಾಗಿ ಹೊಸ ಹುಟ್ಟು ಪಡೆಯುತ್ತದೆ.

ಕೆಲವು ಸ್ಥಳೀಯ ಉತ್ಸವಗಳು, ಕೃಷಿಮೇಳಗಳಲ್ಲಿ ಜಗದೀಶರ ಕಲೆಯ ಪ್ರದರ್ಶನ ನಡೆದಿದೆ. ತಾಂತ್ರಿಕ ವಿದ್ಯಾಲಯದ ಡಾ. ವೀಣಾ ದೇಸಾಯಿ ಹೆಚ್ಚಿನ ಪ್ರೋತ್ಸಾಹ ನೀಡಿರುವುದು ಬಿಟ್ಟರೆ ಈ ಅಪೂರ್ವ ಕಲೆಯ ಸಾಧಕನನ್ನು ಬೆನ್ನು ತಟ್ಟಿ ಹರಸಿದವರ ಸಂಖ್ಯೆ ಬಹು ವಿರಳ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.